ಕುವೆಂಪು ಮನೆ ಮುಂದೆ ಹೊಟೇಲ್ ನಿರ್ಮಾಣ: ಸಾಹಿತಿಗಳು, ಪ್ರಗತಿಪರರ ಆಕ್ರೋಶ |
ಪ್ರಕಟಿಸಿದ ದಿನಾಂಕ : 2012-09-05
ಶಿವಮೊಗ್ಗ,ಸೆ.4:ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿರುವ ರಾಷ್ಟ್ರಕವಿ ಕುವೆಂಪುರವರ ಮನೆಯ ಮುಂಭಾಗ ಹೊಟೇಲ್ ಕಟ್ಟಡ ನಿರ್ಮಾಣವನ್ನು ವಿರೋಧಿಸಿ ಇಂದು ಸಾಹಿತಿಗಳು ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟ, ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನಾ ಧರಣಿ ನಡೆಸಿ ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಅರ್ಪಿಸಿತು.
ರಾಷ್ಟ್ರಕವಿ ಕುವೆಂಪುರವರು ಕರ್ನಾಟಕದ ಜನರ ಪ್ರಜ್ಞೆಯ ಭಾಗವಾಗಿದ್ದಾರೆ.ಈ ಹಿನ್ನೆಲೆಯಲ್ಲಿ ರಾಜ್ಯದ ಜನತೆಯೂ ಅವರ ಸಾಹಿತ್ಯದೊಂದಿಗೆ,ಅವರು ಜನಿಸಿದ ಕುಪ್ಪಳ್ಳಿಯಲ್ಲಿನ ಮನೆಯನ್ನು ಅತ್ಯಂತ ಗೌರವದಿಂದ ಕಾಣುತ್ತಾರೆ.ಜೊತೆಗೆ ಸಾಹಿತ್ಯ ರಚನೆಗೆ ಪ್ರೇರಕವಾಗಿದ್ದ ಕವಿಶೈಲ ಮತ್ತು ಸುತ್ತಮುತ್ತಲಿನ ಪರಿಸರವನ್ನು ಗೌರವದಿಂದ ಕಾಣುತ್ತಾರೆ.
ಇಂತಹ ಮಹತ್ವದ ಸ್ಥಳದಲ್ಲಿ ಕುವೆಂಪುರವರ ಕೆಲ ದೂರದ ಸಂಬಂಧಿಗಳು, ಕುಪ್ಪಳ್ಳಿಯಲ್ಲಿನ ಮನೆಯ ಮುಂಭಾಗ ಹೊಟೇಲ್ನಂತಹ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ಸಾಹಿತ್ಯಾಸಕ್ತರು,ಪ್ರಗತಿಪರರಲ್ಲಿ ದಿಗ್ಭ್ರಮೆಯ ನ್ನುಂಟು ಮಾಡಿದೆ ಎಂದು ಪ್ರತಿಭಟನಕಾರರು ತಿಳಿಸಿದ್ದಾರೆ.
ಕುಪ್ಪಳ್ಳಿ ವ್ಯಾಪ್ತಿಯಲ್ಲಿ ಹೊಟೇಲ್ ಸೇರಿದಂತೆ ಯಾವುದೇ ರೀತಿಯ ವಾಣಿಜ್ಯಕ್ಕೆ ಸಂಬಂಧಿತ ಕಟ್ಟಡ ನಿರ್ಮಾಣಕ್ಕೆ ಅವಕಾಶ ನಿರಾಕರಿಸಿ ಸ್ಥಳೀಯ ದೇವಂಗಿ ಗ್ರಾಮ ಪಂಚಾಯತ್ ಆರು ತಿಂಗಳ ಹಿಂದೆಯೇ ನಿರ್ಣಯವನ್ನು ಅಂಗೀಕರಿಸಿದೆ. ಈಗಾಗಲೇ ಸಾಹಿತ್ಯ ಪ್ರೇಮಿಗಳು ಕೂಡ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ.ಆದರೆ ಇದೆಲ್ಲವನ್ನು ಧಿಕ್ಕರಿಸಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಿರುವುದು ಖಂಡನಾರ್ಹವಾದುದಾಗಿದೆ ಎಂದು ಪ್ರತಿಭಟನ ಕಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕವಿಮನೆಯ ಪರಿಸರವನ್ನು ವಿಕೃತಗೊಳಿಸುವ ಪ್ರಯತ್ನವನ್ನು ರಾಜಾರೋಷವಾಗಿ ನಡೆಸಲಾಗು ತ್ತಿದೆ.ಆದರೆ ಇದರ ವಿರುದ್ಧ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ಯಾವುದೇ ಕ್ರಮ ಕೈಗೊಳ್ಳದೆ ವೌನವಹಿಸಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಪ್ರತಿಭಟನಕಾರರು ದೂರಿದ್ದಾರೆ. ಕುಪ್ಪಳ್ಳಿ ಕುವೆಂಪು ಮನೆಯ ಸುತ್ತ ಗಡಿ ಗುರುತು ಸರ್ವೇ ಕಾರ್ಯ ಇಲ್ಲಿಯವರೆಗೂ ನಡೆದಿಲ್ಲ.ಇದನ್ನೇ ನೆಪವಾಗಿಟ್ಟುಕೊಂಡು,ಕೆಲ ಖಾಸಗಿ ವ್ಯಕ್ತಿಗಳು ಇಂತಹ ದುರುದ್ದೇಶಿತ ಪ್ರಯತ್ನಗಳಿಗೆ ಮುಂದಾಗುತ್ತಿದ್ದಾರೆ.
ಕೂಡಲೇ ಜಿಲ್ಲಾಡಳಿತ ಸರ್ವೇ ನಡೆಸಿ,ಗಡಿ ಗುರುತು ಮಾಡಲು ಕ್ರಮಕೈಗೊಳ್ಳಬೇಕು.ಗ್ರಾಮ ಠಾಣಾವನ್ನು ಅಳತೆ ಮಾಡಿ ಈ ಜಾಗವನ್ನು ಕುಪ್ಪಳ್ಳಿಯ ಕುವೆಂಪು ಪ್ರತಿಷ್ಠಾನದ ಸುಪರ್ದಿಗೆ ಬಿಟ್ಟು ಕೊಡಬೇಕು ಎಂದು ಒಕ್ಕೂಟ ಆಗ್ರಹಿಸಿದೆ.ಪ್ರತಿಭಟನೆಯಲ್ಲಿ ಲೇಖಕರಾದ ಸರ್ಜಾಶಂಕರ ಹರಳೀಮಠ,ವಿವೇಕ ಸಂಸ್ಥೆಯ ಆರ್.ಕೆ.ಕುಮಾರ್,ಕವಿ ಸತ್ಯನಾರಾಯಣ ಅಣತಿ,ಹೋರಾಟಗಾರ ಕಲ್ಲೂರು ಮೇಘರಾಜ್,ಪರಿಸರವಾದಿ ಅಶೋಕ್ ಯಾದವ್,ಶೇಖರ್ ಗೌಳೇರ್, ಬಹುಮತ ಸಂಘಟನೆಯ ಹಾಲಪ್ಪ,ಹೋರಾಟಗಾರ ಲಕ್ಷ್ಮೀನಾರಾಯಣ,ರಂಗಕರ್ಮಿ ಕಿರಣ್ ಮಾರಶೆಟ್ಟಿಹಳ್ಳಿ ಸೇರಿದಂತೆ ಮೊದಲಾದವರಿದ್ದರು.
ವರದಿಯ ವಿವರಗಳು |
 |
ವರದಿಗಾರರು : ಕರ್ನಾಟಕ ವರದಿಗಾರರು
ಪ್ರಕಟಿಸಿದ ದಿನಾಂಕ : 2012-09-05
|
|
|