ಸ್ವರ್ಣಾ ನದಿಗೆ ಬಾಗಿನ ಸಮರ್ಪಣೆ;ಭವಿಷ್ಯದಲ್ಲಿ ಕೊಳಲಗಿರಿ-ಪರಾರಿ ಸಂಪರ್ಕ ಸೇತುವೆ-ಶಾಸಕ ಕೆ.ರಘುಪತಿ ಭಟ್ |
ಪ್ರಕಟಿಸಿದ ದಿನಾಂಕ : 2012-08-28
ಉಡುಪಿ: ಜಿಲ್ಲೆಗೆ ನೀರುಣಿಸುವ ನದಿ ಸ್ವರ್ಣೆಗೆ ಬಾಗಿನ ಸಲ್ಲಿಸುವ ಮೂಲಕ ಉಡುಪಿ ಶಾಸಕ ಕೆ.ರಘುಪತಿ ಭಟ್ ಅವರು ಸೋಮವಾರ ಧನ್ಯವಾದ ಸಮರ್ಪಿಸಿದರು.
ಬಾಗಿನ ಸಲ್ಲಿಸಿ ಮಾತನಾಡಿದ ಶಾಸಕರು, ಸ್ವರ್ಣಾ ನದಿ ಜಿಲ್ಲೆಗೆ ನೀರುಣಿಸುವ ನದಿಯಾಗಿದ್ದು ಈ ಬಾರಿ ತಾಂತ್ರಿಕ ದೋಷಗಳಿಂದ ನೀರಿನ ಅಭಾವ ಕಂಡು ಬಂದದ್ದು ಹೊರತುಪಡಿಸಿ ಸಮೃದ್ಧವಾದ ನೀರನ್ನು ಜಿಲ್ಲೆಗೆ ನೀಡುವ ನದಿಯಾಗಿದೆ. 35 ವಾರ್ಡ್ ಹಾಗೂ 12 ಪಂಚಾಯತ್ಗಳಿಗೆ ಈ ನದಿಯ ಮೂಲಕ ಕುಡಿಯುವ ನೀರಿನ ಪೂರೈಕೆಯಾಗುತ್ತಿದೆ. ನಿರಂತರ ನೀರನ್ನು ಜಿಲ್ಲೆಗೆ ಒದಗಿಸುತ್ತಿರುವ ನದಿಗೆ ನಾಗರಿಕರ ಪರವಾಗಿ ಬಾಗಿನ ಸಲ್ಲಿಸುವ ಮೂಲಕ ಧನ್ಯವಾದ ಸಮರ್ಪಿಸುತ್ತಿದ್ದೇನೆ. ಮುಂದಿನ ವರ್ಷಗಳಲ್ಲಿಯೂ ಸಹ ಸದಾ ನೀರನ್ನು ನೀಡುವ ಸಾಮರ್ಥ್ಯವನ್ನು ಸ್ವರ್ಣೆಯು ಹೊಂದಿರಲಿ ಎಂದು ಈ ಮೂಲಕ ಪ್ರಾರ್ಥಿಸುವುದಾಗಿ ಅವರು ತಿಳಿಸಿದರು.
ದಿ.ಡಾ.ವಿ.ಎಸ್.ಆಚಾರ್ಯರು ಈ ಪ್ರದೇಶದಲ್ಲಿ ಒಂದು ಸ್ನಾನಘಟ್ಟವನ್ನು ನಿರ್ಮಿಸುವ ಆಶಯವನ್ನು ಹೊಂದಿದ್ದರು.ಇದರ ಕುರಿತಾಗಿ ಇನ್ನು ನಡೆಯಲಿರುವ ಹನಿನೀರಾವರಿ ಆಯವ್ಯಯದಲ್ಲಿ ಪ್ರಸ್ತಾಪಿಸಲಾಗುವುದು. ಕೊಳಲಗಿರಿ-ಪರಾರಿಯಿಂದ ಕುಡಿಯುವ ನೀರಿನ ವಿಸ್ತೃತ ಯೋಜನೆಯೊಂದನ್ನು ಅನುಷ್ಠಾನಗೊಳಿಸುವ ಚಿಂತನೆ ನಡೆಸಿದ್ದು ಇದಕ್ಕಾಗಿ ಬೃಹತ್ ನೀರಾವರಿ ಇಲಾಖೆಯಿಂದ ಬ್ಯಾರೇಜ್ ಕಮ್ ಬ್ರಿಡ್ಜ್ ಎಂಬ ಯೋಜನೆಯ ಪ್ರಸ್ತಾಪವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದಕ್ಕಾಗಿ 25 ಕೋಟಿ ರೂ.ಅಂದಾಜುಗಳ ಗುರಿ ಹೊಂದಿದೆ.ಇದರಿಂದ ಪ್ರಥಮ ಹಂತದ ಸ್ವರ್ಣಾ ನೀರಿನೊಂದಿಗೆ ಇನ್ನಷ್ಟು ನೀರನ್ನು ಶೇಖರಣೆ ಮಾಡಿ ಕುಡಿಯುವ ನೀರಿಗಾಗಿ ಬಳಸಲಾಗುವುದು ಎಂದು ಇದೇ ಸಂಧರ್ಭದಲ್ಲಿ ರಘುಪತಿ ಭಟ್ ಅವರು ತಿಳಿಸಿದರು.
ತಾಲೂಕು ಪ೦ಚಾಯತ್ ಅಧ್ಯಕ್ಷರಾದ ದೇವದಾಸ್ ಹೆಬ್ಬಾರ್, ನಗರ ಸಭೆಯ ಉಪಾಧ್ಯಕ್ಷೆ ಶ್ರೀಮತಿ ಭಾರತೀ ಚ೦ದ್ರಶೇಖರ್ ಮೊದಲಾದವರು ಭಾಗವಹಿಸಿದ್ದರು. ಸಚಿವ ಶ್ರೀನಿವಾಸ ಪೂಜಾರಿ ಬರುವಾಗ ಬಾಗಿನವನ್ನು ಸಮರ್ಪಿಸಿ ಆಗಿತ್ತು.
ವರದಿಯ ವಿವರಗಳು |
 |
ವರದಿಗಾರರು : ಜಯಪ್ರಕಾಶ್ ಕಿಣಿ
ಪ್ರಕಟಿಸಿದ ದಿನಾಂಕ : 2012-08-28
|
|
|