ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ |
ಪ್ರಕಟಿಸಿದ ದಿನಾಂಕ : 2012-09-06
ನವದೆಹಲಿ: ಯುಪಿಎ ಸರ್ಕಾರ ಹಗರಣಗಳಲ್ಲಿ ಸಿಲುಕಿ ಒದ್ದಾಡುತ್ತಿರುವಾಗಲೇ, ಪ್ರಧಾನಿ ಕಾರ್ಯಾಲಯ ಸಚಿವರ ಆಸ್ತಿ ವಿವರ ಬಹಿರಂಗಪಡಿಸಿದೆ.
ಕೆಲ ಸಚಿವರ ಆಸ್ತಿಪಾಸ್ತಿ ಕಳೆದ ವರ್ಷಕ್ಕಿಂತ ಈ ವರ್ಷ ಮತ್ತಷ್ಟು ಹೆಚ್ಚಾಗಿರುವುದು ವಿಶೇಷ. ಕಾರ್ಯಾಲಯ ಬಹಿರಂಗಗೊಳಿಸಿದ ಆಸ್ತಿ ಪ್ರಕಾರ, ಡಿಎಂಕೆ ನಾಯಕ ಮತ್ತು ಕೇಂದ್ರ ರಸಗೊಬ್ಬರ ಸಚಿವ ಅಳಗಿರಿ ಅವರ ಆಸ್ತಿ ರು.೩೭ ಕೋಟಿಗೆ ಏರಿಕೆಯಾಗಿದೆ. ಇದರಲ್ಲಿ ಅವರ ಪತ್ನಿ ಕಾಂತಿ ಅವರ ಆಸ್ತಿಯೂ ಸೇರಿದೆ.
ಇವರಿಬ್ಬರ ಆಸ್ತಿ ಲೆಕ್ಕಕ್ಕೆ ತೆಗೆದುಕೊಂಡರೆ ಕಳೆದ ವರ್ಷಕ್ಕಿಂತ ಈ ವರ್ಷ ಶೇ.೧೭ ರಷ್ಟು ಏರಿಕೆಯಾಗಿದೆ. ಇದಕ್ಕಿಂತ ವಿಶೇಷ ಎಂದರೆ, ಕೇಂದ್ರ ಸಂಸದೀಯ ವ್ಯವಹಾರಗಳ ಸಹಾಯಕ ಸಚಿವ ರಾಜೀವ್ ಶುಕ್ಲಾ ಅವರ ಆಸ್ತಿ. ಇವರ ಆಸ್ತಿಯಲ್ಲಿ ಶೇ.೭೬ ರಷ್ಟು ಏರಿಕೆಯಾಗಿದೆ.
ಇವರ ಪತ್ನಿ ನ್ಯೂಸ್ ಚಾನೆಲ್ವೊಂದರ ಒಡತಿಯಾಗಿದ್ದಾರೆ. ಕಳೆದ ವರ್ಷ ಈ ದಂಪತಿಯ ಆಸ್ತಿ ರು.೧೬.೫೬ ಕೋಟಿ. ಆದರೆ ಈ ವರ್ಷ ಇವರಿಬ್ಬರ ಆಸ್ತಿ ಮೌಲ್ಯ ರು.೨೯.೨೫ ಕೋಟಿ. ಇದರಲ್ಲಿ ಶುಕ್ಲಾ ಅವರ ಪತ್ನಿಯೊಬ್ಬರೇ ರು.೨೩.೩೪ ಕೋಟಿಯಷ್ಟು ಆಸ್ತಿಗೆ ಒಡತಿಯಾಗಿದ್ದಾರೆ. ೨೦೧೧ರಲ್ಲಿ ರು.೧.೮ ಕೋಟಿಯಷ್ಟು ಆದಾಯ ಹೊಂದಿದ್ದ ರಾಜೀವ್ ಶುಕ್ಲಾ ಅವರ ಆಸ್ತಿ ಈ ವರ್ಷ ರು.೫.೯ ಕೋಟಿಗೆ ಏರಿಕೆಯಾಗಿದೆ.
ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಆಸ್ತಿಯೂ ಶೇ.೩೩ ರಷ್ಟು ಏರಿಕೆಯಾಗಿದೆ. ವಿಶೇಷ ಎಂದರೆ ಇವರ ಕುಟುಂಬದಲ್ಲಿ ಯಾರಿಗೂ ಕಾರಿಲ್ಲ!
ಹಣಕಾಸು ಸಚಿವ ಪಿ.ಚಿದಂಬರಂ ಅವರ ಆಸ್ತಿ ಶೇ.೨೬ ರಷ್ಟು ಏರಿಕೆಯಾಗಿದೆ. ಇವರ ಆಸ್ತಿಯ ಒಟ್ಟಾರೆ ಮೌಲ್ಯ ರು.೩೦ ಕೋಟಿ.
ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರೂ ಕೋಟ್ಯಧೀಶರೇ. ಇವರ ಆಸ್ತಿ ರು.೧೪.೧೮ ಕೋಟಿ. ವಿಶೇಷ ಎಂದರೆ ಶಿಂಧೆ ಅವರಿಗೂ ಕಾರಿಲ್ಲ.
ಇವರೆಲ್ಲಾ ಡಬಲ್ ಡಿಜಿಟ್ ಕೋಟ್ಯಧೀಶರು. ಇನ್ನು ತ್ರಿಬಲ್ ಡಿಜಿಟ್ ಕೋಟ್ಯಧೀಶರೂ ಮನಮೋಹನ್ ಸಂಪುಟದಲ್ಲಿದ್ದಾರೆ. ಸಚಿವ ಕಮಲ್ ನಾಥ್ ಅವರ ಆಸ್ತಿ ರು.೨೬೦ ಕೋಟಿ. ಪ್ರಫುಲ್ ಪಟೇಲ್ ಅವರ ಆಸ್ತಿ ಮೌಲ್ಯ ರು.೧೦೧ ಕೋಟಿ. ಆದರೆ ಇದು ಕಳೆದ ವರ್ಷದ ಆಸ್ತಿ ವಿವರ. ಈ ವರ್ಷ ಇವರಿಬ್ಬರೂ ಆಸ್ತಿ ವಿವರ ಸಲ್ಲಿಸಿಲ್ಲ.
ಕರ್ನಾಟಕದಿಂದ ಆಯ್ಕೆಯಾದ ಕೇಂದ್ರ ಸಚಿವರ ಆಸ್ತಿ ವಿವರ:
ಕರ್ನಾಟಕದಿಂದ ಆಯ್ಕೆಯಾಗಿರುವ ಕೆಲ ಕೇಂದ್ರ ಸಚಿವರೂ ಕೋಟ್ಯಧೀಶರೇ. ಅವರಲ್ಲಿ ಮೊದಲನೆಯದಾಗಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರು. ಇವರ ಒಟ್ಟಾರೆ ಆಸ್ತಿ ಮೌಲ್ಯ ರು.೧.೮೯ ಕೋಟಿ. ಆದರೆ ಇವರ ಪತ್ನಿ ಪ್ರೇಮಾ ಕೃಷ್ಣ ಅವರ ಆಸ್ತಿಯೇ ಹೆಚ್ಚಿದೆ. ಅವರು ಹೊಂದಿರುವ ಆಸ್ತಿ ಮೌಲ್ಯ ರು.೨.೩೬ ಕೋಟಿ. ಇವರಿಬ್ಬರ ಒಟ್ಟಾರೆ ಆಸ್ತಿ ಮೌಲ್ಯ ರು.೪.೨೫ ಕೋಟಿ.
ಇನ್ನು ಮಲ್ಲಿಕಾರ್ಜುನ ಖರ್ಗೆ. ಕೇಂದ್ರ ಕಾರ್ಮಿಕ ಸಚಿವರಾಗಿರುವ ಖರ್ಗೆ ಅವರು ಹೊಂದಿರುವ ಆಸ್ತಿ ಮೌಲ್ಯ ರು.೨.೩೭ ಕೋಟಿ. ಆದರೆ ಖರ್ಗೆ ಅವರ ಪತ್ನಿ ರಾಧಾ ಬಾಯಿ ಖರ್ಗೆ ಅವರು ಹೊಂದಿರುವ ಆಸ್ತಿ ಮೌಲ್ಯ ಕೂಡ ರು.೧.೯೭ ಕೋಟಿ. ಇವರಿಬ್ಬರ ಒಟ್ಟಾರೆ ಆಸ್ತಿ ಮೌಲ್ಯ ರು.೪.೩೫ ಕೋಟಿ.
ಖರ್ಗೆ ಅವರು ಬೆಂಗಳೂರಿನಲ್ಲಿ ಎರಡು ಮನೆ, ಗುಲ್ಬರ್ಗದಲ್ಲಿ ಒಂದು ಮನೆ ಹೊಂದಿದ್ದಾರೆ. ಇವರ ಹೆಸರಲ್ಲಿ ಕೆಲವೊಂದು ಷೇರು, ಬಾಂಡ್ಗಳು ಇವೆ. ಬ್ಯಾಂಕ್ಗಳಲ್ಲಿ ಉಳಿತಾಯವನ್ನೂ ಮಾಡಿದ್ದಾರೆ. ಇವರು ಕೈಯಲ್ಲಿ ಇಟ್ಟುಕೊಂಡಿರುವ ನಗದು ರು.೫೦ ಸಾವಿರ ಮತ್ತು ರು.೯೦ ಸಾವಿರ.
ಇನ್ನು ಪತ್ನಿ ರಾಧಾ ಬಾಯಿ ಖರ್ಗೆ ಅವರ ಹೆಸರಲ್ಲಿ ಯಾವುದೇ ಮನೆಗಳಿಲ್ಲ. ಆದರೆ ಆಸ್ತಿಯಿದೆ. ಬೆಂಗಳೂರಿನಲ್ಲಿ ಮನೆ ಕಟ್ಟಿಸಲಾಗುತ್ತಿದೆ. ಅಲ್ಲದೆ ಸೈಟೂ ಕೂಡ ಇದೆ.
ಇವರ ಬಳಿ ಹಿಂದಿನವರ ಕಡೆಯಿಂದ ಬಂದ ಚಿನ್ನಾಭರಣವಿದೆ. ಇವರ ಹೆಸರಲ್ಲೂ ಬ್ಯಾಂಕಿನಲ್ಲಿ ಹಣ ಇಡಲಾಗಿದೆ. ಜೊತೆಗೆ ರು.೫೦ ಸಾವಿರ ನಗದನ್ನು ಹೊಂದಿದ್ದಾರೆ.
ವೀರಪ್ಪ ಮೊಯ್ಲಿ ಲಕ್ಷಾಧೀಶ, ಪತ್ನಿ ಕೋಟ್ಯಧೀಶೆ: ಇನ್ನು ಕಾರ್ಪೊರೇಟ್ ವ್ಯವಹಾರಗಳ ಸಚಿವ ವೀರಪ್ಪ ಮೊಯ್ಲಿ ಅವರ ಒಟ್ಟಾರೆ ಆಸ್ತಿ ರು.೧೭,೬೧,೬೦೦ ಮಾತ್ರ. ಇವರ ಹೆಸರಲ್ಲಿ ಮನೆಯಾಗಲಿ, ಯಾವುದೇ ರೀತಿಯ ಆಸ್ತಿಯಾಗಲಿ ಇಲ್ಲ.
ಆದರೆ ಪತ್ನಿ ಮಾಲತಿ ಮೊಯ್ಲಿ ಅವರು ಕೋಟ್ಯಧೀಶರು. ಅವರು ಹೊಂದಿರುವ ಒಟ್ಟಾರೆ ಆಸ್ತಿ ರು.೩.೧೦ ಕೋಟಿ.
ಬೆಂಗಳೂರಿನ ಆರ್.ಟಿ. ನಗರದಲ್ಲಿರುವ ಮನೆ ಇವರ ಹೆಸರಲ್ಲೇ ಇದೆ. ಇವರಿಬ್ಬರ ಒಟ್ಟಾರೆ ಆಸ್ತಿ ಮೌಲ್ಯ ರು.೩.೨೮ ಕೋಟಿ.
ಕರ್ನಾಟಕದವರೇ ಆದ ಮತ್ತೊಬ್ಬ ಸಚಿವ ಕೆ.ಎಚ್. ಮುನಿಯಪ್ಪ ಅವರು ಆಸ್ತಿ ವಿವರ ಸಲ್ಲಿಸಿಲ್ಲ.
ಕುಬೇರರ ನಡುವೆ ಕುಚೇಲ
ಇದು ಸಂಪೂರ್ಣವಾಗಿ ರಕ್ಷಣಾ ಸಚಿವ ಎ.ಕೆ. ಆಂಟನಿ ಅವರ ಕಥೆ.ಕೇಂದ್ರ ಸಂಪುಟದಲ್ಲಿ ಕೋಟ್ಯಧಿಪತಿಗಳೇ ಕಾಣಿಸಿಕೊಂಡರೂ ಸಹ, ಇವರೊಬ್ಬರು ಮಾತ್ರ ’ಏನೂ’ ಇಲ್ಲದೇ ಜೀವಿಸುತ್ತಿದ್ದಾರೆ. ತಮ್ಮ ಹೆಸರಲ್ಲೊಂದು ಮನೆಯೂ ಇಲ್ಲ. ಬ್ಯಾಂಕ್ ಬ್ಯಾಲೆನ್ಸೋ ಕೆಲವೇ ಕೆಲವು ಲಕ್ಷ. ಅದೂ ಬ್ಯಾಂಕ್ ಉದ್ಯೋಗಿಯಾಗಿದ್ದ ಪತ್ನಿ ನಿವೃತ್ತಿಯಾದಾಗ ಬಂದದ್ದು.
ಆಂಟನಿ ಹೆಸರಲ್ಲಿ
ಮನೆ, ಆಸ್ತಿ - ಇಲ್ಲ ಕಾರು - ವ್ಯಾಗನಾರ್(ಸೆಕೆಂಡ್ ಹ್ಯಾಂಡ್) ಬ್ಯಾಂಕ್ ಬ್ಯಾಲೆನ್ಸ್ - ರು.೨.೬೨ ಲಕ್ಷ
ಪತ್ನಿ ಎಲಿಜೆಬೆತ್ ಆಂಟನಿ ಹೆಸರಲ್ಲಿ
ಮನೆ - ತಿರುವನಂತಪುರ, ಮೌಲ್ಯ ರು. ೧೫ ಲಕ್ಷ ಕಾರು, ಆಸ್ತಿ - ಇಲ್ಲ ಬ್ಯಾಂಕ್ ಬ್ಯಾಲೆನ್ಸ್ - ರು. ೧೦.೪೯ ಲಕ್ಷ
ರಾಜೀವ್ ಶುಕ್ಲಾ
೨೦೧೨ ರಲ್ಲಿ ರು.೨೯.೨೫ ಕೋಟಿ ೨೦೧೧ ರಲ್ಲಿ ರು.೧೬.೫೬ ಕೋಟಿ ಶೇ. ೭೬ ಏರಿಕೆ
ಶರದ್ ಪವಾರ್
೨೦೧೨ ರಲ್ಲಿ ರು.೧೬.೨೨ ಕೋಟಿ ೨೦೧೧ ರಲ್ಲಿ ರು.೧೨.೧೫ ಕೋಟಿ ೩೩ ಶೇ ಏರಿಕೆ
ಪಿ.ಚಿದಂಬರಂ
೨೦೧೨ ರಲ್ಲಿ ರು.೨೯.೯೪ ಕೋಟಿ ೨೦೧೧ ರಲ್ಲಿ ರು.೨೩.೬೭ ಕೋಟಿ ಶೇ. ೨೬ ಏರಿಕೆ
ಎಸ್.ಎಂ. ಕೃಷ್ಣ
ಪತ್ನಿ ಪ್ರೇಮಾಕೃಷ್ಣ ಹೆಸರಲ್ಲಿ ೨.೩೬ ಕೋಟಿ ಕೃಷ್ಣ ಅವರ ಹೆಸರಲ್ಲಿ ರು. ೧.೮೯ ಕೋಟಿ ಒಟ್ಟಾರೆ ಆಸ್ತಿ ರು. ೪.೨೫ ಕೋಟಿ
ಮಲ್ಲಿಕಾರ್ಜುನ ಖರ್ಗೆ
ಪತ್ನಿ ರಾಧಾ ಹೆಸರಲ್ಲಿ ೧.೯೭ ಕೋಟಿ ಖರ್ಗೆ ಹೆಸರಲ್ಲಿ ರು. ೨.೩೭ ಕೋಟಿ ಒಟ್ಟಾರೆ ಆಸ್ತಿ ರು. ೪.೩೫ ಕೋಟಿ
ವೀರಪ್ಪ ಮೊಯ್ಲಿ
ಪತ್ನಿ ಮಾಲತಿ ಹೆಸರಲ್ಲಿ ೩.೧೦ ಕೋಟಿ ಮೊಯ್ಲಿ ಅವರ ಹೆಸರಲ್ಲಿ ರು. ೧೭ ಲಕ್ಷ ಒಟ್ಟಾರೆ ಆಸ್ತಿ ರು. ೩.೨೮ ಕೋಟಿ
ಎಂ.ಕೆ. ಅಳಗಿರಿ
ಒಟ್ಟಾರೆ ಆಸ್ತಿ
೨೦೧೧ರಲ್ಲಿ ರು.೩೨ ಕೋಟಿ ೨೦೧೨ರಲ್ಲಿ ರು.೩೭.೪೬ ಕೋಟಿ ಏರಿಕೆ - ಶೇ.೧೭
ಸುಶೀಲ್ ಕುಮಾರ್ ಶಿಂಧೆ
ಒಟ್ಟಾರೆ ಆಸ್ತಿ ೨೦೧೧ರಲ್ಲಿ ರು.೧೩.೩ ಕೋಟಿ
೨೦೧೨ರಲ್ಲಿ ರು.೧೪.೧೮ ಕೋಟಿ ಏರಿಕೆ - ಶೇ.೭
ವರದಿಯ ವಿವರಗಳು |
 |
ಕೃಪೆ : ಕನ್ನಡಪ್ರಭ ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-09-06
|
|
|