ಆಜಾದ್ ಮೈದಾನ ಗಲಭೆ; ಮುಂಬೈ ಪೊಲೀಸ್ ಕಮಿಷನರ್ ವರ್ಗಾವಣೆ |
ಪ್ರಕಟಿಸಿದ ದಿನಾಂಕ : 2012-08-23
ಮುಂಬೈ: ಆಗಸ್ಟ್ ೧೧ರಂದು ಮುಂಬೈಯ ಆಜಾದ್ ಮೈದಾನದಲ್ಲಿ ನಡೆದ ಗಲಭೆಯನ್ನು ನಿಯಂತ್ರಿಸಲು ವಿಫಲವಾಗಿದ್ದ ಮುಂಬೈ ಪೊಲೀಸ್ ಕಮಿಷನರ್ ಅರುಪ್ ಪಟ್ನಾಯಿಕ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಮಹಾರಾಷ್ಟ್ರ ಗೃಹ ಸಚಿವ ಆರ್ಆರ್ ಪಾಟಿಲ್ ಹೇಳಿದ್ದಾರೆ.
ಪಟ್ನಾಯಿಕ್ ಅವರನ್ನು ಪೊಲೀಸ್ ಮಹಾನಿರ್ದೇಶಕರಾಗಿ ಬಡ್ತಿ ನೀಡಿದ್ದು, ಮಹಾರಾಷ್ಟ್ರದ ರಾಜ್ಯ ಸುರಕ್ಷಾ ಕಾರ್ಪೊರೇಷನ್ನ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ನೇಮಕ ಮಾಡಲಾಗಿದೆ ಎಂದು ಪಾಟಿಲ್ ಹೇಳಿದ್ದಾರೆ.
ಅದೇ ವೇಳೆ ಹಿರಿಯ ಐಪಿಎಸ್ ಅಧಿಕಾರಿ ಸತ್ಯಪಾಲ್ ಸಿಂಗ್ ಅವರನ್ನು ಮುಂಬೈಯ ನೂತನ ಪೊಲೀಸ್ ಕಮಿಷನರ್ ಆಗಿ ನೇಮಕ ಮಾಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಅಸ್ಸಾಂ ಮತ್ತು ಮ್ಯಾನ್ಮಾರ್ನಲ್ಲಿ ಮುಸ್ಲಿಂರಿಗೆ ಶೋಷಣೆಯಾಗಿದೆ ಎಂದು ಮುಂಬೈಯ ರಾಜಾ ಅಕಾಡೆಮಿ ಸೇರಿದಂತೆ ಮುಸ್ಲಿಂ ಸಂಘಟನೆಗಳು ಆಗಸ್ಟ್ ೧೧ರಂದು ಆಜಾದ್ ಮೈದಾನದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದ್ದವು.
ಈ ರ್ಯಾಲಿ ಗಲಭೆಗೆ ತಿರುಗಿದ್ದು ಇದರಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಮಾತ್ರವಲ್ಲದೆ ಪೊಲೀಸರು ಸೇರಿದಂತೆ ಹಲವರಿಗೆ ಗಾಯಗಳಾಗಿತ್ತು.
ಏತನ್ಮಧ್ಯೆ, ಇನ್ನೊಬ್ಬ ಐಪಿಎಸ್ ಅಧಿಕಾರಿ ಎಸ್ಪಿ ಗುಪ್ತಾ ಅವರನ್ನು ಹೆಚ್ಚುವರಿ ಡಿಜಿ (ತರಬೇತಿ) ಯಾಗಿ ನೇಮಕ ಮಾಡಲಾಗಿದೆ ಎಂದು ಪಾಟಿಲ್ ಹೇಳಿದ್ದಾರೆ.
ಈ ವರ್ಗಾವಣೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು ’ಇದು ಆಡಳಿತ ವ್ಯವಸ್ಥೆಯ ಪ್ರಕ್ರಿಯೆ’ಯೆಂದು ಉತ್ತರಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಕನ್ನಡಪ್ರಭ ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-08-23
|
|
|