ಆದಿತ್ಯವಾರ, 26-01-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ವೈಧವ್ಯವೆಂಬ ವಿಷವರ್ತುಲದಿಂದ ಇವರಿಗೆ ಬಿಡುಗಡೆ ಎಂದು?

ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಬೃಂದಾವನ ಪಟ್ಟಣದಲ್ಲಿ  ಅತ್ಯಂತ ಅಮಾನವೀಯ ಪರಿಸ್ಥಿತಿಗಳಲ್ಲಿ ಜೀವನವನ್ನು ಸವೆಸುತ್ತಿರುವ ಸಾವಿರಾರು ವಿಧವೆಯರ ಬವಣೆಗಳಿಗೆ ಸ್ಪಂದಿಸಿದ ಭಾರತದ ಸರ್ವೋಚ್ಚ ನ್ಯಾಯಾಲಯ ಕಳೆದ ವಾರವಷ್ಟೇ ಆದೇಶವೊಂದನ್ನು ಹೊರಡಿಸಿದೆ.

ನ್ಯಾಯಾಲಯದಿಂದಲೇ ನೇಮಕವಾದ ಸಮಿತಿಯೊಂದು ಬೃಂದಾವನದಲ್ಲಿ ಕೈಗೊಂಡ ಅಧ್ಯಯನದಿಂದ ಹೊರಹೊಮ್ಮಿದ ಆಘಾತಕಾರಿ ಸತ್ಯಗಳಿಂದ ಬೆಚ್ಚಿ ಬಿದ್ದ ನ್ಯಾಯಾಲಯ ಉತ್ತರ ಪ್ರದೇಶ ಸರ್ಕಾರ ಮತ್ತು ರಾಷ್ಟ್ರೀಯ ಮಹಿಳಾ ಆಯೋಗಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.

ಬೃಂದಾವನದಲ್ಲಿ ಹಸಿವು, ದಾರಿದ್ರ್ಯ, ನೀರಡಿಕೆ ಹಾಗೂ ಅನಾರೋಗ್ಯದಿಂದ ನರಳುತ್ತಾ  ಬದುಕಿದ್ದೂ ಸತ್ತಂತಿರುವ  ಸಾವಿನಲ್ಲೂ ಅಲಕ್ಷ್ಯಕ್ಕೆ ಒಳಗಾಗುತ್ತಿರುವ  ವಿಧವೆಯರಿಗೆ ತಕ್ಷಣವೇ ಜೀವನಾವಶ್ಯಕತೆಗಳನ್ನು ಒದಗಿಸಬೇಕೆಂಬ ಆದೇಶವನ್ನು ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ನೀಡಿತು.

ಬೃಂದಾವನವನ್ನು  ವಿಧವೆಯರ ಪಟ್ಟಣ  ಎಂದು ಗುರುತಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಕುಟುಂಬಗಳಿಂದ ತ್ಯಜಿಸಲ್ಪಟ್ಟ ಮೇಲ್ಜಾತಿಯ ವಿಧವೆಯರು ಇಲ್ಲಿ  ಅತ್ಯಂತ ಶೋಚನೀಯ ಪರಿಸ್ಥಿತಿಗಳಲ್ಲಿ ಬದುಕುತ್ತಿದ್ದಾರೆ.

ಸುಮಾರು 20,000 ವಿಧವೆಯರು ಈ ಪಟ್ಟಣದ ಬೀದಿ ಬದಿಗಳಲ್ಲಿ, ನದಿ ತೀರದಲ್ಲಿ, ಸ್ವಯಂಸೇವಾ ಸಂಸ್ಥೆಗಳು ನಡೆಸುವ ವಿಧವಾ ಗೃಹಗಳಲ್ಲಿ, ಸರ್ಕಾರಿ ಆಶ್ರಯ ಕೇಂದ್ರಗಳಲ್ಲಿ ಅಥವಾ ಭಜನಾಶ್ರಮಗಳಲ್ಲಿ  ಕನಿಷ್ಠ ಮಟ್ಟದ ಜೀವನಾವಶ್ಯಕತೆಗಳನ್ನೂ ಪೂರೈಸಿಕೊಳ್ಳಲಾಗದಂಥ ಸ್ಥಿತಿಗಳಲ್ಲಿ ಬಾಳಿನ ದಿನಗಳನ್ನು ನೂಕುತ್ತಿದ್ದಾರೆ.

ಕಡು ದಾರಿದ್ರ್ಯದ ಪರಿಸ್ಥಿತಿಯಲ್ಲಿ ಜೀವನವನ್ನು ನಡೆಸುತ್ತಿರುವ ಇವರಲ್ಲನೇಕರು, ಅದರಲ್ಲೂ ಯುವ ವಿಧವೆಯರು ಲೈಂಗಿಕ ಶೋಷಣೆ ಮತ್ತು ಮಾನವ ಸಾಗಾಣಿಕೆಯಂಥ ಕ್ರೂರ ಜಾಲಗಳ ಕಪಿಮುಷ್ಟಿಯಲ್ಲೂ ಸಿಲುಕಿ ನರಳುತ್ತಿದ್ದಾರೆ.

ಭಯಾನಕವಾದ ರೋಗ-ರುಜಿನಗಳಿಗೆ ತುತ್ತಾಗಿ, ಯಾವುದೇ ಬಗೆಯ ವೈದ್ಯಕೀಯ ನೆರವಿಲ್ಲದೆ ದಿನನಿತ್ಯ ಸಾವಿನ ಮನೆ ಸೇರುತ್ತಿರುವ ವಿಧವೆಯರ ಬಗ್ಗೆ ಸರ್ಕಾರ ಹಾಗೂ ನಾಗರಿಕ ಸಮಾಜ ತೋರುತ್ತಿರುವ ನಿರ್ಲಕ್ಷ್ಯವನ್ನು ಮಾನವೀಯ ಮೌಲ್ಯಗಳ ಬಗ್ಗೆ ಕಾಳಜಿಯಿರುವ ಯಾರೂ ಸಹಿಸಲು ಸಾಧ್ಯವಿಲ್ಲ.

ಸರ್ವೊಚ್ಚ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ವರದಿಯಲ್ಲಿ, ಯಾವುದೇ ದಿಕ್ಕಿಲ್ಲದೆ ಸತ್ತ ಅನೇಕ ವಿಧವೆಯರ ಶವಗಳಿಗೆ ಸೂಕ್ತ ರೀತಿಯಲ್ಲಿ ಅಂತ್ಯಕ್ರಿಯೆಯನ್ನು ಮಾಡದೆ ದೇಹಗಳನ್ನು ಬಿಸಾಡಲಾಗುತ್ತಿದೆ, ಎಂದು ಕೂಡ ತಿಳಿಸಲಾಗಿದ್ದು ನ್ಯಾಯಾಲಯ ಉತ್ತರ ಪ್ರದೇಶ ಸರ್ಕಾರಕ್ಕೆ, ಸತ್ತ ವಿಧವೆಯರಿಗೆ ಅವರವರ ಧಾರ್ಮಿಕ ಕ್ರಿಯಾ ವಿಧಿಗಳ ಪ್ರಕಾರ ಅಂತ್ಯ ಸಂಸ್ಕಾರವನ್ನು ಮಾಡಬೇಕೆಂಬ ಸೂಚನೆಯನ್ನು ಕೂಡ ನೀಡಿದೆ.

ಅಷ್ಟೇ ಅಲ್ಲ, ಸರ್ಕಾರಿ ಸೇವೆಯಲ್ಲಿರುವ ವೈದ್ಯರನ್ನು ಬೃಂದಾವನಕ್ಕೆ ಕಳುಹಿಸಿ ವಿವಿಧ ಬಗೆಯ ರೋಗ ರುಜಿನಗಳಿಂದ ನರಳುತ್ತಿರುವಂಥ ವಿಧವೆಯರಿಗೆ ವೈದ್ಯಕೀಯ ನೆರವನ್ನು ಒದಗಿಸಲು ಕೂಡ ರಾಜ್ಯ ಸರ್ಕಾರ ವ್ಯವಸ್ಥೆಯನ್ನು ಮಾಡಬೇಕೆಂಬ ನಿರ್ದೇಶನವೂ ನ್ಯಾಯಾಲಯದಿಂದ ಹೊರ ಬಂದಿದೆ.

ನ್ಯಾಯಾಲಯದ ಈ ನಿರ್ಧಾರಗಳು ಹಾಗೂ ಸಮಿತಿಯ ವರದಿ ಬಹಿರಂಗ ಪಡಿಸಿದ ವಿಚಾರಗಳು ದೇಶದಾದ್ಯಂತ ಪ್ರಜ್ಞಾವಂತ ವಲಯವನ್ನು ಬೆಚ್ಚಿ ಬೀಳಿಸಿವೆ. ಆದರೆ ಸರ್ವೋಚ್ಚ ನ್ಯಾಯಾಲಯವೇ ಒಪ್ಪಿಕೊಂಡಿರುವಂತೆ ಈಗಾಗಲೇ ಸಲ್ಲಿಕೆಯಾಗಿರುವ ಅನೇಕ ವರದಿಗಳಾಗಲಿ, ಕೈಗೊಂಡಿರುವ ಅಧ್ಯಯನಗಳಾಗಲಿ ಬಹುತೇಕ ವಿಧವೆಯರ ಬದುಕಿನಲ್ಲಿ ಯಾವ ಗುಣಾತ್ಮಕ ಬದಲಾವಣೆಯನ್ನೂ ತಂದಿಲ್ಲ.

ಬೃಂದಾವನದಲ್ಲಿ ನಡೆಯುತ್ತಿರುವ ವಿಧವೆಯರ ಶೋಷಣೆಯನ್ನು ನಾವು ಒಂದು ಪ್ರತ್ಯೇಕ ಘಟನೆಯೆಂದು ಪರಿಗಣಿಸಲಾಗದು. ಜೀವನದಲ್ಲಿ ಯಾವುದೇ ಬಗೆಯ ಆಶ್ರಯವಿಲ್ಲದೆ ಸರ್ಕಾರ ಅಥವಾ ಸ್ವಯಂಸೇವಾ ಸಂಸ್ಥೆಗಳು ನೀಡುವ ನೆರವನ್ನೇ ನೆಚ್ಚಿ ಬದುಕುತ್ತಿರುವ ವಿಧವೆಯರು ದೇಶದಾದ್ಯಂತ ಕಂಡು ಬರುತ್ತಾರೆ.

ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ 330 ಲಕ್ಷ ವಿಧವೆಯರಿದ್ದಾರೆ. ಇವರಲ್ಲಿ ಅತಿ ಹೆಚ್ಚಿನ ಸಂಖ್ಯೆಯವರು ಪರಾವಲಂಬಿಗಳಾಗಿಯೇ ತಮ್ಮ ಇಡೀ ಬದುಕನ್ನು ಸವೆಸುತ್ತಿದ್ದು, ಪತಿ ಬದುಕಿರುವಾಗ ಕೂಡ ತಮ್ಮ ಬದುಕನ್ನು ಕುರಿತು ಯಾವುದೇ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳಲಾಗದಂಥ ಸ್ಥಿತಿಯಲ್ಲಿದ್ದವರು.

ಪತಿಯ ಮರಣಾನಂತರ ಪೋಷಕರು, ಪತಿಯ ಬಂಧುಗಳು ಅಥವಾ ತಮ್ಮ ಮಕ್ಕಳಿಂದಲೇ ತಿರಸ್ಕರಿಸಲ್ಪಟ್ಟು ಯಾತ್ರಾ ಸ್ಥಳಗಳಲ್ಲೋ, ಪ್ರವಾಸಿ ತಾಣಗಳಲ್ಲೋ ಆಸರೆಯನ್ನರಸಿ ನಿರಂತರವಾಗಿ  ವಲಸಿಗ  ಸ್ಥಿತಿಯಲ್ಲಿರುವಂಥ ವಿಧವೆಯರ ಬಗ್ಗೆ ಸರ್ಕಾರವಾಗಲಿ, ನಾಗರಿಕ ವಲಯವಾಗಲಿ ಹೆಚ್ಚು ಕಡಿಮೆ ತಟಸ್ಥ ಧೋರಣೆಯನ್ನು ತಳೆದಿರುವುದು ವಿಷಾದನೀಯ.

ಭಾರತದ ವಿಧವೆಯರ ಸ್ಥಿತಿಗಳನ್ನು ವಿಶೇಷ್ಲಿಸುವಾಗ ನಾವು ಅಳವಡಿಸಿಕೊಳ್ಳಬೇಕಾದ್ದು  `ಆಯ್ಕೆ` ಎನ್ನುವ ಸೈದ್ಧಾಂತಿಕ ಚೌಕಟ್ಟನ್ನು. ಏಕೆಂದರೆ, ದೇಶದ ಬಹುತೇಕ ವಿಧವೆಯರಿಗೆ ತಮ್ಮ ಬದುಕು ಸಾಗಬೇಕಾದ ದಿಕ್ಕನ್ನು ಕುರಿತಂತೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಆಯ್ಕೆಯ ಸ್ವಾತಂತ್ರ್ಯವಿರುವುದಿಲ್ಲ.

ಇಂದಿಗೂ, ಇವರಲ್ಲಿ ಬಹು ಮಂದಿ ಜೀವನ ನಿರ್ವಹಣೆಗೆ ಅವಶ್ಯವಾದ ಶಿಕ್ಷಣ ಮತ್ತು ಉದ್ಯೋಗಗಳಿಂದ ವಂಚಿತರಾಗಿರುವುದರಿಂದ ಅವರ ಬದುಕು ನಿರಂತರವಾಗಿ ಪರಾವಲಂಬಿ ವಲಯದಲ್ಲೇ ಸುತ್ತುತ್ತಿರುತ್ತದೆ.

ವಿವಾಹ ಪೂರ್ವದಲ್ಲಿಯೇ ಹೆಣ್ಣನ್ನು ಕೌಟುಂಬಿಕ ಹೊರೆ ಎಂದು ಪರಿಗಣಿಸುವ ಈ ಸಾಮಾಜಿಕ ವ್ಯವಸ್ಥೆಯಲ್ಲಿ, ಆಕೆಯ ಪತಿಯ ಮರಣಾನಂತರ ಅವಳಿಗೆ ಆಶ್ರಯ ನೀಡಲು ಅನೇಕ ಪೋಷಕರು ತಯಾರಿರುವುದಿಲ್ಲ. ಹುಟ್ಟಿದ ಮನೆಯಲ್ಲಿಯೇ ಈ ಧೋರಣೆಯ್ದ್ದಿದರೆ ಪತಿಯ ಮನೆಯವರು, ಆತ ಸತ್ತ ಮೇಲೆ ಸೊಸೆಯನ್ನು ನಿರ್ದಾಕ್ಷಿಣ್ಯವಾಗಿ ಮನೆಯಿಂದ ಹೊರ ಹಾಕುತ್ತಾರೆ.

ಮತ್ತನೇಕ ಸಂದರ್ಭಗಳಲ್ಲಿ  ಸ್ವಂತ ಮಕ್ಕಳೇ ತಾಯಿಯನ್ನು ಅನಗತ್ಯ ಅತಿಥಿಯಂತೆ ನಡೆಸಿಕೊಂಡು, ತಾವೇ ಬೃಂದಾವನದಂಥ ಸ್ಥಳಗಳಿಗೆ ಕರೆದು ತಂದು ಬಿಟ್ಟು ಬಿಡುತ್ತಾರೆ ಅಥವಾ ಆಕೆಯೇ ಮನೆಯನ್ನು ಬಿಟ್ಟು ಹೋಗಬೇಕಾದಂಥ ಪರಿಸ್ಥಿತಿಯನ್ನು ಸೃಷ್ಟಿಸಿ ಬಿಡುತ್ತಾರೆ. ಈ ಎಲ್ಲ ಸನ್ನಿವೇಶಗಳಲ್ಲೂ ನಮಗೆ ಎದ್ದು ಕಾಣುವುದು ಆಯ್ಕೆಯ ಅಭಾವ.

ಬೃಂದಾವನ ಅಥವಾ ವಾರಣಾಸಿಯಂಥ ಪವಿತ್ರ ಯಾತ್ರಾ ಸ್ಥಳಗಳು ಅನೇಕ ವಿಧವೆಯರನ್ನು ಸಹಜವಾಗಿಯೇ ಆಕರ್ಷಿಸುತ್ತವೆ. ಇದಕ್ಕೆ ಮುಖ್ಯ ಕಾರಣವೆಂದರೆ ಅಲ್ಲಿಗೆ ಬರುವ ಅಪಾರ ಭಕ್ತ ಸಮೂಹ ಹಾಗೂ ಇಂದಿಗೂ ದಾನದ ಪರಿಕಲ್ಪನೆ ಮತ್ತು ಆಚರಣೆಗಳಲ್ಲಿ  ಇರುವ ನಂಬಿಕೆ.

ಬೃಂದಾವನದಲ್ಲಿಯೇ ಸುಮಾರು ನಾಲ್ಕುಸಾವಿರದಷ್ಟು ಪೂಜಾ ಸ್ಥಳಗಳಿದ್ದು, ಅವುಗಳಲ್ಲನೇಕವು ಶ್ರೀಮಂತ ದೇವಾಲಯಗಳೆಂದು ಗುರುತಿಸಲ್ಪಟ್ಟಿವೆ. ಆದರೆ ಆ ಪ್ರದೇಶದ ವಿಧವೆಯರ ಬದುಕಿನ ಬವಣೆಗಳಿಗೆ ಸ್ಪಂದಿಸಿ, ಅವರ ಜೀವನದ ಪುನರ್ ನಿರ್ಮಾಣಕ್ಕಾಗಿ ಈ ಮೂಲದಿಂದ ಬರುತ್ತಿರುವ ನೆರವು ಮಾತ್ರ ಗೌಣ ಎಂದು ಹೇಳಲಾಗಿದೆ.

ಯೂನಿಸೆಫ್ ಸಂಸ್ಥೆಯ ವರದಿಯೊಂದರ ಪ್ರಕಾರ ಬೃಂದಾವನದ ವಿಧವೆಯರ ಸಂಖ್ಯೆ ಎಂದಿಗೂ ತಟಸ್ಥವಾಗಿ ಉಳಿದಿಲ್ಲ. ಏಕೆಂದರೆ ಪ್ರತಿ ದಿನವೂ ನೆರೆ ರಾಜ್ಯಗಳಿಂದ ಪರ್ಯಾಯ ಜೀವನ ಮಾರ್ಗಗಳಿಲ್ಲದೆ, ಅನೇಕ ವಿಧವೆಯರು ಇಲ್ಲಿಗೆ ಬರುತ್ತಲೇ ಇರುತ್ತಾರೆ.

ಈ ಗುಂಪಿನಲ್ಲಿ ಯುವತಿಯರಿಂದ ಹಿಡಿದು ವೃದ್ಧರವರೆಗೆ ಎಲ್ಲ ವಯಸ್ಸಿನವರೂ ಇದ್ದು, ಇವರಲ್ಲನೇಕರು ಬೃಂದಾವನದ ಭಜನಾಶ್ರಾಮಗಳತ್ತ ಧಾವಿಸುತ್ತಾರೆ. ಏಕೆಂದರೆ ಇಲ್ಲಿ ಇಡೀ ದಿನ ಭಜನೆ ಮಾಡಿದವರಿಗೆ, 8 ರಿಂದ 10 ರೂಪಾಯಿಗಳವರೆಗೆ ಹಣ ಮತ್ತು ಒಂದು ಹಿಡಿ ಅಕ್ಕಿ ಅಥವಾ ಸೊಪ್ಪು ದೊರೆಯುತ್ತದೆ. ಭಜನಾಶ್ರಮಗಳಲ್ಲಿ  ಪ್ರವೇಶ ಪಡೆಯುವುದು ಕೂಡ ಸುಲಭಸಾಧ್ಯವಲ್ಲ.

ತಮ್ಮ ಹೆಸರನ್ನು ನೊಂದಾಯಿಸಿಕೊಂಡು ದಿನಗಟ್ಟಲೆ ಕಾಯಬೇಕಾದಂಥ ಸಂಧರ್ಭಗಳು ಕೂಡ ಇದ್ದು, ತಮ್ಮ ಸರದಿಗಾಗಿ ಕಾಯುತ್ತಿರುವ ವಿಧವೆಯರದ್ದು ಈ ಭಜನಾಶ್ರಮಗಳ ಸುತ್ತ-ಮುತ್ತ ಕಂಡು ಬರುವ ಒಂದು ಸಾಮಾನ್ಯ ದೃಶ್ಯ.

ವಿಧವೆಯರ ಶೋಷಣೆ ಹಾಗೂ ಯಾತನೆ ಕಳೆದು ಹೋದ ಕರಾಳ ದಿನಗಳ ಪಳೆಯುಳಿಕೆಗಳು; ಬದಲಾದ ಇಂದಿನ ಪರಿಸ್ಥಿತಿಗಳಲ್ಲಿ  ಇಂಥ ಅಮಾನುಷ ಘಟನೆಗಳು ನಡೆಯಲು ಸಾಧ್ಯವೇ ಇಲ್ಲ ಎಂಬ ಭಾವನೆ ಬಹು ಜನರಲ್ಲಿದೆ.

ಆದರೆ ಈ ಆಧುನಿಕ ಯುಗದಲ್ಲೂ ಜೀವನ ನಿರ್ವಹಣೆಗೆ ದಾರಿಯಿಲ್ಲದೆ, ಇಲ್ಲ ಭಿಕ್ಷೆಯನ್ನು ಅವಲಂಬಿಸಬೇಕು, ರೈಲು ಅಥವಾ ಬಸ್ ನಿಲ್ದಾಣಗಳಲ್ಲಿ  ದಿನ-ರಾತ್ರಿಗಳನ್ನು ಕಳೆಯಬೇಕು, ಅದೂ ಇಲ್ಲವೆಂದರೆ ಸರ್ಕಾರಿ ಅಥವಾ ಸ್ವಯಂಸೇವಾ ಸಂಸ್ಥೆಗಳು ನಡೆಸುವ ಆಶ್ರಯ ತಾಣಗಳು ನೀಡುವ ಆಸರೆಯನ್ನೇ ನಂಬಿ ದಯನೀಯ ಸ್ಥಿತಿಯಲ್ಲಿ ಜೀವನವನ್ನು ಸವೆಸಬೇಕು ಎನ್ನುವ ಪರಿಸ್ಥಿತಿಯಲ್ಲಿರುವ ಬೃಂದಾವನದ ವಿಧವೆಯರು 19ನೇ ಶತಮಾನದ ನೆನಪುಗಳನ್ನು ನಮ್ಮ ಮುಂದೆ ಮತ್ತೆ ತಂದಿಟ್ಟಿದ್ದಾರೆ.

ಸುಮಾರು 160 ವರುಷಗಳ ಹಿಂದೆ ವಿಧವಾ ಪುನರ್ ವಿವಾಹ ಕಾಯಿದೆಯನ್ನು ಜಾರಿಗೆ ತರಲು ಈಶ್ವರಚಂದ್ರ ವಿದ್ಯಾಸಾಗರ್ ಅವರು ನಡೆಸಿದ ಬೃಹತ್ ಹೋರಾಟವನ್ನು ನೆನೆಸಿಕೊಂಡಾಗ ಇಂದಿನ ಪರಿಸ್ಥಿತಿಗಳಲ್ಲೂ ಅಂದಿನ ಪರಿಸ್ಥಿತಿಗಳಲ್ಲೂ ಎಷ್ಟೊಂದು ಹೋಲಿಕೆ ಕಂಡು ಬರುತ್ತಿದೆ ಎನಿಸದೆ ಹೋಗದು.

ಪುರುಷರ ವಿಚಾರದಲ್ಲಿ  `ಬಹು ಪತ್ನಿತ್ವ` ದ ಆಚರಣೆಯನ್ನು ಒಪ್ಪಿದ್ದ ಸಮಾಜ, ಮಹಿಳೆಯರು ಮಾತ್ರ ಮರು ವಿವಾಹವಾಗುವುದಕ್ಕೆ ತೀವ್ರ ವಿರೋಧವನ್ನು ವ್ಯಕ್ತ ಪಡಿಸಿತ್ತು. ವಿಧವಾ ವಿವಾಹ ಶಾಸ್ತ್ರ ಸಮ್ಮತವಲ್ಲ ಎಂಬ ವಾದವನ್ನು ಮುಂದಿಟ್ಟ ಸಂಪ್ರದಾಯವಾದಿಗಳು ಈ ಕಾಯಿದೆಯ ಅನುಷ್ಠಾನಕ್ಕೆ ಎಲ್ಲ ಬಗೆಯ ಅಡ್ಡಿಗಳನ್ನು ಒಡ್ಡಿದರೂ 1856 ರಲ್ಲಿ ಬ್ರಿಟಿಷ್ ಸರ್ಕಾರ ವಿಧವಾ ಪುನರ್ ವಿವಾಹ ಕಾಯಿದೆಯನ್ನು ಜಾರಿಗೆ ತಂದಿತು.

ಆದರೆ ಈ ಕಾಯಿದೆ ಬಂದ ತಕ್ಷಣ ವಿಧವೆಯರ ಪರಿಸ್ಥಿತಿ ಸುಧಾರಿಸಿ ಬಿಡಲಿಲ್ಲ. ವಿವಾಹವಾದಂಥ ವಿಧವೆಯರನ್ನು ಸಾಮಾಜಿಕ ಬಹಿಷ್ಕಾರಕ್ಕೆ ಒಳಪಡಿಸಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದಂಥ ಪರಿಸ್ಥಿತಿಯನ್ನು ಪ್ರಗತಿ ವಿರೋಧಿಗಳು ಸೃಷ್ಟಿಸಿದ್ದರು. ಇಂಥ ಬೆದರಿಕೆಗಳಿಂದ ಧೃತಿಗೆಡದ ಸಮಾಜ ಸುಧಾರಕರು ಆಗಿನ ಕಾಲಕ್ಕೇ ಅವರಿಗಾಗಿ ಪ್ರತ್ಯೇಕ ರಕ್ಷಣಾ ಗೃಹಗಳನ್ನು ತೆರೆದಿದ್ದನ್ನು ನಾವು ಇಲ್ಲಿ ಸ್ಮರಿಸಬೇಕಾಗುತ್ತದೆ.

ಹತ್ತೊಂಬತ್ತನೇ ಶತಮಾನದ ಕ್ರಾಂತಿಕಾರಿ ಸಮಾಜ ಸುಧಾರಕರಾದ ಮಹಾತ್ಮಾ ಫುಲೆಯವರು ತಮ್ಮ ಪತ್ನಿ ಸಾವಿತ್ರಿಬಾಯಿ ಅವರೊಡಗೂಡಿ ವಿಧವೆಯರ ಬಾಳಿನಲ್ಲಿ ಬೆಳಕನ್ನು ತರಲು ನಡೆಸಿದ ಹೋರಾಟಕ್ಕೂ 150 ವರುಷಗಳಿಗೂ ಮೀರಿದ ಇತಿಹಾಸವಿದೆ.

ವಿಧವೆಯರ ಕೇಶಮುಂಡನದಂಥ ಅಮಾನವೀಯ ಪದ್ಧತಿಯ ವಿರುದ್ಧ ಕ್ಷೌರಿಕರನ್ನೇ ಸಂಘಟಿಸಿ ಹೋರಾಟ ನಡೆಸಿದ್ದೇ ಅಲ್ಲದೆ, ಸ್ವತಃ ತಮ್ಮ ಬಂಧುಗಳಿಂದಲೇ ಲೈಂಗಿಕ ಅತ್ಯಾಚಾರಕ್ಕೆ ಒಳಗಾಗಿ ಗರ್ಭಿಣಿಯರಾದ ವಿಧವೆಯರಿಗಾಗಿ ಪ್ರಸೂತಿ ಗೃಹವನ್ನು ತೆರೆದದ್ದು, ವಿಧವೆಯರು ಹಾಗೂ ಅವರ ಮಕ್ಕಳಿಗೆ ಆಶ್ರಯವನ್ನು ನೀಡಲು ಅನಾಥಾಲಯವನ್ನು ಸ್ಧಾಪನೆ ಮಾಡಿದ್ದು, ಇವುಗಳನ್ನೆಲ್ಲಾ ಮರೆತು ಈ ಆಧುನಿಕ ಯುಗದಲ್ಲೂ ವಿಧವೆಯರನ್ನು ಮನುಷ್ಯರೇ ಅಲ್ಲವೇನೋ ಎಂಬಂತೆ ನಡೆಸಿಕೊಳ್ಳುತ್ತಿರುವುದನ್ನು ನೋಡಿದರೆ ಈ ಸಮಾಜದ ಸಾರ್ವಜನಿಕ ಪ್ರಜ್ಞೆ ಎತ್ತ ಹೋಗಿದೆ ಎನಿಸದಿರುವುದಿಲ್ಲ.

ವಿಧವಾ ವಿವಾಹಕ್ಕೆ ಮಾನ್ಯತೆ ನೀಡಿ, ವಿಧವೆಯರನ್ನು ಗೌರವದಿಂದ ನಡೆಸಿಕೊಳ್ಳಬೇಕೆನ್ನುವ ಚಳವಳಿ ಆರಂಭವಾಗಿ ಹೆಚ್ಚು-ಕಡಿಮೆ ಎರಡು ಶತಮಾನಗಳೇ ಕಳೆಯುತ್ತಾ ಬಂದಿವೆ. ಆದರೆ ಇಂದಿಗೂ ಬೃಂದಾವನದಲ್ಲಿ  ಹಾಗೂ ಮತ್ತನೇಕ ಖಾಸಗಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ವಿಧವೆಯರ ಮಾನವ ಹಕ್ಕುಗಳ ಉಲ್ಲಂಘನೆ ಅವ್ಯಾಹತವಾಗಿ ನಡೆಯುತ್ತಿದೆ.

ಇತ್ತೀಚೆಗೆ ಬಂದ ಒಂದು ವರದಿಯ ಪ್ರಕಾರ ಉತ್ತರ ಭಾರತದ ಕೆಲ ಭಾಗಗಳಲ್ಲಿ  ಸತಿಸಹಗಮನ ಮತ್ತೆ ಆರಂಭವಾಗಿದೆ ಎಂದು ತಿಳಿದು ಬಂದಿದೆ. ಯಾವುದೇ ಬಗೆಯ ಸಾಮಾಜಿಕ-ಆರ್ಥಿಕ ಬೆಂಬಲ ವ್ಯವಸ್ಥೆ ಇಲ್ಲದ ಕಾರಣ ಪತಿಯ ಮರಣಾನಂತರ ಬದುಕಿಯೂ ಸತ್ತಂತಿರುವ ಬದಲು ಒಂದೇ ಬಾರಿ ಸತ್ತ ಪತಿಯೊಡನೆ ಚಿತೆಯನ್ನೇರುವುದೇ ವಾಸಿ ಎನ್ನುವ ಮನಃಸ್ಥಿತಿಗೆ ಮಹಿಳೆಯರನ್ನು ಅವರ ಸಾಮಾಜಿಕ ಪರಿಸರ ತಳ್ಳುತ್ತಿದೆ ಎಂದರೆ ಸಾರ್ವಜನಿಕ ಲಜ್ಜಾಹೀನತೆಯ ಪರಮಾವಧಿಯನ್ನು ಈ ಸಮಾಜ ತಲುಪುತ್ತಿದೆಯೇ ಎಂಬ ಅನುಮಾನ ಬರುತ್ತದೆ.

ಕಾಲದಿಂದ ಕಾಲಕ್ಕೆ ವಿಧವಾ ಮಾಸಾಶನ, ವಿಧವಾ ಸೇವಾಶ್ರಮಗಳ ಸ್ಥಾಪನೆ ಮುಂತಾದ ಯೋಜನೆಗಳನ್ನು ರೂಪಿಸಿ ತನ್ನ ಜವಾಬ್ದಾರಿ ಮುಗಿಯಿತೆಂಬಂತೆ ಕೈಕಟ್ಟಿ ಕುಳಿತಿರುವ ಸರ್ಕಾರ ತಾನು ಈ ಯೋಜನೆಗಳಿಗಾಗಿ ಮೀಸಲಿಟ್ಟಿರುವ ಹಣದಲ್ಲಿ ಎಷ್ಟು ಪಾಲು ವಿಧವೆಯರಿಗೆ ತಲುಪುತ್ತಿದೆ, ಮತ್ತೆಷ್ಟು ತನ್ನೊಳಗೇ ಸೇರಿರುವ ಭ್ರಷ್ಟರ ಕೈ ಸೇರುತ್ತಿದೆ ಎಂಬುದರ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಲಿ.

ವಿಧವೆಯರ ಉದ್ಧಾರದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿಗಳ ಯೋಜನೆಗಳನ್ನು ಗಿಟ್ಟಿಸಿಕೊಂಡಿರುವ ಅನೇಕ ಸ್ವಯಂ ಸೇವಾ ಸಂಸ್ಥೆಗಳ ಕಾರ್ಯ ವೈಖರಿ ಹಾಗೂ ಹಣಕಾಸು ವ್ಯವಹಾರಗಳ ಬಗ್ಗೆಯೂ ಸಾರ್ವಜನಿಕ ತನಿಖೆ ನಡೆಯಲಿ.

ವೈಧವ್ಯವನ್ನೇ ಬಂಡವಾಳ ಮಾಡಿಕೊಂಡು ತಮ್ಮ ಸ್ವಾರ್ಥ ಸಾಧನೆ ಮಾಡಿಕೊಳ್ಳುತ್ತಿರುವ ಧಾರ್ಮಿಕ, ಆರ್ಥಿಕ, ಸಾಂಸ್ಕೃತಿಕ ಪಟ್ಟಭದ್ರ ಹಿತಾಸಕ್ತಿಗಳ ನಿಜ ಬಣ್ಣ ಈಗಲಾದರೂ ಬಯಲಾಗಲಿ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಆರ್ ಇಂದಿರಾ-ಪ್ರಜಾವಾಣಿ
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-08-14

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»ಶಿಕ್ಷಕರ ದಿನಾಚರಣೆ ಮತ್ತು ಡಾ. ಎಸ್ ರಾಧಾಕೃಷ್ಣನ್
» ಕುಡಿದದ್ದು ಶರಬತ್ತು, ತಂದಿತ್ತು ಆಪತ್ತು !
»ಹಣೆಬರಹಕ್ಕೆ ಹೆದರಲಿಲ್ಲ, ಅದಕ್ಕೇ ಎತ್ತಿದಳು ಮಂಗಳಾರತಿ!
» ಊಹಾಪೋಹ ಮಹಾಪೂರದಲ್ಲಿ ಕೊಚ್ಚಿಹೋಗುವ ಮುನ್ನ...
»ಅಳುವಿನ ಕಾರಣ...
»ಕುಟ್ಟ ಬ್ಯಾರಿಯ ಪಂಜ ಪೇಟೆ...
» ವರ್ಣ ವ್ಯವಸ್ಥೆ: ಸಂಪೂರ್ಣ ಅವ್ಯವಸ್ಥೆ...
» ನಮ್ಮತಾರೆಯರಿಗೆ ಮೇಲ್ಮನೆಯಲ್ಲಿ ಏನು ಕೆಲಸ?...
»ವಧುವಿನ ದಕ್ಷಿಣೆ - 'ವರದಕ್ಷಿಣೆ'....
» ಗರುಡನ ಮಾರ್ಗ...
» ಹೃದಯದಾಳದ ಮಾತು....
»ಹೆಗಡೆ 86, ನೆನಪು ನೂರಾರು: ಜಾತಿ-ಹಣ ಮುಖ ನೋಡದೆ, ರಾಜಕೀಯ ಮಾಡಿದ್ರು...
» ನ್ಯಾಯಾಂಗದ ಗಾಜಿನ ಮನೆಗೆ ಕಲ್ಲು ಹೊಡೆದ ಮಮತಾ
» ಬೇರು ಒಣಗಿದ ಮರ ಗಟ್ಟಿಯಾಗಿ ನಿಂತೀತೇ?....
»ಜೆಪಿ ಹಾದಿಯಲ್ಲಿ ಅಣ್ಣಾ ನಡಿಗೆ ಸಾಧ್ಯವೇ? ...
»ಜಯಕಿರಣ ಪತ್ರಿಕೆಯಲ್ಲಿ ಬ೦ದತಹ ಯುವತಿಯೊಬ್ಬಳ ಮನದಾಳದ ಮಾತು...
»ಅಂತರಂಗದ ದನಿಗೆ ಕಿವುಡಾದವರ ನಡುವೆ...
»ದೇಶಪ್ರೇಮಕ್ಕಿಂತ ದೊಡ್ಡದೇ ಧರ್ಮಪ್ರೇಮ?...
»ಕತ್ತು ಕತ್ತರಿಸುವ ಸಿನಿಮಾಗಳ ಸಂದೇಶವೇನು?...
» ಪಾತ್ರೆಯೊಳಗಿನ ಮೀನು....
»ಸಮಾನತೆ...
» ಹರ್ಷದ ದಾರಿ
»ವೈಧವ್ಯವೆಂಬ ವಿಷವರ್ತುಲದಿಂದ ಇವರಿಗೆ ಬಿಡುಗಡೆ ಎಂದು?
»ಅಂಗಡಿಯಲ್ಲಿ ದೊರಕಿದ ಪವಾಡ...
»ದೊಡ್ಡ ಚಳವಳಿಗಳ ಕಾಲ ಮುಗಿದುಹೋಗಿದೆ...

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri