ಆದಿತ್ಯವಾರ, 26-01-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಹೆಗಡೆ 86, ನೆನಪು ನೂರಾರು: ಜಾತಿ-ಹಣ ಮುಖ ನೋಡದೆ, ರಾಜಕೀಯ ಮಾಡಿದ್ರು...

ರಾಮಕೃಷ್ಣ ಹೆಗಡೆ ರಾಜ್ಯ, ದೇಶ ಕಂಡ ಅಪರೂಪದ ರಾಜಕಾರಣಿ. ಇಂದು ಅವರು ನಮ್ಮೊಂದಿಗೆ ಇದ್ದಿದ್ದರೆ ೮೬ ವರ್ಷ ತುಂಬುತ್ತಿತ್ತು.ಸಚಿವರಾಗಿ,ಮುಖ್ಯಮಂತ್ರಿಯಾಗಿ,ಕೇಂದ್ರ ಸಚಿವರಾಗಿ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದವರು.ರಾಜಕಾರಣದಲ್ಲಿದ್ದಷ್ಟೂ ಕಾಲ ಅವರು ಮೌಲ್ಯಗಳನ್ನೇ ಎತ್ತಿ ಹಿಡಿದಿದ್ದವರು.ಪಕ್ಷಾತೀತವಾಗಿ ರಾಜಕಾರಣ ಮಾಡಿದವರು.

ಅವರ ಜನ್ಮದಿನ ಸಂದರ್ಭದಲ್ಲಿ ಮಾಜಿ ಪ್ರಧಾನಿ ದೇವೇಗೌಡ,ಪುತ್ರಿ ಮಮತಾ ನಿಚ್ಚಾನಿ ಸೇರಿದಂತೆ ವಿವಿಧ ಪಕ್ಷಗಳ ಗಣ್ಯರು,ಸಾಹಿತಿಗಳು ಸೇರಿದಂತೆ ಹಲವಾರು ಮಂದಿ ಹೆಗಡೆಯವರ ಜತೆಗಿನ ಒಡನಾಟ ನೆನಪಿಸಿಕೊಂಡಿದ್ದಾರೆ...

ಮಾಜಿ ಪ್ರಧಾನಿ ದೇವೇಗೌಡರ....ನೆನಪುಗಳು..

ನಮ್ಮಿಬ್ಬರ ನಡುವೆ ಇದ್ದದ್ದು ತಾತ್ವಿಕ ಭಿನ್ನಾಭಿಪ್ರಾಯ...

ಹೆಚ್.ಡಿ.ದೇವೇಗೌಡ,ಮಾಜಿ ಪ್ರಧಾನಿ ದಿವಂಗತ ಶ್ರೀ ರಾಮಕೃಷ್ಣ ಹೆಗಡೆಯವರ ೮೬ನೇ ಜನ್ಮದಿನದ ನೆನಪಲ್ಲಿ ನನ್ನ ಮತ್ತು ಅವರ ಒಡನಾಟದ ದಿನಗಳನ್ನು ಜ್ಞಾಪಿಸಿಕೊಳ್ಳ ಬಯಸುವೆನಾದರೂ ನಾನು ನನ್ನ ಆತ್ಮ ಚರಿತ್ರೆ ಬರೆಯುವುದರಲ್ಲಿ ಈಗಾಗಲೇ ತೊಡಗಿಸಿಕೊಂಡಿದ್ದು ಸದ್ಯದಲ್ಲಿಯೇ ಹೊರಬರುವುದಿದೆ.

ಆತ್ಮ ಚರಿತ್ರೆಯಲ್ಲಿ ಹೆಗಡೆಯವರು ಮತ್ತು ನನ್ನ ರಾಜಕೀಯ ಸಂಬಂಧ,ವೈಯಕ್ತಿಕ ಸ್ನೇಹ, ಅನುಭವಿಸಿದ ನೋವು- ನಲಿವು, ನನ್ನ ಮತ್ತು ಅವರ ಒಲವು -ನಿಲವು ಎಲ್ಲವೂ ಸಮಗ್ರವಾಗಿ ಬರಲಿದೆ.

ಮೊದಲಿಗೆ ಹೆಗಡೆಯವರು ವಯಸ್ಸಿನಲ್ಲಿ ನನಗಿಂತ ಹಿರಿಯರು.ಅಷ್ಟೇ ಏಕೆ ನಾನು ವಿಧಾನಸಭೆಗೆ ಕಾಲಿಡುವ ಮುನ್ನವೇ ಅವರು ಈ ರಾಜ್ಯದ ಸಚಿವರಾಗಿದ್ದರು.ಶ್ರೀ ನಿಜಲಿಂಗಪ್ಪನವರ ಅತ್ಯಂತ ವಿಶ್ವಾಸಾರ್ಹ ವ್ಯಕ್ತಿಯಾಗಿದ್ದವರು.

ನಾನಾದರೂ ೧೯೬೨ರಲ್ಲಿ ನಿಜಲಿಂಗಪ್ಪನವರ ಅವಕೃಪೆಗೆ ಪಾತ್ರನಾಗಿ,ಕಾಂಗ್ರೆಸ್ ಟಿಕೆಟ್ ವಂಚಿತನಾಗಿ,ಬಂಡಾಯ ಕಾಂಗ್ರೆಸ್ಸಿಗನಾಗಿ ಸ್ಪರ್ಧಿಸಿ ೧೯೬೨ರಲ್ಲಿ ವಿಧಾನಸಭೆಗೆ ಆರಿಸಿ ಬಂದಿದ್ದವನು. ಕಾಂಗ್ರೆಸ್ಸಿನಿಂದ ಅದೇ ಕಾರಣಕ್ಕೆ ಉಚ್ಚಾಟನೆಗೊಂಡವನೂ ಆಗಿದ್ದವನು.ಹಾಗಾಗಿ ಹೆಗಡೆಯವರು ಆ ವೇಳೆಗಾಗಲೇ ರಾಜಕೀಯವಾಗಿ ಬೆಳೆದು ನಿಂತವರಾಗಿದ್ದರು.

ನಾನಾದರೂ ಮೂಲತಃ ಗ್ರಾಮೀಣ ಪರಿಸರದಿಂದ ಬಂದವನಾದು ದರಿಂದ ನನ್ನ ನಡೆ- ನುಡಿ, ರಾಜಕೀಯ ನಡವಳಿಕೆ, ಚಿಂತನೆ, ಆಲೋಚನೆಗಳಿರಬಹುದು. ಅವು ಸಹಜವಾಗಿ ಹಳ್ಳಿಗಾಡಿನ ಜಾಯಮಾನಕ್ಕೆ ಹತ್ತಿರವಾದದ್ದು. ಸ್ವಲ್ಪ ಒರಟುತನದ್ದು ಎಂದರೂ ತಪ್ಪಿಲ್ಲ.

ಹೆಗಡೆಯವರ ರಾಜಕೀಯ ಶೈಲಿಯನ್ನು ಕಂಡವರಿಗೆ ನನ್ನದು ಸ್ವಲ್ಪ ವಿಚಿತ್ರವೆನ್ನಿಸಲೂ ಬಹುದು. ೧೯೬೨ರ ಚುನಾವಣೆಯಲ್ಲಿ ನಾನು ಸೇರಿದಂತೆ ೯ ಮಂದಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಗೆದ್ದಿದ್ದೆವು. ಅದೇ ಕಾರಣಕ್ಕೆ ನಮ್ಮನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು.

ಆಗ ಹೆಗಡೆಯವರು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು.ನಿಜಲಿಂಗಪ್ಪ ನವರು ಮುಖ್ಯಮಂತ್ರಿಯಾಗಿದ್ದರು. ೧೯೬೪ರಲ್ಲಿ ಒಮ್ಮೆ ಹೆಗಡೆಯವರು

ಬೇಲೂರು ಹಳೆಬೀಡು ಮತ್ತು ಶ್ರವಣಬೆಳಗೊಳ ವೀಕ್ಷಣೆಗೆಂದು ಹಾಸನಕ್ಕೆ ಆಗಮಿಸಿದ್ದರು.

ಹೆಗಡೆಯವರು ಶ್ರವಣಬೆಳಗೊಳ ನೋಡಿಕೊಂಡು ಹೊಳೇನರಸೀಪುರಕ್ಕೆ ಬಂದಿದ್ದರು.ಅಲ್ಲಿನ ಅತಿಥಿಗೃಹದಲ್ಲಿ ಉಳಿದುಕೊಂಡಿದ್ದರು.ಅವರಿಗಾಗಿ ನಾನೇ ಅಡುಗೆ ಮಾಡಿಸಿದ್ದೆ.ಖುಷಿಯಿಂದ ಊಟ ಮಾಡಿದರು.ಹೆಗಡೆ ಮತ್ತು ನನ್ನ ಪರಿಚಯವಾಗಿದ್ದು ಹೀಗೆ.೧೯೬೭ರಲ್ಲಿ ನಿಜಲಿಂಗಪ್ಪನವರು ಅವಿಭಾಜ್ಯ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದರು.ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎಂಬ ನಿಯಮದಡಿ ನಿಜಲಿಂಗಪ್ಪನವರು ಮುಖ್ಯಮಂತ್ರಿ ಸ್ಥಾನವನ್ನು ತೆರವು ಮಾಡಿದರು.ಈ ಸ್ಥಾನಕ್ಕಾಗಿ ವೀರೇಂದ್ರ ಪಾಟೀಲ್ ಮತ್ತು ಜತ್ತಿ ನಡುವೆ ಸ್ಪರ್ಧೆ ಏರ್ಪಟ್ಟಿತ್ತು.ಜತ್ತಿಯವರ ಪರವಾಗಿ ೩೦ ಜನ ಮತ ಚಲಾಯಿಸಿದ್ದರು. ಉಳಿದವರು ವೀರೇಂದ್ರ ಪಾಟೀಲರಿಗೆ ಬೆಂಬಲ ಸೂಚಿಸಿದರು. ಇದರಿಂದಾಗಿ ವೀರೇಂದ್ರ ಪಾಟೀಲರು ಕರ್ನಾಟಕದ ಮುಖ್ಯಮಂತ್ರಿಯಾದರು.

ಆಗ ಪ್ರಧಾನಿಯಾಗಿದ್ದ ಇಂದಿರಾಗಾಂಧಿಯವರು ಜತ್ತಿಯವರನ್ನು ಪಾಂಡಿಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ ಮಾಡಿದರು.ಜತ್ತಿಯವರಿಗೆ ಬೆಂಬಲ ಸೂಚಿಸಿದ್ದ ಶಾಸಕರು ದೇವರಾಜ ಅರಸು ಅವರ ನೇತೃತ್ವದಲ್ಲಿ ಸಭೆ ನಡೆಸಿದರು.ಆಗ ಸಾಹುಕಾರ ಚೆನ್ನಯ್ಯ ನೇತೃತ್ವದ ಪ್ರತಿಪಕ್ಷದಲ್ಲಿ ೯೩ ಸದಸ್ಯರಿದ್ದರು.ವಿಧಾನಸಭೆಯ ಒಟ್ಟು ಸದಸ್ಯರ ಬಲ ೨೧೬.ಆಗಿನ್ನೂ ಪಕ್ಷಾಂತರ ಕಾಯಿದೆ ಜಾರಿಗೆ ಬಂದಿರಲಿಲ್ಲ.ಹೀಗಾಗಿ ಜತ್ತಿಯವರನ್ನು ಬೆಂಬಲಿಸಿದ ಶಾಸಕರು, ವೀರೇಂದ್ರ ಪಾಟೀಲರು ವಿಶ್ವಾಸ ಮತ ಯಾಚಿಸುವ ಸಂದರ್ಭದಲ್ಲಿ ತಟಸ್ಥರಾಗಿ ಉಳಿಯಲು ನಿರ್ಧರಿಸಿದರು. ಹೀಗಾದಾಗ ಸರ್ಕಾರ ಉರುಳುತ್ತದೆ. ಆಮೇಲೆ ನೋಡಿಕೊಳ್ಳೋಣ ಎನ್ನುವುದು ಅವರ ಉದ್ದೇಶವಾಗಿತ್ತು.ಇಂತಹ ಪರಿಸ್ಥಿತಿಯಲ್ಲಿ ವೀರೇಂದ್ರ ಪಾಟೀಲರು ಒಂದು ದಿನ ವಿಧಾನಸಭೆ ಅಧಿವೇಶನ ಮುಗಿದ ಮೇಲೆ ಸಂಜೆ ನನ್ನನ್ನು ಕರೆಸಿಕೊಂಡರು. ಸರ್ಕಾರವನ್ನು ಅಪಾಯದಿಂದ ಪಾರು ಮಾಡಲು‘ನೀನು ಮತ್ತು ನಿನ್ನ ಸ್ನೇಹಿತರು ನನಗೆ ಬೆಂಬಲ ನೀಡಬೇಕು’ ಎಂದು ಕೇಳಿಕೊಂಡರು. ಪರಿಣಾಮವಾಗಿ ಬಂಡಾಯ ಅಭ್ಯರ್ಥಿಗಳೇ ಆಗಿದ್ದ ನಾವು ೯ ಮಂದಿ ವೀರೇಂದ್ರ ಪಾಟೀಲರ ಬೆಂಬಲಕ್ಕೆ ನಿಂತೆವು. ಇದರಿಂದಾಗಿ ನನ್ನ ಮತ್ತು ವೀರೇಂದ್ರ ಪಾಟೀಲರ ನಡುವೆ ಹೆಚ್ಚು ವಿಶ್ವಾಸ ಬೆಳೆಯಿತು.

ಅದೇನೇ ಇರಲಿ, ರಾಜ್ಯದ ರಾಜಕೀಯ ೧೯೬೯ರಲ್ಲಿ ಹೊಸ ತಿರುವು ಪಡೆದುಕೊಂಡಿತು. ಕಾಂಗ್ರೆಸ್ ಇಬ್ಭಾಗವಾಯಿತು.ಆಗ ನಾನು ಅಂದಿನ ಸಂಸ್ಥಾ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡೆ.ಆಗ ಹೆಗಡೆಯವರು ಮತ್ತು ನನ್ನ ಸಂಬಂಧ ಹೆಚ್ಚು ಹತ್ತಿರ ಹತ್ತಿರವಾಗತೊಡಗಿತು.೧೯೭೨ರಲ್ಲಿ ದೇವರಾಜ ಅರಸು ಮುಖ್ಯಮಂತ್ರಿಯಾದಾಗ ವಿರೋಧ ಪಕ್ಷದ ಸಾಲಿನಲ್ಲಿ ೨೪ ಜನ ಸದಸ್ಯರು. ಶ್ರೀ ರಾಮಕೃಷ್ಣ ಹೆಗಡೆಯವರು ೧೯೬೯ರ ನಂತರ ಯಾವುದೇ ಸಾರ್ವತ್ರಿಕ ಚುನಾವಣೆಯಲ್ಲೂ ಗೆಲುವು ಪಡೆಯದೇ ಹೋದದ್ದು ನಮಗೆಲ್ಲಾ ಅಂದು ನೋವಿನ ಸಂಗತಿಯಾಗಿತ್ತು. ದೇವರಾಜ ಅರಸರ ಮುಂದೆ ವಿರೋಧ ಪಕ್ಷದ ಸಾಲಿನಲ್ಲಿ ಕುಳಿತು ಕೆಲಸ ಮಾಡಲು ಯಾರೂ ತಯಾರಿಲ್ಲದಾಗ ಅನಿವಾರ್ಯವಾಗಿ ಎಲ್ಲರ ಒತ್ತಾಯದ ಮೇರೆಗೆ ಅಂದು ವಿರೋಧ ಪಕ್ಷದ ನಾಯಕನಾಗಿ ನಾನು ಕೊರಳು ಕೊಡಬೇಕಾಯಿತು.

ಆಗ ನಾನು ಎದುರಿಸಿದ ಮೂದಲಿಕೆಯ ಮಾತುಗಳು ಅಷ್ಟಿಷ್ಟಲ್ಲ.ಎಲ್ಲವನ್ನು ನುಂಗಿಕೊಂಡು, ವಿರೋಧ ಪಕ್ಷದ ನಾಯಕನಿಗೆ ಲಭ್ಯವಿದ್ದ ಸೌಲತ್ತುಗಳನ್ನು ಪಡೆದುಕೊಳ್ಳದೇ ನಾನು ಕೆಲಸ ಮಾಡಿದ ರೀತಿಯ ಬಗ್ಗೆ ನಾನು ಹೇಳಬಯಸುವುದಿಲ್ಲ.ಅಂದಿನ ಸದನದ ಅಧಿಕೃತ ರೂಪಗಳ ವರದಿಯೇ ಇದಕ್ಕೆ ಸಾಕ್ಷಿ. ನನಗೆ ಆ ದಿನಗಳ ನನ್ನ ಹೋರಾಟವೇ ಹೆಚ್ಚು ಖುಷಿ ಕೊಟ್ಟಿದೆಯೇ ಹೊರತು ನಾನು ಅನುಭವಿಸಿರಬಹುದಾದ ಅಲ್ಪ ಕಾಲಾವಧಿಯ ಅಧಿಕಾರ ಗದ್ದುಗೆಯಲ್ಲ. ಈ ಮಧ್ಯೆ ನಡೆದ ಲೋಕಸಭಾ ಚುನಾವಣೆಯಲ್ಲಿ ಸಂಸ್ಥಾ ಕಾಂಗ್ರೆಸ್ ಪಕ್ಷ ಎಲ್ಲ ೨೭ ಸ್ಥಾನಗಳಲ್ಲಿ ಸೋಲನುಭವಿಸಿತ್ತು. ಉತ್ತರ ಕನ್ನಡದಿಂದ ಸ್ಪರ್ಧಿಸಿದ್ದ ರಾಮಕೃಷ್ಣ ಹೆಗಡೆಯವರು ಸೋತರು. ಒಂದು ವರ್ಷ ರಾಜ್ಯಪಾಲ ಧರ್ಮವೀರ ಅವರ ಆಡಳಿತ ನಡೆಯಿತು. ದೇವರಾಜ ಅರಸು ಅವರು ಚುನಾವಣೆಗೆ ಹೋಗುತ್ತೇವೆ ಎಂದು ಹಠ ಹಿಡಿದರು. ಆಗ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಾವು ೨೪ ಮಂದಿ ಸಂಸ್ಥಾ ಕಾಂಗ್ರೆಸ್‌ನಿಂದ ಗೆದ್ದೆವು. ಹೈದರಾಬಾದ್-ಕರ್ನಾಟಕ ಪ್ರದೇಶದಿಂದ ಬಾಬುಗೌಡರು, ೮ ಜನ ವಿಜಾಪುರದಿಂದ, ನಾನು ಮತ್ತು ಉಳಿದವರು ಹಳೇ ಮೈಸೂರು ಪ್ರದೇಶದಿಂದ ಗೆದ್ದಿದ್ದೆವು.ನಾನು ವಿಧಾನಸಭಾ ಪ್ರತಿಪಕ್ಷ ನಾಯಕನಾದೆ.ಹೆಗಡೆಯವರು ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ. ನಾನು ಮತ್ತು ವೀರೇಂದ್ರ ಪಾಟೀಲರು ಸೇರಿ ಹೆಗಡೆಯವರನ್ನು ವಿಧಾನ ಪರಿಷತ್ ಸದಸ್ಯರಾಗುವಂತೆ ಒತ್ತಾಯಿಸಿದೆವು. ಅವರನ್ನು ಎಂ.ಎಲ್.ಸಿ ಮಾಡಿದ್ದಲ್ಲದೆ, ವಿಧಾನಪರಿಷತ್‌ನ ಪ್ರತಿಪಕ್ಷ ನಾಯಕರನ್ನಾಗಿಯೂ ಮಾಡಿದೆವು. ೧೯೭೫ರಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದಾಗ ನಾನೂ, ಹೆಗಡೆ, ಹೀಗೆ ಹಲವಾರು ಜನ ಸೆರೆಮನೆವಾಸ ಅನುಭವಿಸಿದೆವು.

ಆಡ್ವಾಣಿಯವರೂ ನಮ್ಮೊಂದಿಗಿದ್ದರು.ಆ ದಿನಗಳಲ್ಲಿ ನಾವೆಲ್ಲಾ ಒಂದೇ ಕುಟುಂಬದವರಂತೆ ಇದ್ದದ್ದು ಈಗಲೂ ನನ್ನ ನೆನಪಿನಲ್ಲಿ ಹಸಿರಾಗಿದೆ. ೧೯೭೭ರಲ್ಲಿ ಜನತಾಪಕ್ಷ ಜನ್ಮ ತಳೆದು, ನಾನು ಆ ಪಕ್ಷದ ರಾಜ್ಯಾಧ್ಯಕ್ಷನಾದೆ. ಹೆಗಡೆಯವರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿದ್ದರು. ದಿವಂಗತ ಚಂದ್ರಶೇಖರ್ ನಮ್ಮ ಅಧ್ಯಕ್ಷರು. ಮೊರಾರ್ಜಿಯವರು ಪ್ರಧಾನಿ. ಆದರೆ ೧೯೭೮ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣಗಳೇನೆಂಬುದನ್ನು ಈಗ ವಿಶ್ಲೇಷಿಸುವುದು ಉಚಿತವೂ ಅಲ್ಲ, ಯೋಗ್ಯವೂ ಅಲ್ಲ. ಹಾಗೆ ವಿಶ್ಲೇಷಿಸಿ ಅನಗತ್ಯವಾದ ನೋವಿನ ಗಂಟುಗಳನ್ನು ಬಿಚ್ಚಿಡುವುದಕ್ಕೆ ನನಗೆ ಇಷ್ಟವಿಲ್ಲ. ಅದೆಲ್ಲವನ್ನೂ ನನ್ನ ಆತ್ಮಚರಿತ್ರೆಯಲ್ಲಿ ಹೇಳುವವನಿದ್ದೇನೆ.

ಅದೇನೇ ಇರಲಿ,೧೯೭೮ರ ವಿಧಾನಸಭಾ ಚುನಾವಣೆಯಲ್ಲಿ ನಾನು ಗೆದ್ದೆನಾದರೂ,ನನ್ನ ಅಧ್ಯಕ್ಷತೆಯಲ್ಲಿ ನನ್ನ ಪಕ್ಷ ಅಧಿಕಾರಕ್ಕೆ ಬರಲಿಲ್ಲವೆಂಬ ಕೊರಗು ನನ್ನನ್ನು ಕಾಡಿತು.ಹಾಗಾಗಿ ನಾನಾಗಿಯೇ ವಿಧಾನಸಭೆಯಲ್ಲಿ ಕೊನೆಯ ಆಸನವನ್ನು ಆರಿಸಿಕೊಂಡೆ. ಆದರೆ ೧೯೮೨ರಲ್ಲಿ ನನ್ನ ಕ್ಷೇತ್ರದಲ್ಲಿ, ದೊಡ್ಡಹಳ್ಳಿಯಲ್ಲಿ ನನ್ನ ಪಕ್ಷದ ಕಾರ್ಯಕರ್ತರ ಮೇಲೆ ಗೋಲಿಬಾರ್ ಆದಾಗ ನಾನು ಆಮರಣಾಂತ ಉಪವಾಸ ಕೂತೆ. ನನ್ನ ಶಾಸಕ ಸ್ಥಾನಕ್ಕೆ ರಾಜಿನಾಮೆಯನ್ನೂ ನೀಡಿದೆ. ಆಗ ಗುಂಡೂರಾವ್ ಮುಖ್ಯಮಂತ್ರಿ. ಆಗ ನನ್ನ ಬೆಂಬಲಕ್ಕೆ ನನ್ನ ಪಕ್ಷ ಎಷ್ಟರಮಟ್ಟಿಗೆ ನಿಂತಿತು, ನನಗೆ ಎಂತಹ ಸಹಕಾರ ಸಿಕ್ಕಿತು ಎಂಬುದನ್ನು ನಾನು ಹೇಳಲು ಬಯಸುವುದಿಲ್ಲ.

ಆದರೆ ಅದಾದ ಕೆಲವೇ ದಿನಗಳಿಗೆ ೧೯೮೩ರ ಜನವರಿಯಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ನನ್ನ ಆ ಹೋರಾಟ ಒತ್ತಾಸೆ ನೀಡಿದ್ದಂತೂ ನಿಜ. ೧೯೮೩ರಲ್ಲಿ ನಮ್ಮ ಪಕ್ಷ ಅತಿ ದೊಡ್ಡ ಪಕ್ಷವಾಗಿ ಆದರೆ ಬಹುಮತವಿಲ್ಲದ ಪಕ್ಷವಾಗಿ ಹೊರಬಂದು ಅಧಿಕಾರದ ಚುಕ್ಕಾಣಿ ಹಿಡಿಯುವಂತಾಯಿತು. ಆಗ ಸಹಜವಾಗಿ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಯಾಗಿ ನನ್ನ ಹೆಸರೂ ಇತ್ತು. ಬೊಮ್ಮಾಯಿ ಮತ್ತು ಲಕ್ಷ್ಮೀಸಾಗರ್‌ರವರೂ ಪ್ರಬಲ ಆಕಾಂಕ್ಷಿಗಳಾಗಿದ್ದರು. ಆದರೆ ಅಂದು ಭಾರತಯಾತ್ರೆಯ ಪಾದಯಾತ್ರೆಯಲ್ಲಿದ್ದ ಶ್ರೀ ಚಂದ್ರಶೇಖರ್‌ರವರು ನನಗೆ ಕೊಟ್ಟ ಸೂಚನೆ ಮತ್ತು ಸಲಹೆಯ ಮೇರೆಗೆ ಎರಡೂ ಸದನಗಳ ಸದಸ್ಯರಾಗಿದ್ದ ರಾಮಕೃಷ್ಣ ಹೆಗಡೆಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ನಾನು ನನ್ನೊಂದಿಗಿದ್ದ ಶಾಸಕರ ಬಲವನ್ನು ನೀಡಿದೆ. ಅದೆಲ್ಲಾ ಈಗ ಇತಿಹಾಸ. ಮುಂದೆ ಕನಕಪುರ ಕ್ಷೇತ್ರದಿಂದ ಅವರು ಆರಿಸಿ ಬರುವಂತೆ ಮಾಡಿದ್ದೂ ಈಗ ಇತಿಹಾಸ. ಅದೆಲ್ಲವನ್ನೂ ನಾನು ನಿರ್ವಿಕಾರ ಮನಸ್ಸಿನಿಂದ ನನ್ನ ಆತ್ಮಚರಿತ್ರೆಯಲ್ಲಿ ಹೇಳುವವನಿದ್ದೇನೆ.

ಶ್ರೀಮತಿ ಇಂದಿರಾಗಾಂಧಿಯವರ ಹತ್ಯೆಯಾಗಿ ಲೋಕಸಭಾ ಚುನಾವಣೆ ನಡೆದು ನಮ್ಮ ಪಕ್ಷ ನಾಲ್ಕೇ ನಾಲ್ಕು ಸ್ಥಾನಗಳನ್ನು ಗೆದ್ದಾಗ,ವಿಧಾನಸಭೆಯನ್ನು ವಿಸರ್ಜಿಸಿ ಜನರ ಮುಂದೆ ಹೋಗೋಣವೆಂದು ಹೆಗಡೆಯವರಿಗೆ ಸಲಹೆ ಕೊಟ್ಟವನು ನಾನೇ. ಹಾಗಾಗಿ ೧೯೮೫ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಅಭೂತಪೂರ್ವ ಜಯಗಳಿಸಿತು. ಹಾಗೆ ಚುನಾವಣೆಗೆ ಹೋಗುವುದಕ್ಕೆ ಮುನ್ನ ನಾನು, ಜೆ.ಹೆಚ್. ಪಟೇಲ್ ಮತ್ತು ವಿಶ್ವನಾಥ ರೆಡ್ಡಿ ಮುದ್ನಾಳ್ ಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿ ಪಕ್ಷದ ಕೆಲಸಕ್ಕೆ ನಿಂತೆವು.ನಾನು ಅಧ್ಯಕ್ಷನಾಗಿ ೧೯೮೫ರ ವಿಧಾನಸಭಾ ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿದೆ.

ಪಕ್ಷಕ್ಕೆ ಅಧಿಕಾರವೂ ಲಭ್ಯವಾಯಿತು.ನಂತರ ನಡೆದದ್ದು ಏನೆಂಬುದನ್ನು ನಾನು ಹೇಳಬಯಸುವುದಿಲ್ಲ. ಏಕೆಂದರೆ ಅದು ಅನಗತ್ಯವಾಗಿ ಕದಡಿದಂತಾಗುತ್ತದೆ.

ಅದೇನೇ ಇರಲಿ,ನಾನು ಹೆಗಡೆಯವರ ಸಂಪುಟಕ್ಕೆ ರಾಜಿನಾಮೆ ನೀಡಿದ್ದು,ಅಂದಿನ ಭಿನ್ನಮತೀಯ ಚಟುವಟಿಕೆ,ಇವೆಲ್ಲವನ್ನು ಬೇಕು ಬೇಕಾದವರು ತಮಗೆ ಬೇಕಾದ ಬೇಕಾದ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ. ಈಗಲೂ ವಿಶ್ಲೇಷಿಸುವವರಿದ್ದಾರೆ. ಆದರೆ ಒಂದಂತೂ ನಿಜ. ನಾನು ಹೆಗಡೆಯವರ ವಿರುದ್ಧ ನಿಂತವನಲ್ಲ.ಆದರೆ ಅವರ ನಿಲವು-ನಿರ್ಧಾರಗಳ ವಿರುದ್ಧ ನನ್ನ ಅಭಿಪ್ರಾಯವಿತ್ತು. ನನ್ನದು ಗ್ರಾಮೀಣ ಪರವಾದ ಚಿಂತನೆ-ಕಾರ್ಯಕ್ರಮಗಳಾಗಿದ್ದರೆ ಅವರದ್ದು ನಗರ ಕೇಂದ್ರಿತವಾದದ್ದಾಗಿತ್ತು.ಹಾಗಾಗಿ ನೀರಾವರಿಯ ವಿಷಯದಲ್ಲಿ ನನಗೂ ಅವರಿಗೂ ಉಂಟಾದ ಭಿನ್ನಾಭಿಪ್ರಾಯ ನನ್ನ ರಾಜಿನಾಮೆಯಲ್ಲಿ ಪರ್ಯಾವಸಾನವಾಯಿತು. ಹಾಗಾಗಿ ನನ್ನ ಭಿನ್ನಾಭಿಪ್ರಾಯ ತಾತ್ವಿಕವಾಗಿ ಪ್ರೇರಿತವಾಗಿದ್ದೇ ಹೊರತು ವೈಯಕ್ತಿಕ ನೆಲೆಯದ್ದಲ್ಲ ಎಂಬುದನ್ನು ತಿಳಿಸಬಯಸುತ್ತೇನೆ.

ಜನತಾಪಕ್ಷ ಇಬ್ಭಾಗವಾದದ್ದು,ಜನತಾದಳ ಉದಯವಾದದ್ದು,ಮತ್ತೆ ಜನತಾದಳ ಕರ್ನಾಟಕದಲ್ಲಿ ಒಗ್ಗೂಡಿ ನಾನು ೧೯೯೪ರ ಆಗಸ್ಟಿನಲ್ಲಿ ಮತ್ತೆ ರಾಜ್ಯಾಧ್ಯಕ್ಷನಾದದ್ದು,೧೯೯೫ರಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದದ್ದು, ನಾನು ಮುಖ್ಯಮಂತ್ರಿಯಾದ ರೀತಿ, ಅದರ ಹಿಂದಿನ ಘಟನಾವಳಿಗಳು, ೧೯೯೬ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ೧೬ ಜನ ಸಂಸತ್ ಸದಸ್ಯರು ಆಯ್ಕೆಯಾದದ್ದು, ನಾನು ಆಕಸ್ಮಿಕವಾಗಿ ಪ್ರಧಾನಿಯಾದದ್ದು, ಅದಾದ ಮೇಲೆ ನಡೆದ ಹತ್ತು ಹಲವು ಘಟನಾವಳಿಗಳು ಇವೆಲ್ಲವನ್ನೂ ನಾನು ಮೆಲುಕಹಾಕುತ್ತಾ ಹೋದರೆ,ಅದು ಅನಗತ್ಯವಾಗಿ ನನಗೂ ನೋವಿನ ಸಂಗತಿ.ಮತ್ತೆ ಬೇರೆಯವರಿಗೂ ನೋವುಂಟು ಮಾಡಬಹುದಾದ ಸಂಗತಿ ಯಾದುದರಿಂದ ನಾನು ಅದರ ವಿವರಗಳಿಗೆ ಹೋಗುವುದಿಲ್ಲ. ಆದ್ದರಿಂದ ನಾನು ಇಷ್ಟಕ್ಕೆ ನಿಲ್ಲಿಸಿ ಒಂದು ಮಾತನ್ನು ಹೇಳುತ್ತೇನೆ.ಕಾಂಗ್ರೆಸ್ ವಿರೋಧಿ ರಾಜಕಾರಣಕ್ಕಾಗಿ ಹುಟ್ಟಿಕೊಂಡ ಜನತಾ ಪರಿವಾರದಲ್ಲಿ ನಾನು ಮತ್ತು ಹೆಗಡೆಯವರು ಅನೇಕ ವರ್ಷ ಒಟ್ಟಿಗೇ ಕೆಲಸ ಮಾಡಿದ್ದೇವೆ.ಅವರೂ ಮತ್ತು ನಾನು ಹತ್ತು ಹಲವು ವಿಷಯಗಳಲ್ಲಿ ಆರೋಗ್ಯಕರ ಚರ್ಚೆ,ಸಂವಾದ ನಡೆಸಿ ಅನೇಕ ಮಹತ್ವದ ಕಾರ್ಯಕ್ರಮಗಳನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದೇವೆ. ಹಾಗೆಯೇ ಅನೇಕ ವಿಷಯಗಳಲ್ಲಿ ತಾತ್ವಿಕವಾಗಿ ಭಿನ್ನವಾಗಿದ್ದು ದೂರ ಸರಿದಿದ್ದೇವೆ.ರಾಜಕಾರಣದಲ್ಲಿ ತಾತ್ವಿಕ ಭಿನ್ನಾಭಿಪ್ರಾಯಗಳು ಜನತಂತ್ರ ವ್ಯವಸ್ಥೆಯ ಆರೋಗ್ಯಕರ ಲಕ್ಷಣ ಎನ್ನುವುದಾದರೆ ನನ್ನ ಮತ್ತು ಹೆಗಡೆಯವರ ನಡುವಿನ ಭಿನ್ನಾಭಿಪ್ರಾಯ ಅಂತಹ ಆರೋಗ್ಯಕರವಾದದ್ದೇ ಎಂದು ನನ್ನ ಭಾವನೆ.ಇದನ್ನು ಹೊರತುಪಡಿಸಿದಲ್ಲಿ ವೈಯಕ್ತಿಕವಾಗಿ ನನ್ನ ಅವರ ಸ್ನೇಹ ವಿಶ್ವಾಸದ್ದಾಗಿತ್ತು. ಅವರ ಹಿರಿತನಕ್ಕೆ, ಅವರ ಕೆಲವೊಂದು ವಿಶಿಷ್ಟ ಚಿಂತನೆಗಳ ಬಗ್ಗೆ ನನಗೆ ಅಂದೂ ಗೌರವವಿತ್ತು.ಇಂದಿನ ಕಲುಷಿತ ರಾಜಕೀಯ ವ್ಯವಸ್ಥೆಯ ಬಗ್ಗೆ ಜಿಗುಪ್ಸೆಯಾಗುತ್ತಿರುವಾಗ,ಹೆಗಡೆಯವರ ರಾಜಕೀಯ ರೀತಿ-ನೀತಿಯೂ ಒಂದರ್ಥದಲ್ಲಿ ಪುನರ್ ವಿಶ್ಲೇಷಣೆಗೆ ಒಳಪಟ್ಟಿಲ್ಲ, ಅದು ಹೆಚ್ಚು ಪ್ರಸ್ತುತವಾಗುತ್ತದೆಯೇನೋ ಎಂಬ ನನ್ನ ಭಾವನೆಯನ್ನು ವ್ಯಕ್ತಪಡಿಸುತ್ತ್ತಾ. ಆ ಹಿರಿಯರಿಗೆ ನನ್ನ ನಮನಗಳನ್ನು ಸಲ್ಲಿಸುತ್ತೇನೆ.

ಜಾತಿ-ಹಣ ಮುಖ ನೋಡದೆ,ರಾಜಕೀಯ ಮಾಡಿದ್ರು...ಮಮತಾ ನಿಚಾನಿ, ರಾಮಕೃಷ್ಣ ಹೆಗಡೆ ಪುತ್ರಿ

ಅಣ್ಣ ಬದುಕಿದ್ದು ಈಗ ರಾಜಕೀಯದಲ್ಲಿ ಇದ್ದಿದ್ದರೆ ರಾಜ್ಯ ರಾಜಕಾರಣ ಈ ಮಟ್ಟಕ್ಕೆ ಹದಗೆಡುತ್ತಿರಲಿಲ್ಲ. ಅವರು ಜಾತಿ-ಹಣದ ಮುಖ ನೋಡದೆ ರಾಜಕೀಯ ಮಾಡಿದ್ರು. ಆದರೆ ಈಗ...’ ಈಗ ಜಾತಿಗೊಬ್ಬ ಮುಖಂಡರು ಹುಟ್ಟಿಕೊಂಡಿದ್ದಾರೆ. ಚುನಾವಣೆಯ ಹಿಂದಿನ ದಿನ ರಾತ್ರಿ ನಡೆಯುವ ವ್ಯವಹಾರದಲ್ಲೇ ಎಲ್ಲವೂ ನಿರ್ಧಾರವಾಗುತ್ತದೆ.

ಅಣ್ಣ ಒಂದು ಚುನಾವಣೆಗೆ ೫-೬ ಸಾವಿರ ಕಿ.ಮೀಗಳ ದೂರವನ್ನು ವಾಹನಗಳ ಮೂಲಕ ಚಲಿಸಿ ಜನರೊಂದಿಗೆ ಬೆರೆಯುತ್ತಿದ್ದರು. ಮೌಲ್ಯಗಳು ಅಧಃಪತನ ಕಂಡಿರುವ ಇಂದಿನ ರಾಜಕೀಯದಲ್ಲಿ ನಾನಿರುವುದರಿಂದ ಅಣ್ಣನ ನೆನಪು ಮತ್ತಷ್ಟು ಕಾಡುತ್ತದೆ.

ರಾಜಕೀಯದ ಈ ಅಧಃಪತನಕ್ಕೆ ಹಿಂದೆಯೇ ನಾಂದಿ ಹಾಡಲಾಗಿತ್ತು.೧೯೯೬ರಲ್ಲಿ ಜನತಾ ದಳದಿಂದ ಉಚ್ಚಾಟನೆಯಾದಾಗ ಹೆಗೆಡೆ ಅವರು ಮಾನಸಿಕವಾಗಿ ಕುಗ್ಗಿ ಹೋಗಿದ್ದರು.ಬಳಿಕ ರಾಜಕೀಯವಾಗಿ ಮೌನಕ್ಕೆ ಶರಣಾದರು.ಅವರ ಅಂತಿಮ ದಿನದವರೆಗೂ ಇದೇ ಕೊರಗು ಅವರನ್ನು ಕಾಡುತ್ತಿತ್ತು. ಆದರೆ ಯಾರೊಂದಿಗೂ ಈ ದುಃಖ ವ್ಯಕ್ತಪಡಿಸದೇ ಪುಸ್ತಕದೊಂದಿಗೆ ದಿನ ಕಳೆದರು. ಯಾವಾಗ ಪುಸ್ತಕವನ್ನು ಓದಲು ಕಣ್ಣು ಮಂಜಾಯಿತೋ ಅಂದಿನಿಂದ ನಮ್ಮಿಂದಲೂ ದೂರವಾಗುತ್ತಾ ಸಾಗಿದರು.

ಅಪ್ಪ ಇರದ ಈ ದಿನಗಳನ್ನು ನೆನೆಸಿಕೊಳ್ಳುವುದು ಕಷ್ಟ. ಅಣ್ಣನಿಲ್ಲದ ೮೬ನೇ ಹುಟ್ಟುಹಬ್ಬ ಆಚರಣೆ ದುಃಖ ನೀಡಿದರೂ, ಅವರ ಮಾರ್ಗದರ್ಶನ ಹಾಗೂ ಸಾರ್ವಜನಿಕ ಬದುಕನ್ನು ನೆನೆದಾಗ ಖುಷಿ ನೀಡುತ್ತದೆ. ಮಕ್ಕಳಿಗೆ ಆದರ್ಶ ಅಪ್ಪನಾಗಿ, ರಾಜ್ಯದ ಜನತೆಗೆ ಧೀಮಂತ ರಾಜಕಾರಣಿಯಾಗಿ ವ್ಯಕ್ತಿತ್ವ ಬೆಳೆಸಿಕೊಂಡಿದ್ದ ಅಣ್ಣನನ್ನು ನೆನೆಪಿಸಿಕೊಳ್ಳುವುದರಲ್ಲಿ ಆತ್ಮತೃಪ್ತಿಯಿದೆ.

ಜಾತಿ-ಹಣ ನೋಡದೆ ಬೆಳೆಸಿದ್ರು:ಜಾತಿ-ಹಣದ ಮುಖ ನೋಡದೆ ಅಣ್ಣ ರಾಜಕೀಯ ಮಾಡಿದ್ರು. ರಾಜ್ಯ ರಾಜಕೀಯದಲ್ಲಿ ತನ್ನದೇ ಆದ ತಂಡ ಕಟ್ಟಿದ್ರು.

ಆದರೆ ಇವತ್ತಿನ ರಾಜಕೀಯ ಜಾತಿ-ಹಣ, ಹಣ-ಜಾತಿ ಇವೆರಡರಲ್ಲೇ ತುಂಬಿಕೊಂಡಿದೆ. ಹೊಲಸು ರಾಜಕೀಯದ ಅಂತಿಮ ಘಟ್ಟದಲ್ಲಿ ನಾವಿದ್ದೇವೆ ಎನಿಸುತ್ತದೆ. ಇದು ಬದಲಾಗುವವರೆಗೂ ವ್ಯವಸ್ಥೆ ಬದಲಾಗುವುದು ಅಸಾಧ್ಯ. ಅವರು ಒಬ್ಬ ಬ್ರಾಹ್ಣಣನಾಗಿದ್ದರೂ ತಮ್ಮ ಕಚೇರಿಯಲ್ಲಿ ಯಾವೊಬ್ಬ ಬ್ರಾಹ್ಮಣನಿಗೂ ಕೆಲಸ ಕೊಡಲಿಲ್ಲ.

ಯಾವುದೇ ಪ್ರತಿಭಾನ್ವಿತ ಯುವಕ ಕಣ್ಣಿಗೆ ಬಿದ್ದರೆ ಯಾವುದೇ ಹಿನ್ನೆಲೆ ನೋಡದೆ ಬೆಳೆಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.ಅಣ್ಣನ ಜಾತ್ಯತೀತತೆ ಕೇವಲ ರಾಜಕೀಯಕ್ಕೆ ಸೀಮಿತವಾಗಿರಲಿಲ್ಲ.ನಮ್ಮ ಕುಟುಂಬದಲ್ಲೂ ಅದನ್ನು ಪಾಲಿಸಿದ್ದರು.ನಾವು ಮೂರು ಮಕ್ಕಳು ಬೇರೆ ಜಾತಿ-ಧರ್ಮಕ್ಕೆ ಸೇರಿದ ವ್ಯಕ್ತಿಗಳನ್ನು ವರಿಸಿದ್ದೇವೆ.ಎಂದಿಗೂ ಈ ವಿಷಯವನ್ನು ಹೆಗಡೆ ಅವರು ವಿರೋಧಿಸುತ್ತಿರಲಿಲ್ಲ.

ಪಕ್ಷಾತೀತ ವ್ಯಕ್ತಿತ್ವ

ಹೆಗಡೆ ಅವರ ರಾಜಕೀಯ ಪಕ್ಷಾತೀತವಾಗಿತ್ತು. ಕೆಲವೇ ಪಕ್ಷದೊಂದಿಗೆ ರಾಜಕೀಯ ನಡೆಸಿದ್ದರೂ ಅವರ ಚಿಂತನೆ ಹಾಗೂ ಅಭಿವೃದ್ಧಿ ಕೆಲಸಗಳು ಯಾವುದೇ ಪಕ್ಷಕ್ಕೆ ಸೀಮಿತವಾಗಿರಲಿಲ್ಲ. ಆದರೆ ೧೯೯೬ರಲ್ಲಿ ಅವರೇ ಕಟ್ಟಿದ್ದ ಪಕ್ಷ ಉಚ್ಚಾಟಿಸಿದಾಗ ಮಾನಸಿಕವಾಗಿ ನೊಂದಿದ್ದರು.ಯಾರ ಜತೆನೂ ಮಾತನಾಡದೇ ರಾಜಕೀಯ ಮೌನಕ್ಕೆ ಸರಿದುಬಿಟ್ಟರು. ಆದರೆ ಮುಂದಿನ ೮ ವರ್ಷದಲ್ಲಿ ಯಾರೊಬ್ಬರನ್ನು ವೈರಿಗಳಂತೆ ಕಾಣಲಿಲ್ಲ,ಯಾರ ವಿರುದ್ಧವೂ ಸೇಡು ತೀರಿಸಿಕೊಳ್ಳುವಂತಹ ಮನೋಭಾವನೆ ಹೊಂದಿರಲಿಲ್ಲ.ಎಲ್ಲ ಅವಮಾನ,ಕಹಿಗಳನ್ನು ಸಹಿಸಿಕೊಂಡೆ ಜೀವಿಸುವುದು ಅವರ ದೊಡ್ಡಸ್ತಿಕೆಯಾಗಿತ್ತು.

ಲಾಲ್ ಬತ್ತಿ, ಬೆಂಬಲಿಗರ ದಂಡು ಬೇಡ

‘ವಿಮಾನ ನಿಲ್ದಾಣಕ್ಕೆ ಹೋಗಬೇಕಿದ್ದರೆ ೧೦ನಿಮಿಷ ಮೊದಲು ಹೊರಡುತ್ತೇನೆ.ನನಗಾಗಿ ಯಾವುದೇ ಟ್ರಾಫಿಕ್ ನಿಲ್ಲಿಸುವ ಅವಶ್ಯಕತೆಯಿಲ್ಲ.ಸಿ‌ಎಂ ಬರುತ್ತಿದ್ದಾರೆ ಎಂದು ಲಾಲ್ ಬತ್ತಿ (ಕೆಂಪುದೀಪ) ಬಳಸುವ ಅಗತ್ಯವಿಲ್ಲ. ಇದಲ್ಲದೇ ನನ್ನ ಹಿಂದೆ ಯಾವುದೇ ಬೆಂಬಲಿಗರ ಕಾರ್‌ಗಳ ಪೆರೇಡ್ ಬೇಡ. ಅವರಿಗೆ ಬರಬೇಕು ಎಂದಿದ್ದರೆ ಪ್ರತ್ಯೇಕವಾಗಿ ಬರಲಿ’ಎಂದು ಖಡಾಖಂಡಿತವಾಗಿ ಹೇಳುವ ಧೈರ್ಯ ಹೆಗಡೆ ಅವರಲ್ಲಿತ್ತು.ಅವರು ಸಿ‌ಎಂ ಅಥವಾ ಸಚಿವರಾಗಿದ್ದಾಗ ಅವರ ಜತೆ ಚಾಲಕ ಹಾಗೂ ಆಪ್ತ ಕಾರ್ಯದರ್ಶಿ ಬಿಟ್ಟು ಮತ್ಯಾರೂ ಇರುತ್ತಿರಲಿಲ್ಲ.

ಪುಸ್ತಕದಿಂದ, ನಮ್ಮಿಂದಲೂ ದೂರವಾದರು

ಪುಸ್ತಕದ ಒಂದು ಪುಟ ಹರಿದರೆ ಹೆಗಡೆ ಅವರು ಊಟ ಬಿಡುತ್ತಿದ್ದರು. ಪುಟ ಹರಿದಿದ್ದಕ್ಕೆ ತನ್ನನ್ನು ತಾನೇ ಶಿಕ್ಷಿಸಿಕೊಳ್ಳುವಷ್ಟು ಪುಸ್ತಕ ಪ್ರೇಮಿಯಾಗಿದ್ದರು.ರಾಜಕೀಯ ಏರಿಳಿತದಿಂದ ಜರ್ಜರಿತರಾಗಿದ್ದರೂ ದೈಹಿಕವಾಗಿ ಗಟ್ಟಿಯಾಗಿದ್ದರು.ಆದರೆ ೭೫ನೇ ಹುಟ್ಟುಹಬ್ಬದ ಬಳಿಕ ಅವರಿಗೆ ದೃಷ್ಟಿ ದೋಷ ಪ್ರಾರಂಭವಾಯಿತು.‘ನನಗೆ ಪುಸ್ತಕ ಓದಲಾಗುತ್ತಿಲ್ಲ, ಯಾರಾದರೂ ಓದಿ ಹೇಳಿ’ ಎಂದು ನಮ್ಮಲ್ಲಿ ಕೋರುತ್ತಿದ್ದರು.ಪುಸ್ತಕ ಓದಲಾಗದ ದಿನಗಳು ಬಂದ ಬಳಿಕ ಅಣ್ಣ ನಮ್ಮಿಂದಲೂ ದೂರವಾಗುತ್ತ ಹೋದರು. ಪುಸ್ತಕ ಓದಲಾರದ ದಿನಗಳೇ ಅವರನ್ನು ಸಾವಿನತ್ತ ಕೊಂಡೊಯ್ದವು. ಅವರ ಎಲ್ಲ ದುಃಖಗಳಿಗೆ ಪುಸ್ತಕದಲ್ಲೇ ಉತ್ತರ ಕಾಣುತ್ತಿದ್ದರು.

ವಿಧಾನಸೌಧಕ್ಕೆ ಕಾಲಿಡಬೇಡಿ!

‘ನಾನು ಮುಖ್ಯಮಂತ್ರಿಯಾಗಿರುವ ಖುಷಿ ನಿಮಗೆಲ್ಲರಿಗಿದೆ, ಅಭಿನಂದನೆ ಹೇಳುವುದು ಸಾಮಾನ್ಯ. ಆದರೆ ನಾನು ಅಧಿಕಾರದಲ್ಲಿರುವವರೆಗೆ ವಿಧಾನಸೌಧದಲ್ಲಿ ಕಾಣಿಸಿಕೊಂಡರೆ ಜೋಕೆ. ಯಾವುದೇ ಕಾರಣಕ್ಕೂ ನಾನು ಅಧಿಕಾರದಲ್ಲಿದ್ದಾಗ ವಿಧಾನಸೌಧಕ್ಕೆ ಕಾಲಿಡಬಾರದು, ಯಾವುದೇ ಅಧಿಕಾರಿಗಳನ್ನು ಭೇಟಿಯಾಗಬಾರದು’ಎಂಬ ಸ್ಪಷ್ಟ ಸೂಚನೆಯನ್ನು ಮಕ್ಕಳಿಗೆ ನೀಡಿದ್ದರು.ಇದಲ್ಲದೇ ನಾನು ಪ್ರಾರಂಭಿಸಿರುವ ಟ್ರಾವೆಲ್ ಎಜೆನ್ಸಿ ಮೂಲಕ ಸರ್ಕಾರದ ಯಾವುದೇ ಕೆಲಸ ಮಾಡಬಾರದು ಎಂಬ ಕಟ್ಟಪ್ಪಣೆ ಹೊರಡಿಸಿದ್ದರು.

ರಾಜಕೀಯ ಹೊರತಾದ ವ್ಯಕ್ತಿತ್ವವಿತ್ತು

ಸಂಜೆ ೬ ಗಂಟೆಯಾದರೆ ಅಣ್ಣ ರಾಜಕೀಯದಿಂದ ವಿಮುಖರಾಗುತ್ತಿದ್ದರು. ವಿಜ್ಞಾನಿಗಳು, ಲೇಖರು ಹಾಗೂ ಚಿಂತಕರ ತಂಡವೊಂದನ್ನು ಕಟ್ಟಿಕೊಂಡು ಹರಟುತ್ತಿದ್ದರು.ಸರ್ಕಾರ ಕೊಟ್ಟಿದ್ದ ಅಂಬಾಸಿಡರ್ ಕಾರನ್ನು ಒಳಗಿಟ್ಟು ಸ್ವಂತ ಕಾರಿನಲ್ಲಿ ಸುತ್ತಾಡುತ್ತಿದ್ದರು. ಸಂಜೆ ೯ ಗಂಟೆ ನಂತರ ಮನೆಗೆ ಬರುತ್ತಿದ್ದ ದೂರವಾಣಿ ಕರೆಗಳನ್ನು ಅವರೇ ಸ್ವೀಕರಿಸುತ್ತಿದ್ದರು. ಒಮ್ಮೆ ಹೆಗಡೆ ಅವರು ಮನೆಯಲ್ಲಿದ್ದಾಗ ಸಮಸ್ಯೆ ಹೇಳಿಕೊಂಡು ಒಬ್ಬ ವ್ಯಕ್ತಿ ಕರೆ ಮಾಡಿದ್ದ.ಮುಖ್ಯಮಂತ್ರಿ ಅವರಿಗೆ ಫೋನ್ ಕೊಡಿ ಎಂದು ಹೇಳುತ್ತಿದ್ದ. ಆದರೆ ಕರೆಯನ್ನು ಸ್ವೀಕರಿಸಿದ್ದ ಸ್ವತಃ ಹೆಗಡೆ ಅವರು,‘ಹೇಳಿ ನಾನು ರಾಮಕೃಷ್ಣ ಹೆಗಡೆ ಮಾತನಾಡುತ್ತಿರುವುದು’ಎಂದು ಮಾತನಾಡಿದ್ದರು.ಸಂಜೆ ೬ ಗಂಟೆಯ ನಂತರ ಅವರೇ ಕೇವಲ ಹೆಗಡೆಯಾಗಿದ್ದರು.ಮುಖ್ಯಮಂತ್ರಿ ಹೆಗಡೆ ಎಂದರೆ ಇಷ್ಟಪಡುತ್ತಿರಲಿಲ್ಲ.

ಹಾಜರಿ ಕಡ್ಡಾಯ

ರಾಜ್ಯ ಅಥವಾ ದೇಶದ ಯಾವುದೇ ಮೂಲೆಯಲ್ಲಿದ್ದರೂ ಅಣ್ಣನ ಹುಟ್ಟುಹಬ್ಬದ ದಿನ ಅವರು ಹಾಗೂ ಕುಟುಂಬ ಸದಸ್ಯರು ಮನೆಯಲ್ಲಿರಲೇಬೇಕು.ಹುಟ್ಟುಹಬ್ಬ ಆಚರಣೆ ಸಂದರ್ಭದಲ್ಲಿ ಮಕ್ಕಳು,ಮೊಮ್ಮಕ್ಕಳು ಎದುರಿಗಿರಲೇಬೇಕು.ಇದಲ್ಲದೇ ಪ್ರತಿ ಭಾನುವಾರ ಮಧ್ಯಾಹ್ನದ ಊಟಕ್ಕೆ ಎಲ್ಲ ಮಕ್ಕಳು ಹಾಗೂ ಮೊಮ್ಮಕ್ಕಳು ಜತೆಗಿರುವುದು ಅಲಿಖಿತ ನಿಯಮವಾಗಿತ್ತು. ಇದನ್ನು ಸುಮಾರು ೨೦ ವರ್ಷಕ್ಕೂ ಹೆಚ್ಚು ದಿನಗಳ ಕಾಲ ನಡೆಸಿಕೊಂಡು ಬಂದಿದ್ದೇವೆ.

ಪ್ರವಾಸಕ್ಕೆ ಮೀಸಲು

ಸಾರ್ವಜನಿಕ ಜೀವನಕ್ಕೆ ಕಾಲಿಟ್ಟ ದಿನದಿಂದ ವರ್ಷದಲ್ಲಿ ಹತ್ತು ದಿನವನ್ನು ಅವರು ನಮಗಾಗಿ ಮೀಸಲಿಡುತ್ತಿದ್ದರು. ಆ ಹತ್ತು ದಿನಗಳನ್ನು ನಮ್ಮ ತಂದೆಯ ಹುಟ್ಟೂರಾದ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ದೊಡ್ಮನೆಯಲ್ಲಿ ಕಳೆಯಲು ಹೇಳುತ್ತಿದ್ದರು.ನಮ್ಮ ಮೂಲವನ್ನು ಮರೆಯಬಾರದು ಎಂಬ ಕಾರಣದಿಂದ ಈ ರೀತಿ ಅಭ್ಯಾಸ ಮಾಡಿಸಿದ್ದರು. ಇದನ್ನು ಹೊರತುಪಡಿಸಿ ಅವರೇ ಕಾರು ಚಾಲನೆ ಮಾಡಿಕೊಂಡು ಬೇರೆ ಸ್ಥಳಗಳಿಗೆ ಕರೆದೊಯ್ಯುತ್ತಿದ್ದರು. 

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಕನ್ನಡಪ್ರಭ
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-08-29

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»ಶಿಕ್ಷಕರ ದಿನಾಚರಣೆ ಮತ್ತು ಡಾ. ಎಸ್ ರಾಧಾಕೃಷ್ಣನ್
» ಕುಡಿದದ್ದು ಶರಬತ್ತು, ತಂದಿತ್ತು ಆಪತ್ತು !
»ಹಣೆಬರಹಕ್ಕೆ ಹೆದರಲಿಲ್ಲ, ಅದಕ್ಕೇ ಎತ್ತಿದಳು ಮಂಗಳಾರತಿ!
» ಊಹಾಪೋಹ ಮಹಾಪೂರದಲ್ಲಿ ಕೊಚ್ಚಿಹೋಗುವ ಮುನ್ನ...
»ಅಳುವಿನ ಕಾರಣ...
»ಕುಟ್ಟ ಬ್ಯಾರಿಯ ಪಂಜ ಪೇಟೆ...
» ವರ್ಣ ವ್ಯವಸ್ಥೆ: ಸಂಪೂರ್ಣ ಅವ್ಯವಸ್ಥೆ...
» ನಮ್ಮತಾರೆಯರಿಗೆ ಮೇಲ್ಮನೆಯಲ್ಲಿ ಏನು ಕೆಲಸ?...
»ವಧುವಿನ ದಕ್ಷಿಣೆ - 'ವರದಕ್ಷಿಣೆ'....
» ಗರುಡನ ಮಾರ್ಗ...
» ಹೃದಯದಾಳದ ಮಾತು....
»ಹೆಗಡೆ 86, ನೆನಪು ನೂರಾರು: ಜಾತಿ-ಹಣ ಮುಖ ನೋಡದೆ, ರಾಜಕೀಯ ಮಾಡಿದ್ರು...
» ನ್ಯಾಯಾಂಗದ ಗಾಜಿನ ಮನೆಗೆ ಕಲ್ಲು ಹೊಡೆದ ಮಮತಾ
» ಬೇರು ಒಣಗಿದ ಮರ ಗಟ್ಟಿಯಾಗಿ ನಿಂತೀತೇ?....
»ಜೆಪಿ ಹಾದಿಯಲ್ಲಿ ಅಣ್ಣಾ ನಡಿಗೆ ಸಾಧ್ಯವೇ? ...
»ಜಯಕಿರಣ ಪತ್ರಿಕೆಯಲ್ಲಿ ಬ೦ದತಹ ಯುವತಿಯೊಬ್ಬಳ ಮನದಾಳದ ಮಾತು...
»ಅಂತರಂಗದ ದನಿಗೆ ಕಿವುಡಾದವರ ನಡುವೆ...
»ದೇಶಪ್ರೇಮಕ್ಕಿಂತ ದೊಡ್ಡದೇ ಧರ್ಮಪ್ರೇಮ?...
»ಕತ್ತು ಕತ್ತರಿಸುವ ಸಿನಿಮಾಗಳ ಸಂದೇಶವೇನು?...
» ಪಾತ್ರೆಯೊಳಗಿನ ಮೀನು....
»ಸಮಾನತೆ...
» ಹರ್ಷದ ದಾರಿ
»ವೈಧವ್ಯವೆಂಬ ವಿಷವರ್ತುಲದಿಂದ ಇವರಿಗೆ ಬಿಡುಗಡೆ ಎಂದು?
»ಅಂಗಡಿಯಲ್ಲಿ ದೊರಕಿದ ಪವಾಡ...
»ದೊಡ್ಡ ಚಳವಳಿಗಳ ಕಾಲ ಮುಗಿದುಹೋಗಿದೆ...

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri