ಕೇಂದ್ರದ ವಿರುದ್ಧ ಕಾವೇರಿದ ಸುಪ್ರೀಂ: ಶೀಘ್ರ ಪ್ರಾಧಿಕಾರದ ಸಭೆ ಕರೆಯಲು ತಾಕೀತು(Updated) |
ಪ್ರಕಟಿಸಿದ ದಿನಾಂಕ : 2012-09-04
ನವದೆಹಲಿ: ಕಾವೇರಿ ನದಿ ಪ್ರಾಧಿಕಾರದ ಸಭೆ ಕರೆಯುವಲ್ಲಿ ವಿಫಲವಾಗಿರುವ ಪ್ರಧಾನ ಮಂತ್ರಿ ಕಾರ್ಯಾಲಯದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ಸಭೆ ಕರೆಯಲು ದಿನಾಂಕ ನಿಗದಿ ಮಾಡುವಂತೆ ಆದೇಶ ನೀಡಿದೆ. ಕಾವೇರಿ ನದಿಯಿಂದ ೨೫.೩೭೩ ಟಿಎಂಸಿ ನೀರು ಹರಿಸಬೇಕು ಮತ್ತು ಕಾವೇರಿ ನದಿ ಪ್ರಾಧಿಕಾರದ ಸಭೆ ಕರೆಯಬೇಕು ಎಂದು ತಮಿಳುನಾಡು ಸಲ್ಲಿಸಿದ್ದ ಮಧ್ಯಂತರ ಅರ್ಜಿ ಕುರಿತು ಕರ್ನಾಟಕ ಸಲ್ಲಿಸಿದ್ದ ಅಫಿಡವಿಟ್ಟನ್ನು ಗಮನಿಸಿಲ್ಲದಿರುವ ಪ್ರಧಾನ ಮಂತ್ರಿ ಕಾರ್ಯಾಲಯದ ದಿವ್ಯ ನಿರ್ಲಕ್ಷ್ಯದ ಬಗ್ಗೆಯೂ ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ ವಿಚಾರಣೆಯನ್ನು ಸೆ.೭ಕ್ಕೆ ಮುಂದೂಡಿತು. ನ್ಯಾ. ಡಿ.ಕೆ. ಜೈನ್ ಮತ್ತು ನ್ಯಾ. ಮದನ್ ಬಿ. ಲೋಕೂರ್ ಅವರನ್ನೊಳಗೊಂಡ ಪೀಠವು ಕೇಂದ್ರ ಸರ್ಕಾರದ ಹೇಳಿಕೆ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿತು.
ತಮಿಳುನಾಡು, ಕರ್ನಾಟಕ, ಕೇರಳ ಮತ್ತು ಪಾಂಡಿಚೇರಿ ಮುಖ್ಯಮಂತ್ರಿಗಳು ಮತ್ತು ಪ್ರಾಧಿಕಾರದ ಸಮಿತಿ ಸದಸ್ಯರಿಗೆ ಅನುಕೂಲವಾದ ದಿನಾಂಕಕ್ಕೆ ಕಾಯಲಾಗುತ್ತಿದ್ದು ಪ್ರಾಧಿಕಾರದ ಸಭೆಗೆ ಇನ್ನೂ ದಿನಾಂಕ ನಿಗದಿ ಮಾಡಿಲ್ಲ ಎಂದು ಪ್ರಧಾನ ಮಂತ್ರಿ ಕಾರ್ಯಾಲಯದ ಅಧಿಕಾರಿಗಳು ತಿಳಿಸಿದ್ದಕ್ಕೂ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಪೀಠವು, ಸಭೆ ದಿನಾಂಕ ನಿಗದಿ ಮಾಡಲೂ ನೀವು ರಾಜ್ಯಗಳ ಅನುಮತಿ ಪಡೆಯಬೇಕೆ? ಪ್ರಾಧಿಕಾರದ ಅಧ್ಯಕ್ಷರಾಗಿರುವ ಪ್ರಧಾನಿಗಳು ತಮಗೆ ಅನುಕೂಲವಾದ ದಿನ ಸಭೆ ನಡೆಸಬೇಕೋ ಅಥವಾ ಉಳಿದವರಿಗೆ ಅನುಕೂಲವಾಗುವ ದಿನದವರೆಗೆ ಕಾಯಬೇಕೋ ಎಂದು ಪ್ರಶ್ನಿಸಿತು.
ನಮ್ಮ ಬಿಪಿ ಏರುತ್ತದೆ!: ಇದು ಆಘಾತಕಾರಿ ವಿಷಯ. ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು ಕರ್ನಾಟಕ ಸಲ್ಲಿಸಿರುವ ಅಫಿಡವಿಟ್ಟನ್ನು ಗಮನಿಸಿಯೇ ಇಲ್ಲ. ಕರ್ನಾಟಕ ಅಫಿಡವಿಟ್ನಲ್ಲಿ ಗಂಭೀರ ಪದಗಳನ್ನು ಬಳಸಿತ್ತು. ಹಿಂದಿನ ವಿಚಾರಣೆಯ ಹಂತದಲ್ಲೇ ನಾವು ಈ ಬಗ್ಗೆ ಕಳಕಳಿ ವ್ಯಕ್ತಪಡಿಸಿದ್ದೆವು. ನಿಮ್ಮ ಧೋರಣೆಯಿಂದ ನಮ್ಮ ರಕ್ತದೊತ್ತಡ ಏರುತ್ತಿದೆಯಷ್ಟೆ. ಪ್ರಧಾನಿ ಕಾರ್ಯಾಲಯದ ಹಿರಿಯ ಅಧಿಕಾರಿಗಳನ್ನು ಕರೆಯಿರಿ, ಪ್ರಧಾನಿ ಕಾರ್ಯಾಲಯಕ್ಕೆ ಈ ಬೆಳವಣಿಗೆ ಗೊತ್ತಿದೆಯೋ ಇಲ್ಲವೋ, ಪ್ರಧಾನಮಂತ್ರಿ ಕಾರ್ಯಾಲಯಗಳಂಥ ಮಟ್ಟದಲ್ಲೇ ಇಂಥ ಲೋಪಗಳಾದರೆ ನಾವೇನೂ ಹೇಳಲಾಗದಂಥ ಪರಿಸ್ಥಿತಿ ತಲೆದೋರುತ್ತದೆ ಎಂದೂ ನ್ಯಾ.ಡಿ.ಕೆ.ಜೈನ್ ಅತೃಪ್ತಿ ವ್ಯಕ್ತಪಡಿಸಿದರು. ಕಾವೇರಿ ನದಿ ನೀರು ವಿವಾದ ಪರಿಹರಿಸಿಕೊಳ್ಳಲು ಪ್ರಾಧಿಕಾರದ ಸಭೆ ಕರೆಯುವಂತೆ ನ್ಯಾಯಪೀಠವು ಕೇಂದ್ರಕ್ಕೆ ಸೂಚಿಸಿತ್ತು.
ತಮಿಳುನಾಡಿನ ಹಾಲಿ ಬೆಳೆಗಳನ್ನು ಉಳಿಸಿಕೊಳ್ಳಲು ಕಾವೇರಿ ನದಿಗೆ ೨೫.೩೭೩ ಟಿಎಂಸಿ ನೀರು ಹರಿಸಬೇಕು.
ಪ್ರಧಾನಿ ಅಧ್ಯಕ್ಷರಾಗಿರುವ ಕಾವೇರಿ ನದಿ ಪ್ರಾಧಿಕಾರದ ಸಭೆ ಕರೆಯಬೇಕು ಎಂಬ ತಮಿಳುನಾಡು ಕೋರಿಕೆ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಪ್ರಾಧಿಕಾರದ ಸಭೆ ಕರೆಯುವುದಾಗಿ ಆಗಸ್ಟ್ ೩೦ರಂದು ಕೇಂದ್ರವು ಸುಪ್ರೀಂ ಕೋರ್ಟ್ಗೆ ತಿಳಿಸಿತ್ತು. ಉದ್ದೇಶಿತ ಸಭೆಯಲ್ಲಿ ಪಾಲ್ಗೊಳ್ಳಲು ದಿನಾಂಕ ನಿಗದಿ ಮಾಡಲು ಅನುಮತಿ ಕೋರಿ ನಾಲ್ಕು ರಾಜ್ಯಗಳಿಗೆ ಪತ್ರ ಬರೆದಿರುವುದಾಗಿ ಕೇಂದ್ರ ತನ್ನ ಅಫಿಡವಿಟ್ನಲ್ಲಿ ತಿಳಿಸಿತ್ತು. ಎಲ್ಲ ರಾಜ್ಯಗಳ ಒಪ್ಪಿಗೆ ದೊರೆತ ನಂತರ ಸಭೆ ದಿನಾಂಕ ನಿಗದಿ ಮಾಡುವುದಾಗಿಯೂ ತಿಳಿಸಿತ್ತು. ಆಗಸ್ಟ್ ೧೩ರಂದು ಮಧ್ಯಂತರ ಅರ್ಜಿ ಸಲ್ಲಿಸಿದ್ದ ತಮಿಳುನಾಡು ಸಂಕಷ್ಟ ಕಾಲದ ಸೂತ್ರದನ್ವಯ ನದಿ ನೀರು ಹಂಚಿಕೆ ಮಾಡಿಕೊಳ್ಳಲು ತಕ್ಷಣವೇ ಕಾವೇರಿ ನದಿ ಪ್ರಾಧಿಕಾರದ ಸಭೆ ಕರೆಯುವಂತೆ ನಿರ್ದೇಶನ ನೀಡುವಂತೆ ಮನವಿ ಮಾಡಿತ್ತು. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಕೂಡಾ ಪ್ರಧಾನಿಗೆ ಪತ್ರ ಬರೆದು ಕಾವೇರಿ ನದಿ ಪ್ರಾಧಿಕಾರದ ಸಭೆ ಕರೆಯುವಂತೆ ಒತ್ತಾಯಿಸಿದ್ದರು.
ತಮಿಳುನಾಡಿನ ಆರೋಪ ಏನು?
೨೦೧೨-೨೦೧೩ರ ಜಲವರ್ಷದಲ್ಲಿ ಕರ್ನಾಟಕದ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ೨೧.೯ ಟಿಎಂಸಿ ನೀರು ಜುಲೈ ೨೦ರವರೆಗೆ ವಿವಿಧ ಜಲಾಶಯಗಳಲ್ಲಿ ಸಂಗ್ರಹವಾಗಿದೆ. ಈ ನೀರನ್ನು ಕರ್ನಾಟಕ ತಮಿಳುನಾಡಿನೊಂದಿಗೆ ಹಂಚಿಕೊಂಡಿಲ್ಲ. ಬದಲಿಗೆ ನೀರನ್ನು ಸಂಗ್ರಹಿಸಿಟ್ಟುಕೊಂಡು ಕೃಷ್ಣರಾಜ ಸಾಗರ ನಾಲೆಗಳ ಮೂಲಕ ನೀರಾವರಿಗೆ ಬಳಸಿಕೊಂಡಿದೆ. ಇದರ ಪರಿಣಾಮ ಕಾವೇರಿ ನ್ಯಾಯಾಧಿಕರಣದ ಮಧ್ಯಂತರ ತೀರ್ಪಿನಂತೆ ತಮಿಳುನಾಡಿಗೆ ದಕ್ಕಬೇಕಾದ ಪಾಲು ದಕ್ಕಿಲ್ಲ ಎಂದು ತಮಿಳುನಾಡು ತಿಳಿಸಿತ್ತು. ಇದಕ್ಕೆ ಪ್ರತಿಯಾಗಿ ಅಫಿಡವಿಟ್ ಸಲ್ಲಿಸಿದ್ದ ಕರ್ನಾಟಕವು ಮಳೆ ಕೊರತೆಯಿಂದಾಗಿ ಕಾವೇರಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿದಿಲ್ಲ. ಹಿಂದಿನ ಸಾಲಿನಲ್ಲಿ ಕರ್ನಾಟಕ ಹೆಚ್ಚುವರಿ ೪೭ ಟಿಎಂಸಿ ನೀರು ಹರಿಸಿತ್ತು. ತಮಿಳುನಾಡು ಅದನ್ನು ಸಂಗ್ರಹಿಸಿಟ್ಟುಕೊಂಡು ಸಮಪರ್ಕಕವಾಗಿ ಬಳಸಿಕೊಳ್ಳಬೇಕಿತ್ತು. ಆದರೆ, ಸಮರ್ಪಕ ಬಳಕೆ ಮಾಡಿಕೊಳ್ಳದೆ ನೀರಿಲ್ಲದ ಸಮಯದಲ್ಲಿ ತಕರಾರು ತೆಗೆಯುತ್ತಿದೆ. ಜಲಾಶಯಗಳಲ್ಲಿ ನೀರೇ ಇಲ್ಲದಿರುವುದರಿಂದ ನೀರು ಹರಿಸಲು ಸಾಧ್ಯವಿಲ್ಲ. ಕಾವೇರಿ ಪ್ರಾಧಿಕಾರದ ಸಭೆ ನಡೆಯಲಿ, ನಾವು ನಮ್ಮ ಸಂಕಷ್ಟಗಳನ್ನು ಹೇಳಿಕೊಳ್ಳುತ್ತೇವೆ ಎಂದು ತಿಳಿಸಿತ್ತು.
ವರದಿಯ ವಿವರಗಳು |
 |
ಕೃಪೆ : -ಕನ್ನಡಪ್ರಭ ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-09-04
|
|
|