ಸೆಪ್ಟಂಬರ್ನಿಂದ ಎಲ್ಲಾ ಶಾಲೆಗಳಲ್ಲಿ ‘ಕೃಷಿ ದರ್ಶನ’: ಎಸ್ಡಿಎಂಸಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಡಾ.ವಿಜಯಪ್ರಕಾಶ್ |
ಪ್ರಕಟಿಸಿದ ದಿನಾಂಕ : 2012-09-01
ಮಂಗಳೂರು, ಆ.31: ಶಿಕ್ಷಣದೊಂದಿಗೆ ವಿದ್ಯಾರ್ಥಿಗಳನ್ನು ಕೃಷಿ ಚಟುವಟಿಕೆಯತ್ತ ಆಕರ್ಷಿತರಾಗಿಸಲು ಹಮ್ಮಿಕೊಳ್ಳ ಲಾಗಿರುವ ‘ಕೃಷಿ ದರ್ಶನ’ ಕಾರ್ಯಕ್ರಮವನ್ನು ಸೆಪ್ಟಂಬರ್ ತಿಂಗಳಿನಿಂದ ದ.ಕ.ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಕಾರ್ಯಗತಗೊಳಿಸಲಾಗುವುದು ಎಂದು ದ.ಕ.ಜಿಪಂನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ್ ತಿಳಿಸಿದ್ದಾರೆ.
ಅವರು ಇಂದು ದ.ಕ. ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ(ಡಯೆಟ್)ಇವುಗಳ ಆಶ್ರಯದಲ್ಲಿ ಡಯೆಟ್ ಸಭಾಂಗಣದಲ್ಲಿ ಏರ್ಪಡಿ ಸಿದ್ದ ದ.ಕ.ಜಿಲ್ಲಾ ಎಸ್ಡಿಎಂಸಿಗಳ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತರಗತಿಗಳಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಒತ್ತು ನೀಡುವಲ್ಲಿ ಗಮನ ಹರಿಸಬೇಕೆಂದು ಕರೆ ನೀಡಿದ ಅವರು, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಆದ್ಯತೆ ನೀಡುವ ಮೂಲಕ ಶಿಕ್ಷಕರು,ಎಸ್ಡಿಎಂಸಿಯವರು ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕು ಎಂದರು.

ದ.ಕ.ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ಟಿ.ಶೈಲಜಾ ಭಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಎಸ್ಡಿ ಎಂಸಿ ಮತ್ತು ಶಿಕ್ಷಕರು ಹೊಂದಾಣಿಕೆಯಿಂದ ಸಾಗಿದಾಗ ಮಾತ್ರ ಶಾಲೆಗಳ ಸಮಗ್ರ ಅಭಿವೃದ್ಧಿ ಸಾಧ್ಯ ಎಂದರು.
ಜಿಲ್ಲೆಯ ಎಲ್ಲಾ ಸರಕಾರಿ ಶಾಲೆಗಳ ಆವರಣಗೋಡೆ ನಿರ್ಮಾಣಕ್ಕೆ ಜಿಪಂ ವತಿಯಿಂದ ರೂ.1.5ಲಕ್ಷ ಅನುದಾನ ಒದಗಿಸುತ್ತಿದ್ದು ಹೆಚ್ಚುವರಿ ಹಣದ ಅಗತ್ಯವಿದ್ದಲ್ಲಿ ಸ್ಥಳೀಯ ಪಂಚಾಯತ್,ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮೂಲಕ ಕಾಮಗಾರಿ ಪೂರ್ಣ ಗೊಳಿಸಬೇಕು ಎಂದು ಶೈಲಜಾ ಭಟ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಉತ್ತಮ ಸಾಧನೆ ತೋರಿದ ಜಿಲ್ಲೆಯ 19ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಶಾಲಾಭಿವೃದ್ಧಿ ಸಮಿತಿಗಳನ್ನು ತಲಾ ರೂ.3ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಡಿಡಿಪಿಐ ಮೋಸೆಸ್ ಜಯಶೇಖರ್,ಶಿಕ್ಷಣ ಇಲಾಖೆಯ ಮೈಸೂರು ವಿಭಾಗದ ಸಹ ನಿರ್ದೇಶಕ ಆನಂದ್,ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ದ.ಕ.ಜಿಲ್ಲಾ ಘಟಕದ ಅಧ್ಯಕ್ಷ ಶಿವಶಂಕರ್ ಭಟ್ ಅತಿಥಿಗಳಾಗಿ ಭಾಗವಹಿಸಿದ್ದರು.ಡಯೆಟ್ ಪ್ರಾಚಾರ್ಯ ಪಾಲಾಕ್ಷಪ್ಪ ಡಿ. ಪ್ರಾಸ್ತಾವಿಕವಾಗಿ ಮಾತನಾಡಿದರು.ಮಂಗಳೂರು ನಗರ ಕ್ಷೇತ್ರ ಶಿಕ್ಷಣಾಧಿಕಾರಿ ದಯಾವತಿ ಸ್ವಾಗತಿಸಿದರು.
ಅಭಿನಂದನೆಗೊಳಪಟ್ಟ ಎಸ್ಡಿಎಂಸಿಗಳು ಬಂಟ್ವಾಳ ತಾಲೂಕಿನ ಸ.ಹಿ.ಪ್ರಾ.ಶಾಲೆ ದೇವಸ್ಯ ಪಡೂರು,ಸ.ಹಿ.ಪ್ರಾ.ಶಾಲೆ ಪಡಿಬಾಗಿಲು ವಿಟ್ಲ,ಇರಾ ಸರಕಾರಿ ಶಾಲೆ,ಬೆಳ್ತಂಗಡಿ ತಾಲೂಕಿನ ವೇಣೂರು ಹೋಬಳಿಯ ಕರಂಬಾರು ಶಾಲೆ,ಓಡಿನ್ನಾಳ ಮತ್ತು ಕಂಚಿನಡ್ಕ ಸ.ಹಿ.ಪ್ರಾ.ಶಾಲೆ, ಮಂಗಳೂರು ತಾಲೂಕಿನ ಕಸಬ ಬೆಂಗ್ರೆ,ಅದ್ಯಪಾಡಿ,ಪಡು ಪಣಂಬೂರು, ಗಾಂಧಿನಗರ ಬಲ್ಮಠ ಮತ್ತು ಮರಕಡ ಇಲ್ಲಿನ ಸ.ಹಿ.ಪ್ರಾ.ಶಾಲೆಗಳು.ಸುರತ್ಕಲ್ ಹೋಬಳಿಯ ಬಡಗ ಎಕ್ಕಾರು, ಮೂಡುಬಿದಿರೆಯ ಕೋಡಂಗಲ್ಲು, ಕೋಟೆ ಬಾಗಿಲು, ಕಡಬ ಹೋಬಳಿಯ ಕುದ್ಮಾರು ಸ.ಹಿ.ಪ್ರಾ.ಶಾಲೆಗಳು.ಉಪ್ಪಿನಂಗಡಿಯ ಶಾಂತಿನಗರ ಸರಕಾರಿ ಶಾಲೆ, ಪುತ್ತೂರು ತಾಲೂಕಿನ ಪೆರ್ಲಂಪಾಡಿ ಶಾಲೆ,ಸುಳ್ಯ ತಾಲೂಕಿನ ಜಯನಗರ ಸರಕಾರಿ ಶಾಲೆ ಮತ್ತು ಮಡಪ್ಪಾಡಿ ಸ.ಹಿ.ಪ್ರಾ.ಶಾಲೆ ಸೇರಿ ಒಟ್ಟು 19 ಶಾಲೆಗಳ ಎಸ್ಡಿಎಂಸಿಗಳನ್ನು ಅಭಿನಂದಿಸಲಾಯಿತು.
ವರದಿಯ ವಿವರಗಳು |
 |
ಕೃಪೆ : varthabharthi ವರದಿಗಾರರು : ಕರ್ನಾಟಕ ವರದಿಗಾರರು
ಪ್ರಕಟಿಸಿದ ದಿನಾಂಕ : 2012-09-01
|
|
|