ಚೈತ್ರಾ ಇಳಿದ ಗಣೇಶ್ 'ಆಟೋ'ಗೆ ದೀಪಿಕಾ ಕಾಮಯ್ಯ |
ಪ್ರಕಟಿಸಿದ ದಿನಾಂಕ : 2012-09-05
ಚಿಂಗಾರಿ’ ಚಿತ್ರದಲ್ಲಿ ಚಿಕ್ಕದೊಂದು ಪಾತ್ರ ಮಾಡಿದ್ದ ತೇಜು ಮೊನ್ನೆ ಮೊನ್ನೆ ವಿನೋದ್ ಪ್ರಭಾಕರ್ ’ಮರಿ ಟೈಗರ್’ನಲ್ಲಿ ಚಾನ್ಸ್ ಗಿಟ್ಟಿಸಿಕೊಂಡಳು. ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜತೆ ರೊಮ್ಯಾನ್ಸ್ ಮಾಡಿದ್ದ ದೀಪಿಕಾ ಕಾಮಯ್ಯ ಮಾತ್ರ ಖಾಲಿ ಖಾಲಿ. ಯಾವ ನಿರ್ಮಾಪಕ-ನಿರ್ದೇಶಕರ ಕಣ್ಣಿಗೂ ದೀಪಿಕಾ ಬಿದ್ದಿರಲಿಲ್ಲ.
ಆದರೆ ಈಗ ಅದೇನೋ ಅದೃಷ್ಟ ಖುಲಾಯಿಸಿರುವಂತಿದೆ. ಕೆಲ ದಿನಗಳ ಹಿಂದಷ್ಟೇ ಪತ್ರಕರ್ತ ದೀಪಕ್ ತಿಮ್ಮಯ್ಯ ನಿರ್ದೇಶನದ ’ನೀನೇ ಬರೀ ನೀನೇ’ ಚಿತ್ರದಲ್ಲಿ ಅನೀಶ್ ತೇಜೇಶ್ವರ್ ಮತ್ತು ತಶು ಕೌಶಿಕ್ಗೆ ಹೀರೋಯಿನ್ ಆಗುತ್ತಿದ್ದಾರೆ ಎಂದು ಸುದ್ದಿ ಬಂದಿರುವ ಬೆನ್ನಿಗೆ ’ವಿರಾಟ್’ ನೆಪದಲ್ಲಿ ಜಾರಿಕೊಂಡ ಚೈತ್ರ ಚಂದ್ರನಾಥ್ ಜಾಗಕ್ಕೆ ಭರ್ತಿಯಾಗಿದ್ದಾರೆ.
ಚೈತ್ರ ಚಂದ್ರನಾಥ್ ನಾಯಕಿಯಾಗಲಿದ್ದಾರೆ ಎಂದು ಹೇಳಲಾಗಿದ್ದ ಚಿತ್ರ ಗೊತ್ತಲ್ವೇ? ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿರುವ ’ಆಟೋ ರಾಜ’. ಇಲ್ಲೇನೂ ಚೈತ್ರ ಚಂದ್ರನಾಥ್ ಮೊದಲ ನಾಯಕಿಯಾಗಿರಲಿಲ್ಲ. ಭಾಮಾರದ್ದು ಪ್ರಮುಖ ಪಾತ್ರ. ಚೈತ್ರಳನ್ನು ಎರಡನೇ ನಾಯಕಿಯೆಂದಷ್ಟೇ ನಿರ್ದೇಶಕ ಉದಯ ಪ್ರಕಾಶ್ ಪರಿಗಣಿಸಿದ್ದರು.
ಆದರೆ ಅವರಿಗೆ ದರ್ಶನ್ ನಾಯಕನಾಗಿರುವ ’ವಿರಾಟ್’ ಜತೆಗಿರುವ ಒಪ್ಪಂದ ಚೈತ್ರ ಚಂದ್ರನಾಥ್ಗೆ ಅಡ್ಡಿಯಾಗಿತ್ತು. ಹಾಗಾಗಿ ’ಆಟೋ ರಾಜ’ದಿಂದ ಕೆಳಗಿಳಿದು ಹೋಗಿದ್ದರು. ನಂತರ ನಿರ್ದೇಶಕ ಉದಯ ಪ್ರಕಾಶ್ ಹೊಸ ಹುಡುಗಿಯ ತಲಾಷೆಯಲ್ಲಿದ್ದರು. ಪಾರುಲ್ ಯಾದವ್ಳನ್ನು ಕರೆ ತರುವ ಯತ್ನವೂ ನಡೆದಿತ್ತು.
ಆದರೆ ಕೊನೆಗೆ ಸಿಕ್ಕಿದ್ದು ಕೊಡಗಿನ ಬೆಡಗಿ ’ಚಿಂಗಾರಿ’ಯ ದೀಪಿಕಾ ಕಾಮಯ್ಯ. ಆಕೆ ಪಾತ್ರಕ್ಕೆ ಚೆನ್ನಾಗಿ ಹೊಂದುತ್ತಾರೆ, ಹಾಗಾಗಿ ಆಯ್ಕೆ ಮಾಡಿದ್ದೇವೆ ಎಂದಿದ್ದಾರೆ ನಿರ್ದೇಶಕರು.
ನಟನೆಗೆ ಅವಕಾಶ ಇರುವ ಪಾತ್ರಗಳನ್ನು ಮಾತ್ರ ಒಪ್ಪಿಕೊಳ್ಳುತ್ತೇನೆ. ’ಆಟೋ ರಾಜ’ ನನ್ನ ಸಿನಿ ಜೀವನದಲ್ಲಿ ಮಹತ್ವದ ಮೈಲುಗಲ್ಲಾಗಲಿದೆ. ನನಗಂತೂ ಇಬ್ಬರು ನಾಯಕಿಯರ ಚಿತ್ರದಲ್ಲಿ ನಟಿಸುವುದು ತಪ್ಪೆಂಬ ಭಾವನೆಯಿಲ್ಲ. ಈ ಚಿತ್ರದಲ್ಲಿ ಎರಡೂ ಪಾತ್ರಗಳು ತುಂಬಾ ಚೆನ್ನಾಗಿವೆ. ಇಬ್ಬರೂ ನಾಯಕಿಯರಿಗೆ ಸಮಾನ ಅವಕಾಶಗಳಿವೆ. ಅದಕ್ಕಿಂತಲೂ ಹೆಚ್ಚಾಗಿ, ಪಾತ್ರ ನನಗೆ ಇಷ್ಟವಾಗಿದೆ ಎಂದು ದೀಪಿಕಾ ಪ್ರತಿಕ್ರಿಯೆ ನೀಡಿದ್ದಾರೆ.
ಅಂದ ಹಾಗೆ, ’ಆಟೋ ರಾಜ’ದಿಂದ ಔಟ್ ಆದ ಚೈತ್ರ ಚಂದ್ರನಾಥ್ ಮತ್ತು ಇನ್ ಆದ ದೀಪಿಕಾ ಕಾಮಯ್ಯ ಇಬ್ಬರೂ ದರ್ಶನ್ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಬಂದವರು!
ವರದಿಯ ವಿವರಗಳು |
 |
ಕೃಪೆ : ವೆಬ್ ದುನಿಯಾ ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-09-05
|
|
|