ನವೋದಯ ಸ್ವ ಸಹಾಯ ಸಂಘಗಳ 2 ಲಕ್ಷ ಸದಸ್ಯರಿಗೆ ಸಮವಸ್ತ್ರ ವಿತರಣೆ : ಎಂ. ಎನ್. ರಾಜೇಂದ್ರ ಕುಮಾರ್ |
ಪ್ರಕಟಿಸಿದ ದಿನಾಂಕ : 2012-08-30
ಮಂಗಳೂರು,ಆಗಸ್ಟ್.30:2012ನೇ ಅಕ್ಟೋಬರ್ 1ರಂದು ಎಂಟು ವರ್ಷಗಳನ್ನು ಪೂರೈಸುತ್ತಿರುವ "ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್" ನವ ವರ್ಷಕ್ಕೆ ಪಾದಾರ್ಪಣೆ ಗೈಯುತ್ತಿರುವ ಸಂದರ್ಭದಲ್ಲಿ ನವೋದಯ ಸಹಾಯ ಸಂಘಗಳ 2ಲಕ್ಷ ಸದಸ್ಯರಿಗೆ ಏಕರೂಪದ ಸಮವಸ್ತ್ರವನ್ನು ವಿತರಿಸಲು ನಿರ್ಧರಿಸಲಾಗಿದೆ.
ಮುಖ್ಯವಾಗಿ ನವೋದಯ ಸ್ವ ಸಹಾಯ ಗುಂಪುಗಳ ಸದಸ್ಯರಲ್ಲಿ ಏಕತೆ, ಸಮಾನತೆಯನ್ನು ಮೂಡಿಸುವುದು ಟ್ಟಸ್ಟ್ನ ಮುಖ್ಯ ಆಶಯ. ಈ ನಿಟ್ಟಿನಲ್ಲಿ ಸದಸ್ಯರೆಲ್ಲರಿಗೂ ಏಕರೂಪದ ಸಮವಸ್ತ್ರವನ್ನು ಟ್ಟಸ್ಟ್ ಆಸ್ತಿತ್ವಕ್ಕೆ ಬಂದ ನಂತರ ಮೂರು ಬಾರಿ ಹಾಗೂ ಈಗ ನಾಲ್ಕನೇ ಬಾರಿಗೆ ವಿತರಿಸುತ್ತಿದೆ ಎಂದು ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ನ ಮೆನೇಜಿಂಗ್ ಟ್ರಸ್ಟಿ ಶ್ರೀ.ಎಂ..ಎನ್.ರಾಜೇಂದ್ರ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು.
2005ರಲ್ಲಿ ಬಂಟ್ವಾಳ ಹಾಗೂ ಉಡುಪಿಯಲ್ಲಿ ಜರುಗಿದ ಸುವರ್ಣ ಸಹಕಾರಿ ಸಪ್ತಾಹದ ಅಂಗವಾಗಿ ನಡೆದ ನವೋದಯ ಸ್ವಸಹಾಯ ಸಂಘಗಳ ಮಹಾ ಸಮಾವೇಶಕ್ಕೆ ಸುಮಾರು 1 ಲಕ್ಷ ಸಮವಸ್ತಗಳನ್ನು ವಿತರಿಸಲಾಗಿದೆ. 2008ರಲ್ಲಿ ಮೂಡಬಿದ್ರೆಯ ಸ್ವರಾಜ್ ಮೈದಾನದಲ್ಲಿ ನಡೆದ ನವೋದಯ ಚೈತನ್ಯ ಸಮಾವೇಶದಲ್ಲೂ ಸ್ವಸಹಾಯ ಸಂಘಗಳ ಸದಸ್ಯರು ಏಕರೂಪದ ಸಮವಸ್ತ್ರದಲ್ಲಿ ಪಾಲ್ಗೋಳ್ಳಬೇಕೆಂಬ ಉದ್ದೇಶದಿಂದ ಸುಮಾರು 1ಲಕ್ಷದಷ್ಟು ಸಮವಸ್ತ್ರವನ್ನು ವಿತರಿಸಲಾಗಿದೆ. 2010ರಲ್ಲಿ ಕಾರ್ಕಳದಲ್ಲಿ ನಡೆದ ನವೋದಯ ಸ್ವಸಹಾಯ ಸಂಘಗಳ ದಶಮಾನೋತ್ಸವ ಕಾರ್ಯಕ್ರಮಕ್ಕೂ ಸ್ವಸಹಾಯ ಸಂಘಗಳ ಸದಸ್ಯರಿಗೆ 1 ಲಕ್ಷದಷ್ಟು ಸಮವಸ್ತ್ರವನ್ನು ನೀಡಲಾಗಿದೆ. ಈ ಬಾರಿ ಸುಮಾರು2 ಲಕ್ಷ ನವೋದಯ ಸದಸ್ಯರಿಗೆ ಏಕರೂಪದ ಸಮವಸ್ತ್ರವನ್ನು ಟ್ರಸ್ಟ್ ಹಂತ ಹಂತವಾಗಿ ವಿತರಿಸಲಿದೆ ಎಂದು ಅವರು ವಿವರಿಸಿದರು..
ಸಮಾಜದಲ್ಲಿರುವ ಬಡ ವರ್ಗದವರಿಗೆ ಆರ್ಥಿಕ ಶಕ್ತಿಯನ್ನು ನೀಡಬೇಕು ತನ್ಮೂಲಕ ಒಟ್ಟಾರೆ ಸಮಾಜದ ಅಭಿವೃದ್ದಿಯಾಗಬೇಕು ಎನ್ನುವ ದೂರಗಾಮಿ ಚಿಂತನೆಯೊಂದಿಗೆ ಆರಂಭವಾದ ಸಂಸ್ಥೆ ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್.
ಜನರಲ್ಲಿ ಸಾಮಾಜಿಕ ಸಮಾನತೆಯನ್ನು ಪ್ರತಿಪಾದಿಸುವ ಮುಖ್ಯ ಉದ್ದೇಶವನ್ನು ಇಟ್ಟುಕೊಂಡಿರುವ ಈ ಸಂಸ್ಥೆ ಅಬಲ ವರ್ಗದ ಆರ್ಥಿಕ ಶಕ್ತಿಯಾಗಿ ಗುರುತಿಸಿಕೊಂಡಿದೆ. ಸಮಾಜದಲ್ಲಿನ ಆರೋಗ್ಯಕರ ಬದುಕಿಗೆ ಆರ್ಥಿಕ ಶಕ್ತಿಯೇ ಅನಿವಾರ್ಯ ಎನ್ನುವ ಚಿಂತನೆಗಳೊಂದಿಗೆ ಸಮಾಜದ ಎಲ್ಲಾ ವರ್ಗದವರನ್ನು ಜಾತಿ-ಮತಗಳ ಪರಿಗಣನೆ ಮಾಡದೆ ಒಂದೇ ವೇದಿಕೆಗೆ ತರುವ ಪ್ರಯತ್ನವನ್ನು ಈ ಸಂಸ್ಥೆ ನವೋದಯ ಸ್ವಸಹಾಯ ಸಂಘಗಳ ಮೂಲಕ ಮಾಡುತ್ತಿದೆ ಎಂದರು.
ಆರಂಭ:
ಸ್ವಸಹಾಯ ಸಂಘಗಳ ಮೂಲಕ ಗ್ರಾಮೀಣ ಜನರ ಬದುಕಿನಲ್ಲಿ ನವೋದಯದ ನಗುವನ್ನು ಕಾಣುವ ಆಶಯದೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ 2000ನೇ ಜನವರಿ 29ರಂದು ನವೋದಯ ಸ್ವಸಹಾಯ ಗುಂಪುಗಳ ಯೋಜನೆಗೆ ಚಾಲನೆ ನೀಡಿತು. ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಸುರಾಲಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ರಾಜರ್ಷಿ ಶ್ರೀ ವೀರೇಂದ್ರ ಹೆಗ್ಗಡೆಯವರ ದಿವ್ಯ ಹಸ್ತದಿಂದ ಈ ಯೋಜನೆ ಉದ್ಘಾಟಿಸಲ್ಪಟ್ಟಿದೆ.
ನವೋದಯ ಸ್ವ ಸಹಾಯ ಸಂಘಗಳ ಕಾರ್ಯನಿರ್ವಹಣೆಯನ್ನು ಸಮರ್ಪಕ ರೀತಿಯಲ್ಲಿ ನಿರ್ವಹಿಸುವ ಉದ್ದೇಶದಿಂದ ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಎಂಬ ಸಂಸ್ಥೆಯನ್ನು2004ರ ಅಕ್ಟೋಬರ್ -1 ರಂದು ಹುಟ್ಟುಹಾಕಲಾಯಿತು. ಆ ಮೂಲಕ ನವೋದಯ ಸ್ವಸಹಾಯ ಗುಂಪುಗಳ ರಚನೆ ಮತ್ತು ಸಮರ್ಪಕ ನಿರ್ವಹಣೆಗೆ ಹೆಚ್ಚು ಒತ್ತನ್ನು ನೀಡಲಾಗಿದೆ.
ಗ್ರಾಮೀಣ ಬಡ ಜನರ ಸರ್ವತೋಮುಖ ಅಭಿವೃದ್ಧಿಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಧಾರವಾಡ ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಈ ಐದು ಜಿಲ್ಲೆಗಳಲ್ಲಿ 25,102 ಸ್ವ ಸಹಾಯ ಸಂಘಗಳು ರಚನೆಯಾಗಿದ್ದು, ಒಟ್ಟು 2,50,386 ಸದಸ್ಯರ ಸಂಖ್ಯಾ ಬಲವನ್ನು ಟ್ರಸ್ಟ್ ಹೊಂದಿದೆ. ಇದರಲ್ಲಿ ಶೇಕಡಾ 70ರಷ್ಟು ಮಹಿಳೆಯರು. ಈ ಗುಂಪುಗಳ ಒಟ್ಟು ಉಳಿತಾಯ ರೂ.98.82 ಕೋಟಿ.
ರಾಜ್ಯ ಮಟ್ಟದ ವಸ್ತು ಪ್ರದರ್ಶನ:
ನವೋದಯ ಸ್ವಸಹಾಯ ಸಂಘಗಳ ಸದಸ್ಯರಿಗೆ ಆರ್ಥಿಕ ಸವಲತ್ತು ಒದಗಿಸುವುದರ ಜೊತೆಗೆ ಅವರಿಗೆ ತರಬೇತಿ ಮತ್ತು ಮಾರ್ಗದರ್ಶನವನ್ನು ಟ್ಟಸ್ಟ್ ನೀಡುತ್ತಿದೆ. ನವೋದಯ ಸ್ವಸಹಾಯ ಸಂಘಗಳ ಸದಸ್ಯರು ತಯಾರಿಸಿದ ಉತ್ಪನ್ನಗಳಿಗೆ ಯೋಗ್ಯ ಮಾರುಕಟ್ಟೆಯನ್ನು ಒದಗಿಸುವ ನಿಟ್ಟಿನಲ್ಲಿ ಟ್ಟಸ್ಟ್ ವತಿಯಿಂದ ಮೂರು ಬಾರಿ ರಾಜ್ಯಮಟ್ಟದ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಲಾಗಿದೆ. 2005ರಲ್ಲಿ ಕುಂದಾಪುರದ ಗಾಂಧಿ ಮೈಧಾನದಲ್ಲಿ ಕುಂದೋತ್ಸವ, 2006ರಲ್ಲಿ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಕುಡ್ಲೋತ್ಸವ ಹಾಗೂ 2007ರಲ್ಲಿ ಕುಂದಾಪುರದ ಗಾಂಧಿಮೈದಾನದಲ್ಲಿ ನವಕುಂದೋತ್ಸವ ಎಂಬ ರಾಜ್ಯ ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಏರ್ಪಡಿಸಿ ರಾಜ್ಯ ಮಟ್ಟದಲ್ಲಿ ಜನಮನ್ನಣೆಗೆ ಟ್ರಸ್ಟ್ ಪಾತ್ರವಾಗಿದೆ. ಈ ವಸ್ತು ಪ್ರದರ್ಶನದಿಂದ ನವೋದಯ ಸದಸ್ಯರಲ್ಲಿ ಆತ್ಮಸ್ಥರ್ಯ ಹೆಚ್ಚಾಗಿದ್ದು, ಅವರು ತಯಾರಿಸುವ ಉತ್ಪನ್ನಗಳಿಗೆ ಯೋಗ್ಯ ಮಾರುಕಟ್ಟೆಯು ದೊರೆತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ಆರೋಗ್ಯದೆಡೆ ಟ್ರಸ್ಟ್ ಚಿತ್ತ .......
ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ನವೋದಯ ಸ್ವಸಹಾಯ ಸಂಘಗಳ ಸದಸ್ಯರ ಆರೋಗ್ಯದ ಕಡೆಗೂ ಹೆಚ್ಚಿನ ಗಮನವನ್ನು ನೀಡುತ್ತಿದೆ. ಸದಸ್ಯರ ಅವಶ್ಯಕತೆಗೆ ಅನುಗುಣವಾಗಿ ಆರ್ಥಿಕ ನೆರವನ್ನು ಟ್ರಸ್ಟ್ ನೀಡುತ್ತಿದೆ. 2005ರಲ್ಲಿ ಕಾರ್ಕಳದ ದಾನಶಾಲಾ ಪಟ್ಟಣ ಶೆಟ್ರು ಮೈದಾನದಲ್ಲಿ ಏರ್ಪಡಿಸಿದ ಬೃಹತ್ ಆರೋಗ್ಯ ಮತ್ತು ಉಚಿತ ತಪಾಸಣಾ ಶಿಬಿರವು ದಾಖಲೆಯನ್ನೆ ಸೃಷ್ಟಿಸಿದೆ. 10,000ಕ್ಕೂ ಅಧಿಕ ಮಂದಿ ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೋಂಡು ಶಿಬಿರದ ಪ್ರಯೋಜನವನ್ನು ಪಡೆದಿರುತ್ತಾರೆ. ನೂರಕ್ಕೂ ಹೆಚ್ಚು ಮಂದಿ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ರಕ್ತದಾನವನ್ನು ನೀಡಿರುತ್ತಾರೆ. ಮಾತ್ರವಲ್ಲ ಅಂಗವೈಕಲ್ಯ ಹೊಂದಿದವರಿಗೆ ಸಲಕರಣೆ ವಿತರಣೆ ಹಾಗೂ ಸದಸ್ಯರ ಕಣ್ಣಿನ ತಪಾಸಣೆ ನಡೆಸಿ ಅವಶ್ಯಕತೆ ಉಳ್ಳವರಿಗೆ ಕನ್ನಡಕ ವಿತರಣೆ,ಕ್ಯಾನ್ಸರ್,ಹೃದಯರೋಗ,ಕಿಡ್ನಿ ವೈಪಲ್ಯ ಮೊದಲಾದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಆರ್ಥಿಕ ನೆರವನ್ನು ಟ್ರಸ್ಟ್ ನೀಡಿದೆ.
ನವೋದಯ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಸಂಪೂರ್ಣ ಆರೋಗ್ಯ ಸುರಕ್ಷೆಯನ್ನು ಒದಗಿಸುವ ನಿಟ್ಟಿನಲ್ಲಿ ಜೀವನ ಮಧುರ ಎಂಬ ಜೀವ ವಿಮೆ ಹಾಗೂ ಅಪಘಾತ ವಿಮೆಯನ್ನು ಒಳಗೊಂಡ ಚೈತನ್ಯ ವಿಮಾ ಯೋಜನೆ ಯನ್ನು ಟ್ರಸ್ಟ್ 2004ರಲ್ಲಿ ಜಾರಿಗೆ ತಂದಿದೆ. ವಾರ್ಷಿಕ ರೂ.250/- ಪಾವತಿಸಿದರೆ ರೂ.6,000/- ರ ವರೆಗಿನ ವೈದ್ಯಕೀಯ ವೆಚ್ಚ, ಅಪಘಾತ ಸಂಭವಿಸಿದರೆ ರೂ. 25,000/- ಅಪಘಾತ ವಿಮಾ ಸೌಲಭ್ಯ ಸೂಕ್ತ ಸಮಯದಲ್ಲಿ ಪಡೆಯುವ ಅವಕಾಶವಿದೆ. ನವೀಕರಣಗೊಂಡ ಮಹಿಳಾ ವಿಮಾದಾರರಿಗೆ ರೂ. 10,000/- ಹೆರಿಗೆ ಭತ್ಯೆ ನೀಡಲಾಗುತ್ತಿದೆ.
ಟ್ರಸ್ಟ್ ಕಾರ್ಯವೈಖರಿಗೆ ಒಲಿದು ಬಂದ ಪ್ರಶಸ್ತಿಗಳು:
* ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ನ ಕಾರ್ಯವೈಖರಿಯನ್ನು ಗುರುತಿಸಿರುವ ನಬಾರ್ಡ್ ಸಂಸ್ಥೆ 2006-07, 2007-08ಹಾಗೂ 2008-09ನೇ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಕರ್ನಾಟಕ ರಾಜ್ಯದಲ್ಲಿ ಸ್ವಸಹಾಯ ಸಂಘಗಳ ರಚನೆ ಹಾಗೂ ಕಾರ್ಯನಿರ್ವಹಣೆಯನ್ನು ಮಾಡುತ್ತಿರುವ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಟ್ರಸ್ಟ್ ಅತ್ಯುತ್ತಮ ಸಂಸ್ಥೆ ಎನ್ನುವುದನ್ನು ಗುರುತಿಸಿ ನಬಾರ್ಡ್, ಈ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿದೆ.
* ಗ್ರಾಮೀಣ ಭಾಗದ ತೀರ ಕೆಳಸ್ಥರದಲ್ಲಿ ಗುರುತಿಸಿಕೊಂಡ ಬಡ ವರ್ಗದ ಜನರಲ್ಲಿ ಅದರಲ್ಲಿಯೂ ವಿಶೇಷವಾಗಿ ಮಹಿಳೆಯರಲ್ಲಿ ಜಾಗ್ರತಿಯನ್ನು ಮೂಡಿಸುತ್ತಿರುವ ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಗೆ 2010ರಲ್ಲಿ 18ನೇ ರೋಟರಿ ಇಂಡಿಯಾ ಅವಾರ್ಡ್ ದೊರೆತಿದೆ. ಈ ಪ್ರಶಸ್ತಿಯನ್ನು ನವದೆಹಲಿಯಲ್ಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಇವರಿಂದ ಸ್ವಿಕರಿಸಲಾಗಿದೆ.
ಕ್ರೀಡೆಗೆ ಪ್ರೋತ್ಸಾಹ:
ಭಾರತದ ಕ್ರೀಡಾ ರಂಗ ಪ್ರಜ್ವಲಮಾನವಾಗಿ ಬೆಳಗಬೇಕು ಎನ್ನುವ ಆಶಯವನ್ನು ಇಟ್ಟುಕೊಂಡಿರುವ ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಯುವಕ-ಯುವತಿಯರಲ್ಲಿ ಕ್ರೀಡಾ ಸ್ಪೂರ್ತಿಯನ್ನು ತುಂಬುವ ಕೆಲಸವನ್ನು ಮಾಡುತ್ತಿದೆ. ಇಂದಿನ ವಾತಾವರಣದಲ್ಲಿ ಯುವಕ-ಯುವತಿಯರು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಆ ಸಮಯವನ್ನು ವಿವಿಧ ಕ್ರೀಡೆಗಳಲ್ಲಿ ತೊಡಗಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಟ್ರಸ್ಟ್ ಹಲವು ಬಾರಿ ಯುವಕ ಮಂಡಲ ಹಾಗೂ ಯುವತಿ ಮಂಡಲಗಳಿಗೆ ಉಚಿತ ಕ್ರೀಡಾ ಸಾಮಾಗ್ರಿಗಳನ್ನು ವಿತರಿಸಿದೆ.
ಈ ಬಾರಿ ಉಭಯ ಜಿಲ್ಲೆಗಳಲ್ಲಿರುವ ಯುವಕ ಮಂಡಲ ಹಾಗೂ ಯುವತಿ ಮಂಡಳಿಗಳಿಗೆ ಕ್ರೀಡಾ ಸಮಾಗ್ರಿಗಳನ್ನು ವಿತರಿಸಲು ಟ್ರಸ್ಟ್ ಯೋಜನೆಯನ್ನು ಹಾಕಿಕೊಂಡಿದೆ. ಮೊದಲ ಹಂತವಾಗಿ ಮಂಗಳೂರು ತಾಲೂಕಿನ ಯುವಕ-ಯುವತಿ ಮಂಡಲಗಳಿಗೆ ಕ್ರೀಡಾ ಸಾಮಾಗ್ರಿಗಳನ್ನು ವಿತರಿಸಲಿದ್ದು,ನಂತರ ಹಂತ ಹಂತವಾಗಿ ಪ್ರತೀ ತಾಲೂಕಿನಲ್ಲೂ ಈ ಯೋಜನೆ ಕಾರ್ಯಗತವಾಗಲಿದೆ.
ಪ್ರಸಕ್ತ ಸಾಲಿನ ಹೊಸ ಕಾರ್ಯಕ್ರಮ:
ಪ್ರಸಕ್ತ ಸಾಲಿನಲ್ಲಿ ನವೋದಯ ಸ್ವ ಸಹಾಯ ಸಂಘಗಳ ಸದಸ್ಯರಿಗಾಗಿ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ರಕ್ತದಾನ ಶಿಬಿರವನ್ನು ಏರ್ಪಡಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಶಿಬಿರವನ್ನು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದು, ಈ ಶಿಬಿರದಲ್ಲಿ ಎಲ್ಲಾ ಸ್ವಸಹಾಯ ಗುಂಪಿನ ಸದಸ್ಯರು ಸಕ್ರೀಯವಾಗಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗುವುದು.
ಹೀಗೆ ನಿರಂತರವಾಗಿ ಸ್ವಸಹಾಯ ಗುಂಪುಗಳ ಮತ್ತು ಸದಸ್ಯರ ಅಭಿವೃದ್ಧಿಗೆ ಟ್ರಸ್ಟ್ ಶ್ರಮಿಸುತ್ತಾ ಬಂದಿದ್ದು, ಇದೀಗ ನವ ವರ್ಷಕ್ಕೆ ಪಾದಾರ್ಪಣೆ ಗೈಯುತ್ತಿರುವ ಸಂದರ್ಭದಲ್ಲಿ ನವೋದಯ ಸದಸ್ಯರಿಗೆ ಸಮವಸ್ತ್ರವನ್ನು ವಿತರಿಸುವ ಯೋಜನೆಯನ್ನು ಹೊಂದಿರುವ ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ನ ಈ ಸಾಮಾಜಿಕ, ಭಾವೈಕ್ಯತೆಯ ಕಾಳಜಿಗೆ ಪ್ರತಿಯೊಬ್ಬರೂ ಸಹಕರಿಸಬೇಕೇಂದು ರಾಜೇಂದ್ರ ಕುಮಾರ್ ಅವರು ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉದ್ಯಮಿ ರೋಹನ್ ಮೊಂತೆರೋ,ಟ್ರಸ್ಟ್ನ ಪಧಾಧಿಕಾರಿಗಳಾದ ಸುಧೀರ್ ಹೆಗ್ಡೆ, ಎಕ್ಕಾರು ಮೋನಪ್ಪ ಶೆಟ್ಟಿ, ರತ್ನಾಕರ್ ಶೆಟ್ಟಿ, ವಿನಯ ಕುಮಾರ್ ಸೂರಿಂಜೆ, ಶ್ರೀಮತಿ ಪೂರ್ಣಿಮಾ ಶೆಟ್ಟಿ, ಸುದರ್ಶನ ಜೈನ್, ಪರಮೇಶ್ವರ ಜೈನ್ ಮುಂತಾದವರು ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2012-08-30
|
|
|