ಗಂಗಾವತಿ: ಎಚ್ಚೆತ್ತ ಆರೋಗ್ಯ ಇಲಾಖೆ, ನಗರಸಭೆ ಜಿಲ್ಲೆಯಲ್ಲಿ 270 ಡೆಂಗ್ ಪ್ರಕರಣ ಪತ್ತೆ: 2 ಸಾವು |
ಪ್ರಕಟಿಸಿದ ದಿನಾಂಕ : 2012-09-06
ಗಂಗಾವತಿ: ಇಲ್ಲಿನ ಮಹೆಬೂಬ್ನಗರದ ನಿವಾಸಿ ಯೋರ್ವನಿಗೆ ಡೆಂಗ್ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಯ ನಂತರ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ ಮತ್ತು ನಗರಸಭೆ ಇಂದು ನಗರಸಭೆ ಸಭಾಂಗಣದಲ್ಲಿ ಸಭೆ ಏರ್ಪಡಿಸಿ ಆರೋಗ್ಯ ಜಾಗೃತಿಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ತೀರ್ಮಾನಿಸಿದೆ.
ಜಿಲ್ಲೆಯಲ್ಲಿ 270 ಡೆಂಗ್ ಪ್ರಕರಣ ಪತ್ತೆಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಎಂ.ಎಂ. ಕಟ್ಟಿಮನಿ ತಿಳಿಸಿದ್ದಾರೆ. ಆನೆಗೊಂದಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗೊಂಡಿದ್ದ ಮಲ್ಲಾಪುರದ ಓರ್ವ ವ್ಯಕ್ತಿ ಮತ್ತು ಇಂದರಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಜಬ್ಬಲಗುಡ್ಡ ಗ್ರಾಮದ ಓರ್ವ ನಿವಾಸಿ ಮೃತಪಟ್ಟಿರುವ ಕುರಿತು ದೃಢಪಟ್ಟಿದೆ.
270 ಪ್ರಕರಣಗಳಲ್ಲಿ 243 ಶಂಕಿತ, 34 ಡೆಂಗ್ ಜ್ವರದ ಲಕ್ಷಣಗಳು ಕಂಡು ಬಂದಿವೆ. ಅದರಲ್ಲಿ 3 ಮೂವರು ಮಾತ್ರ ಡೆಂಗ್ಯೂ ಜ್ವರದಿಂದ ಬಳಲುತ್ತಿರುವುದು ಖಚಿತಪಟ್ಟಿದೆ. ಬಳ್ಳಾರಿ ಮತ್ತು ಹುಬ್ಬಳ್ಳಿಯಲ್ಲಿ ಮಾತ್ರ ಡೆಂಗ್ಗೆ ಸಂಬಂಧಿಸಿದಂತೆ ವೈದ್ಯಕೀಯ ಪರಿಕರಗಳು ಲಭ್ಯ ಇವೆ. ಆದ್ದರಿಂದ ಜ್ವರದ ಪತ್ತೆಗೆ ವಿಳಂಬವಾಗುತ್ತಿದೆ ಎಂದವರು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಆರೋಗ್ಯ ಸಹಾಯಕರಾದ ಅನ್ನಪೂರ್ಣ, ಅಧಿಕಾರಿಗಳಾದ ವಿಶ್ವನಾಥ, ದತ್ತಾತ್ರೇಯ, ಅಪ್ಜಲ್ ಹುಸೇನ್, ನಗರಸಭೆ ಪೌರಾಯುಕ್ತ ನಿಂಗಪ್ಪ ಕುಮ್ಮಣ್ಣನವರ, ಸದಸ್ಯ ಮಹಮ್ಮದ್ ಫಾರೂಕ್, ಸ್ಥಾಯಿ ಸಮಿತಿ ಅಧ್ಯಕ್ಷ ಶಾಮಾಚಾರ್, ಎಸ್ಜೆಆರ್ವೈ ಅಧಿಕಾರಿ ಶಿವಲಿಂಗಪ್ಪ, ಎಂಜನಿಯರ್ ಝಹೀರುದ್ದೀನ್, ಶರಣಪ್ಪ, ಗುರುರಾಜ್ ದಾಸನಾಳ, ನೈರ್ಮಲ್ಯ ನಿರೀಕ್ಷಕ ಹೆಗಡೆ ದೇವೆಂದ್ರ ಇದ್ದರು.
ವರದಿಯ ವಿವರಗಳು |
 |
ಕೃಪೆ : ವಾ.ಭಾ ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-09-06
|
|
|