ಆದಿತ್ಯವಾರ, 26-01-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಅಂತರಂಗದ ದನಿಗೆ ಕಿವುಡಾದವರ ನಡುವೆ...

ಅಂಗೈ ಹುಣ್ಣಿಗೆ ಕನ್ನಡಿ ಬೇಡ. ಅದು ಕಣ್ಣಿಗೆ ಸ್ಪಷ್ಟವಾಗಿ ಕಾಣುತ್ತದೆ ಮಾತ್ರವಲ್ಲ ನಿರಂತರವಾಗಿ ನೋಯುತ್ತ ಇರುತ್ತದೆ. ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಕಥೆ ಅಂಗೈ ಹುಣ್ಣಿನಂತೆಯೇ ಇದೆ. ತನ್ನಲ್ಲಿಯೇ ಕೆಲಸ ಮಾಡುವ ಒಬ್ಬ ಅಧಿಕಾರಿ ತನಗೆ ದತ್ತವಾದ ಅಧಿಕಾರವನ್ನು ಬಳಸಿಕೊಂಡ ಕ್ರಮವನ್ನು ವಿರೋಧಿಸಿ ಇಡೀ ಪಾಲಿಕೆಯ ಸಿಬ್ಬಂದಿ ಮೂರು ದಿನ ಮುಷ್ಕರ ಮಾಡುತ್ತಾರೆ. ಅದು ತಪ್ಪು ಎಂದು ಪಾಲಿಕೆಯ ಒಬ್ಬ ಸದಸ್ಯನೂ ಹೇಳುವುದಿಲ್ಲ.

ಮುಷ್ಕರವನ್ನು ಎದುರಿಸಲು ಪರ್ಯಾಯ ಕ್ರಮಗಳನ್ನು ಯೋಚಿಸುವುದಿಲ್ಲ. ಪರಿಸ್ಥಿತಿ ಹದಗೆಡಲಿ ಎಂದೇ ಅವರೆಲ್ಲ ಬಯಸುವಂತೆ ಭಾಸವಾಗುತ್ತದೆ. ಅದಕ್ಕೆ ಪೂರಕ ಎನ್ನುವಂತೆ ಬರೀ ಸಿಬ್ಬಂದಿ ಮಾತ್ರ ಮುಷ್ಕರ ಮಾಡುವುದಿಲ್ಲ. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಕಸ ತೆಗೆಯುವವರೂ ಮುಷ್ಕರ ಮಾಡುತ್ತಾರೆ.

ಇಡೀ ಊರು ನಾರುವಂಥ ಸ್ಥಿತಿ ನಿರ್ಮಾಣ ಮಾಡುತ್ತಾರೆ. ಸರ್ಕಾರ ಶರಣಾಗುತ್ತದೆ. ಕಾನೂನು ಪ್ರಕಾರ ಕೆಲಸ ಮಾಡಿದ ಅಧಿಕಾರಿಯನ್ನು ಎತ್ತಂಗಡಿ ಮಾಡುವ ಭರವಸೆ ಸಿಕ್ಕ ಮೇಲೆಯೇ ಅಧಿಕಾರಿಗಳು ಮುಷ್ಕರ ಕೈ ಬಿಡುತ್ತಾರೆ. ಗುತ್ತಿಗೆದಾರರು ಕಸ ಎತ್ತುತ್ತಾರೆ.

ಆರ್.ಪಿ.ಶರ್ಮ ಪ್ರಕರಣ ಒಂದು ದೊಡ್ಡ ದ್ವಂದ್ವ. ಶರ್ಮ ಸಣ್ಣ ಪುಟ್ಟ ಹುದ್ದೆಯ ಅಧಿಕಾರಿಯೇನೂ ಅಲ್ಲ. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಂಥ ಉನ್ನತ ಹುದ್ದೆಯಲ್ಲಿ ಇದ್ದವರು. ಅವರ ಕಚೇರಿಯೇ ಒಂದು ಪೊಲೀಸ್ ಠಾಣೆ. ಜನರು ಕೊಟ್ಟ ದೂರನ್ನು ಅವರು ದಾಖಲಿಸಿಕೊಳ್ಳಲೇಬೇಕು.

131 ಮಂದಿ ಅಧಿಕಾರಿಗಳ ವಿರುದ್ಧ ಅವರು ದೂರು ದಾಖಲು ಮಾಡಿಕೊಂಡು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ ಎಂದರೆ ನಗರದಲ್ಲಿ ಯಾವ ಪ್ರಮಾಣದಲ್ಲಿ ಅಕ್ರಮ ಕಟ್ಟಡಗಳು ನಿರ್ಮಾಣ ಆಗುತ್ತಿರಬಹುದು ಎಂಬುದಕ್ಕೆ ಒಂದು ನಿದರ್ಶನವೂ ಸಿಕ್ಕಂತೆ ಆಗುತ್ತದೆ. ಜನರು ದೂರು ಕೊಟ್ಟ ಮೇಲೆಯೂ ಅದನ್ನು ದಾಖಲಿಸಿಕೊಳ್ಳದೇ ಇದ್ದರೆ ಶರ್ಮ ಅವರು ಕರ್ತವ್ಯಲೋಪ ಮಾಡಿದಂತೆ ಆಗುತ್ತಿತ್ತು.

ತನ್ನ ಕರ್ತವ್ಯವನ್ನು ಸರಿಯಾಗಿಯೇ ಮಾಡಿದ ಅಧಿಕಾರಿಯ ವಿರುದ್ಧ ಸರ್ಕಾರ ಎತ್ತಂಗಡಿಯ ಅಸ್ತ್ರ ಬಳಸಿದೆ! ಅದರ ಫಲವನ್ನು ಮುಂದೆ ಅದು ಉಣ್ಣಲೂಬಹುದು. ಸರ್ಕಾರಕ್ಕೆ ಇರುವ ಒತ್ತಡಗಳು ನ್ಯಾಯಾಲಯಕ್ಕೆ ಇರುವುದಿಲ್ಲವಲ್ಲ?!

ಶರ್ಮ ಅವರನ್ನು ಎತ್ತಂಗಡಿ ಮಾಡುವಂಥ ಒಂದು ಅನಿವಾರ್ಯ ಸ್ಥಿತಿಯನ್ನು ಪಾಲಿಕೆಯ ಅಧಿಕಾರಿಗಳೇ ನಿರ್ಮಿಸಿದರು. ಕಸ ಗುಡಿಸುವವರನ್ನು ಎತ್ತಿ ಕಟ್ಟುವುದು ಅವರಿಗೆ ತೀರಾ ಸುಲಭದ ಮಾರ್ಗವಾಗಿತ್ತು.

ಮುಷ್ಕರ ಹೂಡಿದ ಅಧಿಕಾರಿಗಳ ಜತೆಗೆ ಪಾಲಿಕೆಯ ಎಲ್ಲ ಸದಸ್ಯರು ಪಕ್ಷಭೇದ ಮರೆತು ನಿಂತರು. ಆಡಳಿತ ಪಕ್ಷದವರಿಗೆ ಏನೇನೋ ಅನಿವಾರ್ಯತೆಗಳು ಇದ್ದಿರಬಹುದು. ವಿರೋಧ ಪಕ್ಷವಾದರೂ ಶರ್ಮ ಮಾಡಿದ್ದು ಸರಿ ಎನ್ನಬಹುದಿತ್ತು. ಸೋಜಿಗ ಎಂದರೆ ವಿರೋಧ ಪಕ್ಷಕ್ಕೆ ಸೇರಿದ ಮಾಜಿ ಮೇಯರ್‌ಗಳೇ ಅವರ ವಿರುದ್ಧ ದನಿ ಎತ್ತಿದರು.

ಶರ್ಮ ಕಟ್ಟಿದ ಮನೆ ಅಕ್ರಮ ಎಂದರು. ಮತ್ತೆ ಅದೇ ಸಮಸ್ಯೆ. ಒಂದು ತಪ್ಪನ್ನು ಮುಚ್ಚಲು ಮತ್ತೊಂದು ತಪ್ಪು ನೆಪ ಆಗಬೇಕು ಎಂದು ಅವರು ಬಯಸಿದರು. ಆಡಳಿತ ಮತ್ತು ವಿರೋಧ ಪಕ್ಷಗಳೆರಡೂ ಶರ್ಮ ಅವರ ವಿರುದ್ಧ ಬಿಲ್ಲು ಬಾಣ ಸಮೇತ ಬತ್ತಳಿಕೆ ಸಜ್ಜು ಮಾಡಿಕೊಂಡುದನ್ನು ನೋಡಿದರೆ ಯಾರಿಗೂ ಶರ್ಮ ತಮ್ಮ ಅಧಿಕಾರವನ್ನು ಚಲಾಯಿಸುವುದು ಬೇಕಿರಲಿಲ್ಲ.

ಎಲ್ಲರಿಗೂ ಒಂದಲ್ಲ ಒಂದು ಹಿತಾಸಕ್ತಿ ಇದ್ದಂತಿತ್ತು. ಮನೆಗಳು, ಅಂಗಡಿಗಳು ಹೇಗೆ ಬೇಕಾದರೂ ನಿರ್ಮಾಣವಾಗಲಿ. ಅದರಿಂದ ಸಾಮಾನ್ಯ ಜನರಿಗೆ ಏನೇ ತೊಂದರೆಯಾಗಲಿ. ಸಂಬಂಧಪಟ್ಟ ಅಧಿಕಾರಿಗಳು ಕಂಡೂ ಕಾಣದಂತೆ ಸುಮ್ಮನೇ ಇರಬೇಕು ಎಂಬುದೇ ಅವರ ಬಯಕೆಯಾಗಿತ್ತು.

 ನಿಜ, ಶರ್ಮ ಅವರು ತಮಗೆ ದತ್ತವಾದ ಅಧಿಕಾರವನ್ನು ಚಲಾಯಿಸುವಾಗ ಕೊಂಚ ವಿವೇಚನೆ ಬಳಸಬೇಕಿತ್ತು. ಲಾಠಿ ಬಳಸಿದರೂ ಸಾಕು ಎನ್ನುವಾಗ ಬಂದೂಕನ್ನು ಕೈಗೆ ತೆಗೆದುಕೊಳ್ಳಬಾರದಿತ್ತು. ಖಾಕಿ ಮಂದಿಯ ಸಮಸ್ಯೆ ಅದು! ಹಾಗೆಂದು ಅವರು ತಪ್ಪು ಮಾಡಿದ್ದಾರೆ ಎಂದು ಹೇಳುವಂತಿಲ್ಲ.

ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ದೂರು ದಾಖಲು ಮಾಡಿಕೊಳ್ಳುವ, ಅವರ ಕಚೇರಿ ಒಂದು ಪೊಲೀಸ್ ಠಾಣೆ ಎನ್ನುವಂಥ ಅಧಿಕಾರವನ್ನು ಸರ್ಕಾರವೇ ಸಂಪುಟದ ನಿರ್ಣಯದ ಮೂಲಕ ಅವರಿಗೆ ನೀಡಿದೆ. ಯಾವುದೇ ಠಾಣೆಗೆ ದೂರು ಬಂದರೆ ಅದನ್ನು ದಾಖಲು ಮಾಡಿಕೊಳ್ಳಲೇಬೇಕು! ಶರ್ಮ ಅವರೂ ಅದನ್ನೇ ಮಾಡಿದ್ದಾರೆ. ಆದರೆ, ಅಧಿಕಾರಿಗಳು ಮಾತ್ರ ತಪ್ಪಿತಸ್ಥರೇ?

ಅಕ್ರಮ ಕಟ್ಟಡಗಳಿಗೆ ಅಥವಾ ಕಟ್ಟಡಗಳಲ್ಲಿನ ಅಕ್ರಮಗಳಿಗೆ ಅವರು ಮಾತ್ರ ಪರವಾನಿಗೆ ಕೊಟ್ಟಿದ್ದಾರೆಯೇ? ಕೊಡಲು ಸಾಧ್ಯವೇ? ಪಾಲಿಕೆಯ ಸದಸ್ಯರ ಪಾಲು ಇಲ್ಲದೇ ಯಾವುದೇ ಪ್ರದೇಶದಲ್ಲಿ ಒಂದು ಅಕ್ರಮ ಕಟ್ಟಡ ತಲೆ ಎತ್ತಲು ಸಾಧ್ಯವಿಲ್ಲ. ಒಂದು ಕಟ್ಟಡ ನಿರ್ಮಾಣಕ್ಕೆ ಮರಳು, ಜಲ್ಲಿ ಕಲ್ಲು ಬಂದು ಬೀಳುತ್ತಿದ್ದಂತೆಯೇ ಪಾಲಿಕೆಯ ಸದಸ್ಯರಿಗೆ ಸುದ್ದಿ ಮುಟ್ಟುತ್ತದೆ.

ಕಟ್ಟಡದ ಕೆಲಸ ಮುಂದುವರಿಯಬೇಕಾದರೆ ಸದಸ್ಯರಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ `ಮುಜುರೆ` ಸಂದಾಯ ಆಗಲೇಬೇಕು. ಹೀಗೆ ಅಧಿಕಾರಿಗಳು ಮತ್ತು ಸದಸ್ಯರ ನಡುವೆ ಸಂಬಂಧ ಇಲ್ಲದೇ ಇದ್ದರೆ ಸದಸ್ಯರು ಮುಷ್ಕರವನ್ನು ಬೆಂಬಲಿಸುತ್ತ ಇರಲಿಲ್ಲ! ಈ ಸೂಕ್ಷ್ಮವನ್ನು ಶರ್ಮ ಅವರು ಅರ್ಥ ಮಾಡಿಕೊಳ್ಳಲಿಲ್ಲವೇನೋ?

ಶರ್ಮ ಅವರು ಪಾಲಿಕೆಯಲ್ಲಿ ಮೊದಲಿನಿಂದಲೂ ಬೇಡದ ಅಧಿಕಾರಿಯೇ ಆಗಿದ್ದರು. ಪಾಲಿಕೆಯ ಮೂರು ವಿಭಾಗಗಳಲ್ಲಿ ನಡೆದ 1,539 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳಲ್ಲಿ ಅಕ್ರಮ ನಡೆದು ಅದಕ್ಕೆ ಸಂಬಂಧಪಟ್ಟ ಹಲವು ದಾಖಲೆಗಳು ಸುಟ್ಟು ಹೋದ ಪ್ರಕರಣವನ್ನು ಶರ್ಮ ಅವರೇ ತನಿಖೆ ಮಾಡುತ್ತಿದ್ದರು.

ಆದರೆ, ಪಾಲಿಕೆಯ ಆಗಿನ ಆಯುಕ್ತ ಸಿದ್ದಯ್ಯ ಅವರು, ಈ ತನಿಖೆಯನ್ನು ಲೋಕಾಯುಕ್ತ ಅಥವಾ ಸಿ‌ಐಡಿಗೆ ವಹಿಸಬೇಕು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿದರು. ಸರ್ಕಾರ ಸಿ‌ಐಡಿಗೆ ಒಪ್ಪಿಸಿತು. ಪಾಲಿಕೆಗೆ ಶರ್ಮ ಮಾತ್ರ ಬೇಡವಾಗಿರಲಿಲ್ಲ. ಅವರ ಹಾಗೆ ಪ್ರಾಮಾಣಿಕವಾಗಿ ತಮ್ಮ ಕೆಲಸ ಮಾಡುವ ಯಾವ ಅಧಿಕಾರಿಯನ್ನೂ ಅದು ಸಹಿಸಿಕೊಳ್ಳುತ್ತ ಇರಲಿಲ್ಲ.

ಪಾಲಿಕೆಯ ಒಟ್ಟು 28 ವಿಭಾಗಗಳ ಪೈಕಿ ಮೂರು ವಿಭಾಗಗಳಲ್ಲಿ 1,539 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳನ್ನು ಪರಿಶೀಲಿಸಿ ಆಯುಕ್ತರ ತಾಂತ್ರಿಕ ಕೋಶದ (ಟಿವಿಸಿಸಿ) ಮುಖ್ಯ ಎಂಜಿನಿಯರ್ ದೇವರಾಜ್ ಒಂದು ವರದಿ ಸಲ್ಲಿಸಿದ್ದರು. ಈ ಮೂರು ವಿಭಾಗಗಳಲ್ಲಿ ಕನಿಷ್ಠ 200 ರಿಂದ 300 ಕೋಟಿ ರೂಪಾಯಿ ಅಕ್ರಮ ಆಗಿರಬಹುದು ಎಂದು ಅವರು ವರದಿಯಲ್ಲಿ ಹೇಳಿದ್ದರು. ಪಾಲಿಕೆಯ ಸದಸ್ಯರು ಮತ್ತು ಆಡಳಿತ ವರ್ಗ ಅವರಿಗೆ `ಶಹಬ್ಬಾಸ್` ಎನ್ನಬೇಕಿತ್ತು.

ಆದರೆ, ಕೆಲವರು ಪ್ರಭಾವಿ ಶಾಸಕರು, ಸದಸ್ಯರು ದೇವರಾಜ್ ಅವರನ್ನು ಪಾಲಿಕೆಯ ಸಭೆಗೆ ಕರೆಸಿ `ಹುಚ್ಚ`, `ತಲೆ ತಿರುಕ` ಎಂದು ಬಿರುದು ಕೊಟ್ಟರು! ದೇವರಾಜ್ ಒಬ್ಬ ಪ್ರಾಮಾಣಿಕ ಅಧಿಕಾರಿ. ಅವರ ವಿರುದ್ಧ ಯಾವ ಕಳಂಕವೂ ಇಲ್ಲ. ಅವರು ಮಾಡಿದ ತಪ್ಪು ಏನು ಎಂದರೆ ಅಕ್ರಮ ಆಗಿರುವುದನ್ನು ಪತ್ತೆ ಮಾಡಿರುವುದು. ಅದು ಪಾಲಿಕೆ ಸದಸ್ಯರಿಗೆ, ಶಾಸಕರಿಗೆ ಬೇಡದ ಉಪದ್ವ್ಯಾಪ ಎನಿಸಿತು!

ಈ ಪ್ರಕರಣದಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚು ಕಡತಗಳು ಇದ್ದುವು. ಈಗ ಸಿ‌ಐಡಿ ಪೊಲೀಸರಿಗೆ ಆರೂವರೆ ಸಾವಿರ ಕಡತಗಳು ಮಾತ್ರ ಸಿಕ್ಕಿವೆ. ಇನ್ನೂ ಮೂರೂವರೆ ಸಾವಿರ ಕಡತಗಳು ಸಿಕ್ಕಿಲ್ಲ. ಅವು ಅಲ್ಲಿ ಇಲ್ಲ, ನಾಪತ್ತೆಯಾಗಿವೆ, ಸುಟ್ಟು ಹೋಗಿವೆ. ಹೀಗೆ ಏನೆಲ್ಲ ಕಾರಣ ಕೊಡಬಹುದು.

ಕಾಣೆಯಾದ ಕಡತಗಳಲ್ಲಿ ಏನೆಲ್ಲ ಇತ್ತು ಎಂದು ಊಹೆ ಮಾಡುವುದು ಕಷ್ಟವೇನೂ ಅಲ್ಲ. ಹೈಕೋರ್ಟ್‌ನ ಈಚಿನ ಆದೇಶದಂತೆ, ದೇವರಾಜ್ ಅವರೇ ಮತ್ತೆ ಈ ಪ್ರಕರಣದ ತನಿಖೆ ಕೈಗೊಂಡಿದ್ದರು. ಕಳೆದ ಜೂನ್ ತಿಂಗಳ ಎರಡನೇ ವಾರದಲ್ಲಿ ಅವರನ್ನು ಇದ್ದಕ್ಕಿದ್ದಂತೆ ಬದಲಿಸಲಾಯಿತು. ಹೈಕೋರ್ಟಿಗೆ ಸತ್ಯ ಬೇಕಾಗಿತ್ತು. ಈಗ ಸತ್ಯ ಸಿಗುತ್ತದೆಯೇ? ಗೊತ್ತಿಲ್ಲ.

ಕಳೆದ ಮೂರು ವರ್ಷಗಳಿಂದ ಪಾಲಿಕೆಯ ಆಡಳಿತ ಸೂತ್ರವನ್ನು ಬಿಜೆಪಿ ಹಿಡಿದಿದೆ. ಈ ಅವಧಿಯಲ್ಲಿ ನಡೆದಷ್ಟು ಅಕ್ರಮ, ಭ್ರಷ್ಟಾಚಾರ ಹಿಂದೆ ಯಾವಾಗಲಾದರೂ ನಡೆದಿತ್ತೇ ಎಂದು ಸಾರ್ವಜನಿಕರು ಬಿಡಿ, ಅಧಿಕಾರಿಗಳೇ ಕೇಳಿಕೊಂಡು ಬೆಚ್ಚಿ ಬೀಳುತ್ತಿದ್ದಾರೆ. ಒಂದು ಸಾರಿ ಅಕ್ರಮಕ್ಕೆ, ಭ್ರಷ್ಟಾಚಾರಕ್ಕೆ ದಾರಿ ಮಾಡಿದ ಮೇಲೆ ಅಲ್ಲಿ ಕಾನೂನಿನ ಆಡಳಿತಕ್ಕೆ ಅವಕಾಶವೇ ಇರುವುದಿಲ್ಲ, ರಾಜಿ ಮಾಡಿಕೊಳ್ಳಲೇಬೇಕಾಗುತ್ತದೆ.

ಕಸ ವಿಲೇವಾರಿಯ ಗುತ್ತಿಗೆಯೇ ಒಂದು ದೊಡ್ಡ ಬಹುಕೋಟಿ ಹಗರಣ. ಕಾಲುವೆಗಳ ಹೂಳು ತೆಗೆಯುವುದು ಇನ್ನೊಂದು ಬಹುಕೋಟಿ ಹಗರಣ. ಎರಡೂ ಕೊಚ್ಚೆ, ಹೊಲಸು. ಅದು ಯಾರ ಯಾರ ಮೈಗೆ ಹತ್ತಿದೆ?... ಬೆಂಗಳೂರನ್ನು ಪ್ರತಿನಿಧಿಸುವ ಐವರು ಸಚಿವರು ಈಗ ಸಂಪುಟದಲ್ಲಿ ಇದ್ದಾರೆ.

ಅವರು ತಾವು ಪ್ರತಿನಿಧಿಸುವ ಊರಿನ ಕಲ್ಯಾಣದ ಬಗ್ಗೆ ಯಾವತ್ತಾದರೂ ತಲೆ ಕೆಡಿಸಿಕೊಂಡುದು ಕೇಳಿಲ್ಲ, ಕಂಡಿಲ್ಲ. ಇದು ಅರ್ಥವಾಗದ ಉದಾಸೀನ. ಒಂದು ವ್ಯವಸ್ಥೆ ಕೆಟ್ಟು ಹೋಗುವುದನ್ನು ನೋಡುತ್ತ ಸುಮ್ಮನೆ ಇರುವುದು ಕೂಡ ದೊಡ್ಡ ದ್ರೋಹ. ಜನರು ಕೊಟ್ಟ ಆದೇಶಕ್ಕೆ ವಿರುದ್ಧವಾದ ನಡೆ.

ಆಡಳಿತ ಹಿಡಿದವರ ಯಾರ ಅಂತರಂಗದಲ್ಲಿಯೂ ಸಣ್ಣದಾಗಿಯೂ ವಿವೇಕ ಕೂಗು ಹಾಕುತ್ತಿರುವಂತೆ ಕಾಣುವುದಿಲ್ಲ. ಅಥವಾ ಅದರ ಕೂಗು ಕೇಳದಂತೆ ಬೀರುವಿನಲ್ಲಿ ಭದ್ರವಾಗಿ ಇಟ್ಟು ಬೀಗ ಹಾಕಿಬಿಟ್ಟಂತೆ ಭಾಸವಾಗುತ್ತದೆ. ಇದಕ್ಕಿಂತ ದುರಂತ ಇನ್ನೇನು ಇರಲು ಸಾಧ್ಯ?

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಪದ್ಮರಾಜ ದಂಡಾವತಿ-ಪ್ರಜಾವಾಣಿ
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-08-19

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»ಶಿಕ್ಷಕರ ದಿನಾಚರಣೆ ಮತ್ತು ಡಾ. ಎಸ್ ರಾಧಾಕೃಷ್ಣನ್
» ಕುಡಿದದ್ದು ಶರಬತ್ತು, ತಂದಿತ್ತು ಆಪತ್ತು !
»ಹಣೆಬರಹಕ್ಕೆ ಹೆದರಲಿಲ್ಲ, ಅದಕ್ಕೇ ಎತ್ತಿದಳು ಮಂಗಳಾರತಿ!
» ಊಹಾಪೋಹ ಮಹಾಪೂರದಲ್ಲಿ ಕೊಚ್ಚಿಹೋಗುವ ಮುನ್ನ...
»ಅಳುವಿನ ಕಾರಣ...
»ಕುಟ್ಟ ಬ್ಯಾರಿಯ ಪಂಜ ಪೇಟೆ...
» ವರ್ಣ ವ್ಯವಸ್ಥೆ: ಸಂಪೂರ್ಣ ಅವ್ಯವಸ್ಥೆ...
» ನಮ್ಮತಾರೆಯರಿಗೆ ಮೇಲ್ಮನೆಯಲ್ಲಿ ಏನು ಕೆಲಸ?...
»ವಧುವಿನ ದಕ್ಷಿಣೆ - 'ವರದಕ್ಷಿಣೆ'....
» ಗರುಡನ ಮಾರ್ಗ...
» ಹೃದಯದಾಳದ ಮಾತು....
»ಹೆಗಡೆ 86, ನೆನಪು ನೂರಾರು: ಜಾತಿ-ಹಣ ಮುಖ ನೋಡದೆ, ರಾಜಕೀಯ ಮಾಡಿದ್ರು...
» ನ್ಯಾಯಾಂಗದ ಗಾಜಿನ ಮನೆಗೆ ಕಲ್ಲು ಹೊಡೆದ ಮಮತಾ
» ಬೇರು ಒಣಗಿದ ಮರ ಗಟ್ಟಿಯಾಗಿ ನಿಂತೀತೇ?....
»ಜೆಪಿ ಹಾದಿಯಲ್ಲಿ ಅಣ್ಣಾ ನಡಿಗೆ ಸಾಧ್ಯವೇ? ...
»ಜಯಕಿರಣ ಪತ್ರಿಕೆಯಲ್ಲಿ ಬ೦ದತಹ ಯುವತಿಯೊಬ್ಬಳ ಮನದಾಳದ ಮಾತು...
»ಅಂತರಂಗದ ದನಿಗೆ ಕಿವುಡಾದವರ ನಡುವೆ...
»ದೇಶಪ್ರೇಮಕ್ಕಿಂತ ದೊಡ್ಡದೇ ಧರ್ಮಪ್ರೇಮ?...
»ಕತ್ತು ಕತ್ತರಿಸುವ ಸಿನಿಮಾಗಳ ಸಂದೇಶವೇನು?...
» ಪಾತ್ರೆಯೊಳಗಿನ ಮೀನು....
»ಸಮಾನತೆ...
» ಹರ್ಷದ ದಾರಿ
»ವೈಧವ್ಯವೆಂಬ ವಿಷವರ್ತುಲದಿಂದ ಇವರಿಗೆ ಬಿಡುಗಡೆ ಎಂದು?
»ಅಂಗಡಿಯಲ್ಲಿ ದೊರಕಿದ ಪವಾಡ...
»ದೊಡ್ಡ ಚಳವಳಿಗಳ ಕಾಲ ಮುಗಿದುಹೋಗಿದೆ...

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri