ಇದು 'ಡ್ರಾಮಾ': ಬರ್ಮಾ ಬಜಾರಿನಲ್ಲೇ ಭಟ್ರ ಪ್ರೀತಿ ... |
ಪ್ರಕಟಿಸಿದ ದಿನಾಂಕ : 2012-09-02
ಪ್ರೀತಿ ಮಾಡಲು ಹೊತ್ತು-ಗೊತ್ತು, ಜಾಗದ ಹಂಗೇಕೆ? ಹೀಗಂತ ಭಿನ್ನವಾಗಿ ಯೋಚಿಸಿ ಕಾರ್ಯಗತಗೊಳಿಸಲು ಹೊರಟಿರುವವರು ಯೋಗರಾಜ್ ಭಟ್. ಕೃತಕ ಸೆಟ್ಗಳು, ಪಾರ್ಕ್, ವಿದೇಶಿ ತಾಣಗಳು, ಯಾವ್ಯಾವುದೋ ಬೆಟ್ಟ-ಗುಡ್ಡಗಳನ್ನು ಅಳೆದು ಸುಸ್ತಾಗಿರುವ ಅವರು ಈ ಬಾರಿ ಆರಿಸಿಕೊಂಡಿರುವುದು ಬರ್ಮಾ ಬಜಾರ್!
ಬಜಾರ್ ಅಂದ ಮೇಲೆ ಅಲ್ಲಿ ಜನಜಾತ್ರೆಯೇ ಇರುತ್ತದೆ. ಅದು ಬೇಡವೆಂದೇ ಭಟ್ರು ರಾತ್ರಿ ಶೂಟಿಂಗ್ ಇಟ್ಟುಕೊಂಡಿದ್ದಾರೆ. ಗ್ರೀನ್ ಲೈಟ್ ಎಫೆಕ್ಟ್ನಲ್ಲಿ ಮಾರ್ಕೆಟ್ನ ಅಂಗಡಿಗಳ ಮುಚ್ಚಿದ ಬಾಗಿಲುಗಳ ಎದುರುಗಡೆ ಯಶ್-ರಾಧಿಕಾ ಪಂಡಿತ್ ರೊಮ್ಯಾನ್ಸ್. ಹಾಗೆ ಕುಣಿಯಿರಿ, ಹೀಗೆ ಕುಣಿಯಿರಿ ಎಂದು ಹರ್ಷ ಹೇಳುತ್ತಿದ್ದರೆ, ’ಮುಂಗಾರು ಮಳೆ’ ಕೃಷ್ಣ ರಾತ್ರಿ ರಂಗನ್ನು ಕ್ಯಾಮರಾ ತುಂಬಿಸುತ್ತಿದ್ದರು.
ಹೆಚ್ಚು ಕಡಿಮೆ ನಾಲ್ಕು ದಿನಗಳ ಶೂಟಿಂಗು. ಯಶ್-ರಾಧಿಕಾ ಹೊರತುಪಡಿಸಿ ಹತ್ತಾರು ಡ್ಯಾನ್ಸರುಗಳು ಬರ್ಮಾ ಬಜಾರಿನ ಸಂದುಗೊಂದಿಗಳಲ್ಲಿದ್ದರು. ಕತ್ಲಲ್ಲಿ ಕರಡಿ ಎಂಬಂತೆ ಭಟ್ರು ನಿರ್ದೇಶನದ ನೀಡುತ್ತಿದ್ದರು.
ಜಯಣ್ಣ ಮತ್ತು ಭೋಗೇಂದ್ರ ನಿರ್ಮಾಣದ ಈ ಚಿತ್ರದಲ್ಲಿ ನೀನಾಸಂ ಸತೀಶ್-ಸಿಂಧು ಲೋಕನಾಥ್ ಜೋಡಿಯೂ ಇದೆ. ಹರಿಕೃಷ್ಣ ಸಂಗೀತ ನೀಡುತ್ತಿದ್ದಾರೆ. ಸದ್ಯ ನಡೆಯುತ್ತಿರುವ ಹಾಡಿನ ಚಿತ್ರೀಕರಣ ಮುಗಿದರೆ ನಂತರ ಏನಿದ್ದರೂ ಪೋಸ್ಟ್ ಪ್ರೊಡಕ್ಷನ್ ಕೆಲಸ. ವರ್ಷಾಂತ್ಯದೊಳಗೆ ಬಿಡುಗಡೆ ಮಾಡುವ ಯೋಚನೆ ನಿರ್ಮಾಪಕರದ್ದು.
ಈ ನಡುವೆ ರಾಧಿಕಾ ಪಂಡಿತ್ ಮತ್ತು ಯಶ್ ಹಾಡೊಂದಕ್ಕೆ ದನಿ ಕೊಟ್ಟಿದ್ದಾರಂತೆ. ಆದರೆ ಅದೇನೂ ದೊಡ್ಡ ಹಾಡಲ್ಲ, ಬಿಟ್ಸ್. ಹೆಚ್ಚು ಕಡಿಮೆ ಶೂಟಿಂಗ್ ಮುಗಿಸಿರುವವ ’ಡ್ರಾಮಾ’ದ ಡಬ್ಬಿಂಗ್ ಇನ್ನೊಂದು ಕಡೆ ನಡೆಯುತ್ತಿದೆ. ಡಬ್ಬಿಂಗ್ ಮಾಡುವಾಗ ಚಿತ್ರ ನೋಡಿರುವ ರಾಧಿಕಾ ಪಂಡಿತ್ಗೆ ಸನ್ನಿವೇಶಗಳು ತುಂಬಾ ಇಷ್ಟವಾಗಿವೆ. ಭಟ್ಟರು ಹೆಣೆದಿರುವ ಕಾಮಿಡಿಯಂತೂ ತುಂಬಾ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಂಡ್ಯ ಭಾಷೆಯ ಸೊಗಡನ್ನು ’ಡ್ರಾಮಾ’ದಲ್ಲಿ ಅಳವಡಿಸಿರುವ ಭಟ್ರಂತೂ ತುಂಬಾ ವಿಶ್ವಾಸದಿಂದಿದ್ದಾರೆ. ಇದೇ ತಿಂಗಳು ಆಡಿಯೋ ಬಿಡುಗಡೆ ಮಾಡಿ, ಮುಂದಿನ ತಿಂಗಳೇ ಚಿತ್ರವನ್ನು ತೆರೆಗೆ ತರಬೇಕೆನ್ನುವುದು ಅವರ ಲೆಕ್ಕಾಚಾರ. ಆದರೆ ಇದುವರೆಗೆ ಕುಂಟುತ್ತಾ ಸಾಗಿರುವ ಚಿತ್ರಕ್ಕೆ ಇನ್ನೂ ತುಂಬಾ ಕೆಲಸ ಬಾಕಿ ಇದೆಯಲ್ಲ? ಇದೇ ಭಟ್ಟರಿಗೆ ಚಿಂತೆ.
ವರದಿಯ ವಿವರಗಳು |
 |
ಕೃಪೆ : ವೆಬ್ ದುನಿಯ ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-09-02
|
|
|