ಉಗ್ರರ ಸ್ಕೆಚ್: ಮಾಸ್ಟರ್ ಮೈಂಡ್ ಯಾರು? ನಾಪತ್ತೆ!: ಕಾರ್ಯಾಚರಣೆ ಚುರುಕುಗೊಳಿಸಿದ ರಾಜ್ಯ ಪೊಲೀಸರು | ಕೈಗಾ ಅಣು ಸ್ಥಾವರ ಹಾಗೂ ರಕ್ಷಣಾ ಇಲಾಖೆ ದಾಳಿಯ ಸಂಚು: ಅಲ್ಲಗಳೆದ ಮಿರ್ಜಿ |
ಪ್ರಕಟಿಸಿದ ದಿನಾಂಕ : 2012-09-03
ಬೆಂಗಳೂರು:ಉಗ್ರರ ಕೇಂದ್ರ ಸ್ಥಾನ ಬೆಂಗಳೂರು.ಕಾರ್ಯಾಚರಣೆಯ ಮಾಸ್ಟರ್ ಮೈಂಡ್ ಕೂಡಾ ನಮ್ಮ ಬೆಂಗಳೂರಿನ ಜೆ.ಸಿ. ನಗರದ ನಿವಾಸಿ ಝಾಕೀರ್ ಉಸ್ತಾದ್!
ಪತ್ರಕರ್ತರು,ರಾಜಕಾರಣಿಗಳು ಹಾಗೂ ಹಿಂದೂ ಮುಖಂಡರ ಹತ್ಯೆಯ ಮೂಲಕ ವಿಧ್ವಂಸಕ ಕೃತ್ಯಗಳ ಸಂಚು ರೂಪಿಸುವಲ್ಲಿ ಪ್ರಮುಖನಾಗಿರುವ ಉಸ್ತಾದ್ ನಾಪತ್ತೆಯಾಗಿದ್ದು,ಆತನ ಬಂಧನಕ್ಕೆ ಬೆಂಗಳೂರು ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.
ಈ ಮಧ್ಯೆ ಉಗ್ರರ ಗುಂಪಿಗೆ ಸೇರಿದ ಆರೋಪದ ಮೇಲೆ ಮೆಜೆಸ್ಟಿಕ್ನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಶನಿವಾರ ರಾತ್ರಿ ಮಹಾರಾಷ್ಟ್ರದ ನಾಂದೇಡ್ ಮೂಲದ ಮಹಮ್ಮದ್ ಅಕ್ರಂ ಅಲಿಯಾಸ್ ಖಾಲಿದ್ ಅಲಿಯಾಸ್ ಇಮ್ರಾನ್ ಖಾನ್ (೨೨)ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಇದರೊಂದಿಗೆ ಲಷ್ಕರ್-ಎ-ತೊಯ್ಬಾ,ಹರ್ಕತ್ ಉಲ್ ಜಿಹಾದ್ ಅಲ್ ಇಸ್ಲಾಮಿ ಉಗ್ರ ಸಂಘಟನೆಗಳೊಂದಿಗೆ ನಂಟು ಹೊಂದಿರುವ ಆರೋಪದ ಮೇಲೆ ಇದುವರೆಗೂ ಒಟ್ಟು ೧೭ ಜನರನ್ನು ಬಂಧಿಸಿದಂತಾಗಿದೆ.
ಝಾಕೀರ್ನೇ ಮಾಸ್ಟರ್ ಮೈಂಡ್:ಆರಂಭದಲ್ಲಿ ಮಹಾರಾಷ್ಟ್ರದ ನಾಂದೇಡ್ನಲ್ಲಿ ಬಂಧಿತನಾದ ಇಮ್ರಾನ್ ಖಾನ್ ಈ ಎಲ್ಲಾ ವಿಧ್ವಂಸಕ ಕೃತ್ಯಗಳ ಮಾಸ್ಟರ್ ಮೈಂಡ್ ಎಂದೇ ಭಾವಿಸಲಾಗಿತ್ತು. ಆದರೆ, ಈಗ ಶಂಕೆ ಬದಲಾಗಿದ್ದು, ಕಣ್ಮರೆಯಾಗಿರುವ ಝಾಕೀರ್ ಉಸ್ತಾದ್ ಉಗ್ರ ಚಟುವಟಿಕೆಗಳ ಮಾಸ್ಟರ್ಮೈಂಡ್ ಎಂದು ಹೇಳಲಾಗುತ್ತಿದೆ.ನಾಪತ್ತೆಯಾಗಿರುವ ಮಾಸ್ಟರ್ಮೈಂಡ್ ಝಾಕೀರ್ ಉಸ್ತಾದ್,ಮಹಮ್ಮದ್ ಅಕ್ರಮ್ನೊಂದಿಗೆ ಸೇರಿ ವಿಧ್ವಂಸಕ ಕೃತ್ಯಗಳ ಕಾರ್ಯಾಚರಣೆ ನಡೆಸಲು ಯುವಕರನ್ನು ಒಟ್ಟುಗೂಡಿಸಿದ್ದ ಎಂದು ಮೂಲಗಳು ತಿಳಿಸಿವೆ.
ಅಕ್ರಮ್ ವಿಚಾರಣೆ ಸಂದರ್ಭದಲ್ಲಿ ಬಂಧಿತ ಉಗ್ರರ ಮುಖ್ಯಸ್ಥ ಹಾಗೂ ಮಾಸ್ಟರ್ ಮೈಂಡ್ ಝಾಕೀರ್ ಉಸ್ತಾದ್ ಎನ್ನುವ ಮಾಹಿತಿ ಲಭ್ಯವಾಗಿದೆ.ಮಹಮ್ಮದ್ ಅಕ್ರಮ್ನನ್ನು ಹೈದರಾಬಾದ್ ಮೂಲದ ಶಾಹೀದ್ ಬಿಲಾಲ್ ಮೂಲಕ ಝಾಕೀರ್ ಉಸ್ತಾದ್ ಪರಿಚಯ ಮಾಡಿಕೊಂಡಿದ್ದ. ಶಾಹೀದ್ ಬಿಲಾಲ್ ದ. ಭಾರತದಲ್ಲಿ ೨೦೦೪ರಿಂದ ೨೦೦೭ರವರೆಗೆ ನಡೆದ ಭಯೋತ್ಪಾದಕ ಕೃತ್ಯಗಳಲ್ಲಿ ನಂಟು ಇರುವ ಶಂಕೆ ಇದೆ.
ಝಾಕೀರ್ ಉಸ್ತಾದ್, ಅಕ್ರಮ್ನೊಂದಿಗೆ ಸೇರಿ ಕೆಲವು ಜಿಹಾದಿ ಮನಸ್ಸಿನ ಹುಡುಗರನ್ನು ತನ್ನ ತಂಡಕ್ಕೆ ನೇಮಿಸಿಕೊಂಡು ವಿವಿಧ ರಾಜ್ಯಗಳಲ್ಲಿ ಹಿಂದೂ ಮುಖಂಡರು ಹಾಗೂ ಮುಸ್ಲಿಂ ವಿರೋಧಿ ಪತ್ರಕರ್ತರನ್ನು ಗುರುತಿಸಿ ಅವರನ್ನು ಹತ್ಯೆಗೈಯ್ಯುವ ಸಂಚು ರೂಪಿಸುತ್ತಿದ್ದ ಎನ್ನುವ ಮಾಹಿತಿ ವಿಚಾರಣೆ ವೇಳೆ ಬಹಿರಂಗಗೊಂಡಿದೆ. ಝಾಕೀರ್ ಕರ್ನಾಟಕದಲ್ಲಿ ಹುಜಿ ಸಂಘಟನೆಯ ಮುಖ್ಯಸ್ಥ ಎನ್ನಲಾಗಿದ್ದು, ಈತ ಉತ್ತರ ಪ್ರದೇಶ, ಹೈದರಾಬಾದ್, ಮಹಾರಾಷ್ಟ್ರಗಳಲ್ಲಿ ಕರ್ನಾಟಕ ಮಾದರಿಯಲ್ಲೇ ದಾಳಿ ನಡೆಸುವ ಸಂಚು ರೂಪಿಸಿದ್ದ.
ಸೌದಿ ಅರೇಬಿಯಾದಲ್ಲಿರುವ ಉಗ್ರರು ಇವರ ಕಾರ್ಯಾಚರಣೆಗಳಿಗೆ ಹಣ ಸೇರಿದಂತೆ ಇನ್ನಿತರ ಸಹಾಯ ಮಾಡುತ್ತಿದ್ದರು.ಸ್ಥಳೀಯ ಭೂಗತ ಜಗತ್ತಿನ ದುಷ್ಕರ್ಮಿಗಳು ಈ ಉಗ್ರರಿಗೆ ಪಿಸ್ತೂಲ್ ಹಾಗೂ ಮದ್ದು ಗುಂಡುಗಳನ್ನು ಸರಬರಾಜು ಮಾಡುತ್ತಿದ್ದರು ಎನ್ನಲಾಗಿದೆ.ರಾಜಕಾರಣಿಗಳ ಕಗ್ಗೋಲೆ ಹಾಗೂ ಪತ್ರಕರ್ತರನ್ನು ಕೊಲೆಗೈದ ಬಳಿಕ ಉಂಟಾಗುವ ಕೋಮು ಗಲಭೆಗಳನ್ನು ಲಾಭವಾಗಿಸಿಕೊಳ್ಳುವ ಉದ್ದೇಶ ಝಾಕೀರ್ ಉಸ್ತಾದ್ ಅವನದಾಗಿತ್ತು.ಗಲಭೆಗಳಾದ ಬಳಿಕ ಕೆಲವು ಯುವಕರನ್ನು ಉಗ್ರ ಸಂಘಟನೆಗಳಿಗೆ ನೇಮಿಸಿಕೊಂಡು ಅವರಿಂದ ದೇಶದಲ್ಲಿ ಮತ್ತಷ್ಟು ಉಗ್ರರ ದಾಳಿ ಹಾಗೂ ಕೋಮು ದಳ್ಳುರಿ ಹಬ್ಬಿಸುವ ಯೋಚನೆ ಹೊಂದಿದ್ದ ಎಂದು ಮೂಲಗಳು ತಿಳಿಸಿವೆ.ವಿಶೇಷವಾಗಿ ದಕ್ಷಿಣ ಭಾರತದ ಯುವಕರನ್ನು ನೇಮಿಸಿಕೊಳ್ಳುವ ಉದ್ದೇಶ ಹುಜಿ ಸಂಘಟನೆಯದಾಗಿತ್ತು. ಆದರೆ, ತಮ್ಮ ಕಾರ್ಯತಂತ್ರ ಬಯಲಾಗದಂತೆ ಎಚ್ಚರವಹಿಸುತ್ತಿದ್ದರು. ಬಿಜೆಪಿ ಆಡಳಿತ ಇರುವ ಕರ್ನಾಟಕ ಉಗ್ರರ ಹಿಟ್ಲೀಸ್ಟ್ನಲ್ಲಿ ಮೊದಲ ಸ್ಥಾನದಲ್ಲಿತ್ತು. ರಾಜ್ಯದ ರಾಜಕಾರಣಿಗಳು ಹಾಗೂ ಹಿಂದೂಪರ ಪತ್ರಕರ್ತರು ಉಗ್ರರ ಮೊದಲ ಗುರಿಯಾಗಿದ್ದರು. ಪೊಲೀಸರ ಪ್ರಕಾರ ಝಾಕೀರ್ ಉಸ್ತಾದ್ನ ಬಂಧನದ ಬಳಿಕ ಉಗ್ರರ ಬಗೆಗಿನ ತನಿಖೆಗೆ ಒಂದು ಸ್ಪಷ್ಟ ಚಿತ್ರಣ ದೊರೆಯಲಿದೆ. ವಿಧ್ವಂಸಕ ಕೃತ್ಯಗಳ ಮಾಸ್ಟರ್ ಮೈಂಡ್ ಆಗಿರುವ ಕಾರಣ ಆತನ ಬಂಧನದೊಂದಿಗೆ ದಾಳಿ ಸಂಚಿಗೆ ಇರುವ ಅಂತಾರಾಷ್ಟ್ರೀಯ ನಂಟಿನ ಬಗ್ಗೆ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಳೆದ ವರ್ಷದಿಂದಲೇ ಪ್ಲಾನ್
ಬೆಂಗಳೂರು: ಬೆಂಗಳೂರು, ಮಹಾರಾಷ್ಟ್ರ, ಆಂಧ್ರಪ್ರದೇಶ, ದೆಹಲಿ ಸೇರಿದಂತೆ ರಾಷ್ಟ್ರಾದ್ಯಂತ ವಿದ್ವಂಸಕ ಕೃತ್ಯ ಎಸಗಲು ಉಗ್ರರು ನಡೆಸಿದ ಸಂಚು ಕೇವಲ ಆರು ತಿಂಗಳ ಯೋಜನೆಯೇ? ಖಂಡಿತಾ ಅಲ್ಲ.
ಪ್ರಕರಣದ ತನಿಖೆ ನಡೆಸುತ್ತಿರುವ ಬೆಂಗಳೂರು ಸಿಸಿಬಿ ಪೊಲೀಸರು,ಮಹಾರಾಷ್ಟ್ರದ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್),ಹೈದರಾಬಾದ್ನ ತನಿಖಾಧಿಕಾರಿಗಳು ಹಾಗೂ ಕೇಂದ್ರ ಗುಪ್ತಚರ ಇಲಾಖೆಗೆ ಸದ್ಯ ಲಭಿಸಿರುವ ಮಾಹಿತಿ ಪ್ರಕಾರ ಈ ಸ್ಕೇಚ್ ಜನ್ಮ ತಾಳಿದ್ದು ೨೦೧೧ರಲ್ಲಿ.ಇನ್ನು ಈ ರಾಷ್ಟ್ರ ವಿರೋಧಿ ಸಂಚಿನ ಮೂಲ ಇರುವುದು ಬೆಂಗಳೂರಿನಲ್ಲಿಯೇ. ಮಾತ್ರವಲ್ಲ ಕನ್ನಡಪ್ರಭ ಮತ್ತು ಸುವರ್ಣ ಸುದ್ದಿ ವಾಹಿನಿ ಸಂಪಾದಕ ವಿಶ್ವೇಶ್ವರ ಭಟ್, ಅಂಕಣಕಾರ ಪ್ರತಾಪ ಸಿಂಹ ಹಾಗೂ ರಾಜ್ಯದ ಬಜರಂಗದಳದ ಮುಖ್ಯಸ್ಥ ಗಣು ಜರ್ತಾರ್ಕರ್ ಕೊಲೆಗೆ ೨೦೧೧ರಲ್ಲೇ ಸಂಚು ನಡೆದಿತ್ತು. ಸೂಕ್ತ ಸಮಯಕ್ಕಾಗಿ ಕಾಯುತ್ತಾ, ಕಾಲ ಕಾಲಕ್ಕೆ ವಿದೇಶದಲ್ಲಿ ತರಬೇತಿ ಪಡೆಯುತ್ತಾ ಬೆಳೆದ ಬಂಧಿತ ಕೆಲ ಉಗ್ರರು,ಗಣೇಶೋತ್ಸವ ಸಂದರ್ಭದಲ್ಲಿ ಗಣು ಜರ್ತಾರ್ಕರ್ನಂತ ಹಿಂದೂ ಮುಖಂಡರು ಹಾಗೂ ಹಿಂದುತ್ವದ ರಾಷ್ಟ್ರೀಯವಾದದ ಪರ ಧ್ವನಿ ಎತ್ತುವ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ಚಾನಲ್ ಪ್ರಧಾನ ಸಂಪಾದಕ ವಿಶ್ವೇಶರ ಭಟ್ ಹಾಗೂ ಅಂಕಣಕಾರ ಪ್ರತಾಪ ಸಿಂಹ ಅವರಂತಹ ಗಣ್ಯರನ್ನು ಹತ್ಯೆ ಮಾಡಿ ಕೋಮು ಭಾವನೆಯನ್ನು ಕೆರಳಿಸುವ ದುರುದ್ದೇಶ ಹೊಂದಿದ್ದರು.
ಕೇಂದ್ರ ಸ್ಥಾನ ಬೆಂಗಳೂರು!:ಅಂದ ಹಾಗೇ ಈ ಸಂಚಿನ ಕೇಂದ್ರ ಸ್ಥಾನ ಬೆಂಗಳೂರು. ಮಾತ್ರವಲ್ಲ, ಸೂತ್ರಧಾರಿಯೂ ಬೆಂಗಳೂರಿನವನೇ. ಪೊಲೀಸರಿಗೆ ಲಭ್ಯವಾದ ಮಾಹಿತಿ ಪ್ರಕಾರ ಜೆ.ಸಿ.ನಗರ ನಿವಾಸಿ ಝಾಕೀರ್ ಅಲಿಯಾಸ್ ಉಸ್ತಾದ್ ಈ ಎಲ್ಲಾ ಒಳಸಂಚಿನ ಮೂಲ ಪ್ರೇರಕ.
ಜೆ.ಸಿ.ನಗರದಲ್ಲಿರುವ ಮಸೀದಿಗೆ ಹೋಗುತ್ತಿದ್ದ ಶೋಯಬ್ ಅಹ್ಮದ್ ಮಿರ್ಜಾ,ರೆಹಮಾನ್ ಸಿದ್ದಿಕಿ, ಜಾಮ್ದಾರ್ ಸೇರಿದಂತೆ ಹಲವರನ್ನ ಈತ ಈ ಕಾರಸ್ಥಾನಕ್ಕೆ ಸೇರಿಸಿಕೊಂಡಿದ್ದ. ಜಾಮ್ದಾರ್ನನ್ನು ಇರಾನ್ ಮೂಲಕ ಪಾಕಿಸ್ತಾನಕ್ಕೆ ಕಳುಹಿಸಿ ಅಲ್ಲಿ ಆತನಿಗೆ ಐಎಸ್ಐ ಮೂಲಕ ತರಬೇತಿ ಕೊಡಿಸಿದ್ದ.
ವಿಚಾರಣೆ ಸಂದರ್ಭದಲ್ಲಿ ಜಾಮ್ದಾರ್ ಈ ವಿಚಾರವನ್ನು ಬಾಯ್ಬಿಟ್ಟಿದ್ದು,ಭಾರತೀಯ ಪಾಸ್ಪೋರ್ಟ್ ನಂಬರ್ ೮೦೨೮೧೪೯ ಮೂಲಕ ಏರ್ ಅರೇಬಿಯಾ ವಿಮಾನದಲ್ಲಿ ಡಾ. ಜಾಫರ್ ಜತೆಗೆ ಇರಾನ್ಗೆ ತೆರಳಿದ್ದ.ಅಲ್ಲಿ ಇಸ್ಲಾಮಿಕ್ ರಿಪಬ್ಲಿಕ್ ಇರಾನ್ನ ವೀಸಾ ಪಡೆದು ಹೀಮಾಪ್ ಪಾಕಿನ್ ಎಂಬಾತನನ್ನು ಸಂಪರ್ಕಿಸಿದ್ದ.ಅಲ್ಲಿಂದ ಮುಂದೆ ಇರಾನ್ ರಾಜಧಾನಿ ಟೆಹ್ರಾನ್ಗೆ ಭೇಟಿ ನೀಡಿದ್ದ. ನಂತರ ಇರಾನ್ ಗಡಿಗೆ ತಲುಪಿ, ಅಲ್ಲಿಂದ ಟ್ಯಾಂಕರ್ ಮೂಲಕ ಚಾಲಕನಿಗೆ ರು.೪೦೦ ಬಾಡಿಗೆ ಕೊಟ್ಟು ಪಾಕಿಸ್ತಾನದ ಗೋದಾವರ್ ಎನ್ನುವ ಪ್ರದೇಶ ತಲುಪಿದ.
ಬಳಿಕ ಜಾಮ್ದಾರ್ ಮತ್ತು ಜಾಫರ್ ಬಸ್ಸಿನಲ್ಲಿ ಕರಾಚಿಗೆ ಬಂದು ಜಮೀರ್ ಎಂಬಾತನ ಮನೆಯಲ್ಲಿ ೨ ದಿನ ಉಳಿದುಕೊಂಡಿದ್ದರು.ನಂತರ ಜಮೀರ್ ಇಬ್ಬರನ್ನೂ ಕರಾಚಿಯಲ್ಲಿರುವ ಐಎಸ್ಐ ಕಮಾಂಡರ್ ಅಬ್ದುಲ್ ವಾಹಬ್ ಎಂಬಾತನಿಗೆ ಪರಿಚಯಿಸಿದ.ಅಬ್ದುಲ್ ವಾಹಬ್ ಭಾರತದಿಂದ ಆಗಮಿಸಿದ್ದ ಜಾಮ್ದಾರ್ ಹಾಗೂ ಜಾಫರ್ಗೆ ೧೫ ದಿನಗಳ ಕಾಲ ಉಗ್ರಗಾಮಿ ತರಬೇತಿ ಕೇಂದ್ರದಲ್ಲಿ ತರಬೇತಿ ನೀಡಿದ್ದ. ಅಲ್ಲದೆ, ವಹಾಬ್ಗೆ ಇವರನ್ನು ಪರಿಚಯಿಸಿದ ಜಮೀರ್ ತರಬೇತಿ ನಂತರ ಸ್ವಲ್ಪ ಹಣ ನೀಡಿ ಇನ್ನೂ ಸಾಕಷ್ಟು ಹಣ ನೀಡುವುದಾಗಿ ಹೇಳಿ ಕಳುಹಿಸಿದ್ದ. ಇದಾದ ಬಳಿಕ ಇಬ್ಬರೂ ಇರಾನ್ನ ಟೆಹ್ರಾನ್ಗೆ ಹೋಗಿ,ಅಲ್ಲಿಂದ ಇಂಡಿಯನ್ ಏರ್ಲೈನ್ಸ್ ಮೂಲಕ ಮುಂಬೈಗೆ ತಲುಪಿದ್ದರು.
ಮತ್ತೆ ಝಾಕೀರ್ ಭೇಟಿ: ತರಬೇತಿ ಪಡೆದು ಭಾರತಕ್ಕೆ ವಾಪಸಾದ ಉಗ್ರರು ಮತ್ತೆ ಝಾಕೀರ್ ಅಲಿಯಾಸ್ ಉಸ್ತಾದ್ನನ್ನು ಭೇಟಿ ಮಾಡುತ್ತಾರೆ.ಆ ಸಂದರ್ಭದಲ್ಲಿ ರಾಷ್ಟ್ರೀಯವಾದಿ ವಿಚಾರ ಬರೆಯುತ್ತಿದ್ದ ಅಂಕಣಕಾರ ಪ್ರತಾಪ ಸಿಂಹ ಹಾಗೂ ವಿಶ್ವೇಶ್ವರ ಭಟ್ ಮತ್ತು ಬಜರಂಗದಳದ ಗಣು ಜರ್ತಾರ್ಕರ್ ಅವರನ್ನು ಹತ್ಯೆಗೈಯ್ಯಲು ಸೂಚನೆ ನೀಡಲಾಗುತ್ತದೆ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಗಣೇಶ ಚತುರ್ಥಿಗೆ ಮುನ್ನ ಈ ಮೂವರೂ ಸೇರಿದಂತೆ ರಾಷ್ಟ್ರಾದ್ಯಂತ ಅನೇಕ ಹಿಂದೂ ಮುಖಂಡರನ್ನು ಕೊಲೆಗೈದು ಕೋಮು ಗಲಭೆ ಸೃಷ್ಟಿಸುವ ಹುನ್ನಾರ ಇವರು ಹೊಂದಿದ್ದರು ಎಂದು ತಿಳಿದು ಬಂದಿದೆ.
ಪೊಲೀಸರಿಂದ ಬ್ಲಾಗ್ ಶುರು
ಬೆಂಗಳೂರು: ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಶಂಕಿತ ಉಗ್ರರ ತನಿಖೆ ಹಾಗೂ ಪ್ರಗತಿಯ ಮಾಹಿತಿಗಾಗಿ ಬೆಂಗಳೂರು ಪೊಲೀಸರು ಬ್ಲಾಗ್ ಆರಂಭಿಸಿದ್ದಾರೆ.
ಆರೋಪಿಗಳನ್ನು ಬಂಧಿಸಿದ ದಿನಾಂಕ,ಎಫ್ಐಆರ್ನಲ್ಲಿ ಆರೋಪಿಗಳ ವಿರುದ್ದ ದಾಖಲಿಸಿರುವ ಸೆಕ್ಷೆನ್ಗಳು ಬ್ಲಾಗ್ನಲ್ಲಿ ಲಭ್ಯವಾಗಲಿವೆ.ಈ ಸಂಬಂಧ ತನಿಖೆಯ ಪ್ರಗತಿ ನಿರಂತರವಾಗಿ ಅಪ್ಡೇಟ್ ಆಗಲಿದೆ.ಸಾರ್ವಜನಿಕರು ಬ್ಲಾಗ್ಗೆ ಭೇಟಿ ಕೊಟ್ಟು ತನಿಖೆಯ ಬಗ್ಗೆ ತಿಳಿದುಕೊಳ್ಳಬಹುದು ಎಂದು ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ ಮಿರ್ಜಿ ತಿಳಿಸಿದ್ದಾರೆ. ಪೊಲೀಸರ ತನಿಖೆಯ ಬಗ್ಗೆ ಶಂಕಿತ ಉಗ್ರರ ಪೋಷಕರು ತಮ್ಮ ಮಕ್ಕಳು ಅಂತಹ ಕೃತ್ಯಗಳಲ್ಲಿ ತೊಡಗಿಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿರುವ ಹಿನ್ನೆಲೆಯಲ್ಲಿ ತನಿಖೆಯ ಪಾರದರ್ಶಕತೆಗಾಗಿ ಬ್ಲಾಗ್ ಆರಂಭಿಸಲಾಗಿದೆ.
ಜಾಲ ಪ್ರೇರಣೆ:ಕರ್ನಾಟಕದಲ್ಲಿ ಬಂಧಿತ ಉಗ್ರರು ಅಲ್ಖೈದಾದ ಇಂಟರ್ನೆಟ್ ನಿಯತಕಾಲಿಕೆ ಇನ್ಸ್ಪೈರ್ನಿಂದ ಪ್ರಭಾವಿತರಾಗಿದ್ದರಂತೆ!ಈ ವಿಚಾರವನ್ನು ಬಂಧಿತ ಶಂಕಿತ ಉಗ್ರರೇ ಬಹಿರಂಗಪಡಿಸಿದ್ದಾರೆ. ಯೆಮನ್ನಿಂದ ಪ್ರಕಟವಾಗುತ್ತಿದೆ ಎನ್ನಲಾದ ಈ ನಿಯತಕಾಲಿಕೆಯಲ್ಲಿ ಅಫ್ಘಾನಿಸ್ತಾನದಲ್ಲಿ ಅಲ್ಖೈದಾದ ಚಟುವಟಿಕೆ ವೈಭವೀಕರಿಸಲಾಗುತ್ತಿತ್ತು.
ಕರ್ನಾಟಕದಲ್ಲಿ ಬಂಧಿತ ಶಂಕಿತ ಉಗ್ರರಿಗೆ ಅಲ್ಖೈದಾದ ಇಂಟರ್ನೆಟ್ ನಿಯತಕಾಲಿಕೆ ಇನ್ಸ್ಪೈರ್ನಿಂದ ಪ್ರಭಾವಿತರಾಗಿದ್ದರಂತೆ!
ಹೌದು.ಈ ವಿಚಾರವನ್ನು ಬಂಧಿತ ಶಂಕಿತ ಉಗ್ರರೇ ಬಹಿರಂಗಪಡಿಸಿದ್ದಾರೆ.ಯೆಮನ್ನಿಂದ ಪ್ರಕಟವಾಗುತ್ತಿದೆ ಎನ್ನಲಾದ ಈ ನಿಯತಕಾಲಿಕೆಯಲ್ಲಿ ಅಫ್ಘಾನಿಸ್ತಾನದಲ್ಲಿ ಅಲ್ಖೈದಾದ ಚಟುವಟಿಕೆಯನ್ನು ವೈಭವೀಕರಿಸಲಾಗುತ್ತಿತ್ತು.ಜತೆಗೆ,ಅಡುಗೆ ಮನೆಯಲ್ಲೇ ಬಾಂಬ್ ತಯಾರಿಸುವುದು ಹೇಗೆ,ಎ.ಕೆ.೪೭ ಅನ್ನು ಯಾವ ರೀತಿಯಲ್ಲಿ ಸ್ವಚ್ಛಗೊಳಿಸಬೇಕು ಎನ್ನುವ ಕುರಿತೂ ಮಾಹಿತಿಗಳನ್ನು ಒಳಗೊಂಡಿತ್ತು.ಅಫ್ಘಾನಿಸ್ತಾನದಲ್ಲಿ ಅಮೆರಿಕಕ್ಕೆ ಬೆಂಬಲ ನೀಡುತ್ತಿರುವ ಭಾರತ,ಇಸ್ರೇಲ್ ಮತ್ತು ಇತರೆ ಪಾಶ್ಚಿಮಾತ್ಯ ದೇಶಗಳಲ್ಲಿ ಶಸ್ತ್ರಾಸ್ತ್ರ ದಾಳಿ ಕೈಗೊಳ್ಳಲು ಯುವಕರನ್ನು ಪ್ರಚೋದಿಸುವ ಬರಹಗಳೂ ಪ್ರಕಟವಾಗುತ್ತಿದ್ದವು.ಬಂಧಿತರಿಂದ ವಶಪಡಿಸಿಕೊಳ್ಳಲಾದ ಲ್ಯಾಪ್ಟಾಪ್ ಹಾಗೂ ಪೆನ್ಡ್ರೈವ್ಗಳು ಅವರು ಈ ವೆಬ್ಸೈಟನ್ನು ಆಗಾಗ್ಗೆ ನೋಡುತ್ತಿದ್ದರು ಎನ್ನುವುದನ್ನು ಸಾಬೀತುಪಡಿಸಿದೆ.
ಅಲ್ಖೈದಾ ಸೇರಲು ಆಸಕ್ತಿ:ಇದರಿಂದ ಪ್ರಭಾವಿತರಾದ ಯುವಕರು ಭಯೋತ್ಪಾದನಾ ಸಂಘಟನೆಗಳನ್ನು ಸೇರಲು ಪ್ರೇರಣೆ ಪಡೆದರು. ಈ ಸಂಬಂಧ ಬಂಧಿತರು ಕರಾಚಿಯಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಮೃತಪಟ್ಟ ಹೈದರಾಬಾದ್ ಮೂಲದ ಶಾಹಿದ್ ಬಿಲಾಲ್ನ ಸಹೋದರನನ್ನು ಸಂಪರ್ಕಿಸಿದ್ದರು.ಇವರಲ್ಲಿ ಕನಿಷ್ಠ ನಾಲ್ಕು ಮಂದಿ ಅಫ್ಘಾನಿಸ್ತಾನದಲ್ಲಿ ಅಲ್ಖೈದಾ ಉಗ್ರರನ್ನು ಸೇರಿಕೊಳ್ಳುವ ಇಚ್ಛೆ ವ್ಯಕ್ತಪಡಿಸಿದ್ದರು.ಆದರೆ,ಬಿಲಾಲ್ ಸಹೋದರ ಇದನ್ನು ತಿರಸ್ಕರಿಸಿದ್ದ. ಮೊದಲು ಭಾರತದಲ್ಲಿ ದಾಳಿ ನಡೆಸಿ ಯಶಸ್ವಿಯಾಗಿ, ನಂತರ ಅಮೆರಿಕದ ವಿರುದ್ಧ ಅಫ್ಘಾನಿಸ್ತಾನದಲ್ಲಿ ಯುದ್ಧ ಮಾಡಿ ಎಂದು ಸೂಚಿಸಲಾಗಿತ್ತು.
ಈ ನಡುವೆ,ಪೊಲೀಸರ ವಶದಲ್ಲಿರುವ ಎಂಸಿಎ ವಿದ್ಯಾರ್ಥಿ ಮಿರ್ಜಾ ಅಲಿಯಾಸ್ ಚೋಟು ಪಾಕಿಸ್ತಾನಕ್ಕೆ ತೆರಳಿ ಶಸ್ತ್ರಾಸ್ತ್ರ ತರಬೇತಿಯನ್ನೂ ಪಡೆದಿದ್ದ.ನಂತರ ಆತ ಇತರರಿಗೂ ಶಸ್ತ್ರಾಸ್ತ್ರ ತರಬೇತಿ ನೀಡಿದ್ದ ಎಂದು ಬೇಹುಗಾರಿಕೆ ದಳ ಹಾಗೂ‘ರಾ’ದ ಅಧಿಕಾರಿಗಳನ್ನೊಳಗೊಂಡ ಜಂಟಿ ತನಿಖಾ ತಂಡವು ಈ ಮಾಹಿತಿ ಹೊರಹಾಕಿದೆ.ಇದಲ್ಲದೆ ಗಲ್ಫ್ನಿಂದ ಬಂದ ಸೂಚನೆಯಂತೆ ಬಂಧಿತರು ಸಿದ್ಧಿಕಿ ಕೆಲಸ ಮಾಡುತ್ತಿದ್ದ ಪತ್ರಿಕೆಯ ಅಂಕಣಕಾರರೊಬ್ಬರನ್ನೂ ಹತ್ಯೆ ಮಾಡಲು ಯೋಜನೆ ಹಾಕಿಕೊಂಡಿದ್ದರು.ಇದಕ್ಕಾಗಿ ಅಂಕಣಕಾರನ ಎಲ್ಲಾ ಚಟುವಟಿಕೆಗಳ ಮೇಲೆ ಕಣ್ಣಿಡಲಾಗಿತ್ತು.
ದಾಳಿಯ ಸಂಚು:ಅಲ್ಲಗಳೆದ ಮಿರ್ಜಿ
ಬೆಂಗಳೂರು:`ಶಂಕಿತ ಉಗ್ರರು ಕಾರವಾರದ ಸೀಬರ್ಡ್ ನೌಕಾನೆಲೆ ಕೈಗಾ ಅಣು ಸ್ಥಾವರ ಸೇರಿದಂತೆ ರಕ್ಷಣಾ ಇಲಾಖೆಯ ಪ್ರಮುಖ ಕಟ್ಟಡಗಳನ್ನು ಸ್ಫೋಟಿಸಲು ಸಂಚು ರೂಪಿಸಿದ್ದರು`ಎಂಬ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಆರ್. ಕೆ.ಸಿಂಗ್ ಅವರ ಹೇಳಿಕೆಯನ್ನು ಜ್ಯೋತಿಪ್ರಕಾಶ್ ಮಿರ್ಜಿ ಅಲ್ಲಗಳೆದಿದ್ದಾರೆ.
`ಕೈಗಾ ಅಣು ಸ್ಥಾವರ ಹಾಗೂ ರಕ್ಷಣಾ ಇಲಾಖೆಯ ಕಟ್ಟಡಗಳ ಮೇಲೆ ಶಂಕಿತ ಉಗ್ರರು ಬಾಂಬ್ ದಾಳಿಯ ಸಂಚು ರೂಪಿಸಿರುವ ಬಗ್ಗೆ ಇಲ್ಲಿಯವರೆಗಿನ ತನಿಖೆಯಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಅವರು ಯಾವ ಆಧಾರದ ಮೇಲೆ ದಾಳಿಯ ಬಗ್ಗೆ ಹೇಳಿಕೆ ನೀಡಿದ್ದಾರೆ ಎಂಬುದು ಗೊತ್ತಾಗಿಲ್ಲ. ನಮ್ಮ ತನಿಖೆಯ ಪ್ರಕಾರ ಶಂಕಿತ ಉಗ್ರರು ಕೆಲವು ವ್ಯಕ್ತಿಗಳ ಹತ್ಯೆಗೆ ಸಂಚು ರೂಪಿಸಿದ್ದರೇ ಹೊರತು, ಬಾಂಬ್ ದಾಳಿ ಎಸಗುವ ಬಗ್ಗೆ ಯಾವುದೇ ಸಂಚು ರೂಪಿಸಿರಲಿಲ್ಲ` ಎಂದರು
ವರದಿಯ ವಿವರಗಳು |
 |
ಕೃಪೆ : ಕನ್ನಡಪ್ರಭ ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-09-03
|
|
AHAM, Mangalore | 2012-09-03 | ಹಾಸ್ಯಾಸ್ಪದ ಎಂದರೆ ಅಲ ಖೈದಾ ವೆಬ್ ಸೈಟ್ ಇನ್ನು ಯಾಕೆ ಜೀವಂತವಾಗಿದೆ ಅಂತರ್ಜಾಲದಲ್ಲಿ, ಯಾಕೆ ಇನ್ನೂ ಅಮೆರಿಕ ಅಥವಾ ನಮ್ಮ ಭಾರತ ಬ್ಲಾಕ್ ಮಾಡಿಲ್ಲ? ಸಾಮಾನ್ಯವಾಗಿ ಒಬ್ಬ ಪತ್ರಕರ್ತ ಅಂತರ್ಜಾಲದಲ್ಲಿ ಸಿಗುವ ಎಲ್ಲ ವೆಬ್ ಸೈಟಿಗೆ ಭೇಟಿ ಕೊಡುತ್ತಾನೆ ತನ್ನ ಸ್ಟಡಿ ಮೆಟೀರಿಯಲ್ ಗೋಸ್ಕರ ಮತ್ತು ಮೋದಿ ಮುಂತಾದವರ ಚಿತ್ರಗಳನ್ನೂ ಇಟ್ಟು ಕೊಂಡಿರುತ್ತಾನೆ. ಅದನ್ನೇ ಭಯೋತ್ಪಾದನೆ ಎಂದರೆ, ಇತ್ತೀಚಿಗೆ ಸರಕಾರ ನಿಷೇಧ ಹೇರಿದ ವೆಬ್ ಸೈಟಿನಲ್ಲಿ ಶೇಖಡ 20 % ರಷ್ಟು ವೆಬ್ ಸೈಟು ಸಂಘ ಪರಿವಾರಕ್ಕೆ ಸೇರಿದ್ದಾಗಿದೆ. ಆ ತಾಣಕ್ಕೆ ಅಂತರ್ಜಾಲದಲ್ಲಿ ಭೇಟಿ ಕೊಟ್ಟ ಎಲ್ಲರನ್ನು ಶಂಖೆಯ ಮೇಲೆ ಬಂಧಿಸಲಿ.
ಇದೊಂದು ಪಕ್ಕಾ ರಾಜಕೀಯ ಕುತಂತ್ರ ಮತ್ತು ಬಲಿ ಪಶುಗಳು ಮಾತ್ರ ಮುಸ್ಲಿಮರು.
ಇನ್ನು ಕೊನೆಯದಾಗಿ ವಾರ್ತೆ ಈ ರೀತಿ ಬರುತ್ತೆ " ಇವರೆಲ್ಲ PFI ಗೆ ಸೇರಿದ ಸದಸ್ಯರು ಮತ್ತು ಎಲ್ಲರನ್ನು ಬಧಿಸಲಾಗುವುದು". ನಂತರ ಸಂಘ ಪರಿವಾರಕ್ಕೆ ತಮ್ಮ ಅಜೆಂಡಾ ಪೂರ್ತಿಗೊಳಿಸಿದ ಸಂತಸ ಮತ್ತು ಕಾಂಗ್ರೆಸ್ಸಿಗೆ ತಮ್ಮ ವೋಟಿಗೆ ತೊಡಕಾಗಿದ್ದವರ ದಮನ ಕಂಡು ಸಂತೃಪ್ತಿ ಪಡುವುದು...! ಕಾಂಗ್ರೆಸ್ಸು ಇದುವರೆಗೆ ಅಲ್ಪ ಸಂಖ್ಯಾತರನ್ನು ಉದ್ದಾರ ಮಾಡುವ ಕಾರ್ಯ ಮಾಡಿಲ್ಲ. ದಮನಿಸುವ ಕಾರ್ಯವಂತು ಮಾಡುತ್ತಲೇ ಬಂದಿದೆ ತನ್ನ ಓಟಿಗೋಸ್ಕರ ಮತ್ತು ಅಲ್ಪ ಸಂಖ್ಯಾತರಿಗೆ ಕಾಂಗ್ರೆಸ್ಸು ಬಿಟ್ಟು ಬೇರೆ ಆಯ್ಕೆ ಮಾಡದಂತೆ ನೋಡಿ ಕೊಂಡಿದೆ. |
NAWA, Mangalore | 2012-09-03 | ಎಲ್ಲ ಪತ್ರಿಕಾ ಗೊಷ್ಟಿಗಳಲ್ಲಿಯು ಮಿರ್ಜಿ ಯವರು, ಬಂದಿತರು ಶಂಕಿತರು ಮತ್ತು ತನಿಖೆ ನಡೆಸಲಾಗುತ್ತಿದೆ ಹಾಗು ಶಂಕಿತರಿಗಿರುವ ಭಯೋತ್ಪಾದನೆ ಚಟುವಟಿಕೆಯನ್ನು, ಅದರ ಲಿಂಕನ್ನು ತಳ್ಳಿ ಹಾಕುತ್ತಲೇ ಬಂದಿದ್ದಾರೆ. ಇದು ಎಲ್ಲ ಪ್ರಮುಖ ಮಾಧ್ಯಮಗಳಲ್ಲಿಯೂ ಪ್ರಕಟವಾಗುತ್ತಲೇ ಇದೆ, ಆದರೆ ಗಕ ಯಾಕೆ ಸುಳ್ಳು ವಾರ್ತೆಗಳನ್ನು ಎರವಲು ಪಡೆದು ಮಣೆ ಹಾಕುತ್ತಿದೆ ಎಂದು ಅರ್ಥವಾಗದ ಸಂಗತಿ.{ ಸನ್ಮಾನ್ಯರೇ..ನಿಮಗೆ ಬೇಕಾಗುವ ಹಾಗೆ ವರದಿಯನ್ನು ರಚಿಸಲು ಅಸಾದ್ಯ. ಎಲ್ಲಾ ವರದಿಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಮನೋಭಾವ ಹೊಂದಲು ಪ್ರಯತ್ನಿಸಿ - ಸಂಪಾದಕ) |
|