ಅಡುಗೆ ಮನೆ, ಶೌಚಾಲಯವುಳ್ಳ ಕೆಎಸ್ಸಾರ್ಟಿಸಿ ಬಸ್ಗೆ ಸಚಿವ ಆರ್.ಅಶೋಕ್ ಚಾಲನೆ |
ಪ್ರಕಟಿಸಿದ ದಿನಾಂಕ : 2012-09-05
ಬೆಂಗಳೂರು,ಸೆ.4:ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ 41ಆಸನಗಳುಳ್ಳ ಅತೀ ಉದ್ದದ(14.5ಮಿ.)ಅಂತಾರಾಜ್ಯ ‘ವೊಲ್ವೋ ಮಲ್ಟಿ ಆಕ್ಸೆಲ್’(ರಾಸಾಯನಿಕ ಶೌಚಾಲಯ ಮತ್ತು ಅಡುಗೆ ಮನೆ ಸೌಲಭ್ಯವುಳ್ಳ )ಬಸ್ಸಿನ ಪ್ರಾಯೋಗಿಕ ಚಾಲನೆಯನ್ನು ಕೆಎಸ್ಸಾರ್ಟಿಸಿ ಮಂಗಳವಾರ ಮಾಡಿದೆ.

ನಗರದ ಶಾಂತಿನಗರದಲ್ಲಿರುವ ಕೆಎಸ್ಸಾರ್ಟಿಸಿ ಕಚೇರಿಯಲ್ಲಿಂದು ಉಪ ಮುಖ್ಯಮಂತ್ರಿ,ಸಾರಿಗೆ ಸಚಿವ ಆರ್.ಅಶೋಕ್ ಈ ವಿನೂತನ ಬಸ್ಗೆ ಪ್ರಾಯೋಗಿಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು,ಮುಂದಿನ ಮೂರು ತಿಂಗಳವರಗೆ ಬೆಂಗಳೂರಿನಿಂದ ಮೈಸೂರು,ಚೆನ್ನೈ,ಹೈದರಾಬಾದ್ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರಾಯೋಗಿಕವಾಗಿ ಓಡಿಸಲಾಗುವುದು.ಇದಕ್ಕೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಬಂದರೆ ಮುಂದೆ ಇದನ್ನು ಇತರ ಕಡೆಗಳಿಗೂ ವಿಸ್ತರಿಸಲಾಗುವುದು ಎಂದರು.

ಈಗಾಗಲೇ ರಾಸಾಯನಿಕ ಶೌಚಾಲಯ ಮತ್ತು ಅಡುಗೆಮನೆ ಹೊಂದಿರುವ ಬಸ್ಗಳಾದ ಐರಾವತ ಬ್ಲಿಸ್ ಹಾಗೂ ಶೌಚಾಲಯ ಮಾತ್ರ ಹೊಂದಿರುವ ಐರಾವತ ಸುಪೀರಿಯ ಬಸ್ಗಳಿಗೆ ಪ್ರಯಾಣಿಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.ಈ ಹಿನ್ನೆಲೆ ಯಲ್ಲಿ ಈ ಬಸ್ಗಳನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಕಡೆಗಳಿಗೆ ಓಡಿಸಲಾಗುವುದು ಎಂದರು.

ಬಿಎಂಟಿಸಿಯಿಂದ ಅತೀ ಉದ್ದದ ವೊಲ್ವೋ ನಗರ ಸಾರಿಗೆ ಬಸ್ಸನ್ನು ಪ್ರಾಯೋಗಿಕವಾಗಿ ಚಾಲನೆಗೊಳಿಸಲಾಗಿದೆ.ಸಾರಿಗೆ ಸಂಸ್ಥೆಯಿಂದ ಕಳೆದ ನಾಲ್ಕು ವರ್ಷಗಳಲ್ಲಿ ಎರಡನೆ ಬಾರಿಗೆ ವಿದ್ಯಾರ್ಥಿ ಬಸ್ ಪಾಸುಗಳ ಮೇಲೆ ಭಾರಿ ರಿಯಾಯಿತಿ ನೀಡಲಾಗಿದೆ ಎಂದು ಅಶೋಕ್ ಹೇಳಿದರು.
ಇಂದು ವೊಲ್ವೋ ಮಲ್ಟಿ ಆಕ್ಸೆಲ್ ಬಸ್ಸಿಗೆ ಪ್ರಾಯೋಗಿಕ ಚಾಲನೆ ನೀಡಲಾಗಿದ್ದು, ಇದರಲ್ಲಿ ವಿಶೇಷವಾಗಿ ವಾಷ್ ಬೇಸಿನ್,ಕಾಫಿ ಮೇಕರ್,ರೆಫ್ರಿಜರೇಟರ್ ಸೌಲಭ್ಯರುತ್ತದೆ ಎಂದ ಸಚಿವರು,
ಈ ಬಸ್ಸನ್ನು ಪ್ರಾಯೋಗಿಕವಾಗಿ ಬೆಂಗಳೂರು-ಮೈಸೂರು ಮಾರ್ಗದಲ್ಲಿ 300ರೂ. ದರದಲ್ಲಿ ಕಾರ್ಯಾ ಚರಣೆ ಗೊಳಿಸಲಾಗುತ್ತದೆ.ತದ ನಂತರ ಈ ಬಸ್ಸನ್ನು ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ಕಾರ್ಯಾ ಚರಣೆಗೊಳಿಸಲಾಗುವುದು ಎಂದರು.
ಪ್ರತಿ ಆಸನಗಳ ಹಿಂಭಾಗದಲ್ಲಿ ಟಿವಿಯನ್ನು ಹಾಗೂ ಪ್ರತಿ ಆಸನಗಳ ಸಾಲಿನಲ್ಲಿ ಮೊಬೈಲ್ ಚಾರ್ಜರ್ನ್ನು ಅಳವಡಿಸಲಾಗಿದೆ. ಜೊತೆಗೆ ಈ ವಾಹನದಲ್ಲಿ ಮತ್ತೊಂದು ವಿಶೇಷತೆ ಏನೆಂದರೆ,ವಿಮಾ ನದಲ್ಲಿರುವಂತೆ ಹ್ಯಾಟ್ ಟ್ರ್ಯಾಕ್ ಸೌಲಭ್ಯವಿರುತ್ತದೆ ಎಂದರು.
ಸಮಾರಂಭದಲ್ಲಿ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ.ರವಿಕುಮಾರ್, ಕೆಎಸ್ಸಾರ್ಟಿಸಿಯ ವ್ಯವಸ್ಥಾಪಕ ನಿರ್ದೇಶಕ ಎನ್.ಮಂಜುನಾಥ ಪ್ರಸಾದ್, ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕ ಕೆ.ಆರ್.ಶ್ರೀನಿವಾಸ್,ವೊಲ್ವೋ ಬಸ್ ಕಾರ್ಪೋರೇಷನ್ ಹಿರಿಯ ಉಪಾಧ್ಯಕ್ಷ ಆಕಾಶ್ ಪಸ್ಸೆ ಸೇರಿದಂತೆ ಇತರರು ಹಾಜರಿದ್ದರು.
ವರದಿಯ ವಿವರಗಳು |
 |
ಕೃಪೆ : varthabharthi ವರದಿಗಾರರು : ಕರ್ನಾಟಕ ವರದಿಗಾರರು
ಪ್ರಕಟಿಸಿದ ದಿನಾಂಕ : 2012-09-05
|
|
|