ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ದಂತ ವೈದ್ಯರ ನಿರ್ಲಕ್ಷ್ಯ: ಮಧುಮೇಹಿ ರೋಗಿಗೆ ಲಕ್ಷ ರೂಪಾಯಿ ಪರಿಹಾರಕ್ಕೆ ಆಜ್ಞೆ |
ಪ್ರಕಟಿಸಿದ ದಿನಾಂಕ : 2012-08-09
ನವದೆಹಲಿ (ಪಿಟಿಐ): ತನ್ನ ಮಧು ಮೇಹವು ನಿಯಂತ್ರಣದಲ್ಲಿದೆ ಎಂಬುದಾಗಿ ರೋಗಿ ಹೇಳಿದ ಮಾತನ್ನು ನಂಬಿಕೊಂಡು ಆತನ ರಕ್ತದಲ್ಲಿನ ಸಕ್ಕರೆ ಅಂಶವನ್ನು ಪರೀಕ್ಷಿಸದೆಯೇ ಆತನಿಗೆ ದಂತ ಶಸ್ತ್ರಚಿಕಿತ್ಸೆ ಮಾಡಿ ಆತ ಇನ್ನಷ್ಟು ವೈದ್ಯಕೀಯ ಸಮಸ್ಯೆಗಳಿಗೆ ಗುರಿಯಾಗುವಂತೆ ಮಾಡಿದ್ದಕ್ಕಾಗಿ ರೋಗಿಗೆ ಒಂದು ಲಕ್ಷ ರೂಪಾಯಿಗಳ ಪರಿಹಾರ ನೀಡುವಂತೆ ದಂತ ವೈದ್ಯರೊಬ್ಬರಿಗೆ ದೆಹಲಿ ಜಿಲ್ಲಾ ಗ್ರಾಹಕ ನ್ಯಾಯಾಲಯವು ಆಜ್ಞಾಪಿಸಿದೆ.
`ರೋಗಿಯ ನಿರ್ಲಕ್ಷ್ಯವು ವೈದ್ಯನ ಪಾಲಿಗೆ ರಕ್ಷಣೆಯಾಗುವುದಿಲ್ಲ` ಎಂದು ಹೇಳಿರುವ ನ್ಯಾಯಾಲಯವು ದೂರುದಾರ ಫತೇಃ ಸಿಂಗ್ ಅವರಿಗೆ ಸೂಚಿತ ಪರಿಹಾರ ನೀಡುವಂತೆ ವೈದ್ಯ ಡಾ. ವನೀತ್ ಕಾಕರ್ ಅವರಿಗೆ ನಿರ್ದೇಶಿಸಿದೆ.
ರೋಗಿ ತನ್ನ ರಕ್ತದಲ್ಲಿನ ಸಕ್ಕರೆಯ ಮಟ್ಟ ನಿಯಂತ್ರಣದಲ್ಲಿದೆ ಎಂಬುದಾಗಿ ಭರವಸೆ ಕೊಟ್ಟದ್ದನ್ನು ಅನುಸರಿಸಿ ತಾನು ಆತನಿಗೆ ದಂತ ಶಸ್ತ್ರಚಿಕಿತ್ಸೆ ಮಾಡಿರುವುದಾಗಿ ಡಾ. ವನೀತ್ ಕಾಕರ್ ಪ್ರತಿಪಾದಿಸಿದ್ದರು.
ತಾನು ಮಧುಮೇಹ ರೋಗಿ ಎಂಬುದಾಗಿ ರೋಗಿ ತಿಳಿಸಿದ ಬಳಿಕವೂ ಆತನ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಪರೀಕ್ಷಿಸದೆ ಸಕ್ಕರೆ ಅಂಶ ನಿಯಂತ್ರಣದಲ್ಲಿದೆ ಎಂಬುದಾಗಿ ರೋಗಿ ಹೇಳಿದ್ದನ್ನೇ ನಂಬಿ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
`ನಮ್ಮ ಅಭಿಪ್ರಾಯದಂತೆ ರೋಗಿಯು ವೈದ್ಯರಿಗೆ ತಾನು ಮಧುಮೇಹದಿಂದ ಬಳಲುತ್ತಿರುವುದಾಗಿ ತಿಳಿಸಿದ ಬಳಿಕ, ಪ್ರಕರಣವನ್ನು ನಿಭಾಯಿಸುವಾಗ ವೈದ್ಯರು ಎಚ್ಚರಿಕೆ ವಹಿಸಬೇಕಾಗಿತ್ತು. ರಕ್ತದಲ್ಲಿನ ಸಕ್ಕರೆ ಮಟ್ಟದ ಪರೀಕ್ಷೆ ಮಾಡಿಸಿಕೊಳ್ಳುವಂತೆ ರೋಗಿಗೆ ಸೂಚಿಸುವುದು ವೈದ್ಯರ ಕರ್ತವ್ಯವಾಗಿತ್ತು ಎಂದು ನ್ಯಾಯಾಲಯ ಹೇಳಿತು.
ಒಂದು ವೇಳೆ ವರದಿಯು ರಕ್ತದಲ್ಲಿ ಸಕ್ಕರೆಯ ಅಂಶ ಹೆಚ್ಚಾಗಿದೆ ಎಂದು ಹೇಳಿದರೆ, ರೋಗಿಗೆ `ರೂಟ್ ಕೆನಾಲ್` ಚಿಕಿತ್ಸೆ ನಡೆಸುವ ಮುನ್ನ ಅಗತ್ಯ ತಪಾಸಣೆಗಳನ್ನು ಮಾಡಬೇಕಾದದ್ದು ವೈದ್ಯರ ಪಾಲಿನ ಕರ್ತವ್ಯವಾಗಿತ್ತು. ರೋಗಿಯು ಕರ್ತವ್ಯ ಚ್ಯುತಿ ಎಸಗಿದ್ದರೂ ಅದು ವೈದ್ಯನನ್ನು ನಿರ್ಲಕ್ಷ್ಯದ ಆರೋಪದಿಂದ ಮುಕ್ತನನ್ನಾಗಿ ಮಾಡುವುದಿಲ್ಲ ಎಂದು ಬಾಬುಲಾಲ್ ಅಧ್ಯಕ್ಷತೆಯ ಗ್ರಾಹಕ ನ್ಯಾಯಾಲಯ ಪೀಠ ಅಭಿಪ್ರಾಯ ಪಟ್ಟಿತು.
ದಂತ ಶಸ್ತ್ರಚಿಕಿತ್ಸೆಯನ್ನು ನೆರವೇರಿಸುವ ಮುನ್ನ ಡಾ. ಕಾಕರ್ ಅವರು ತನ್ನ ರಕ್ತದಲ್ಲಿನ ಸಕ್ಕರೆಯ ಅಂಶದ ತಪಾಸಣೆ ನಡೆಸಲಿಲ್ಲ. ರಕ್ತದಲ್ಲಿ ಸಕ್ಕರೆಯ ಅಂಶ ಹೆಚ್ಚಿದ್ದ ಕಾರಣ ಚಿಕಿತ್ಸೆ ನೀಡಲಾಗಿದ್ದ ಜಾಗದಲ್ಲಿ ಕೀವು ಆಗಿ ಗಂಟಲಿಗೂ ಸೋಂಕು ತಗಲಿತು. ಹೀಗಾಗಿ 70,000 ರೂಪಾಯಿ ವೆಚ್ಚ ಮಾಡಿ ಇನ್ನೊಂದು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾಯಿತು ಎಂದು ರೋಗಿ ಸಿಂಗ್ ತನ್ನ ದೂರಿನಲ್ಲಿ ತಿಳಿಸಿದ್ದರು.
ತಾನು ಮಧುಮೇಹದಿಂದ ಬಳಲುತ್ತಿರುವುದಾಗಿ ತಿಳಿಸಿದರೂ, ವೈದ್ಯ ಡಾ. ಕಾಕರ್ ಅವರು ದಂತ ಚಿಕಿತ್ಸೆಗೆ ಇದರಿಂದ ತೊಂದರೆಯೇನೂ ಇಲ್ಲ ಎಂದು ಹೇಳಿದ್ದರು ಎಂದು ಸಿಂಗ್ ಆಪಾದಿಸಿದ್ದರು.
ತನ್ನ ರಕ್ತದಲ್ಲಿನ ಸಕ್ಕರೆಯ ಅಂಶ ನಿಯಂತ್ರಣದಲ್ಲಿದೆ ಎಂಬುದಾಗಿ ರೋಗಿ ಭರವಸೆ ನೀಡಿದ್ದರಿಂದ ತಾನು ಸಂತ ಸರ್ಜರಿ ನೆರವೇರಿಸಿದ್ದಾಗಿ ವೈದ್ಯರು ಪ್ರತಿಪಾದಿಸಿದ್ದರು.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2012-08-09
|
|
|
|
ಎಲ್ಲಾ ವರದಿಗಳು [ವ್ಯಾಪಾರ-ಆರೋಗ್ಯ] |
|