ಬಿಎಸ್ವೈಗೆ ರಾಜ್ಯಾಧ್ಯಕ್ಷ ಸ್ಥಾನ: ಬೆಂಬಲಿಗರಿಂದ ಒತ್ತಡ *ಬಿಜೆಪಿಯೊಳಗೆ ಹಗ್ಗಜಗ್ಗಾಟಕ್ಕೆ ವೇದಿಕೆ ಸಿದ್ಧ |
ಪ್ರಕಟಿಸಿದ ದಿನಾಂಕ : 2012-09-02
ಬೆಂಗಳೂರು,ಸೆ.1:ಬಿಜೆಪಿಯೊಳಗೆ ನಾಯಕತ್ವಕ್ಕಾಗಿ ನಡೆಯುತ್ತಿದ್ದ ಹಗ್ಗ ಜಗ್ಗಾಟ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾದ ಮೇಲೆ ನಿಂತಿತು ಎಂದು ನಿಟ್ಟುಸಿರು ಬಿಡುವ ಸಂದರ್ಭದಲ್ಲಿಯೇ ಖಾಸಗಿ ಸುದ್ದಿ ವಾಹಿನಿಯೊಂದು ನಡೆಸಿದ ಸಮೀಕ್ಷೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ಬಿಜೆಪಿ ನಾಯಕ ಎಂದು ಬಿಂಬಿತವಾಗಿರುವುದರಿಂದ ಅವರ ಬೆಂಬಲಿಗರು ಮತ್ತೆ ಪಕ್ಷದೊಳಗೆ ಸಮರ ನಡೆಸಲು ಸಿದ್ಧತೆ ನಡೆಸಿದ್ದಾರೆನ್ನಲಾಗಿದೆ.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಮೇಲೆ ತನ್ನ ಬಣದ ಡಿವಿ.ಸದಾನಂದ ಗೌಡರನ್ನು ಮುಖ್ಯಮಂತ್ರಿ ಮಾಡಿ,ಬಳಿಕ ಅವರು ತಮ್ಮ ವಿರೋಧಿಗಳ ಜೊತೆ ಸೇರಿಕೊಂಡರೆಂದು ಅವರನ್ನು ಕೆಳಗಿಳಿಸಲು ನಡೆಸಿದ ಕಸರತ್ತು ಫಲ ನೀಡಿದ ಬೆನ್ನಲ್ಲಿಯೇ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೂ ಹೋರಾಟ ನಡೆಸಿದ್ದರು.ಈ ಸಂದರ್ಭದಲ್ಲಿ ಪಕ್ಷದ ವರಿಷ್ಠರ ಮಧ್ಯ ಪ್ರವೇಶದಿಂದ ತಣ್ಣಗಾಗಿ ಕೂತಿದ್ದ ಯಡಿಯೂರಪ್ಪನವರಿಗೆ ಈಗ ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ.ಖಾಸಗಿ ಸುದ್ದಿ ವಾಹಿನಿಯೊಂದು ನಡೆಸಿರುವ ಸಮೀಕ್ಷೆಯಲ್ಲೂ ಯಡಿಯೂರಪ್ಪ ಕರ್ನಾಟಕ ಬಿಜೆಪಿಯ ಮಟ್ಟಿಗೆ ಪ್ರಶ್ನಾತೀತ ನಾಯಕ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇದರಿಂದ ಮತ್ತಷ್ಟು ಬಲ ಬಂದಿರುವ ಬಿಎಸ್ವೈ ಬಣ ಇದೀಗ ಯಡಿಯೂರಪ್ಪ ನವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಲು ಲಾಬಿ ಮುಂದುವರಿಸಿದೆ.ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಯಡಿಯೂರಪ್ಪ,ತನ್ನ ವಿರೋಧಿಗಳಿಗೆ ಸಡ್ಡು ಹೊಡೆಯಲು ಬರ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಮಾಡಿದ್ದು,ಇದರಿಂದ ಅವರ ಜನ ಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ ಎಂದು ಭಾವಿಸಿ ಕೊಂಡಿರುವ ಅವರ ಬಣದ ನಾಯಕರು,ಇನ್ನು ಯಾವುದೇ ರೀತಿಯಲ್ಲಿಯೂ ತಡ ಮಾಡದೆ ಕೂಡಲೇ ರಾಜ್ಯಾಧ್ಯಕ್ಷ ಪಟ್ಟ ನೀಡುವಂತೆ ಹೈಕಮಾಂಡ್ಗೆ ಒತ್ತಡ ಹೇರುತ್ತಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ,ರಾಜ್ಯದಲ್ಲಿ ಮಾಜಿ ಸಿಎಂ ಯಡಿಯೂರಪ್ಪರ ಜನಪ್ರಿಯತೆ,ಮೆಚ್ಚುಗೆ ಅವರು ಅಧಿಕಾರದಿಂದ ಕೆಳಗಿಳಿದ ಮೇಲೆಯೂ ಕಡಿಮೆಯಾಗಿಲ್ಲ. ಮುಂದಿನ ಚುನಾವಣೆಯಲ್ಲಿ ಅವರ ನೇತೃತ್ವದಲ್ಲಿಯೇ ಚುನಾವಣೆ ಎದುರಿಸಿದರೆ ಮಾತ್ರ ಅಧಿಕಾರಕ್ಕೆ ಬರಲು ಸಾಧ್ಯ.ಈ ಹಿನ್ನೆಲೆಯಲ್ಲಿ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.ಅವರೇ ರಾಜ್ಯಾಧ್ಯಕ್ಷರಾಗಬೇಕು ಎಂಬುದು ಎಲ್ಲ ಕಡೆಯಿಂದಲೂ ಕೇಳಿ ಬರುವಂಥ ಆಗ್ರಹವಾಗಿದೆ.
ಈ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಿ ಯಡಿಯೂರಪ್ಪರಿಗೆ ಕೂಡಲೇ ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ಮನವಿ ಮಾಡಲಾಗುವುದು ಎಂದರು. ಸದಾನಂದಗೌಡರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ಪಕ್ಷದ ಕೆಲವರು ಒತ್ತಾಯವೇರಿದ್ದಾರೆ.ಸದಾನಂದ ಗೌಡರು ಹಿಂದೆ ಸರಿದು ಯಡಿಯೂರಪ್ಪರಿಗೆ ಸ್ಥಾನ ನೀಡುವಂತೆ ಮಾಡಬೇಕು ಎಂದರು.
ಈ ಕುರಿತು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವ ರಾಜೂಗೌಡ,ಯಡಿಯೂರಪ್ಪ ನಮ್ಮ ಪ್ರಶ್ನಾತೀತ ನಾಯಕರಾಗಿದ್ದು,ಅವರ ನಾಯಕತ್ವದಲ್ಲಿ ಮುಂದಿನ ಚುನಾವಣೆಗೆ ಹೋದರೆ ಗೆಲುವು ಕಟ್ಟಿಟ್ಟಬುತ್ತಿ.ಅವರೇ ನಮ್ಮ ಮುಂದಿನ ಸಿಎಂ ಎಂದರು.
ವರದಿಯ ವಿವರಗಳು |
 |
ಕೃಪೆ : varthabharthi ವರದಿಗಾರರು : ಕರ್ನಾಟಕ ವರದಿಗಾರರು
ಪ್ರಕಟಿಸಿದ ದಿನಾಂಕ : 2012-09-02
|
|
Ronald, Udupi | 2012-09-03 | ಕಸರತ್ತು!!! ಈ ಕಸರತ್ತು ನಾಚಿಕೆ ಮಾನ ಮರ್ಯಾದೆ ಇಲ್ಲದ ಕಸರತ್ತು!!! ಜನರ Tax ಹಣ ಸಾಕಷ್ಟು ಇರುವಾಗ ಆಟಕ್ಕೆ ಕೊರತೆ ಇಲ್ಲ!! ಜಪ ನಾಮಕ್ಕ್ಕೆ ಕೊರತೆ ಇಲ್ಲ!! ಯಾರಪ್ಪನ ಗಂಟು??? ಇಂಥವರು ನಮ್ಮ ನಾಯಕರು!! ಒಳ್ಳೆಯವರು ಯಾರೂ ಇಲ್ಲವೇ? |
|