ಕ್ರಿಕೆಟ್: ಅಚ್ಚರಿತಂದ ಆಂಡ್ರ್ಯೂ ಸ್ಟ್ರಾಸ್ ವಿದಾಯ .... |
ಪ್ರಕಟಿಸಿದ ದಿನಾಂಕ : 2012-08-30
ಲಂಡನ್ (ಪಿಟಿಐ): ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಆ್ಯಂಡ್ರ್ಯೂ ಸ್ಟ್ರಾಸ್ ಕ್ರಿಕೆಟ್ನ ಎಲ್ಲ ಪ್ರಕಾರಗಳಿಗೆ ನಿವೃತ್ತಿ ಪ್ರಕಟಿಸಿದ್ದಾರೆ. ಅವರ ಅನಿರೀಕ್ಷಿತ ನಿರ್ಧಾರ ಅಭಿಮಾನಿಗಳು ಒಳಗೊಂಡಂತೆ ಕ್ರಿಕೆಟ್ ವಲಯದಲ್ಲಿ ಅಚ್ಚರಿ ಉಂಟುಮಾಡಿದೆ.
`ಸಾಕಷ್ಟು ಚಿಂತನೆ ನಡೆಸಿದ ಬಳಿಕ ಈ ನಿರ್ಧಾರ ಕೈಗೊಂಡಿದ್ದೇನೆ. ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವ ಒಳಗೊಂಡಂತೆ ಎಲ್ಲ ಪ್ರಕಾರಗಳ ಕ್ರಿಕೆಟ್ನಿಂದ ನಿವೃತ್ತಿಯಾಗುತ್ತಿದ್ದೇನೆ` ಎಂದು ಸ್ಟ್ರಾಸ್ ಬುಧವಾರ ತಿಳಿಸಿದರು. ಇದರಿಂದ 10 ವರ್ಷಗಳ ಅವರ ಅಂತರರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ತೆರೆಬಿದ್ದಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ 0-2 ರಲ್ಲಿ ಸೋಲು ಅನುಭವಿಸಿತ್ತು. ಇದರಿಂದ ಸ್ಟ್ರಾಸ್ ಟೀಕೆಗೆ ಒಳಗಾಗಿದ್ದರು.
2003 ರಲ್ಲಿ ಇಂಗ್ಲೆಂಡ್ ಏಕದಿನ ತಂಡದಲ್ಲಿ ಪದಾರ್ಪಣೆ ಮಾಡಿದ್ದ ಸ್ಟ್ರಾಸ್ ಒಂದು ವರ್ಷದ ಬಳಿಕ ಟೆಸ್ಟ್ ತಂಡದಲ್ಲೂ ಅವಕಾಶ ಪಡೆದಿದ್ದರು. 100 ಟೆಸ್ಟ್ ಪಂದ್ಯಗಳನ್ನಾಡಿರುವ ಅವರು 21 ಶತಕಗಳ ನೆರವಿನಿಂದ 7037 ರನ್ ಪೇರಿಸಿದ್ದಾರೆ.
124 ಏಕದಿನ ಪಂದ್ಯಗಳಲ್ಲಿ ಒಟ್ಟು 4202 ರನ್ಗಳನ್ನು ಪೇರಿಸಿದ್ದಾರೆ. ಇದರಲ್ಲಿ ಆರು ಶತಕಗಳು ಒಳಗೊಂಡಿವೆ. ಅವರು 50 ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ್ದಾರೆ. `ಇದು ತುಂಬಾ ಕಠಿಣವಾದ ನಿರ್ಧಾರ. ಆದರೆ ಇಂಗ್ಲೆಂಡ್ ತಂಡ ಹಾಗೂ ನನ್ನ ವೈಯಕ್ತಿಕ ಹಿತಾಸಕ್ತಿಕಾಪಾಡುವಲ್ಲಿ ಈ ನಿರ್ಧಾರ ಕೈಗೊಂಡಿದ್ದೇನೆ` ಎಂದು ಅವರು ತಿಳಿಸಿದರು
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2012-08-30
|
|
|