ಪೊಲೀಸ್ ಎನ್ಕೌಂಟರ್ಗೆ ಬಲಿಯಾದಾತ ಕನ್ನಡಿಗನೇ..? |
ಪ್ರಕಟಿಸಿದ ದಿನಾಂಕ : 2012-09-07
ಮಂಗಳೂರು,
ಸೆ.6: ನಕ್ಸಲ್ ನಿಗ್ರಹ ದಳದ ಪೊಲೀಸರ ಗುಂಡಿಗೆ ಬಲಿಯಾದ ಶಂಕಿತ ವ್ಯಕ್ತಿ ತಮಿಳುನಾಡಿಗೆ
ಸೇರಿದ ನಕ್ಸಲೀಯನಾಗಿರುವ ಸಾಧ್ಯತೆ ಕಡಿಮೆ ಎಂದು ತಮಿಳುನಾಡಿನಿಂದ ಮಂಗಳೂರಿಗೆ ಆಗಮಿಸಿದ
ಪೊಲೀಸರು ಮೃತ ದೇಹವನ್ನು ನೋಡಿದ ಬಳಿಕ ಅಭಿಪ್ರಾಯ ಪಟ್ಟಿದ್ದಾರೆ. ತಮಿಳುನಾಡಿನಲ್ಲಿ
ನಕ್ಸಲ್ ಚಟುವಟಿಕೆಯಲ್ಲಿ ಸೇರಿದ ಯಾವುದೇ ವ್ಯಕ್ತಿಗಳ ಚಹರೆಗಳಿಗೂ ಮೃತ ವ್ಯಕ್ತಿಯ
ಚಹರೆಗೂ ಹೋಲಿಕೆಯಾಗುವುದಿಲ್ಲ.

ಆದರೆ ಆ ವ್ಯಕ್ತಿಯ ಬಳಿ ದೊರೆತ ಪತ್ರಿಕೆ, ಸಾಹಿತ್ಯ,
ಚೀಟಿ ಇತರ ಸಾಮಗ್ರಿಗಳು ಗುಂಡಿನ ಚಕಮಕಿಯ ವೇಳೆಯ ಆಡಿದ ಮಾತು ಆತ ಕನ್ನಡಿಗನಾಗಿರುವ
ಸಾಧ್ಯತೆ ಇದೆ ಎನ್ನುವ ಸಂದೇಹಕ್ಕೆ ಕಾರಣವಾಗಿದೆ. ಮೃತ ವ್ಯಕ್ತಿಯ ಜೊತೆ ಕೆಲವು ಕನ್ನಡ
ಸಾಹಿತ್ಯಗಳು ದೊರೆತಿದ್ದು, ಆತನ ಮೃತದೇಹದ ಜೊತೆ ಇದ್ದ ಚೀಟಿಯೊಂದರಲ್ಲಿ ಆತ ಬರೆದಿದ್ದ
ಎನ್ನಲಾದ ಟಿಪ್ಪಣಿ ಕನ್ನಡದಲ್ಲಿತ್ತು ಎನ್ನಲಾಗಿದೆ.

ನಕ್ಸಲ್ ನಿಗ್ರಹ ದಳದ ಪೊಲೀಸರಿಗೆ
ಸೆ.2 ಕುಲ್ಕುಂದದಲ್ಲಿ ನಕ್ಸಲ್ರ ಸುಳಿವು ದೊರೆತ ಹಿನ್ನೆಲೆಯಲ್ಲಿ ಕೂಂಬಿಂಗ್
ಕಾರ್ಯಚರಣೆ ತೀವ್ರಗೊಂಡ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಬಿಸಿಲೆ ಘಾಟಿಯ ಬಳಿಯಲ್ಲಿ
ನಕ್ಸಲರ ಕಡೆಯಿಂದ ಪೊಲೀಸ್ ...ಪೊಲೀಸ್.., (ಅದು ಕನ್ನಡಿಗನ ಬಳಕೆಯ ಪದವೂ
ಆಗಿರಬಹುದು)ಎನ್ನುವ ಮಾತು ಕೇಳಿ ಬಂದಿದೆ. 
ಜೊತೆಗೆ
ಗುಂಡಿನ ಚಕಮಕಿ ನಡೆದಿದೆ. ಆ ಸಂದರ್ಭದಲ್ಲೇ ಶಂಕಿತ ನಕ್ಸಲ್ ಮೃತ ಪಟ್ಟಿರಬೇಕು. ಆದರೆ
ಆಗ ದಟ್ಟವಾದ ಕತ್ತಲಿದ್ದ ಕಾರಣ ಬೆಳಗ್ಗಿನ ಹೊತ್ತು ಮೃತದೇಹವನ್ನು ಕಾಣಲು ಸಾಧ್ಯವಾಯಿತು
ಎನ್ನುವುದನ್ನು ಪೊಲೀಸ್ ಮೂಲಗಳು ಖಚಿತ ಪಡಿಸಿವೆ.
ಕುಪ್ಪುಸ್ವಾಮಿಯಲ್ಲ:
ಮಾಧ್ಯಮಗಳಲ್ಲಿ ಈಗಾಗಲೆ ಸುದ್ದಿ ಯಾಗಿರುವಂತೆ ಮೃತ ವ್ಯಕ್ತಿಗೂ ತಮಿಳುನಾಡಿನ ಮೂಲದ
ನಕ್ಸಲ್ ಗುಂಪು ಸೇರಿರುವ ಕುಪ್ಪು ಸ್ವಾಮಿಗೂ ಯಾವುದೇ ಹೊಲಿಕೆ ಇಲ್ಲ. ಕುಪ್ಪುಸ್ವಾಮಿ
ತೆಳ್ಳಗಿನ ಪೀಚಲು ದೇಹದ ವ್ಯಕ್ತಿಯಾಗಿದ್ದು, ಆರು ವರ್ಷಗಳ ಹಿಂದೆ ಆತನ ವಯಸ್ಸು
ತಮಿಳುನಾಡು ಪೊಲೀಸ್ ದಾಖಲೆಯ ಪ್ರಕಾರ 53. ಆ ಪ್ರಕಾರ ಈಗ ಕುಪ್ಪುಸ್ವಾಮಿಗೆ 59
ವರ್ಷವಾಗಿರಬೇಕು. ಆದರೆ ಮೃತ ವ್ಯಕ್ತಿ 35-40 ವರ್ಷದೊಳಗಿನ ಯುವಕ ಎಂದು ಪೊಲೀಸರು
ತಿಳಿಸಿದ್ದಾರೆ.

ಅದಲ್ಲದೇ ಕುಪ್ಪುಸ್ವಾಮಿಯ ಭಾವಚಿತ್ರವನ್ನು ಮೃತ ವ್ಯಕ್ತಿಯೊಂದಿಗೆ
ಹೋಲಿಸಿದಾಗ ಯಾವುದೇ ಹೊಂದಾಣಿಕೆಯಾಗುವುದಿಲ್ಲ. ಅಲ್ಲದೆ ಈಗಾಗಲೆ ತಮಿಳುನಾಡು
ಪೊಲೀಸರಲ್ಲಿರುವ ನಕ್ಸಲರೆಂದು ಗುರುತಿಸಲಾದ ಫೋಟೊ ಮಾಹಿತಿಗಳ ಜೊತೆ ಎನ್ಕೌಂಟರ್ನಿಂದ
ಮೃತ ಪಟ್ಟ ವ್ಯಕ್ತಿಯ ಹೋಲಿಕೆಯಾಗುತ್ತಿಲ್ಲ. ತಮಿಳುನಾಡು ಪೊಲೀಸರು ಮೃತದೇಹವನ್ನು
ಮಂಗಳೂರಿನಲ್ಲಿದ್ದ ಶವಾಗಾರದಲ್ಲಿ ಪರಿಶೀಲಿಸಿದ ಬಳಿಕ ಈ ಅಭಿಪ್ರಾಯ ವ್ಯಕ್ತಡಿಸಿದ್ದಾರೆ.
ಆದರೂ ಹೆಚ್ಚಿನ ಮಾಹಿತಿಗಾಗಿ ತಮಿಳುನಾಡು ಪೊಲೀಸರು ಎನ್ಕೌಂಟರ್ ನಡೆದ ಪೊಲೀಸ್ ಠಾಣೆಗೆ
ತೆರಳಿದ್ದಾರೆ.  ಕೇರಳ ಪೊಲೀಸರ ಆಗಮನ:
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಡಿವೈಎಸ್ಪಿ ನೇತೃತ್ವದ ಪೊಲೀಸರ ತಂಡ ಇಂದು ನಗರಕ್ಕೆ
ಆಗಮಿಸಿ ಮೃತದೇಹವನ್ನು ಪರಿಶೀಲಿಸಿ ಈತ ಕೇರಳ ಮೂಲದ ನಕ್ಸಲ್ ಗುಂಪಿಗೆ ಸೇರಿದ
ವ್ಯಕ್ತಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆಂಧ್ರ ಪೊಲೀಸರ ನಿರೀಕ್ಷೆಯಲ್ಲಿ:
ಪಶ್ಚಿಮ ಘಟ್ಟದ ತಪ್ಪಲಿನ ಬಾಗಿನಮಲೆ ಮೀಸಲು ಅರಣ್ಯದಲ್ಲಿ ಮಂಗಳವಾರ ರಾತ್ರಿ ನಕ್ಸಲ್
ನಿಗ್ರಹಪಡೆಯ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಮೃತಪಟ್ಟ ವ್ಯಕ್ತಿಯ ಗುರುತು
ಪತ್ತೆ ಇನ್ನೂ ಆಗಿಲ್ಲ. ಗುರುವಾರ ಮಧ್ಯಾಹ್ನದ ಹೊತ್ತಿಗೆ ಕೇರಳ ಮತ್ತು ತಮಿಳುನಾಡು
ಪೊಲೀಸರು ಮಂಗಳೂರಿಗೆ ತಲುಪಿ ಪರಿಶೀಲನೆ ನಡೆಸಿದ್ದು, ತಮ್ಮಲ್ಲಿರುವ ಶಂಕಿತ ನಕ್ಸಲ್ರ
ಫೋಟೊದೊಂದಿಗೆ ಈತನ ಭಾವಚಿತ್ರ ತಾಳೆಯಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಮೃತ ವ್ಯಕ್ತಿ
ಬೇರೆ ರಾಜ್ಯದವನೆಂದು ನಂಬಿರುವ ದ.ಕ. ಜಿಲ್ಲಾ ಪೊಲೀಸರು ಈಗ ಆಂಧ್ರಪ್ರದೇಶದ ಪೊಲೀಸರ
ನಿರೀಕ್ಷೆಯಲ್ಲಿದ್ದಾರೆ.
ನಕ್ಸಲ್
ಚಟುವಟಿಕೆ ಹೆಚ್ಚಾಗಿರುವ ಆಂಧ್ರಪ್ರದೇಶದ ಪೊಲೀಸರ ಬಳಿಯಲ್ಲಿ ಶಂಕಿತ ನಕ್ಸಲರ ಪಟ್ಟಿಯೂ
ದೊಡ್ಡದಾಗಿ ಇರುವುದರಿಂದ ಅದರಲ್ಲಿ ಯಾರಾದರೊಬ್ಬ ಆಗಿರಲೂಬಹುದು ಎಂಬ ನಿರೀಕ್ಷೆ ಇಲ್ಲಿಯ
ಪೊಲೀಸರದು. ಆಂಧ್ರ ಪೊಲೀಸರು ನಾಳೆ ಮಂಗಳೂರಿಗೆ ತಲಪುವ ಸಾಧ್ಯತೆ ಇದೆ ಎಂದು ಪೊಲೀಸ್
ಮೂಲವೊಂದು ಮಾಹಿತಿ ನೀಡಿದೆ.
ವರದಿಯ ವಿವರಗಳು |
 |
ಕೃಪೆ : varthabharthi ವರದಿಗಾರರು : ಕರ್ನಾಟಕ ವರದಿಗಾರರು
ಪ್ರಕಟಿಸಿದ ದಿನಾಂಕ : 2012-09-07
|
|
|