ಪ್ರಧಾನಿ ಸಿಂಗ್ ದುರಂತ ನಾಯಕ: ವರದಿಗೆ ಗಂಟುಬಿದ್ದ ವಾಷಿಂಗ್ಟನ್ ಪೋಸ್ಟ್ |
ಪ್ರಕಟಿಸಿದ ದಿನಾಂಕ : 2012-09-06
ನವದೆಹಲಿ:ಟೈಮ್ ಮ್ಯಾಗಜಿನ್ ಮುಖಪುಟದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ‘ಕಡಿಮೆ ಸಾಧಕ’ನೆಂಬ ಪಟ್ಟ ಗಿಟ್ಟಿಸಿಕೊಂಡು ಇನ್ನೂ ಒಂದು ತಿಂಗಳಾಗಿಲ್ಲ. ಅಷ್ಟರಲ್ಲಾಗಲೇ ಅಮೆರಿಕದ ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯು ಪ್ರಧಾನಿ ಸಿಂಗ್ರನ್ನು ‘ದುರಂತ ನಾಯಕ’ ಎಂದು ಬಣ್ಣಿಸಿದೆ.
ಹೌದು. ಪ್ರಧಾನಿಯಾಗಿ ಸಿಂಗ್ರ ಕಾರ್ಯವೈಖರಿಯನ್ನು ಟೀಕಿಸಿರುವ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯು ಅವರನ್ನು ‘ಅತಿ ಭ್ರಷ್ಟ ಸರ್ಕಾರವನ್ನು ನಡೆಸುತ್ತಿರುವ ನಿಷ್ಪ್ರಯೋಜಕ ವ್ಯಕ್ತಿ’ ಎಂದೂ ಕರೆದಿದೆ. ಇದು ಆರ್ಥಿಕ ತಜ್ಞನೆಂದು ಖ್ಯಾತಿ ಗಳಿಸಿದ್ದ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ ಅನ್ನು ಮತ್ತೊಮ್ಮೆ ತೀವ್ರ ಮುಜುಗರಕ್ಕೀಡುಮಾಡಿದೆ.
ಲೇಖನದಲ್ಲೇನಿದೆ?: ದೆಹಲಿ ಡೇಟ್ಲೈನ್ನಲ್ಲಿ ‘ಇಂಡಿಯಾಸ್ ಸೈಲೆಂಟ್ ಪ್ರೈಮ್ ಮಿನಿಸ್ಟರ್ ಬಿಕಮ್ಸ್ ಎ ಟ್ರಾಜಿಕ್ ಫಿಗರ್’ ಎಂಬ ಶೀರ್ಷಿಕೆಯಲ್ಲಿ ಲೇಖನ ಪ್ರಕಟವಾಗಿದೆ. ಒಂದು ಕಾಲದಲ್ಲಿ ಮನಮೋಹನ್ ಸಿಂಗ್ ಅವರು ಅಮೆರಿಕ ಹಾಗೂ ಭಾರತದ ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಒಬಾಮ ಸರ್ಕಾರದೊಂದಿಗಿನ ಸಿಂಗ್ ಅವರ ಗೆಳೆತನ ಮೌಲ್ಯಯುತ ಹಾಗೂ ಶ್ಲಾಘನೀಯ ಸಾಧನೆಯಾಗಿತ್ತು. ಆದರೆ, ನಾಚಿಕೆ ಹಾಗೂ ಸೌಮ್ಯ ಸ್ವಭಾವದ ಮನಮೋಹನ್ಸಿಂಗ್ ಈಗ ಒಬ್ಬ ವಿಫಲ ನಾಯಕನಾಗಿ ಇತಿಹಾಸದ ಪುಟ ಸೇರುವ ಅಪಾಯದಲ್ಲಿದ್ದಾರೆ ಎಂದು ಬರೆಯಲಾಗಿದೆ. ಜತೆಗೆ, ಇತಿಹಾಸಕಾರ ಹಾಗೂ ‘ಇಂಡಿಯಾ ಆಫ್ಟರ್ ಗಾಂಧಿ’ ಕರ್ತೃ ರಾಮಚಂದ್ರ ಗುಹಾ ಅವರ ಮಾತನ್ನು ಉಲ್ಲೇಖಿಸಿರುವ ವಾಷಿಂಗ್ಟನ್ ಪೋಸ್ಟ್, ಭಾರತದ ‘ಮೌನ’ ಪ್ರಧಾನಿಯು ಈಗ ‘ದುರಂತ ನಾಯಕ’ ಎಂಬ ಅವರ ಹೇಳಿಕೆಯನ್ನು ಪುನರುಚ್ಚರಿಸಿದೆ. ಜತೆಗೆ, ‘ಪ್ರಧಾನಿ ಸಿಂಗ್ ಅವರು ತಮ್ಮ ಪುಕ್ಕಲುತನ, ಸ್ವಸಂತುಷ್ಟಿ ಹಾಗೂ ಬೌದ್ಧಿಕ ಅಪ್ರಾಮಾಣಿಕತೆಯಿಂದಾಗಿ ಅನಿವಾರ್ಯವಾಗಿ ವೈಫಲ್ಯತೆಯನ್ನು ಅನುಭವಿಸುವಂತಾಗಿದೆ’ ಎಂಬ ಗುಹಾ ಅವರ ಹೇಳಿಕೆಯನ್ನೂ ಉಲ್ಲೇಖಿಸಲಾಗಿದೆ.
ಕ್ಷಮೆ ಕೋರಲ್ಲ ಎಂದ ಪೋಸ್ಟ್: ವಾಷಿಂಗ್ಟನ್ ಪೋಸ್ಟ್ನಲ್ಲಿ ಪ್ರಧಾನಿ ಸಿಂಗ್ ಬಗೆಗಿನ ಲೇಖನ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್ ಗೊಂದಲಕ್ಕೀಡಾಗಿದೆ.
ಉತ್ತಮ ಹೆಸರು ಗಳಿಸಿರುವ ಪತ್ರಿಕೆಯೊಂದು ಪ್ರಧಾನಮಂತ್ರಿಯೊಬ್ಬರ ವಿರುದ್ಧ ಈ ರೀತಿಯ ಆರೋಪ ಮಾಡುತ್ತಿರುವುದು ದುರದೃಷ್ಟಕರ ಎಂದು ಹೇಳಿದೆ. ಇದಾದ ಸ್ವಲ್ಪ ಹೊತ್ತಿನಲ್ಲೇ ಪ್ರಧಾನಿ ವಿರುದ್ಧದ ಲೇಖನ ಪ್ರಕಟಿಸಿದ್ದಕ್ಕಾಗಿ ಪತ್ರಿಕೆಯು ಕ್ಷಮೆ ಯಾಚಿಸಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ವಾಷಿಂಗ್ಟನ್ ಪೋಸ್ಟ್ನ ಭಾರತದ ಬ್ಯೂರೋ ಚೀಫ್ ಆಗಿರುವ ಸೈಮನ್ ಡಿನೈಯರ್, ಇದಕ್ಕಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಲೇಖನಕ್ಕೆ ಪ್ರತಿಕ್ರಿಯಿಸಲು ಪ್ರಧಾನಿ ಕಾರ್ಯಾಲಯ ಮುಂದಾಗಿತ್ತು. ಆದರೆ, ಆಗ ವೆಬ್ಸೈಟ್ ಸರ್ವರ್ ಡೌನ್ ಆಗಿದ್ದರಿಂದ ಕಮೆಂಟ್ ಮಾಡಲು ಆಗಿರಲಿಲ್ಲ. ಆಗ ನಾನು ವೆಬ್ಸೈಟ್ ಸಮಸ್ಯೆಗಾಗಿ ಕ್ಷಮೆ ಕೋರಿದ್ದೆ ಅಷ್ಟೆ. ವೆಬ್ಸೈಟ್ ಸರಿಯಾದ ಬಳಿಕ ನಾನೇ ಖುದ್ದಾಗಿ ಪ್ರಧಾನಿ ಕಾರ್ಯಾಲಯಕ್ಕೆ ಕರೆ ಮಾಡಿ, ಇನ್ನು ಪ್ರತಿಕ್ರಿಯೆ ನೀಡಬಹುದು ಎಂದಿದ್ದೆ ಎಂದು ಹೇಳಿದ್ದಾರೆ.
ಸಿಂಗ್ರ ಸಿಂಹಾಸನ ಅಲುಗಾಡುತ್ತಿದೆ: ಇದೇ ವೇಳೆ, ಪ್ರಧಾನಿ ಬಗೆಗಿನ ಈ ಲೇಖನಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ಪ್ರಧಾನಿ ಸಿಂಗ್ ಭ್ರಷ್ಟ ಎಂದು ಎಲ್ಲರಿಗೂ ಗೊತ್ತು. ಈಗ ಅವರ ಭ್ರಷ್ಟಾಚಾರದ ಸಿಂಹಾಸನ ಅಲುಗಾಡುತ್ತಿದೆ ಎಂದಿದೆ. ಅವರೊಬ್ಬ ಉತ್ತಮ ಆರ್ಥಿಕ ತಜ್ಞ ಹಾಗೂ ಪ್ರಾಮಾಣಿಕ ನಾಯಕನೆಂದು ಹೆಸರು ಗಳಿಸಿದ್ದರು. ಆದರೆ, ಅವರ ಇಮೇಜ್ ಈ ರೀತಿಯಾಗಿ ನಾಶವಾಗುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಅವರ ಕಣ್ಣೆದುರೇ ಎಲ್ಲವೂ ನಡೆಯುತ್ತಿದ್ದರೂ ಅವರು ಮೌನ ತಾಳಿದ್ದಾರೆ ಎಂದು ಬಿಜೆಪಿ ನಾಯಕ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ. ಜತೆಗೆ, ಕಾಂಗ್ರೆಸ್ ಈಗ ಭ್ರಷ್ಟಾಚಾರದ ಬಹುರಾಷ್ಟ್ರೀಯ ಕಂಪನಿಯಾಗಿಬಿಟ್ಟಿದೆ ಎಂದೂ ಅವರು ವ್ಯಂಗ್ಯವಾಡಿದ್ದಾರೆ. ಕಲ್ಲಿದ್ದಲು ಬ್ಲಾಕ್ ಹಂಚಿಕೆ ಹಗರಣ ಸಂಸತ್ನ ಮುಂಗಾರು ಅಧಿವೇಶನದ ಬಹುತೇಕ ಅವಧಿಯನ್ನು ಬಲಿತೆಗೆದುಕೊಂಡಿದೆ. ಹಗರಣದ ಹೊಣೆ ಹೊತ್ತು ಪ್ರಧಾನಿ ಸಿಂಗ್ ರಾಜಿನಾಮೆ ನೀಡಬೇಕೆಂದು ಪ್ರತಿಪಕ್ಷಗಳು ನಿರಂತರವಾಗಿ ಒತ್ತಾಯಿಸುತ್ತಿದ್ದು, ಕಲಾಪಗಳು ಮುಂದೂಡಲ್ಪಡುತ್ತಿವೆ. ಇದರ ಬೆನ್ನಲ್ಲೇ ವಾಷಿಂಗ್ಟನ್ ಪೋಸ್ಟ್ ಪ್ರಧಾನಿ ಸಿಂಗ್ರ ವೈಫಲ್ಯದ ಬಗ್ಗೆ ಲೇಖನ ಪ್ರಕಟಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ವರದಿಯ ವಿವರಗಳು |
 |
ಕೃಪೆ : ಕನ್ನಡಪ್ರಭ ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-09-06
|
|
|