ಶುಕ್ರವಾರ, 06-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ವಿಚಾರಣೆ ವಿಶೇಷ ತಂಡ: ನೆರೆರಾಜ್ಯಗಳಲ್ಲೂ ಉಗ್ರರ ಬೇಟೆ ಬಂಧಿತರ ಸಂಖ್ಯೆ 16| ಡಾಕ್ಟರ್ ಜಾಫರ್ ಕೈಯಲ್ಲಿ ಗನ್ ಕೊಟ್ಟಿದ್ದು ಯಾರು? | ಮಾಧ್ಯಮ..! ಇದು ಭಯೋತ್ಪಾದನಾ ಕೃತ್ಯಗಳಿಗೆ ಉಗ್ರಗಾಮಿಗಳ ಹೊಸ ಅಸ್ತ್ರ: ಪೊಲೀಸರಿಂದ ಮಾಹಿತಿ ಬಯಲು

ಬೆಂಗಳೂರು: ಭಯೋತ್ಪಾದನೆ ಪ್ರಕರಣ ಸಂಬಂಧ ಆಂಧ್ರ ಪ್ರದೇಶದಲ್ಲಿ ಬೆಂಗಳೂರು ಪೊಲೀಸರು ಇನ್ನೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಬೆಂಗಳೂರು ಪೊಲೀಸ್ ಆಯುಕ್ತ ಜ್ಯೋತಿಪ್ರಕಾಶ್ ಮಿರ್ಜಿ ಶನಿವಾರ ಈ ವಿಚಾರವನ್ನು ಖಚಿತಪಡಿಸಿದ್ದು, ಬಂಧಿತ ಉಗ್ರರ ಸಂಖ್ಯೆ ಹನ್ನೆರಡಕ್ಕೆ ಏರಿದಂತಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಧಿತ ಉಗ್ರರು ಸುಮಾರು ೧೫೦ಕ್ಕೂ ಹೆಚ್ಚು ಮಂದಿಯನ್ನು ಕಲೆಹಾಕಿ ಅವರಿಗೆ ಧರ್ಮದ ಹಾಗೂ ಧರ್ಮದ ವಿರುದ್ಧ ಮಾತನಾಡುವವರನ್ನು ಮಣಿಸುವ ಬಗ್ಗೆ ತರಬೇತಿ ನೀಡುತ್ತಿದ್ದರು ಎಂಬ ಅಘಾತಕಾರಿ ಅಂಶ ಲಭ್ಯವಾಗಿದೆ ಎಂದು ಹೇಳಿದರು.

ತರಬೇತಿಗಾಗಿ ಕರೆದಿದ್ದ ಎಲ್ಲ ಯುವಕರೂ ಪದವೀಧರರು. ಅವರಿಗೆ ಮತೀಯ ವಿಷದ ಬೀಜ ಬಿತ್ತುತ್ತಿದ್ದ ಬಗ್ಗೆ ಆರೋಪಿಗಳ ವಿಚಾರಣೆಯಿಂದ ತಿಳಿದುಬಂದಿದೆ ಎಂದು ತಿಳಿಸಿದರು.

ಬಂಧಿತ ಆರೋಪಿಗಳ ವಿಚಾರಣೆಗೆ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ರಚಿಸಲಾಗಿದೆ. ಪೊಲೀಸ್ ಅಧಿಕಾರಿಗಳಾದ ಜಿತೇಂದ್ರ, ರಾಮಚಂದ್ರಯ್ಯ, ಆನಂದ್ ಡಿ.ಕಬ್ಬೂರಿ, ವೇಣುಗೋಪಾಲ್, ಶ್ರೀನಿವಾಸ್, ರಮೇಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಆರೋಪಿಗಳನ್ನು ವಿಚಾರಣೆಗೊಳಪಡಿದ್ದಾರೆ. ಜಂಟಿ ಪೊಲೀಸ್ ಆಯುಕ್ತ ದಯಾನಂದ್ ಅವರು ಇಡೀ ಪೊಲೀಸ್ ತಂಡದ ನೇತೃತ್ವ ವಹಿಸಿದ್ದಾರೆ ಎಂದರು.

ಆಂಧ್ರಪ್ರದೇಶದಲ್ಲಿ ಬಂಧಿಸಿರುವ ಒಬೇದುಲ್ಲಾ ಉರ್ ರೆಹಮಾನ್‌ನನ್ನು ಬೆಂಗಳೂರು ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅವರಿಂದ ವಶಪಡಿಸಿಕೊಂಡಿರುವ ವಸ್ತುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ ಎಂದು ತಿಳಿಸಿದರು.

ಬಂಧಿತ ಉಗ್ರರಿಗೆ ಹಣ ಪೂರೈಸುತ್ತಿದ್ದ ನಿಷೇಧಿತ ಉಗ್ರಗಾಮಿ ಸಂಘಟನೆಗಳ ಮುಖಂಡರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಸೌದಿಯಲ್ಲಿ ನೆಲೆಸಿದ್ದ ಉದ್ಯಮಿಯೊಬ್ಬ ಆರೋಪಿಗಳಿಗೆ ಹಣ ಪೂರೈಸುತ್ತಿದ್ದ. ಅವರ ಎಲ್ಲಾ ದೇಶದ್ರೋಹಿ ಕೆಲಸಕ್ಕೂ ಸಹಕರಿಸುತ್ತಿದ್ದ.

ಆತನ ಜೊತೆಗೆ ಬೆಂಗಳೂರಿನಲ್ಲೂ ಕೆಲವರು ಕೈಜೋಡಿಸಿ ಇವರಿಗೆ ಪ್ರೇರೇಪಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಒಬೇದುಲ್ಲಾ ಆಂಧ್ರದ ಇಬ್ಬರು ಕಾರ್ಪೊರೇಟ್‌ಗಳು ಹಾಗೂ ಹಿಂದೂ ಸಂಘಟನೆಯ ಪ್ರಮುಖ ಮುಂಖಡರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದುದು ಬೆಳಕಿಗೆ ಬಂದಿದೆ.

ಆತನಿಗೆ ಬಂಧಿತ ೧೧ ಶಂಕಿತ ಉಗ್ರರ ಜೊತೆ ಇದ್ದ ಸಂಬಂಧದ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಮೂಲಗಳ ಪ್ರಕಾರ ನಾಲ್ಕೈದು ಮಂದಿಯನ್ನು ಕೊಲೆ ಮಾಡುವ ಸಂಚು ರೂಪಿಸಿದ್ದರು.

ಇನ್ನೂ ಉಳಿದಂತೆ ಯಾರ ಹತ್ಯೆಗೆ ಸಂಚು ಮಾಡಲಾಗಿತ್ತು. ಅವರು ಯಾರನ್ನು ಹಿಂಬಾಲಿಸುತ್ತಿದ್ದರು, ಯಾರೊಂದಿಗೆ ಮಾತನಾಡುತ್ತಿದ್ದರು. ಅವರ ಕೋಡ್ ವರ್ಡ್‌ಗಳು ಏನು ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಬಂಧಿತರಿಂದ ಒಟ್ಟು ೧೬ ಮೊಬೈಲ್, ೮ ಸಿಮ್ ಕಾರ್ಡ್, ಎಟಿ‌ಎಂ ಕಾರ್ಡ್‌ಗಳು, ೩ ಪೆನ್ ಡ್ರೈವ್, ೩ ಲ್ಯಾಪ್‌ಟಾಪ್, ವಾಹನಗಳು, ಜಿಹಾದಿ ಪುಸ್ತಕಗಳು, ಚೆನ್ನೈ, ಭಾರತ ಹಾಗೂ ಇರಾಕ್‌ನ ದೇಶದ ಭೂಪಟ, ಉರ್ದು ಪತ್ರಿಕೆಯ ಕಟಿಂಗ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರು ಗಣ್ಯರ ಹತ್ಯೆ ಜೊತೆಗೆ ಕೈಗಾ ಅಣುವಿದ್ಯುತ್ ಸ್ಥಾವರ, ಕಾರವಾರದಲ್ಲಿರುವ ಪ್ರಮುಖ ಪ್ರವಾಸಿ ತಾಣಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದರೇ ಎಂಬ ಬಗ್ಗೆ ಮಹಾರಾಷ್ಟ್ರದ ಎಟಿ‌ಎಸ್ ಪೊಲೀಸರು ಖಿಚತಪಡಿಸಬೇಕು. ಏಕೆಂದರೆ ಅಲ್ಲಿನ ಪೊಲೀಸರು ಕೆಲವರನ್ನು ಬಂಧಿಸಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಮಿರ್ಜಿ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದರು.

ಪಾಕ್‌ಗೆ ನುಸುಳಿದ್ದರು: ಆರೋಪಿಗಳು ಬೆಂಗಳೂರು ಹಾಗೂ ಆಂಧ್ರದಲ್ಲಿ ದಾಳಿ ಮಾಡುವ ಬಗ್ಗೆ ಸಂಚು ರೂಪಿಸಿದ ನಂತರ ಸೌದಿ, ಪಾಕಿಸ್ತಾನ ಹಾಗೂ ಮಹಾರಾಷ್ಟ್ರಕ್ಕೆ ಭೇಟಿ ನೀಡಿ ಬಂದಿದ್ದರು ಎನ್ನಲಾಗಿದೆ.

ಅಬ್ದುಲ್ ಹಕೀಂ ನೀಡಿರುವ ಹೇಳಿಕೆ ಪ್ರಕಾರ ಮುಸಲ್ಮಾನರ ಮೇಲೆ ಆಗುತ್ತಿದ್ದ ದೌರ್ಜನ್ಯ ಹಾಗೂ ಅವರ ವಿರುದ್ಧ ಬರುತ್ತಿದ್ದ ಪತ್ರಿಕಾ ಹೇಳಿಕೆಗಳನ್ನು ಸಹಿಸದೆ, ಇಂತಹ ಕೆಲಸಕ್ಕೆ ಮುಂದಾಗಿದ್ದರು. ಅಲ್ಲದೆ, ಅದಕ್ಕಾಗಿ ಧರ್ಮದ ಬಗ್ಗೆ ಅತಿಯಾದ ಭಾವನೆ ಇರುವು ವ್ಯಕ್ತಿಗಳನ್ನು ಸಂಘಟಿಸಿ ಅವರಿಗೆ ಈ ಬಗ್ಗೆ ತರಬೇತಿ ನೀಡಲಾಗುತ್ತಿತ್ತು ಎಂದು ತಿಳಿಸಿದ್ದಾನೆ.

ಕದ್ದ ಬೈಕ್ ಬಳಕೆ: ಆರೋಪಿಗಳು ಈ ದುಷ್ಕೃತ್ಯವೆಸಗಲು ಕಳವು ಮಾಡಿದ್ದ ಬೈಕ್(ಕೆ‌ಎ ೨೭, ಇ೧೦೩೫) ಬಳಸುತ್ತಿದ್ದರು. ಅದನ್ನು ತಗೆದುಕೊಂಡು ಬಸವೇಶ್ವರ ನಗರ, ಕನ್ನಿಂಗ್‌ಹ್ಯಾಮ್ ರಸ್ತೆ, ಕ್ವೀನ್ಸ್ ರಸ್ತೆ, ಜೆ.ಸಿ.ನಗರ ಮುಂತಾದ ಪ್ರದೇಶಗಳಲ್ಲಿ ಸುತ್ತಾಡಿ ತಮಗೆ ಬೇಕಾದ ಮಾಹಿತಿಯನ್ನು ಕಲೆಹಾಕುತ್ತಿದ್ದರು.

ಈ ಬಗ್ಗೆ ಮಾಹಿತಿ ಪಡೆದ ಪೊಲೀಸರ ತಂಡ ವಾಹನ ಹಾಗೂ ಅದನ್ನು ಬಳಸುತ್ತಿದ್ದ ವ್ಯಕ್ತಿಗಳ ಚಲನವಲನವನ್ನು ಗಮನಿಸಿ, ತಮಗೆ ಬೇಕಾದ ಮಾಹಿತಿ ಕಲೆಹಾಕಿದ್ದಾರೆ.

ಇನ್ನೂ ನಾಲ್ವರ ಬಂಧನ

ನವದೆಹಲಿ/ಮುಂಬೈ: ಸಂಸದರು, ಶಾಸಕರು ಮತ್ತು ಪತ್ರಕರ್ತರ ಹತ್ಯೆಗೆ ಸಂಚು ಹೂಡಿದ್ದ ಕರ್ನಾಟಕದ ೧೧ ಮಂದಿ ಉಗ್ರರಿಗೆ ಸಹಾಯ ಮಾಡಿದ್ದ ಆರೋಪದ ಮೇಲೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ನಾಲ್ವರು ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ಕರ್ನಾಟಕ ಪೊಲೀಸರ ಸಲಹೆ ಮೇರೆಗೆ ಮಹಾರಾಷ್ಟ್ರ ಎಟಿ‌ಎಸ್ ಅಧಿಕಾರಿಗಳು ನಾಂದೇಡ್ ಜಿಲ್ಲೆಯ ವಿವಿಧೆಡೆ ಈ ನಾಲ್ವರನ್ನು ಬಂಧಿಸಿದ್ದಾರೆ. ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ಬಂಧಿಸಲಾಗಿರುವ ಶಂಕಿತ ಉಗ್ರರ ಜೊತೆ ಇವರು ನಂಟು ಹೊಂದಿದ್ದರು. ಕರ್ನಾಟಕದ ಪೊಲೀಸರೂ ಈ ಬಗ್ಗೆ ನಿಗಾ ವಹಿಸುವಂತೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಇವರನ್ನು ಬಂಧಿಸಲಾಗಿದೆ ಎಂದು ಎಟಿ‌ಎಸ್ ಮುಖ್ಯಸ್ಥ ರಾಕೇಶ್ ಮಾರಿಯಾ ಹೇಳಿದ್ದಾರೆ.

ಎರಡು ದಿನಗಳ ಹಿಂದೆಯೇ ಇವರನ್ನು ಬಂಧಿಸಲಾಗಿದ್ದು, ಶನಿವಾರ ಈ ಬಗ್ಗೆ ಎಟಿ‌ಎಸ್ ಮಾಹಿತಿ ನೀಡಿದೆ. ಶುಕ್ರವಾರವಷ್ಟೇ ಹೈದರಾಬಾದ್‌ನಲ್ಲಿ ಒಬ್ಬ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಈಗಾಗಲೇ ಈತನನ್ನು ಬೆಂಗಳೂರಿಗೆ ತರಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ಈ ಮೂಲಕ ಒಟ್ಟಾರೆ ಬಂಧಿತರ ಸಂಖ್ಯೆ ೧೬ಕ್ಕೆ ಏರಿದೆ. ಇನ್ನಷ್ಟು ಬಂಧನಗಳಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ.

ಅಣು ಸ್ಥಾವರ, ಸೇನಾ ಘಟಕಗಳೇ ಟಾರ್ಗೆಟ್: ಉಗ್ರರಿಗೆ ಕೇವಲ ಸಂಸದರು, ಶಾಸಕರು ಮತ್ತು ಪತ್ರಕರ್ತರಷ್ಟೇ ಟಾರ್ಗೆಟ್ ಅಲ್ಲ. ಇವರು ದೇಶದ ಅಣು ಸ್ಥಾವರಗಳು, ನೌಕಾ ಮತ್ತು ಭೂ ಸೇನೆಗೆ ಸೇರಿದ ನೆಲೆಗಳ ಮೇಲೂ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂಬ ವಿಚಾರ ಗೊತ್ತಾಗಿದೆ.

ಅದರಲ್ಲೂ ದಕ್ಷಿಣ ಭಾರತದ ಅಣು ಸ್ಥಾವರಗಳು, ಸೇನಾ ನೆಲೆಗಳ ಮೇಲೆಯೇ ಇವರು ಹೆಚ್ಚಾಗಿ ಟಾರ್ಗೆಟ್ ಮಾಡಿದ್ದರು ಎಂದು ಹೇಳಲಾಗಿದೆ. ಇವರೆಲ್ಲರು ಲಷ್ಕರ್ ಎ ತೊಯ್ಬಾ ಮತ್ತು ಹರ್ಕತ್ ಅಲ್ ಇಸ್ಲಾಮಿ(ಹುಜಿ)ಗೆ ಸೇರಿದವರಾಗಿದ್ದು, ಸೌದಿ ಅರೆಬಿಯಾ ಮತ್ತು ಪಾಕಿಸ್ತಾನದ ತಮ್ಮ ನಾಯಕರ ಅಣತಿಯಂತೆ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಎಲ್‌ಇಟಿ, ಹುಜಿಗೆ ಸೇರಿದ್ದಾರೆ ಎನ್ನಲಾಗಿರುವ ಈ ಶಂಕಿತ ಉಗ್ರರು ದೇಶದ ಅಣು ಸ್ಥಾವರಗಳು, ಅವುಗಳ ರಾಡಾರ್ ಮತ್ತು ಸೇನಾ ನೆಲೆಗಳ ಮೇಲೆ ದಾಳಿಗಾಗಿ ಸಂಚು ರೂಪಿಸಿದ್ದರು. ಇವರನ್ನು ಬಂಧಿಸುವ ಮೂಲಕ ದೊಡ್ಡದೊಂದು ವಿನಾಶಕಾರಿ ಘಟನೆ ತಪ್ಪಿದಂತಾಗಿದೆ.

-ಆರ್.ಕೆ. ಸಿಂಗ್, ಕೇಂದ್ರ ಗೃಹ ಕಾರ್ಯದರ್ಶಿ

ಬಾಗಲಕೋಟೆಯಲ್ಲೂ ಸೆರೆ?

ಬಾಗಲಕೋಟೆ: ಬೆಂಗಳೂರಿನ ಸಿಸಿಬಿ ಪೊಲೀಸರು ಬಾಗಲಕೋಟೆಯಲ್ಲಿ ಶನಿವಾರ ಶಂಕಿತ ಉಗ್ರರನ್ನು ಬಂಧಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಯಾವುದೇ ಮಾಹಿತಿ ಇಲ್ಲ. ಹಾಗೂ ಖಚಿತತೆಯೂ ಇಲ್ಲ. ಶಂಕಿತ ಉಗ್ರರು ಕೆಲ ದಿನಗಳ ಹಿಂದೆ ಬಿಜಾಪುರದಲ್ಲಿ ತಂಗಿದ್ದು ಈಗ ಬಾಗಲಕೋಟೆಗೆ ಬಂದಿದ್ದಾರೆ ಎಂಬ ಮಾಹಿತ ಆಧರಿಸಿ ಬೆಂಗಳೂರು ಸಿಸಿಬಿ ಪೊಲೀಸರು ಇಲ್ಲಿಗೆ ಆಗಮಿಸಿ ಶಂಕಿತ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಪೊಲೀಸ್ ಇಲಾಖೆಗಾಗಲಿ, ಗುಪ್ತಚರ ಇಲಾಖೆಗಾಗಲಿ ಮಾಹಿತಿ ಇಲ್ಲ.

ರಾಜ್ಯದಲ್ಲೂ ಎಟಿ‌ಎಸ್

ಹುಬ್ಬಳ್ಳಿ: ಭಯೋತ್ಪಾದಕ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಭಯೋತ್ಪಾದಕ ನಿಗ್ರಹ ದಳ (ಎಟಿ‌ಎಸ್) ಮಾದರಿಯಲ್ಲಿ ರಾಜ್ಯದಲ್ಲಿ ವಿಶೇಷ ತಂಡ ರಚಿಸುವ ಕುರಿತು ಸರ್ಕಾರ ಚಿಂತಿಸಿದೆ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು. ನಗರದಲ್ಲಿ ಮಾತನಾಡಿದ ಅವರು‘ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಉಗ್ರರು ತಮ್ಮ ಚಟುವಟಿಕೆ ಹೆಚ್ಚಿಸಿರುವುದು ಗಮನಕ್ಕೆ ಬಂದಿದೆ. ಉಗ್ರರ ಚಲನವಲನಗಳ ಮೇಲೆ ನಿಗಾ ಇಡಲು ಹಾಗೂ ಹತ್ತಿಕ್ಕಲು ವಿಶೇಷ ತಂಡ ಸಹಕಾರಿಯಾಗಲಿದೆ’ ಎಂದರು.

ಉಗ್ರರ ಸಂಚು ಬಯಲು ಮಾಡಿದ್ದಲ್ಲದೇ ಅವರನ್ನು ಬಂಧಿಸಿರುವ ರಾಜ್ಯ ಪೊಲೀಸರ ಕಾರ್ಯ ಪ್ರಶಂಸನೀಯ. ಇದಕ್ಕೆ ತಾವು ವಿಶೇಷ ಕೃತಜ್ಞತೆ ಸಲ್ಲಿಸುತ್ತೇವೆ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಉಗ್ರರ ಆಟನಡೆಯುವುದಿಲ್ಲ. ಭಯೋತ್ಪಾದಕ ಚಟುವಟಿಕೆ ಮಟ್ಟ ಹಾಕಲು ಪೊಲೀಸ್ ಇಲಾಖೆ ಸನ್ನದ್ಧವಾಗಿದೆ.ಪೊಲೀಸರಿಗೆ ಆಧುನಿಕ ಸೌಲಭ್ಯ ನೀಡಲು ಹಾಗೂ ಪೊಲೀಸರ ಸಂಖ್ಯಾಬಲ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಶೀಘ್ರವೇ ಕ್ರಮ ಕೈಗೊಳ್ಳಲಿದೆ ಎಂದರು.

ವಿಧ್ವಂಸಕ್ಕೆ ಉಗ್ರರ ಹೊಸ ಮಾಧ್ಯಮ: ಪೊಲೀಸರಿಂದ ಮಾಹಿತಿ ಬಯಲು

ಬೆಂಗಳೂರು: ಮಾಧ್ಯಮ..! ಇದು ಭಯೋತ್ಪಾದನಾ ಕೃತ್ಯಗಳಿಗೆ ಉಗ್ರಗಾಮಿಗಳು ಬಳಸಿಕೊಳ್ಳುತ್ತಿರುವ ಹೊಸ ಅಸ್ತ್ರ.
ಆಂದರೆ, ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳನ್ನು ಅಸ್ತ್ರವಾಗಿ ಮಾಡಿಕೊಂಡು ತಮ್ಮ ವಿಧ್ವಂಸಕಾರಿ ಚಟುವಟಿಕೆಗಳನ್ನು ನಡೆಸುವ ವಿನೂತನ ಪ್ರಯೋಗವನ್ನು ಉಗ್ರರು ಆರಂಭಿಸಿದ್ದಾರೆ.

ಈ ಕಾರಣಕ್ಕಾಗಿಯೇ ದೂರದ ಸೌದ ಅರೇಬಿಯಾದಲ್ಲಿ ಕುಳಿತಿರುವ ಉಗ್ರರ ಸಂಘಟನೆಯೊಂದಿಗೆ ನಂಟು ಹೊಂದಿದವರು ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಗಳಿಗೆ ಪ್ರವೇಶ ಪಡೆಯುತ್ತಿದ್ದಾರೆ. ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿರುವ ಉಗ್ರರ ವಿಚಾರಣೆಯಿಂದ ಈ ಆತಂಕಕಾರಿ ಅಂಶ ಬಯಲಾಗಿದೆ. ದೇಶದ ಪ್ರಮುಖ ನಾಯಕರು, ಆರ್‌ಎಸ್‌ಎಸ್ ಮುಖಂಡರು ಮತ್ತು ಪತ್ರಕರ್ತರು ಉಗ್ರರ ಹಿಟ್ ಲಿಸ್ಟ್‌ನಲ್ಲಿರುವುದು ಈಗಾಗಲೇ ಬಹಿರಂಗವಾಗಿದೆ.

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಕರ್ನಾಟಕದ ಸಂಸದ ಪ್ರಹ್ಲಾದ ಜೋಷಿ, ಸುವರ್ಣ ಸುದ್ದಿ ವಾಹಿನಿ, ಕನ್ನಡಪ್ರಭದ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಅಂಕಣಕಾರ ಪ್ರತಾಪ್ ಸಿಂಹ ಮತ್ತು ವಿಜಯವಾಣಿ ಪತ್ರಿಕೆಯ ಮಾಲೀಕರಾದ ವಿಜಯ ಸಂಕೇಶ್ವರ ಅವರ ಚಲನವಲನಗಳ ಬಗ್ಗೆ ನಿಗಾ ಇಡುವುದು ಸೌದಿ ಅರೇಬಿಯಾದಲ್ಲಿ ಕೂತಿರುವ ಉಗ್ರರಿಗೆ ಸಾಧ್ಯವಾಗುವುದಿಲ್ಲ.
ಮಾಹಿತಿ ಲಭ್ಯ: ಆದರೆ, ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಈ ಎಲ್ಲರ ನಿತ್ಯದ ಓಡಾಟದ ಬಗ್ಗೆ ವಿವರ ತಿಳಿದಿರುತ್ತದೆ. ಉದಾಹರಣೆಗೆ ಮುಖ್ಯಮಂತ್ರಿ ಆಥವಾ ಸಚಿವರು, ಇನ್ನಿತರರ ನಿತ್ಯ ಚಟುವಟಿಗೆ ಬಗ್ಗೆ ಅವರಿಗೆ ಮಾಹಿತಿ ಇರುತ್ತದೆ.

ಈ ಕಾರಣಕ್ಕಾಗಿಯೇ ಉಗ್ರರ ಸಂಘಟನೆಗಳ ಜತೆ ನಂಟು ಹೊಂದಿದವರು ಮಾಧ್ಯಮ ಕ್ಷೇತ್ರಕ್ಕೆ ಪ್ರವೇಶ ಪಡೆದುಕೊಂಡಿದ್ದಾರೆ. ಬೆಂಗಳೂರು ಮಾತ್ರವಲ್ಲ, ದೇಶದ ನಾನಾ ರಾಜ್ಯಗಳ ಮಾಧ್ಯಮ ಕಚೇರಿಗಳನ್ನು ಅವರು ಪತ್ರಕರ್ತರ ಸೋಗಿನಲ್ಲಿ ಸೇರಿಕೊಂಡಿದ್ದಾರೆ. ಅಂದಹಾಗೆ ಉಗ್ರರ ಈ ವಿನೂತನ ಪ್ರಯೋಗಕ್ಕೆ ಮೊದಲ ಬಲಿ ಬೆಂಗಳೂರು ಎಂಬುದು ಗಮನಾರ್ಹ.
ಲಷ್ಕರ್-ಎ- ತೋಯ್ಬಾ ಮತ್ತು ಹುಜಿ ಉಗ್ರಗಾಮಿ ಸಂಘಟನೆಗಳೊಂದಿಗೆ ನಂಟು ಹೊಂದಿರುವ ಆರೋಪದ ಮೇಲೆ ಪೊಲೀಸರು ಬಂಧಿಸಿರುವ ಅಂಗ್ಲ ದಿನಪತ್ರಿಕೆಯ ಪತ್ರಕರ್ತ ಮುತಿ ಉರ್ ರೆಹಮಾನ್ ಸಿದ್ದಿಕ್ ತನ್ನೊಂದಿಗೆ ಇನ್ನಿಬ್ಬರನ್ನು ತಾನು ಕೆಲಸ ಮಾಡುತ್ತಿದ್ದ ಪತ್ರಿಕೆಗೆ ಸೇರಿಸಲು ಪ್ರಯತ್ನಿಸಿದ್ದ. ಒಬ್ಬನನ್ನು ಸೇರಿಸಿದ್ದನಾದರೂ ಮತ್ತೊಬ್ಬನಿಗೆ ಪ್ರವೇಶ ಸಿಗಲಿಲ್ಲ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ಕಿರಿಯ ವಿಜ್ಞಾನಿ, ಸಂಶೋಧಕ ಏಜಾಜ್ ಅಹ್ಮದ್ ಮಿರ್ಜಾಸಹ ಸಿದ್ದಿಕ್ ಜತೆ ಅದೇ ದಿನಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ. ಅತನನ್ನು ಅಲ್ಲಿಗೆ ಸೇರಿಸಿದ್ದು ಕೂಡ ಸಿದ್ದಿಕ್ ಎಂಬುದು ಪೊಲೀಸರ ವಿಚಾರಣೆಯಿಂದ ತಿಳಿದು ಬಂದಿದೆ.

ಇವನೂ ಪತ್ರಿಕೋದ್ಯಮಕ್ಕೆ: ತಾನು ಕೆಲಸಕ್ಕೆ ಸೇರಿದ ಬಳಿಕ ಸಿದ್ದಿಕ್ ತನ್ನ ಮಿತ್ರ ಎಂದು ಹೇಳಿ ಏಜಾಜ್ ಅಹ್ಮದ್ ಮಿರ್ಜಾನನ್ನು ಕರೆ ತರುತ್ತಾನೆ. ಆತನನ್ನು ಪತ್ರಿಕೆಯ ಇಂಟರ್‌ನೆಟ್ ವಿಭಾಗಕ್ಕೆ ನೇಮಕ ಮಾಡಲಾಗುತ್ತದೆ. ಕೆಲ ದಿನ ಬಳಿಕ ಮಿರ್ಜಾನನ್ನು ಮಂಗಳೂರಿಗೆ ವರ್ಗಾಯಿಸಲಾಗುತ್ತದೆ. ಅಲ್ಲಿದ್ದರೆ ತನ್ನ ಚಟುವಟಿಕೆಗಳಿಗೆ ಅನುಕೂಲ ಆಗುವುದಿಲ್ಲ ಎಂಬ ಕಾರಣಕ್ಕೆ ಆತ ಉದ್ಯೋಗ ತೊರೆದು ವಾಪಸ್ ಬೆಂಗಳೂರಿಗೆ ಬಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸೇರಿಕೊಳ್ಳುತ್ತಾನೆ. ಇದೇ ಸಿದ್ದಿಕ್ ಮತ್ತೊಬ್ಬನನ್ನು ಪತ್ರಿಕೆಗೆ ಸೇರಿಸುವ ಪ್ರಯತ್ನ ಮಾಡಿದ್ದಾನಾದರೂ ಅದು ಸಾಧ್ಯವಾಗಲಿಲ್ಲ. ಈ ರೀತಿ ಮಾಧ್ಯಮ ಕಚೇರಿ ಸೇರಿಕೊಳ್ಳುವವರು ಕೋರ್ಟ್ ಅಥವಾ ಅಪರಾಧ ವರದಿಗಾರಿಕೆ ಬಯಸುತ್ತಾರೆ. ಸೂಕ್ಷ್ಮವಾದ ಮಾಹಿತಿಗಳನ್ನು ಸಂಗ್ರಹಿಸಲು ಅನುಕೂಲವಾಗುತ್ತದೆ ಎಂಬುದು ಇದರ ಉದ್ದೇಶ. ಉಗ್ರರ ಸಂಘಟನೆಗಳ ಜತೆ ನಂಟು ಹೊಂದಿರುವ ಇವರು ಪತ್ರಕರ್ತರಾಗುವ ಕನಸೂ ಕಂಡವರಲ್ಲ. ಆದರೆ, ನೂತನ ಪ್ರಯೋಗದ ಭಾಗವಾಗಿ ಅವರು ಪತ್ರಕರ್ತರ ಸೋಗಿನಲ್ಲಿ ಮಾಧ್ಯಮ ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದರು. ದೇಶದ ನಾನಾ ರಾಜ್ಯಗಳಲ್ಲಿಯೂ ಇಂಥವರು ಇದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಅದೃಷ್ಟವಶಾತ್ ಬೆಂಗಳೂರಿನಲ್ಲಿ ಅವರ ಜಾಲವನ್ನು ಪೊಲೀಸರು ಬಹುಬೇಗ ಬೇಧಿಸಿದ್ದಾರೆ.

 ಇನ್ನೂ ನಾಲ್ವರ ಬಂಧನ

ಮುಂಬೈ/ ನವದೆಹಲಿ (ಪಿಟಿ‌ಐ): ಬೆಂಗಳೂರಿನಲ್ಲಿ ಬಂಧಿತರಾದ ಶಂಕಿತ ಉಗ್ರರ ಜೊತೆ ಸಂಪರ್ಕ ಹೊಂದಿದ್ದರೆನ್ನಲಾದ ನಾಲ್ವರು ಶಂಕಿತ ಭಯೋತ್ಪಾದಕರನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳವು  (ಎಟಿ‌ಎಸ್) ನಾಂದೇಡ್ ಜಿಲ್ಲೆಯಲ್ಲಿ ಬಂಧಿಸಿದೆ. ಶಂಕಿತರ ಜಾಲವು ಕಾರವಾದ ಸೀಬರ್ಡ್ ನೌಕಾ ನೆಲೆ, ಕೈಗಾ ಅಣುಸ್ಥಾವರ ಸೇರಿದಂತೆ ರಕ್ಷಣಾ ಇಲಾಖೆಯ ಪ್ರಮುಖ ಕಟ್ಟಡಗಳು, ಪರಮಾಣು ಸ್ಥಾವರಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿತ್ತು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

‘ಸಿ‌ಐ‌ಎಸ್‌ಎಫ್ ಕಾವಲು‘

ಕೊಪ್ಪಳ: ಉಗ್ರರ ಚಟುವಟಿಕೆಗಳು ಕಂಡುಬಂದಿರುವುದರಿಂದ ರಾಜ್ಯದ ಪ್ರಮುಖ ವಿದ್ಯುತ್ ಉತ್ಪಾದನಾ ಕೇಂದ್ರಗಳಿಗೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿ‌ಐ‌ಎಸ್‌ಎಫ್) ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

 ಶಂಕಿತ ಉಗ್ರರು ನಿಷೇಧಿತ ಲಷ್ಕರ-ಎ-ತೊಯ್ಬಾ ಮತ್ತು ಹುಜಿ ಸಂಘಟನೆಗಳ ಜತೆ ನಿಕಟ ಸಂಪರ್ಕ ಹೊಂದಿದ್ದರು. ಇತ್ತೀಚೆಗೆ ಪಾಕಿಸ್ತಾನದಲ್ಲಿ ನಿಗೂಢವಾಗಿ ಸಾವಿಗೀಡಾದ ಭಯೋತ್ಪಾದಕ ಬಿಲಾಲ್ ಶೇಖ್‌ನ ಸಹಚರರ ಜತೆ ಬಂಧಿತರು ಸಂಪರ್ಕ ಹೊಂದಿದ್ದರು. ಇವರ ಬಂಧನದಿಂದ ದೇಶದ ವಿವಿಧ ಭಾಗಗಳಲ್ಲಿ ಸಂಭವಿಸಬಹುದಾಗಿದ್ದ ಭಾರಿ ಅನಾಹುತಗಳು ತಪ್ಪಿವೆ ಎಂದು ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಆರ್. ಕೆ. ಸಿಂಗ್ ಸುದ್ದಿಗಾರರಿಗೆ ಶನಿವಾರ ತಿಳಿಸಿದರು.

ಅಸ್ಸಾಂ ಹಿಂಸಾಚಾರದ ಬಗ್ಗೆ ದ್ವೇಷಮಯ ಸಂದೇಶಗಳನ್ನು ಮೊಬೈಲ್ ಮೂಲಕ ಹರಡುತ್ತಿದ್ದ ಸಂದರ್ಭದಲ್ಲಿ ಕರ್ನಾಟಕ ಪೊಲೀಸರು ಸೈಬರ್ ಜಾಲದ ಮೇಲೆ ನಿಗಾ ಇಟ್ಟಿದ್ದರಿಂದ ಬಂಧಿತ ಉಗ್ರರು ಸ್ಕೈಪ್ ಬಳಸಿ ಸಂಕೇತ ಸಂದೇಶಗಳ ಮೂಲಕ ಸೌದಿ ಅರೇಬಿಯಾದಲ್ಲಿ ಇರುವ ಭಯೋತ್ಪಾದಕರ ಜತೆ ಸಂವಹನ ನಡೆಸುತ್ತಿದ್ದುದು ಪತ್ತೆಯಾಯಿತು.

ಭಯೋತ್ಪಾದಕ ಚಟುವಟಿಕೆಗಳನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಗುಪ್ತಚರ ಇಲಾಖೆ ಅಧಿಕಾರಿಗಳು ಇತರ ಉಗ್ರಗಾಮಿಗಳನ್ನು ಬಂಧಿಸಲು ಎಲ್ಲಾ ರಾಜ್ಯಗಳ ಪೊಲೀಸರ ಜತೆ ಸಹಕರಿಸುತ್ತಿದ್ದಾರೆ ಎಂದು ಅವರು ವಿವರಿಸಿದರು.

ನಿರಾಕರಣೆ: ಶುಕ್ರವಾರ ರಾತ್ರಿ ಬಂಧಿಸಲಾದ ಶಂಕಿತರ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲು ಮಹಾರಾಷ್ಟ್ರ ಎಟಿ‌ಎಸ್ ಮುಖ್ಯಸ್ಥ ರಾಕೇಶ್ ಮರಿಯಾ ನಿರಾಕರಿಸಿದ್ದಾರೆ. ಶಂಕಿತ ಉಗ್ರರನ್ನು ಬಂಧಿಸಿದ್ದ ಬೆಂಗಳೂರಿನ ಪೊಲೀಸರು ಕೆಲವು ಮಹತ್ವದ ಮಾಹಿತಿಗಳನ್ನು ಮಹಾರಾಷ್ಟ್ರ ಎಟಿ‌ಎಸ್‌ಗೆ ರವಾನಿಸಿದ್ದರು ಎಂದು ಎಟಿ‌ಎಸ್ ಮೂಲಗಳು ತಿಳಿಸಿವೆ.

ಈ ಮಧ್ಯೆ, ಬೆಂಗಳೂರು ಕೇಂದ್ರ ಅಪರಾಧ ವಿಭಾಗದ ಪೊಲೀಸರಿಂದ ಹೈದರಾಬಾದ್‌ನಲ್ಲಿ ಶುಕ್ರವಾರ ಬಂಧಿತನಾದ ಒಬೇದುಲ್ಲಾ-ಉರ್-ರೆಹಮಾನ್ (21) ಎಂಬಿ‌ಎ ವಿದ್ಯಾರ್ಥಿಯಾಗಿದ್ದು, ಹೈದರಾಬಾದ್‌ನ ಇಬ್ಬರು ಕಾರ್ಪೊರೇಟರ್‌ಗಳು ಹಾಗೂ ಒಬ್ಬ ಹಿಂದೂಪರ ಸಂಘಟನೆಯ ಮುಖಂಡನ ಹತ್ಯೆಗೆ ಸಂಚು ರೂಪಿಸಿದ್ದ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ತಿಳಿಸಿದ್ದಾರೆ.

‘ಈ ಹಿಂದೆ ಬಂಧಿಸಿರುವ ಶಂಕಿತ ಉಗ್ರರು ನೀಡಿದ ಮಾಹಿತಿಯಿಂದ ರೆಹಮಾನ್‌ನನ್ನು ಬಂಧಿಸಲಾಯಿತು. ಆ ಹನ್ನೊಂದು ಜನ ಶಂಕಿತ ಉಗ್ರರೊಂದಿಗೆ ಈತ ನಿರಂತರ ಸಂಪರ್ಕದಲ್ಲಿದ್ದ‘ ಎಂದು ಮಾಹಿತಿ ನೀಡಿದ್ದಾರೆ.

ಕೈಗಾ ಸ್ಥಾವರಕ್ಕೆ ಭದ್ರತೆ (ಕಾರವಾರ ವರದಿ): ಕಾರವಾರ ತಾಲ್ಲೂಕಿನ ಕೈಗಾದಲ್ಲಿರುವ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ದಾಳಿ ನಡೆಸುವ ಸಂಚು ರೂಪಿಸಲಾಗಿತ್ತು ಎಂಬ ಮಾಹಿತಿಯನ್ನು ಶಂಕಿತ ಉಗ್ರ ರೆಹಮಾನ್ ನೀಡಿರುವ ಹಿನ್ನೆಲೆಯಲ್ಲಿ ಸ್ಥಾವರಕ್ಕೆ ಮತ್ತು ಸಮೀಪದ ಜಲ ವಿದ್ಯುತ್ ಉತ್ಪಾದನಾ ಕೇಂದ್ರಗಳಿಗೆ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಮತ್ತು ಸ್ಥಾವರದ ಅಧಿಕಾರಿಗಳು ಭದ್ರತೆಗೆ ಸಂಬಂಧಿಸಿದಂತೆ ಶನಿವಾರ ಚರ್ಚೆ ನಡೆಸಿದರು. ಕೈಗಾಗೆ ಹೋಗುವ ಹಾದಿಯಲ್ಲಿರುವ ಎರಡೂ ಚೆಕ್‌ಪೋಸ್ಟ್‌ಗಳಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಂಧಿತ ಸಾದಿಕ್ ಲಷ್ಕರಿಯ ಹೆಂಡತಿ ಫಾತಿಮಾ ಭಟ್ಕಳ ಮೂಲದವರು ಎನ್ನುವ ಕಾರಣದಿಂದಾಗಿ ಭಟ್ಕಳ ಮತ್ತೆ ಸುದ್ದಿಯಲ್ಲಿದೆ. ಲಷ್ಕರಿಯ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಸಿಸಿಬಿ ಪೊಲೀಸರು ಭಟ್ಕಳಕ್ಕೆ ಬಂದಿದ್ದಾರೆ ಎನ್ನುವ ಸುದ್ದಿ ನಗರದಾದ್ಯಂತ ಹಬ್ಬಿತ್ತು. ಆದರೆ, ಈ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

‘ಕೈಗಾ ಸ್ಥಾವರಕ್ಕೆ ಭದ್ರತೆ ಹೆಚ್ಚಿಸಲು ಯಾರಿಂದಲೂ ಆದೇಶ ಬಂದಿಲ್ಲ. ಕೆಲ ವಿಷಯಗಳು ಮಾಧ್ಯಮಗಳಿಂದಲೇ ನಮಗೆ ಗೊತ್ತಾಗಿದೆ.  ಭದ್ರತೆ ಬಗ್ಗೆ ಪರಿಶೀಲಿಸಿದ್ದೇವೆ. ಹೆಚ್ಚುವರಿ ಭದ್ರತಾ ಪಡೆ ನಿಯೋಜಿಸಿಲ್ಲ. ಇರುವ ಭದ್ರತೆಯೇ ಮುಂದುವರಿಯಲಿದೆ‘ ಎಂದು ಎಸ್ಪಿ ಕೆ.ಟಿ.ಬಾಲಕೃಷ್ಣ ‘ ತಿಳಿಸಿದರು.

 ಶಂಕಿತ ಆರು ಉಗ್ರರಲ್ಲಿ ಇಬ್ಬರ ಮುಂದಾಳತ್ವ

ಬೆಂಗಳೂರು:‘ಲಷ್ಕರ್-ಎ-ತೊಯ್ಬಾ (ಎಲ್‌ಇಟಿ)ಹಾಗೂ ಹರ್ಕತ್ ಉಲ್ ಜಿಹಾದ್ ಅಲ್ ಇಸ್ಲಾಮಿ (ಹುಜಿ) ಭಯೋತ್ಪಾದನಾ ಸಂಘಟನೆಗಳ ಜತೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ನಗರದಲ್ಲಿ ಬಂಧಿತರಾಗಿರುವ ಆರು ಶಂಕಿತ ಉಗ್ರರ ಪೈಕಿ ಇಬ್ಬರು ಗುಂಪಿನ ಮುಂದಾಳತ್ವ ವಹಿಸಿ ಉಳಿದವರಿಗೆ ಮಾರ್ಗದರ್ಶನ ನೀಡುತ್ತಿದ್ದರು.ಹುಬ್ಬಳ್ಳಿಯಿಂದ ಬೈಕ್ ಕದ್ದು ತಂದಿದ್ದ ಆರೋಪಿಗಳು ಕನ್ನಡ ಪತ್ರಿಕೆಯೊಂದರ ಪ್ರಧಾನ ಸಂಪಾದಕ ಮತ್ತು ಪತ್ರಕರ್ತನನ್ನು ಕೊಲೆ ಮಾಡಲು ಯೋಜನೆ ರೂಪಿಸಿದ್ದರು‘ ಎಂದು ಪ್ರಥಮ ಮಾಹಿತಿ ವರದಿಯಿಂದ (ಎಫ್‌ಐ‌ಆರ್) ತಿಳಿದುಬಂದಿದೆ.

ಪ್ರಕರಣದ ದೂರುದಾರರಾಗಿರುವ ಸಿಸಿಬಿ ವಿಶೇಷ ತನಿಖಾ ದಳದ ಎಸಿಪಿ ಜಿತೇಂದ್ರನಾಥ್, ‘ನಿಷೇಧಿತ ಉಗ್ರಗಾಮಿ ಸಂಘಟನೆಯಾದ ಲಷ್ಕರ್-ಎ-ತೊಯ್ಬಾದ (ಎಲ್‌ಐಟಿ) ಕೆಲ ಸದಸ್ಯರು ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಹಿಂದೂ ಮುಖಂಡರನ್ನು ಹಾಗೂ ಕೆಲ ವ್ಯಕ್ತಿಗಳನ್ನು ಆಗಸ್ಟ್ 26ರಂದು ಕೊಲೆ ಮಾಡಲು ಸಂಚು ರೂಪಿಸಿದ್ದಾರೆ ಎಂಬ ಮಾಹಿತಿ ಬಂತು. ಕೂಡಲೇ ಎಚ್ಚೆತ್ತುಕೊಂಡು ಎರಡು ತಂಡಗಳನ್ನು ರಚಿಸಲಾಯಿತು. ಒಂದು ತಂಡ ಬೆಂಗಳೂರಿನಲ್ಲಿ ತನಿಖೆ ಆರಂಭಿಸಿತು. ಇನ್‌ಸ್ಪೆಕ್ಟರ್ ಎ.ಬಿ. ಸಕ್ರಿ ಅವರು ಮುಂದಾಳತ್ವ ವಹಿಸಿದ್ದ ಮತ್ತೊಂದು ತಂಡವನ್ನು ಹುಬ್ಬಳ್ಳಿಗೆ ಕಳುಹಿಸಲಾಯಿತು‘ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕೆಲ ಶಂಕಿತ ಉಗ್ರರು ಶಸ್ತ್ರಾಸ್ತ್ರಗಳೊಂದಿಗೆ ನಗರದ ಮಾರಪ್ಪ ಗಾರ್ಡನ್ ಮತ್ತು ಜೆ.ಸಿ.ನಗರದಲ್ಲಿ ವಾಸವಿರುವ ಬಗ್ಗೆ ಮಾಹಿತಿ ಬಂತು. ಬೆಂಗಳೂರು ತನಿಖಾ ತಂಡದಲ್ಲಿದ್ದ ಇನ್‌ಸ್ಪೆಕ್ಟರ್‌ಗಳಾದ ಎನ್‌ಎಚ್ ರಾಮಚಂದ್ರಯ್ಯ, ಬಿ.ಆರ್. ವೇಣುಗೋಪಾಲ್, ಬಿ.ಎನ್.ಶ್ರೀನಿವಾಸ್, ಕೆ.ಎಂ.ರಮೇಶ್ ಮತ್ತು ಆನಂದ್ ಡಿ. ಕಬ್ಬೂರಿ ಅವರು ಶಂಕಿತರ ಚಲನವಲನಗಳನ್ನು ಗಮನಿಸುತ್ತಿದ್ದರು.

ಬಂಧಿತರ ಪೈಕಿ ಶೋಯಬ್ ಅಹಮ್ಮದ್ ಮಿರ್ಜಾ (25) ಮತ್ತು ಅಬ್ದುಲ್ ಹಕೀಂ ಅವರು ಕಳವು ಮಾಡಿದ ಬೈಕ್‌ನಲ್ಲಿ ಬಸವೇಶ್ವರನಗರ, ಶಂಕರ್‌ಮಠ, ಕನ್ನಿಂಗ್‌ಹ್ಯಾಂ ರಸ್ತೆ, ಕ್ವೀನ್ಸ್ ರಸ್ತೆ ಮತ್ತು ಜೆ.ಸಿ.ನಗರ ರಸ್ತೆಗಳಲ್ಲಿ ಸಂಚರಿಸಿ ಯೋಜನೆ ರೂಪಿಸಿದ್ದರು. ಆಗಸ್ಟ್ 29ರಂದು ಪತ್ರಕರ್ತ ಪ್ರತಾಪ್‌ಸಿಂಹ ಅವರು ಮಾರುತಿನಗರ ಆರನೇ ಅಡ್ಡರಸ್ತೆಗೆ ಬರುವ ಬಗ್ಗೆ ಮಾಹಿತಿ ತಿಳಿದ ಉಗ್ರರು, ಅವರ ಹತ್ಯೆಗೆ ಸಂಚು ರೂಪಿಸಿದ್ದರು.

ಯೋಜನೆಯಂತೆ ಮಧ್ಯಾಹ್ನ 12.30ರ ಸುಮಾರಿಗೆ ಮಾರುತಿ ನಗರಕ್ಕೆ ಬಂದ ಶೋಯಬ್ ಮತ್ತು ಅಬ್ದುಲ್ ಹಕೀಂ (25) ಅವರನ್ನು ಬಂಧಿಸಲಾಯಿತು ಎಂದು ಎಫ್‌ಐ‌ಆರ್‌ನಲ್ಲಿ ತಿಳಿಸಿದ್ದಾರೆ.

ಬಂಧಿತರು ನೀಡಿದ ಮಾಹಿತಿಯಿಂದ ಅದೇ ದಿನ ಮಧ್ಯಾಹ್ನ 3.30ರ ಸುಮಾರಿಗೆ ಜೆ.ಸಿ.ನಗರದಲ್ಲಿದ್ದ ಇತರರನ್ನು ನಾಲ್ವರು ಶಂಕಿತ ಉಗ್ರರನ್ನು ಬಂಧಿಸಿ. ಜಿಹಾದಿ ಪುಸ್ತಕಗಳು, ಪೆನ್‌ಡ್ರೈವ್‌ಗಳು, ಮೊಬೈಲ್‌ಗಳು, ಪಿಸ್ತೂಲು ಮತ್ತು ಮದ್ದು ಗುಂಡುಗಳು, ಲ್ಯಾಪ್‌ಟಾಪ್, 1100 ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಯಿತು ಎಂದು ಹೇಳಿದ್ದಾರೆ.

ಶಂಕಿತ ಉಗ್ರರ ಬಂಧನ: ಎಫ್‌ಐ‌ಆರ್‌ ಬಹಿರಂಗ

ಬೆಂಗಳೂರು: ಗಣ್ಯರ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದ ಮೇಲೆ ಬಂಧಿತರಾದವರ ವಿರುದ್ಧ ಪೊಲೀಸರು ದಾಖಲಿಸಿದ ಪ್ರಥಮ ಮಾಹಿತಿ ವರದಿಯ ವಿವರಗಳು ಬಹಿರಂಗಗೊಂಡಿವೆ. ’ತೆಹೆಲ್ಕಾ’ ವಾರ ಪತ್ರಿಕೆ ಎಫ್‌ಐ‌ಆರ್ ಹಾಗೂ ಆರೋಪಿ ಅಬ್ದುಲ್ ಹಕೀಮ್ ಜಾಮದಾರ್ ತಪ್ಪೊಪ್ಪಿಗೆ ಹೇಳಿಕೆಯನ್ನು ಆಧರಿಸಿ ವರದಿಯನ್ನು ಶನಿವಾರ ಪ್ರಕಟಿಸಿದೆ.

ಈ ಪ್ರಕಾರ, ಆ. 26ರ ಮುಂಜಾನೆ ಕೇಂದ್ರ ಅಪರಾಧ ಪತ್ತೆ ದಳದ(ಸಿಸಿಬಿ) ಎಸಿಪಿ ಕೆ. ಎನ್. ಜಿತೇಂದ್ರನಾಥ್‌ರಿಗೆ ಪಾಕ್ ಮೂಲದ ನಿಷೇಧಿತ ಲಷ್ಕರೆ ತೋಯ್ಬಾ ಉಗ್ರಗಾಮಿ ಸಂಘಟನೆಯ ಸದಸ್ಯರು ಬೆಂಗಳೂರಿನ ಜೆಸಿ ನಗರದ ಮಾರಪ್ಪ ಗಾರ್ಡನ್‌ನಲ್ಲಿ ವಾಸವಿದ್ದಾರೆ ಎಂಬ ಮಾಹಿತಿ ಸಿಗುತ್ತದೆ. ಅವರು ಕದ್ದ ದ್ವಿಚಕ್ರವಾಹನ( ಕೆ‌ಎ27 ಇ 1035)ದಲ್ಲಿ ಬಸವೇಶ್ವರ ನಗರ, ಶಂಕರಮಠ, ಕನ್ನಿಂಗ್‌ಹ್ಯಾಮ್ ರಸ್ತೆ, ಕ್ವಿನ್ಸ್ ರಸ್ತೆ ಮತ್ತು ಜೆಸಿ ನಗರಗಳಲ್ಲಿ ಓಡಾಡಿಕೊಂಡಿದ್ದಾರೆ ಎಂಬ ಸುಳಿವೂ ಲಭ್ಯವಾಗುತ್ತದೆ. ತಕ್ಷಣ ಉಗ್ರರ ಸೆರೆಗೆ ಬಲೆ ಬೀಸಿ ಬೆಂಗಳೂರು ಮತ್ತು ಹುಬ್ಬಳ್ಳಿ ಪೊಲೀಸರನ್ನು ಒಳಗೊಂಡ ತಂಡವನ್ನು ರಚಿಸಲಾಗುತ್ತದೆ.

ಬೆಂಗಳೂರು ತಂಡದಲ್ಲಿ ಇನ್ಸ್‌ಪೆಕ್ಟರ್‌ಗಳಾದ ಎಂ. ಎಚ್. ರಾಮಚಂದ್ರಯ್ಯ, ಬಿ. ಆರ್. ವೇಣುಗೋಪಾಲ್, ಬಿ. ಎನ್. ಶ್ರೀನಿವಾಸ್, ಕೆ. ಎಂ. ರಮೇಶ್ ಮತ್ತು ಆನಂದ್ ಕಬ್ಬೂರಿ ಇದ್ದರೆ, ಹುಬ್ಬಳ್ಳಿ ಪೊಲೀಸರ ತಂಡದ ಉಸ್ತುವಾರಿಯನ್ನು ಸಿಸಿಬಿಯ ಎನ್. ಬಿ. ಸಖ್ರಿ ಅವರಿಗೆ ವಹಿಸಲಾಗುತ್ತದೆ. ಮೂರು ದಿನ ಮಾಹಿತಿ ಕಲೆ ಹಾಕಿದ ಪೊಲೀಸರ ತಂಡ ಇಬ್ಬರು ಮಾಹಿತಿದಾರರರೊಂದಿಗೆ ಜಿತೇಂದ್ರನಾಥ್ ಕಚೇರಿಯಲ್ಲಿ ಆ. 29ರಂದು ಸಭೆ ಸೇರುತ್ತದೆ.

ಪೊಲೀಸರಿಗೇ ಪಿಸ್ತೂಲು!

ಸಭೆ ಮುಗಿಸಿದ ಸಿಸಿಬಿ ತಂಡ ಎರಡು ವಾಹನಗಳಲ್ಲಿ (ಕೆ‌ಎ 01 ಎಂಎಚ್ 4480 ಮತ್ತು 4481) ಬೆಳಗ್ಗೆ ಒಂಬತ್ತು ಗಂಟೆಗೆ ಹೊರಟಿತು. ಬಸವೇಶ್ವರ ನಗರದ ಕಡೆ ಬರುತ್ತಿದ್ದಾಗ ಶಂಕಿತರು ಶಂಕರಮಠ ರಸ್ತೆಯಲ್ಲಿ ಗಣ್ಯರೊಬ್ಬರನ್ನು ಕೊಲ್ಲಲು ಸಿದ್ದವಾಗಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಗುತ್ತದೆ. 12. 30ರ ಸುಮಾರಿಗೆ ಅಬ್ದುಲ್ ಹಕೀಂ ಜಾಮದಾರ್ ಮತ್ತು ಶೋಹೆಬ್ ಅಹ್ಮದ್ ಮಿರ್ಜಾ ಕದ್ದ ಬೈಕ್‌ನಲ್ಲಿ ಶಂಕರಮಠ ರಸ್ತೆಯ ಮನೆಯ ಬಳಿ ಠಾಳಾಯಿಸುತ್ತಿದ್ದಾಗ ಇನ್ಸ್‌ಪೆಕ್ಟರ್ ವೇಣುಗೋಪಾಲ್ ಮತ್ತು ತಂಡ ಇವರನ್ನು ಸೆರೆ ಹಿಡಿಯಲು ಮುಂದಾಗುತ್ತದೆ. ಕೂಡಲೇ ಹಿಂಬದಿಯಲ್ಲಿ ಕುಳಿತಿದ್ದ ಶೋಹೆಬ್ ಮಿರ್ಜಾ 7.65 ಎಂ ಎಂ ಇಟಾಲಿಯನ್ ಪಿಸ್ತೂಲಿನಿಂದ ಪೊಲೀಸರ ಮೇಲೆ ಗುಂಡು ಹಾರಿಸಲು ಮುಂದಾಗುತ್ತಾನೆ. ಈ ಸಮಯಲ್ಲಿ ಜಿತೇಂದ್ರನಾಥ್ ಶೋಹೆಬ್ ಮೇಲೆ ಮಗಿಬಿದ್ದು ಪಿಸ್ತೂಲನ್ನು ಕಸಿದು ಆರೋಪಿಗಳಿಬ್ಬರನ್ನು ವಶಕ್ಕೆ ತೆಗೆದುಕೊಳ್ಳುತ್ತಾರೆ. ಜತೆಯಲ್ಲೇ ಅವರ ಬಳಿ ಇದ್ದ ಏಳು ಸುತ್ತು ಗುಂಡು, ಮೊಬೈಲ್ ಫೋನ್, ಎಟಿ‌ಎಂ ಕಾರ್ಡ್, ಜಿಹಾದಿ ಸಾಹಿತ್ಯ ಮತ್ತು ಪೆನ್‌ಡ್ರೈವ್ ಅನ್ನೂ ಸುಪರ್ದಿಗೆ ಪಡೆಯುತ್ತಾರೆ ಎಂದು ಎಫ್‌ಐ‌ಆರ್‌ನಲ್ಲಿ ವಿವರಿಸಲಾಗಿದೆ.

ಮತ್ತೊಂದಿಷ್ಟು ಸೆರೆ

ಇಬ್ಬರು ಶಂಕಿತರು ಸೆರೆ ಸಿಕ್ಕ ನಂತರ ಇವರು ನೀಡಿದ ಮಾಹಿತಿ ಆಧರಿಸಿ ಪೊಲೀಸರ ತಂಡ ಜೆಸಿ ನಗರದತ್ತ ಪಯಣ ಬೆಳೆಸುತ್ತದೆ. ಮಧ್ಯಾಹ್ನ 3.30ರ ಸುಮಾರಿಗೆ ಉಳಿದ ಆರೋಪಿಗಳಾದ ಪತ್ರಕರ್ತ ಮತಿ ಉರ್ ರೆಹ್ಮಾನ್ ಸಿದ್ದಿಕಿ, ರಿಯಾಜ್ ಅಹ್ಮದ್, ಮಹ್ಮದ್ ಯೂಸಫ್ ನಾಲಾಬಂಡ್, ಡಿ‌ಆರ್‌ಡಿ‌ಓ ಎಂಜಿನಿಯರ್ ಎಜಾಝ್ ಅಹ್ಮದ್ ಮಿರ್ಜಾ(ಶೋಹೆಬ್ ಮಿರ್ಜಾ ಹಿರಿಯ ಸಹೋದರ)ರನ್ನೂ ವಶಕ್ಕೆ ಪಡೆಯಲಾಗುತ್ತದೆ. ಆರೋಪಿಗಳನ್ನು ಬಸವೇಶ್ವರನಗರ ಪೊಲೀಸ್ ಠಾಣೆಗೆ ಕರೆತಂದು ಇವರ ವಿರುದ್ದ ಐಪಿಸಿ ಸೆಕ್ಷನ್ 120 ಬಿ, 121, 121ಎ, 122, 123, 153ಎ, 153ಬಿ, 307 ಮತ್ತು 379 ಅಡಿ ಪ್ರಕರಣ ದಾಖಲಿಸಲಾಗುತ್ತದೆ. ಜತೆಗೆ ಶಸ್ತ್ರಾಸ್ತ್ರ ಕಾಯ್ದೆ 1959ರ ಸೆಕ್ಷನ್ 3, 25 ಮತ್ತು ಕಾನೂನು ಉಲ್ಲಂಘನ ನಿಯಂತ್ರಣ ಕಾಯ್ದೆ (ಯು‌ಎಪಿ‌ಎ)1967ರ ಪರಿಚ್ಚೇದ 10, 12. 13, 15, 15, 16, 18, 20 ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗುತ್ತದೆ.

ಮ್ಯಾಜಿಸ್ಟ್ರೇಟ್ ಮುಂದೆ

ಆ. 29ರಂದೇ ಆರೋಪಿಗಳನ್ನು ರಾತ್ರಿ 10.30ಕ್ಕೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ 15 ದಿನಗಳ ಪೊಲೀಸ್ ವಶಕ್ಕೆ ಪಡೆಯಲಾಗುತ್ತದೆ. ಉಳಿದಂತೆ ಹುಬ್ಬಳ್ಳಿಯಲ್ಲಿ ಇತರೆ ಆರೋಪಿಗಳಾದ ಒಬೇದುಲ್ಲಾ ಬಹದ್ದೂರ್, ಡಾ. ಜಫಾರ್ ಇಕ್ಬಾಲ್ ಶೋಲಾಪುರಿ, ಮಹ್ಮದ್ ಸಿದ್ದಿಕ್ಕಿ ಮತ್ತು ಮೆಹಬೂಬ್‌ರನ್ನು ಬಂಧಿಸಿ ಆ. 31ರಂದು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ 15 ದಿನಗಳ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗುತ್ತದೆ.

ಐ‌ಎಸ್‌ಐ ಅಧಿಕಾರಿಗಳ ಭೇಟಿ

ಆರೋಪಿ ಅಬ್ದುಲ್ ಹಕೀಂ ಜಮಾದಾರ್ ತಪ್ಪೊಪ್ಪಿಗೆ ಹೇಳಿಕೆಯಲ್ಲಿ, ಈತ ಮತ್ತು ಡಾ. ಜಫಾರ್ ಭಾರತೀಯ ಪಾಸ್‌ಪೋರ್ಟ್ ಬಳಸಿ ಇರಾನ್‌ಗೆ ಭೇಟಿ ನೀಡಿದ್ದರು. ಅಲ್ಲಿಂದ ಅಕ್ರಮವಾಗಿ ಪಾಕ್‌ಗೆ ನುಸುಳಿದ್ದರು ಎಂಬುದನ್ನು ಬಾಯ್ಬಿಟ್ಟಿದ್ದಾರೆ ಎಂದು ವರದಿ ಮಾಡಲಾಗಿದೆ. ಕರಾಚಿಯಲ್ಲಿ ಐ‌ಎಸ್‌ಐ ಅಧಿಕಾರಿಗಳಾದ ಅಬ್ದುಲ್ ವಹಾಬ್, ಹಮೀದ್ ಮತ್ತು ಮುಸ್ತಫಾರನ್ನು ಭೇಟಿ ಮಾಡಿದ್ದಾಗಿ ಎಫ್‌ಐ‌ಆರ್‌ನಲ್ಲಿ ಬಹಿರಂಗಗೊಂಡಿದೆ. ಇದರ ಜತೆಗೆ ಹುಬ್ಬಳ್ಳಿಯ ಭಜರಂಗ ದಳದ ಮುಖಂಡ ಗನು ಜರ್ತಾರ್‌ಕರ್ ಎಂಬುವವರ ಹತ್ಯೆಗೂ ಸಂಚು ರೂಪುಗೊಂಡಿತ್ತು ಎಂದು ತಿಳಿದುಬಂದಿದೆ.

ಆ ಮನೆಯ ಸುತ್ತ ಕುತೂಹಲದ ಛಾಯೆ

'ಮುಬಾರಕ್ ಮೊಹಲ್ಲಾ’ದಲ್ಲಿ ಮೌನ ಆವರಿಸಿದೆ.

ಭಯೋತ್ಪಾದಕ ಚಟುವಟಿಕೆ ಆರೋಪದ ಮೇಲೆ ಬಂಧನಕ್ಕೊಳಗಾದವರು ಬಾಡಿಗೆಗೆ ಇದ್ದ ಪ್ರದೇಶ ಅದು. ಜೆಸಿ ನಗರದ ಕೆಂಪಯ್ಯ ಬ್ಲಾಕ್‌ನ ಒಂದನೇ ಮುಖ್ಯರಸ್ತೆಯಲ್ಲಿರುವ ಮನೆ ಸಂಖ್ಯೆ 22ರ ಸುತ್ತಮುತ್ತ ಈಗ ಅನುಮಾನ ಮತ್ತು ಕುತೂಹಲದ ಛಾಯೆ ಆವರಿಸಿದೆ. ಮನೆಯ ಸುತ್ತ ಆಟವಾಡುತ್ತಿದ್ದ ಮಕ್ಕಳ ಬಾಯಲ್ಲಿ, ”ಪೊಲೀಸರು ಕ್ಯಾಮೆರಾ ಹಾಕಿದ್ದಾರೆ,” ಎಂಬ ಮಾಹಿತಿ ಸಿಗುತ್ತದೆ.

”ಇಲ್ಲಿಗೆ ಬಂದು ಹೋಗುವವರ ಹೆಸರು, ವಿಳಾಸವನ್ನು ಪೊಲೀಸರು ಬರೆದುಕೊಳ್ಳುತ್ತಿದ್ದಾರೆ. ಬೆರಳಚ್ಚು ಪರೀಕ್ಷೆ ಮಾಡಬೇಕು ಎಂದು ತಿಳಿಸಿದ್ದಾರೆ. ಅವರು ಅದೇ ಅಂಗಡಿಯ ಮುಂದೆ ಕೂತಿರುತ್ತಿದ್ದರು,” ಎಂದು ಬಾಗಿಲು ಮುಚ್ಚಿದ ಅಂಗಡಿ ಎದುರಿಗೆ ಹಾಕಿಕೊಟ್ಟ ಕಬ್ಬಿಣದ ಕುರ್ಚಿ ತೋರಿಸಿದರು ಅಂಜುಮ್(ಹೆಸರು ಬದಲಾಗಿದೆ).

ಆರೋಪಿಗಳಿದ್ದ ಕಟ್ಟಡದ ಕೆಳಮಹಡಿಯಲ್ಲಿ ತಮ್ಮಿಬ್ಬರು ಮಕ್ಕಳ ಜತೆ ಅಂಜುಮ್ ವಾಸಿಸುತ್ತಿದ್ದಾರೆ. ಗಂಡ ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಮೊದಲು ಮಾತನಾಡಲೂ ಅಂಜಿಕೊಂಡವರು ನಂತರ ಯಾವುದೇ ಕಾರಣಕ್ಕೂ ಹೆಸರು ಹಾಕಬೇಡಿ ಎಂದು ವಿನಂತಿಸಿಕೊಂಡರು. ಪ್ರಕರಣ ನಡೆದ ದಿನದಿಂದ ಅಂಗಡಿ ಕೂಡ ಬಾಗಿಲು ಮುಚ್ಚಿದೆ. ಪೊಲೀಸರ ವಿಚಾರಣೆಗೆ ಒಳಗಾದವರ ಪಟ್ಟಿಯಲ್ಲಿ ಈ ಅಂಗಡಿಯೂ ಇದೆ.

”ನಾಲ್ಕು ಜನ ಸುಮಾರು ವರ್ಷಗಳಿಂದ ಇಲ್ಲಿದ್ದರು. ನಾವು ಬರುವುದಕ್ಕೆ ಮುಂಚೆಯೇ ಬಾಡಿಗೆಗೆ ಬಂದಿದ್ದರು. ಪೊಲೀಸರು ಕರೆದುಕೊಂಡು ಹೋಗಿದ್ದಾರೆ ಅಂತ ಮಾತ್ರ ಗೊತ್ತು. ಆದರೆ ಅವರು ಡ್ರಗ್ ಅದೂ ಇದೂ ಏನೂ ಇರಲಿಲ್ಲ ಅನ್ನಿಸುತ್ತೆ,” ಎಂದು ಹೇಳಿ ಅಂಜುಮ್ ಒಳಗೆ ಹೋದರು. ಕೆಲವೇ ಕ್ಷಣಗಳಲ್ಲಿ ಬಟ್ಟೆ ಬದಲಾಯಿಸಿಕೊಂಡು ಮನೆಯ ಬೀಗ ಹಾಕಿಕೊಂಡು ಮಕ್ಕಳ ಜತೆ ಹೊರಟು ಹೋದರು.

ಸುಮಾರು ಐವತ್ತರವತ್ತು ಮನೆಗಳಿರುವ ಮುಬಾರಕ್ ಮೊಹಲ್ಲಾದಲ್ಲಿ ಹೆಚ್ಚು ಮುಸ್ಲಿಂ ಸಮುದಾಯದ ಮನೆಗಳಿವೆ. ಇಕ್ಕಟ್ಟಾದ ರಸ್ತೆಯಲ್ಲಿ ಬಹುತೇಕ ಮನೆಗಳ ಮುಂದೆ ನಾಲ್ಕು ಚಕ್ರದ ವಾಹನಗಳು ನಿಂತಿವೆ. ಇದು ಗಲ್ಲಿಯಲ್ಲಿ ವಾಸಿಸುತ್ತಿರುವವರ ಆರ್ಥಿಕ ಸ್ಥಿತಿಯನ್ನು ಪ್ರತಿನಿಧಿಸುತ್ತದೆ.

”ಈಗ ನೋಡಿ ಈ ಬೀದಿಯಲ್ಲಿ ಹೇಗೆ ಕರ್ಫ್ಯೂ ಹಾಕಿದಂತೆ ಕಾಣುತ್ತದಲ್ಲ,” ಎಂದು ಬೀದಿಯಲ್ಲಿ ಆವರಿಸಿದ ಮೌನದ ಕುರಿತು ವಿವರಣೆ ನೀಡಿದರು ಅಬ್ದುಲ್. ಇವರು ’ದಲಿತ ಕ್ರಾಂತಿ’ ಎಂಬ ಪತ್ರಿಕೆಯಲ್ಲಿ ಕೆಲಸ ಮಾಡುತ್ತಾರೆ. ಆರೋಪಿಗಳು ವಾಸಿಸುತ್ತಿದ್ದ ಮನೆ ಪಕ್ಕದಲ್ಲೇ ಕುಟುಂಬ ಸಮೇತರಾಗಿ ಬಾಡಿಗೆಗೆ ಇದ್ದಾರೆ. ”ಇಲ್ಲಿ ಹೆಂಗೆ ಅಂದ್ರೆ, ಬೆಳಗ್ಗೆ ಏಳೂವರೆಯಿಂದ ಎಂಟುವರೆವರೆಗೆ ಎಲ್ಲರೂ ಮಕ್ಕಳನ್ನು ಶಾಲೆಗೆ ಕಳುಹಿಸಲು ಬೀದಿಯಲ್ಲಿ ಇರುತ್ತಾರೆ. ಆಮೇಲೆ ಮನೆ ಸೇರಿಕೊಂಡರೆ ಮತ್ತೆ ಹೊರಬರುವುದು ಸಂಜೆಯೇ. ಅವತ್ತು ಬೆಳಗ್ಗೆ 9.20 ಇರಬಹುದು. ನಾನು ಮನೆಯಿಂದ ಹೊರ ಬಂದಾಗ ಪಕ್ಕದ ಮನೆಯ ಮುಂದೆ ಇನೋವಾ ನಿಂತಿತ್ತು. ಮೂವರನ್ನು ಆಗಲೇ ಒಳಗೆ ಕೂರಿಸಿಕೊಂಡಿದ್ದರು. ಒನ್ನೊಬ್ಬನ್ನನು ಕರೆದುಕೊಂಡು ಬಂದರು. ಕೇಳಿದ್ದಕ್ಕೆ ಏನೂ ಇಲ್ಲ ಎಂದಷ್ಟೆ ಹೇಳಿ ಹೊರಟು ಹೋದರು. ಕರೆದುಕೊಂಡು ಹೋದವರು ರೌಡಿಗಳೊ ಪೊಲೀಸರೊ ಎಂದು ಸಂಜೆವರೆಗೂ ಸಂದೇಹದಲ್ಲೇ ಕಳೆದೆವು. ಆ ಹುಡುಗರ ಸ್ನೇಹಿತರು ರಾತ್ರಿ ಬಂದರಾದರೂ ಅಷ್ಟೊತ್ತಿಗೆ ಬಂಧನದ ವಿಷಯ ಗೊತ್ತಾಗಿತ್ತು. ಅವರಿಗೆ ಭಯೋತ್ಪಾದಕರ ಜತೆ ಸಂಬಂಧ ಇತ್ತು ಅಂತ ಯಾರಿಗೂ ನಂಬಿಕೆ ಬರುತ್ತಿಲ್ಲ. ಅವರ ನಡವಳಿಕೆ ಹಾಗಿತ್ತು,” ಎಂದು ಘಟನೆ ಕುರಿತು ವಿವರಿಸಿದರು.

ಬಂಧಿತ ನಾಲ್ವರು ಯುವಕರಲ್ಲಿ ಒಬ್ಬರ ದ್ವಿಚಕ್ರ ವಾಹನ (ಕೆ‌ಎ 25 ಇ‌ಎಫ್ 9104) ಇನ್ನೂ ಅದೇ ಮನೆ ಕೆಳಗೆ ಅನಾಥವಾಗಿ ನಿಂತಿದೆ. ಇದು ತನಿಖೆ ನಡೆಸುತ್ತಿರುವ ಪೊಲೀಸರ ಗಮನಕ್ಕೆ ಬಂದಂತಿಲ್ಲ ಎಂದು ಸ್ಥಳೀಯರೊಬ್ಬರು ಮಾಹಿತಿ ನೀಡಿದರು.

ಇನ್ನು, ಅಪವಾದವನ್ನು ಅಂಟಿಸಿಕೊಂಡ ಆ ಬಾಡಿಗೆ ಮನೆಯ ಮಾಲೀಕ ನೌರುಲ್ಲಾ ನಯಾಝ್ ಅಹ್ಮದ್ ಅವರ ಪತ್ನಿ, ”ನಮ್ಮ ವಕೀಲರು ಮಾತನಾಡಬೇಡಿ ಎಂದು ಹೇಳಿದ್ದಾರೆ” ಎಂದಷ್ಟೆ ಹೇಳಿ ಗೇಟು ಹಾಕಿಕೊಂಡರು.

ಆದರೆ ಬಂಧಿತರು ಇದ್ದ ಮನೆಯ ಕಡೆ ಇಡೀ ಬೀದಿಯ ಕಣ್ಣು ನೆಟ್ಟಿದೆ. ಅಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬರನ್ನೂ ಕುತೂಹಲದಿಂದ ವೀಕ್ಷಿಸುವ ಕಣ್ಣುಗಳು ಕಾಣಿಸುತ್ತವೆ. ಗೊಂದಲ, ಆತಂಕ ಆಳದಲ್ಲಿರುವುದು ಸ್ಥಳೀಯರ ಮಾತಿನಲ್ಲಿ ವ್ಯಕ್ತವಾಗುತ್ತದೆ. ಆದರೆ ಮುಬಾರಕ್ ಮೊಹಲ್ಲಾದ ಮೌನ ಮುರಿಯುವುದು ಕಷ್ಟ!  

ಡಾಕ್ಟರ್ ಜಾಫರ್ ಕೈಯಲ್ಲಿ ಗನ್ ಕೊಟ್ಟಿದ್ದು ಯಾರು?

ಬೆಂಗಳೂರು, ಸೆ. 1 : ರಾಜ್ಯದಲ್ಲಿ ಉಳಿದ ಊರುಗಳಿಗೆ ಹೋಲಿಸಿದರೆ ಹುಬ್ಬಳ್ಳಿಯಲ್ಲಿ ಮುಸ್ಲಿಂರ ಸಂಖ್ಯೆ ಮತ್ತು ಪ್ರಾಬಲ್ಯ ಜಾಸ್ತಿ. ಭಯೋತ್ಪಾದಕರಿಗೆ ಅತ್ಯಂತ ಸುರಕ್ಷಿತ ತಾಣವಾಗುತ್ತಿರುವ ಇಂತಹ ಹುಬ್ಬಳ್ಳಿಯಲ್ಲಿ ವೈದ್ಯನಾಗಿರುವ ಶಂಕಿತ ಉಗ್ರ ಡಾ. ಜಾಫರ್ ಇಕ್ಬಾಲ್ ಶೋಲಾಪುರ ಕೈಯಲ್ಲಿ ವಶಪಡಿಸಿಕೊಂಡಿರುವ 7.62 ಎಂಎಂ ಪಿಸ್ತೂಲನ್ನು ಕೊಟ್ಟಿದ್ದು ಯಾರು?

ತನಿಖೆಯಲ್ಲಿ ತೊಡಗಿರುವ ಬೆಂಗಳೂರು ಸಿಸಿಬಿ ಪೊಲೀಸರು ಈ ರಹಸ್ಯವನ್ನು ಭೇದಿಸಲು ಹೊರಟಿದ್ದಾರೆ. ಅವರ ಪ್ರಕಾರ, ಬುಧವಾರ, ಆಗಸ್ಟ್ 30ರಂದು ಹುಬ್ಬಳ್ಳಿಯಲ್ಲಿ ಬಂಧಿತನಾಗಿರುವ ಜಾಫರ್ ಇಕ್ಬಾಲ್ ಶೋಲಾಪುರ ಕೈಗೆ ಈ ವಿದೇಶಿ ಪಿಸ್ತೂಲನ್ನು ಹಸ್ತಾಂತರಿಸಿದ್ದು ತಲೆಮರೆಸಿಕೊಂಡಿರುವ ಮತ್ತೊಬ್ಬ ಭಯೋತ್ಪಾದಕ, ನಿಷೇಧಿತ ಸಂಘಟನೆ ಸ್ಟುಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ(ಸಿಮಿ)ದ ಮುಖಂಡ ಜಾಕಿರ್.

ಅತ್ಯಂತ ಬುದ್ಧಿವಂತ ಎಂದು ಪರಿಗಣಿತನಾಗಿರುವ ಡಾ. ಜಾಫರ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಕರ್ನಾಟಕದಲ್ಲಿ ಪತ್ರಕರ್ತರು, ಸಂಸದ, ಪತ್ರಿಕೋದ್ಯಮಿಗಳನ್ನು ಹತ್ಯೆ ಮಾಡಲು ರೂಪಿಸಲಾಗಿದ್ದ ಸಂಚಿನ ರೂವಾರಿ ಇದೇ ಜಾಫರ್. ಈ 'ಆಪರೇಷನ್'ನ ರೂಪುರೇಷೆ ಸಿದ್ಧಪಡಿಸಿ, ತನಗೆ ಬೇಕಾದ ವ್ಯಕ್ತಿಗಳನ್ನು, ಹತ್ಯೆಯ ಸಂಚನ್ನು ಕಾರ್ಯಗತಗೊಳಿಸಲು ನೇಮಕ ಮಾಡಿದ್ದು ಡಾ. ಜಾಫರ್. ಉತ್ತಮ ಡಾಕ್ಟರ್ ಎನಿಸಿದ್ದ ಡಾ. ಜಾಫರ್ ತನ್ನ 'ಆಪರೇಷನ್'ನಲ್ಲಿ ಮಾತ್ರ ಸಫಲನಾಗಲಿಲ್ಲ.

ಡಾ. ಜಾಫರ್ ಮೊದಲು ನಿಷೇಧಿತ ಭಯೋತ್ಪಾದನಾ ಸಂಘಟನೆ ಸಿಮಿಯೊಡನೆ ಗುರುತಿಸಿಕೊಂಡಿದ್ದ. ಅಲ್ಲಿಯೇ ಆತನಿಗೆ ಜಾಕಿರ್‌ನೊಡನೆ ಗೆಳೆತನ ಬೆಳೆದದ್ದು. 2008ರಲ್ಲಿ ಹುಬ್ಬಳ್ಳಿಯ ಸಿಮಿ ಉಗ್ರರ ಮೇಲೆ ದಾಳಿ ನಡೆದಾಗ ಅನೇಕರನ್ನು ಬಂಧಿಸಲಾಗಿತ್ತು, ಆದರೆ ಅತ್ಯಂತ ಚಾಣಾಕ್ಷ ಬುದ್ಧಿಯ ಜಾಕಿರ್ ಮಾತ್ರ ತಪ್ಪಿಸಿಕೊಂಡಿದ್ದ. ಉನ್ನತ ಮೂಲಗಳ ಪ್ರಕಾರ, ದೇಶ ಬಿಟ್ಟು ತೊಲಗಿದ್ದ ಜಾಕಿರ್ ಈಗ ಮತ್ತೆ ಭಾರತದಲ್ಲಿ ಕಾಣಿಸಿಕೊಂಡಿದ್ದು, ಭಯೋತ್ಪಾದನಾ ಚಟುವಟಿಕೆಗಳಲ್ಲಿ ಕಾರ್ಯೋನ್ಮುಖನಾಗಿದ್ದಾರೆ.

ಭಯೋತ್ಪಾದಕರಿಗೆ ವಿಶ್ವವಿದ್ಯಾಲಯದಂತಿರುವ ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ತನ್ನ ಭಯೋತ್ಪಾದನಾ ಚಟುವಟಿಕೆಗಾಗಿ ಡಾ. ಜಾಫರ್ ಅಂಥವರನ್ನೇ ಹುಡುಕುತ್ತಿತ್ತು. ವೈದ್ಯ ಹೇಳಿದ್ದು ಹಾಲು ಅನ್ನು, ರೋಗಿ ಬಯಸಿದ್ದು ಹಾಲು ಅನ್ನ ಎಂಬಂತೆ, ಡಾ. ಜಾಕಿರ್ ವೈದ್ಯನಾಗಿದ್ದರೂ ಭಯೋತ್ಪಾದನಾ ರೋಗ ಬರಿಸಿಕೊಂಡು ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ ಮತ್ತು ಯವ ಪಡೆಯನ್ನು ಉಗ್ರ ಚಟುವಟಿಕೆಗಳಿಗೆ ಹುರಿಗೊಳಿಸುವಲ್ಲಿ ನಿರತನಾದ.

ಈಗ ಬಂಧಿತರಾಗಿರುವ ಎಲ್ಲ 11 ಶಂಕಿತ ಉಗ್ರರ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಲು ಸೂಚಿಸಲಾಗಿದೆ. ಇವರಿಗೆ ಹಣ ಎಲ್ಲೆಲ್ಲಿಂದ ಸಂದಾಯವಾಗುತ್ತಿದೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇವರ ಬ್ಯಾಂಕ್ ಖಾತೆಗಳು ಹುಬ್ಬಳ್ಳಿ, ಭಟ್ಕಳ ಮತ್ತು ಬಿಜಾಪುರದ ಕೆಲ ಶಾಖೆಗಳಲ್ಲಿ ಇವೆ ಎಂಬ ವಿವರಗಳನ್ನು ಪೊಲೀಸರು ಕಲೆಹಾಕಿದ್ದಾರೆ

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಕನ್ನಡಪ್ರಭ/ಪ್ರಜಾವಾಣಿ |ವಿ.ಕ | ಒನ್ ಇಂಡಿಯಾ
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-09-02

Tell a Friend
ಇತರ ಸಂಭಂದಪಟ್ಟ ವರದಿಗಳು
»
»ಬಂಧಿತ ಶಂಕಿತ ಉಗ್ರರ ಪೋಷಕರಿಂದ ದೂರು, ಪಚಾವೋ, ಮಿರ್ಜಿಗೆ ಗೌರ್ನರ್ ಬುಲಾವ್
»ಆಂಧ್ರ, ಮಹಾರಾಷ್ಟ್ರಕ್ಕೂ ಕರ್ನಾಟಕ 'ಉಗ್ರ'ರ ಲಿಂಕ್; ಹಲವರ ಬಂಧನ
»ಆಂಧ್ರದಲ್ಲೂ ಸ್ಕೆಚ್: ಮತ್ತೊಂದು ಸಂಚು ಬಯಲು | 14 ದಿನ ಪೊಲೀಸ್ ವಶಕ್ಕೆ-ಸೌದಿಯಲ್ಲೇ ಆಗಿತ್ತು ಪ್ಲಾನ್: 3ತಿಂಗಳಿಂದ ಬೆನ್ನು ಬಿದ್ದಿದ್ದ ಶಂಕಿತ ಉಗ್ರರು
»ಬಂಧಿತರು ಉಗ್ರವಾದಿ ಚಟುವಟಿಕೆಯಲ್ಲಿ ಪಾಲ್ಗೊಂಡಿಲ್ಲ;ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಸ್ಪಷ್ಟನೆ
»ಮಾಹಿತಿ ನೀಡುತ್ತಿಲ್ಲ: ಶಂಕಿತ ಉಗ್ರರ ತಂದೆ ಅಳಲು | ಮಾಹಿತಿಗೆ ಇಂಟರ್‌ಪೋಲ್ ನೆರವು' - ಅಶೋಕ್
»`ಉಗ್ರರ ಮಾಹಿತಿಗೆ ಇಂಟರ್‌ಪೋಲ್ ನೆರವು'
»ಎಲ್‌ಇಟಿ, ಹುಜಿ ನಂಟು; ಗಣ್ಯರ ಹತ್ಯೆಗೆ ಸಂಚು: ಬೆಚ್ಚಿಬಿದ್ದನಗರ: ಶಂಕಿತ ಉಗ್ರರಲ್ಲಿ ವೈದ್ಯ, ಎಂಜಿನಿಯರ್, ಗುತ್ತಿಗೆದಾರ, ಪತ್ರಕರ್ತ ಹಾಗೂ ಗಾರೆ ಕಾರ್ಮಿಕ! | ಶೆಟ್ಟರ್ ನಿವಾಸ ಬಳಿಯೇ ಶಂಕಿತ ಉಗ್ರನ ಮನೆ
»

ಪ್ರತಿಸ್ಪಂದನ
ಆಗಂತುಕ , ಮಂಗಳೂರು
2012-09-02
ಇದು ಸಂಘ ಪರಿವಾರ ಮತ್ತು ಗುಪ್ತಚರ ಇಲಾಖೆಯ ಜಂಟಿ ಕಾರ್ಯಾಚರಣೆ "ಶಿಕ್ಷಿತ್ ಜಿಹಾದ್". ಈ ಅಜೆಂಡಾದಿಂದ ಶಿಕ್ಷಿತ ಮುಸ್ಲಿಂ ಯುವಕರನ್ನು ಗುರಿಯಾಗಿಸಿ, ಮುಸ್ಲಿಂ ಪಾಲಕರು ಮಕ್ಕಳಿಗೆ ಶಿಕ್ಷಣ ಕೊಡಲು ಹಿಂದೆ ಮುಂದೆ ನೋಡುವ ಪರಿಸ್ಥಿತಿ ತಂದೊಡ್ಡುವ ಆಪರೇಶನ್ ಇದಾಗಿದೆ. ಈ ಹಿಂದೆ ಮುಸ್ಲಿಮರು ಬಡತನದಿಂದ ಶಿಕ್ಷಣ ವಂಚಿತರಾಗಿದ್ದರು, ಈಗಿನ ಈ ಕಾರ್ಯಾಚರಣೆಯಿಂದ ಶಿಕ್ಷಣ ವಂಚಿತರಾಗುವಂತೆ ಬಲ ಪ್ರಯೋಗ ಈ ರೀತಿ ಮಾಡಲಾಗುತ್ತಿದೆ.
Kannadiga, Mangalore
2012-09-02
ಇದು ಪಕ್ಕ ಸಂಘ ಪರಿವಾರದ ಕೊಳಕು ತಂತ್ರ. ಮುಸ್ಲಿಮರು ಮಾಧ್ಯಮ ರಂಗಕ್ಕೆ ಎಂಟ್ರಿ ಕೊಡಬಾರದು (ಸಂಘ ಪರಿವಾರದ ನಿಜ ಬಣ್ಣ ಹೊರ ಜಗತ್ತಿಗೆ ಗೊತ್ತಾಗುತ್ತೆ) ಎಂಬ ಬಹು ದೊಡ್ಡ ಉದ್ದೇಶ ಇಟ್ಟು ಮತ್ತು ಗುಜರಾತಿನ ಕೋರ್ಟು ತೀರ್ಪು ರಾಜ್ಯದ ಮತದಾರ ಮೇಲೆ ಪ್ರಭಾವ ಬೀರದ ಹಾಗೆ ಜನರ ಮನಸಿನ ಸೆಳೆತವನ್ನು ಬೇರೆಡೆಗೆ ತಿರುಗಿಸುವ ತಂತ್ರ.

ಹಾಸ್ಯಸ್ಪದ ಅಂದರೆ ಲಾಡೆನ್ ನ ಚಿತ್ರ ಇದ್ದವ ಉಗ್ರ ಮತ್ತು ಮೋದಿಯ ಚಿತ್ರ ಇದ್ದವ ಕೂಡ ಉಗ್ರ, ಓದುಗರೇ ನೀವೇ ಊಹಿಸಿ ಇಬ್ಬರಿಗೂ ವ್ಯತ್ಯಾಸವಿಲ್ಲ ಎಂದು. ಈ ಪೋಲಿಸರಿಗೆಕೆ ಅರ್ಥವಾಗಲ್ಲ ಮೋದಿಯ ಚಿತ್ರ ಮತ್ತು ಯಾವುದೇ ಚಿತ್ರ ಬೇಕಾದಲ್ಲಿ ಗೂಗಲ್ ನಲ್ಲಿ ಸಿಗುತ್ತೆ ಹಾಗು ಚಿತ್ರದ ಆದಾರದಲ್ಲಿ ಉಗ್ರ ಎಂದು ಸಾಬೀತು ಮಾಡೋಕೆ ಹೋಗುತ್ತಿರುವುದು ದುರಂತ.

ಇದಕ್ಕೆಲ್ಲ ಕಾರಣ ಮುಸ್ಲಿಮರ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಪ್ರಗತಿ ಸಂಘ ಪರಿವಾರದ ನಿದ್ದೆ ಕೆಡಿಸಿದೆ ಅಷ್ಟೇ.

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರ್ನಾಟಕ]

»ರೈತರ ಜಮೀನಿಗೆ 35 ಲಕ್ಷ ರೂ. ನಿಗದಿಗೆ ಸಂಪುಟ ಒಪ್ಪಿಗೆ: ಪ್ರತಿಭಟನೆಗೆ ಮಣಿದ ಸರಕಾರ: ಸುದರ್ಶನ್ ಸ್ವಾಗತ
»ಕುಸಿದ ಹುಲಿಕೆರೆ ಸುರಂಗ: ರೈತರಲ್ಲಿ ಆತಂಕ
»ಸಫಾಯಿ ಕರ್ಮಚಾರಿ ಆಯೋಗ ರಚನೆಗೆ ಚಿಂತನೆ: ಸಚಿವ ಸುರೇಶ್‌ಕುಮಾರ್
»ರಾಷ್ಟ್ರೋತ್ಥಾನ ಪರಿಷತ್‌ಗೆ ಭೂಮಿ ಮಂಜೂರು; ಹೈಕೋರ್ಟ್ ತಡೆ
»ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
»ಕೃಷಿ ಭೂಮಿಗೆ 25ರಿಂದ 35 ಲಕ್ಷ ಅನುದಾನ: ಸುರೇಶ್‌ಕುಮಾರ್
»ಗುಟ್ಕಾ ತಿಂದರೂ ತಲಾಖ್ !...
»ಬಿಜೆಪಿ ಭ್ರಷ್ಟಾಚಾರದಲ್ಲೇ ಕಾಲಹರಣ ಮಾಡ್ತಿದೆ: ಕಾಂಗ್ರೆಸ್
»ಅಕ್ರಮ-ಸಕ್ರಮ: ರಾಜ್ಯಪಾಲರನ್ನು ಭೇಟಿ ಮಾಡಿದ ಸಿ‌ಎಂ ಶೆಟ್ಟರ್
»ಅನಧಿಕೃತ ಆಂಗ್ಲ ಮಾಧ್ಯಮ ಶಾಲೆಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನವ ಕರ್ನಾಟಕ ನಿರ್ಮಾಣ ವೇದಿಕೆಯಿಂದ ಧರಣಿ
»ಪ್ರೌಢಶಿಕ್ಷಣದೊಂದಿಗೆ ಪದವಿ ಪೂರ್ವ ಇಲಾಖೆ ವಿಲೀನ ವಿರೋಧಿಸಿ ಪಿಯು ಕಾಲೇಜು ನೌಕರರ ಸಂಘದಿಂದ ಮನವಿ
»ಜಗತ್ತಿಗೆ ನೋನಿ ಸಸ್ಯ ಔಷಧಿ ಗುಣವುಳ್ಳ ಅಮೂಲ್ಯ ಕೊಡುಗೆ: ಕೃಷಿತಜ್ಞ ಸಚ್ಚಿದಾನಂದ
»ಸಂಗಮೇಶ್ವರಪೇಟೆ ಸಹಕಾರ ಸಂಘಕ್ಕೆ 50 ಲಕ್ಷ ಲಾಭ: ಸಚಿವ ಜೀವರಾಜ್
»ವಿದ್ಯಾರ್ಥಿಗಳು ಹೊಣೆಗಾರಿಕೆಯ ಪ್ರಜ್ಞೆ ಬೆಳೆಸಿಕೊಳ್ಳಬೇಕು: ಬೋಪಯ್ಯ
»ಜನರ ಸಮಸ್ಯೆಗೆ ಸ್ಪಂದಿಸದ ರಾಜಕಾರಣಿಗಳು ದ್ರೋಹಿಗಳು: ಮತ್ತೆ ಗುಡುಗಿದ ಈಶ್ವರಪ್ಪ
»ಎರಡನೆ ದಿನಕ್ಕೆ ಕಾಲಿಟ್ಟ ಬಗರ್ ಹುಕುಂ ರೈತರ ಪಾದಯಾತ್ರೆ
» ಕನ್ನಡ ವಿಕಿ ಡಿಂಡಿಮ!...
» ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
»ಗಂಗಾವತಿ: ಎಚ್ಚೆತ್ತ ಆರೋಗ್ಯ ಇಲಾಖೆ, ನಗರಸಭೆ ಜಿಲ್ಲೆಯಲ್ಲಿ 270 ಡೆಂಗ್ ಪ್ರಕರಣ ಪತ್ತೆ: 2 ಸಾವು
»ಅಮಾಯಕರಿಗೆ ಉಗ್ರರ ಪಟ್ಟ :ಎ.ಕೆ. ಸುಬ್ಬಯ್ಯ ಆರೋಪ; *ಪೊಲೀಸರ ಮಾಹಿತಿಯ ಕುರಿತಂತೆ ಸಂಶಯ!
»Plea to remove Karnataka judge for alleged sexist remarks
»ಮೈಸೂರು: ಮನೆ ಮನೆಗೆ ಅಂಬೇಡ್ಕರ್'ಗೆ ಚಾಲನೆ
»ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
»ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
»ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri