ನೆಮ್ಮದಿಯ ಮೂಲ ಮನಸ್ಸು : ಶ್ರೀ ರಾಘವೇಶ್ವರಭಾರತಿ ಸ್ವಾಮಿಗಳು |
ಪ್ರಕಟಿಸಿದ ದಿನಾಂಕ : 2012-07-14
ನೆಮ್ಮದಿಯ ಮೂಲ ಮನಸ್ಸು : ಶ್ರೀ ರಾಘವೇಶ್ವರಭಾರತಿ ಸ್ವಾಮಿಗಳು
ಜೀವನ ದೃಷ್ಟಿ ಸಕಾರಾತ್ಮಕವಾಗಿರಲಿ ಸೃಷ್ಟಿಗೆ ತಕ್ಕಂತೆ ದೃಷ್ಟಿ ಬದಲಾಗಲಿ ನಮ್ಮ ’ದೃಷ್ಟಿ’ಯನ್ನು ಟ್ಯೂನ್ ಮಾಡೋಣವೇ.. ಲೋಕದ ಡೊಂಕ ನೀವೇಕೆ ತಿದ್ದುವಿರಿ ? ನಿಮ್ಮನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮನಿಮ್ಮ ಮನವ ಸಂತೈಸಿಕೊಳ್ಳಿ..
ಅನೇಕರು ನಾವಂದುಕೊಂಡಂತೆ ಪ್ರಪಂಚ ಇರಬೇಕೆಂದು ಬಯಸುತ್ತಾರೆ. ನಮ್ಮ ಕಣ್ಣು, ಮೂಗು, ಕಿವಿಗಳೇ ನಾವು ಹೇಳಿದ್ದನ್ನು ಕೇಳುವುದಿಲ್ಲ. ನಾವೇ ನಮ್ಮಿಚ್ಚೆಯಂತೆ ಇರಲು ಸಾಧ್ಯವಿಲ್ಲದಿರುವಾಗ ಬೇರೆಯವರು ನಾವು ಹೇಳಿದಂತೆ ಕೇಳುವುದು, ಬದುಕುವುದು ಹೇಗೆ? ನಿನ್ನೆಯ ಮಾತನ್ನು ಮುಂದುವರಿಸಿ ಹೇಳುವುದಾದರೆ ಸುಖದ ಮೂಲ ನೆಮ್ಮದಿ. ನೆಮ್ಮದಿಯ ಮೂಲ ಮನಸ್ಸು. ನಿಮ್ಮ ಮನ್ನಸ್ಸು ಮೆಚ್ಚುವಂತೆ ನೀವಿರಲು ಪ್ರಯತ್ನಿಸಿ. ಸೃಷ್ಟಿಗೆ ತಕ್ಕಂತೆ ದೃಷ್ಟಿ ಬದಲಾಯಿಸಲು ಸಾಧ್ಯ. ರಾಮಚಂದ್ರ ಸೃಷ್ಟಿಯ ಸೂತ್ರ, ಗುರು ಸೃಷ್ಟಿಯ ನೇತ್ರ. ಸೃಷ್ಟಿಯ ಮಂತ್ರ-ನೇತ್ರಗಳೆರಡಕ್ಕೂ ಮನದಾಳದ ವಂದನೆ ಸಲ್ಲಿಸುವುದರೊಂದಿಗೆ ಶ್ರೀ ರಾಘವೇಶ್ವರಭಾರತಿ ಸ್ವಾಮಿಗಳು 12 ಜುಲೈ 2012 , ಗುರುವಾರ ಉಪನ್ಯಾಸ ಆರಂಭಿಸಿದರು.
ಕಗ್ಗವನ್ನು ಪ್ರಾರಂಭಿಸುವುದಕ್ಕೂ ಮೊದಲು ಒಂದು ಪುಟ್ಟಕಥೆ: ಒಂದು ಊರು ಅಲ್ಲೊಬ್ಬ ಜಮೀನ್ದಾರ. ಅವನಿಗೆ ಯಾವ ಕೊರತೆಯೂ ಇರಲಿಲ್ಲ. ಅಪಾರ ಜನ ಬಲ, ಧನ ಬಲದೊಂದಿಗೆ ಊರಿನ ಸಂಪೂರ್ಣ ಪ್ರಭುತ್ವವನ್ನು ಹೊಂದಿ ಹುಲಿಯಂತೆ ಬದುಕಿದವನಿಗೆ ಒಂದು ರೋಗ ಬಂತು. ಯಾವ ರೋಗ, ಅವನಿಗೆ ತಿಳಿಯದು. ಕುಶಲ ವೈದ್ಯರಿಗೂ ತಿಳಿಯಲಿಲ್ಲ. ಯಾವ ವಿಧದ ಚಿಕಿತ್ಸೆ ಪಡೆದರೂ ರೋಗ ಕಡಿಮೆ ಆಗಲಿಲ್ಲ. ಹೊರಗಿನ ಶತ್ರುವಾಗಿದ್ದರೆ ಓಡಿಸಬಹು ದಾಗಿತ್ತು. ದಿನಕಳೆದಂತೆ ಈತ ಹಾಸಿಗೆಯಾಳಾದ. ಯಾಜಮಾನ್ಯ ಮೆರೆದವನು ಒಂದು ಕೋಣೆಯಲ್ಲಿ ಜೀವ ಭಯದಿಂದ ಬಿದ್ದುಬಿಟ್ಟ. ಹೀಗಿರುವಾಗ ಒಮ್ಮೆ ಆ ಊರಿಗೆ ಬಂದ ಗುರುಗಳು ಇವರ ಮನೆಗೂ ಬಂದರು. ಅವರ ಗೋಳನ್ನು ಕೇಳಿದರು. ಯಜಮಾನನ ಅವಸ್ಥೆಯನ್ನು ಅಂತರ್ಚಕ್ಷುವಿನಿಂದ ನೋಡಿ, ಆತ ಹಸಿರು ಬಣ್ಣವನ್ನು ಬಿಟ್ಟು ಬೇರೆ ಬಣ್ಣವನ್ನು ನೋಡಬಾರದು ಹಾಗೆ ಮಾಡಿದರೆ ಸರಿಹೋಗುತ್ತಾನೆ ಎಂದು ಚಿಕಿತ್ಸೆ ಸೂಚಿಸಿದರು. ಆಗ ಅವನ ಮನೆಯವರು ತಡಮಾಡದೆ ಕೋಣೆಯ ನೆಲ, ಗೋಡೆ, ಚಾವಣಿಗೆಲ್ಲ ಹಸಿರುಬಣ್ಣ ಬಳಿದರು. ಆತ ಬಳಸುವ, ನೋಡುವ ಎಲ್ಲವನ್ನೂ ಹಸಿರುಮಯವಾಗಿಸಿದರು.
ಕೆಲವೇ ದಿನಗಳಲ್ಲಿ ಆರೋಗ್ಯದಲ್ಲಿ ಚೇತರಿಕೆ ಕಂಡುಬಂತು. ಆತ ಕೋಣೆ ಬಿಟ್ಟು ಹೊರಬರಲಾರಂಭಿಸಿದ. ಆಗ ಮನೆಪೂರ್ತಿ ಹಸಿರುಬಣ್ಣ ಬಳಿಯತೊಡಗಿದರು. ಸ್ವಲ್ಪ ಕಾಲದಲ್ಲಿಯೇ ಆರೋಗ್ಯದಲ್ಲಿ ಪೂರ್ಣ ಚೇತರಿಕೆ ಕಂಡ ಯಜಮಾನ ಮೊದಲಿನ ದರ್ಪದಿಂದ ಊರಿಗೆಲ್ಲ ಹಸಿರು ಬಣ್ಣ ಬಳಿಯಲು ಅಪ್ಪಣೆ ಕೊಡಿಸಿದ. ಅವನ ಆರೋಗ್ಯ ಊರಿನವರ ದೌರ್ಭಾಗ್ಯವಾಯಿತು. ಮಾತ್ತೊಮ್ಮೆ ಗುರುಗಳು ಬಂದರು. ಊರಿಗೆ ಊರೇ ಗುರುಗಳನ್ನು ಮುತ್ತಿಕೊಂಡಿತು. ತಮ್ಮ ಅವಸ್ಥೆಯನ್ನು ಹೇಳಿಕೊಂಡರು. ಜಮೀನ್ದಾರನ ಮನೆಯಲ್ಲಿ ಪಾದಪೂಜೆ ಆದಿ ಸೇವೆಗಳು ನಡೆದವು. ಊಟ ಉಪಚಾರಗಳು ಆದ ನಂತರ ಸಾವಧಾನವಾಗಿ "ನದಿ, ಆಕಾಶ, ಸೂರ್ಯನಿಗೆಲ್ಲ ಹಸಿರುಬಳಿಯಲು ಸಾಧ್ಯವೇ? ಊರನ್ನೆಲ್ಲ ಹಸಿರುಮಯವಾಗಿ ಮಾಡುವುದು ಅಸಾಧ್ಯವಾದ ಮಾತು. ನೀನು ಒಂದು ಹಸಿರು ಕನ್ನಡಕವನ್ನು ಹಾಕಿಕೋ" ಎಂದು ಸೂಚಿಸಿದರು. ಇದರಿಂದ ಅವನಿಗೂ ತೃಪ್ತಿಯಾಯಿತು. ಊರವರಿಗೂ ನೆಮ್ಮದಿ ಸಿಕ್ಕಿತು.
ಇದರಿಂದ ತಿಳಿಯುವುದಿಷ್ಟೆ, ಸೃಷ್ಟಿಯನ್ನು ನಮ್ಮ ದೃಷ್ಟಿಗೆ ತಕ್ಕಂತೆ ಬದಲಾಯಿಸುವುದು ಸಾಧ್ಯವಿಲ್ಲ. ಬದಲಾಗಿ ದೃಷ್ಟಿಯನ್ನು ಸೃಷ್ಟಿಗೆ ತಕ್ಕಂತೆ ಬದಲಾಯಿಸಿಕೊಳ್ಳಬೇಕು. ನಮ್ಮ ಮೂಗಿನ ನೇರಕ್ಕೆ ಪ್ರಪಂಚ ಬದಲಾಗಬೇಕೆಂದು ಬಯಸುವುದರಿಂದಲೇ ಕ್ಲೇಶ ಪ್ರಾರಂಭವಾಗುತ್ತದೆ. ಸಂಬಂಧಗಳು ಬಾಳುವುದಿಲ್ಲ. ಒಬ್ಬ ವ್ಯಕ್ತಿಯನ್ನು ಆತ ಇದ್ದಂತೆ ಸ್ವೀಕರಿಸುವುದಿಲ್ಲ. ನಮ್ಮ ಅಂಕುಶಕ್ಕೆ ತಕ್ಕಂತೆ ಬದಲಾಯಿಸಲು ಬಯಸುತ್ತೇವೆ. ಮನೆಯಲ್ಲಿ ಒಂದು ಕಾರ್ಯಕ್ರಮವಿದ್ದರೆ ತಮ್ಮ ಮನೆಯ ಚಪ್ಪರದ ರಕ್ಷಣೆಗಾಗಿ "ಕಾಲೇವರ್ಷತು ಪರ್ಜನ್ಯ ಪ್ರಥಿವೀ ಸಸ್ಯ ಶಾಲಿನೀ" ಎನ್ನುವವರೇ ಗುರುಗಳಿಗೋ, ದೇವರಿಗೋ ಎರಡು ಕಾಯಿ ತೆಗೆದಿಟ್ಟು ಕಾರ್ಯಕ್ರಮ ಮುಗಿಯುವವರೆಗೆ ಮಳೆ ಬಾರದಿರಲಿ ಎಂದು ಹೇಳಿಕೊಳ್ಳುತ್ತಾರೆ. ಒಮ್ಮೆ ಸೂಕ್ಷ್ಮವಾಗಿ ನೋಡಿದರೆ ತಿಳಿಯುತ್ತದೆ, ಯಾವುದನ್ನೇ ಆಗಲಿ ಅದು ಇದ್ದ ಹಾಗೆ ಸ್ವೀಕರಿಸಲು ಯಾರೂ ಸಿದ್ಧರಿಲ್ಲ. ಪೂರ್ಣವಾಗಿ ಅಂತರಂಗದಿಂದ ಸ್ವೀಕಾರ ಮಾಡಲು ಸಿದ್ದವಿರಬೇಕು. ಆದರೆ ಹಾಗೆ ಮಾಡುವಾಗ ಯಾವುದು ’ದೊಡ್ಡದು’ ಯಾವುದು ’ಚಿಕ್ಕದು’ ಎಂಬ ಕಲ್ಪನೆ ಇರಬೇಕು.
ನೆಪೊಲಿಯನ್ ಬೊನಪಾರ್ಟೆ ಹೆಸರನ್ನು ಕೇಳಿದ್ದೀರಲ್ಲವೇ? ಅವನಿಗೆ ಒಮ್ಮೆ ಕೂದಲು ಉದುರಿ ಹೋಯಿತಂತೆ. ಆತ ಪ್ರಭು. ತನ್ನ ಆಸ್ಥಾನದಲ್ಲಿ ತನ್ನೆದುರು ಬರುವವರು ತಲೆ ಬೋಳಿಸಿಕೊಂಡು ಬರಬೇಕು ಎಂದು ಹುಕುಂ ಹೊರಡಿಸಿದ. ಇನ್ನು ಚೀನಾದ ರಾಣಿ, ಆಕೆಗೆ ರಾತ್ರಿ ಎದ್ದು ಓಡಾಡುವ ಅಭ್ಯಾಸ. ತನ್ನ ಈ ವರ್ತನೆಯಿಂದ ನೊಂದ ಆಕೆ ಕಾಲಿನ ಬಲವನ್ನು ಕಡಿಮೆ ಮಾಡಿಕೊಳ್ಳುತ್ತಾಳೆ. ತನ್ನ ಪಾದದ ಅಳತೆಗಿಂತ ಚಿಕ್ಕ ಶೂ ಧರಿಸಿ ಪಾದವನ್ನು ಚಿಕ್ಕದು ಮಾಡಿಕೊಳ್ಳುತ್ತಾಳೆ. ಇದನ್ನು ನೋಡಿದ ರಾಜ ಸರ್ವಾಂಗ ಸುಂದರಿಯಾದ ತನ್ನ ರಾಣಿ ಹೀಗೆ ಆದಳಲ್ಲ ಎಂದು ಚಿಂತಿಸುತ್ತಾನೆ. ನಂತರ ಪಾದ ಎಷ್ಟು ಚಿಕ್ಕದಿದ್ದರೆ ಅಷ್ಟು ಸೌಂದರ್ಯವಂತರು ಎಂಬ ಕಲ್ಪನೆ ಜನರಲ್ಲಿ ಮೂಡುವಂತೆ ಮಾಡುತ್ತಾನೆ. ಇದರಿಂದ ಚೀನಾದ ಎಲ್ಲ ಹೆಣ್ಣುಮಕ್ಕಳೂ ಚಿಕ್ಕ ಶೂ ಧರಿಸಿ ತಮ್ಮ ಪಾದ ಚಿಕ್ಕದು ಮಾಡಿಕೊಳ್ಳುವ ಪ್ರಯತ್ನ ನಡೆಯಿತು. ಹೀಗೆ ಅನೇಕರು ನಾವಂದುಕೊಂಡಂತೆ ಪ್ರಪಂಚ ಇರಬೇಕೆಂದು ಬಯಸುತ್ತಾರೆ. ನಾವೇ ನಮ್ಮಿಚ್ಚೆಯಂತೆ ಇರಲು ಸಾಧ್ಯವಿಲ್ಲದಿರುವಾಗ ಬೇರೆಯವರು ನಾವು ಹೇಳಿದಂತೆ ಕೇಳುವುದು, ಬದುಕುವುದು ಹೇಗೆ?
ನಿನ್ನೆಯ ಮಾತನ್ನು ಮುಂದುವರಿಸಿ ಹೇಳುವುದಾದರೆ ಸುಖದ ಮೂಲ ನೆಮ್ಮದಿ. ನೆಮ್ಮದಿಯ ಮೂಲ ಮನಸ್ಸು. ನಿಮ್ಮ ಮನ್ನಸ್ಸು ಮೆಚ್ಚುವಂತೆನೀವಿರಲು ಪ್ರಯತ್ನಿಸಿ. ಸೃಷ್ಟಿಗೆ ತಕ್ಕಂತೆ ದೃಷ್ಟಿ ಬದಲಾಯಿಸಲು ಸಾಧ್ಯ.
ಗಗನನೀಲಿಮೆಯೆನ್ನ ಕಣ್ಗೆ ಸೊಗವೀವಂತೆ | ಮುಗಿವ ತರಣಿಯ ರಕ್ತ ಹಿತವೆನಿಸದೇಕೋ! || ಸೊಗದ ಮೂಲವದೆಲ್ಲಿ ನೀಲದೊಳೊ ಕೆಂಪಿನೊಳೊ | ಬಗೆವೆನ್ನ ಮನಸಿನೊಳೊ?-ಮಂಕುತಿಮ್ಮ ||
ಸಾಯಂಕಾಲದ ಸಮಯ ಅವ್ಯಕ್ತ ವಿಷಾದ ಉಂಟಾಗುತ್ತದೆ. ಯಾಕೆಂದರೆ ಜಗವ ಬೆಳಗುವ ಸೂರ್ಯ ಅಸ್ತಂಗತನಾಗುತ್ತಾನೆ. ಹಾಗೆ ಹೊರಗೆ ಬೆಳಕು ಮುಳುಗುವಾಗ ಮನೆಯೊಳಗೆ, ಮನದೊಳಗೆ ಬೆಳಕನ್ನು ಹುಡುಕಬೇಕು. ಮಾನವ ಹ್ರದಯವನ್ನು ಕಲಕಿ ಸೌಖ್ಯಾನುಭವವನ್ನುಂಟುಮಾಡುವುದರಲ್ಲಿ ಮುಖ್ಯವಾದದ್ದು ಸೌಂದರ್ಯ. ಮನುಷ್ಯ ಹೃದಯ ಮೂಲ ಭಾಗವು ಸರ್ವಸಾಧಾರಣವಾಗಿ ಒಂದೇ ಆದರೂ, ಹೃದಯದ ಮೇಲೆ ವಸ್ತುಗಳಿಂದಾಗುವ ಪರಿಣಾಮವು ಬೇರೆಬೇರೆಯೇ.
ಆಕಾಶದ ಬಣ್ಣ ನೀಲಿ, ಸಂಜೆಯ ಕೆಂಬಣ್ಣ ಮನೋಹರವಾದವೇ ಆದರೂ ಗಗನದ ನೀಲಿಮೆ ತಿಮ್ಮಗುರುವಿನ ಕಣ್ಣಿಗೆ ಸಂತೋಷವನ್ನು ತರುತ್ತದೆಯಂತೆ. ಸಂಧ್ಯಾಕಾಲದ ಕೆಂಬಣ್ಣ, ರಕ್ತದ ಜ್ಞಾಪಕವನ್ನು ತಂದು ಮನಸ್ಸಿಗೆ ಹಿತವೆನ್ನಿಸುವುದಿಲ್ಲವಂತೆ. ಎರಡೂ ಸೌಂದರ್ಯಸ್ಥಾನಗಳಾದರೂ ಈ ರುಚಿಯ ಮೂಲ, ಬಣ್ಣದಲ್ಲೋ ಅಥವಾ ಅದನ್ನು ನೋಡುವ ಮನಸ್ಸಿನಲ್ಲೋ? ಈ ಸೌಂದರ್ಯಾನುಭವದ ಮೂಲವು ಎಲ್ಲಿ? ಈ ಸಂತೋಷದಲ್ಲಿ ವ್ಯತ್ಯಾಸವೇಕೆ?.
ರಾಧಾಕೃಷ್ಣರ ನೋಟ ಹೇಗಿತ್ತೆಂದರೆ, ಒಂದು ತಟ್ಟೆಯಲ್ಲಿ ಅರ್ಧ ಹಾಲಿದ್ದರೆ ಅರ್ಧ ತುಂಬಿದೆ ಎನ್ನುತ್ತಿದ್ದರು. ಒಮ್ಮೆ ವಿದೇಶಕ್ಕೆ ಹೋದಾಗ ಸಭೆಯೊಂದರಲ್ಲಿ ಮಾತನಾಡುವಾಗ ಈ ಸಭೆಯಲ್ಲಿ ಅರೆವಾಸಿ ಮೂರ್ಖರಿದ್ದಾರೆ ಎಂದರಂತೆ. ಇದಕ್ಕೆ ಪ್ರತಿಭಟನೆ ಕೇಳಿಬಂತು. ಆಗ ತಪ್ಪಾಯಿತು ತಿದ್ದಿಕೊಳ್ಳುತ್ತೇನೆ ಈ ಸಭೆಯಲ್ಲಿ ಅರೆವಾಸಿ ಜನ ಜಾಣರಿದ್ದಾರೆ ಎಂದರಂತೆ. ಆಗ ಚಪ್ಪಾಳೆ ಕೇಳಿಬಂದಿತಂತೆ. ಮೊದಲಿನದು ನಕಾರಾತ್ಮಕವಾದದ್ದು. ಒಳಿತಲ್ಲದ್ದನ್ನು, ಕೆಟ್ಟದ್ದನ್ನು ಹುಡುಕುವ ದೃಷ್ಟಿ ಯಾರಿಗೂ ಇಷ್ಟವಾಗದು. ಜೀವನ ದೃಷ್ಟಿ ಸಕಾರಾತ್ಮಕವಾಗಿರಬೇಕು.
"ಅಪರ್ಯದೇವನ್ ವಿಧವಾ" ವಿಧವೆಯರು ಅಳಲಿಲ್ಲ ರಾಮರಾಜ್ಯದಲ್ಲಿ. "ನಚಸ್ವ ವೃದ್ಧಾ ಬಾಲಾನಾಂ ವೇದ ಕಾರ್ಯಾಣಿ ಕುರ್ವತೆ" ರಾಮ ರಾಜ್ಯದಲ್ಲಿ ಹಿರಿಯರು ಕಿರಿಯರ ಅಂತ್ಯಕ್ರೀಯೆಯನ್ನು ಮಾಡಲಿಲ್ಲ. ಯಾಕೆಂದರೆ ಅಲ್ಲಿ ಎಲ್ಲವೂ ಹೇಗಿರಬೇಕೋ ಹಾಗಿತ್ತು. ಒಬ್ಬ ಜ್ಯೋತಿಷಿ ಅಕ್ಬರನಿಗೆ "ನಿಮ್ಮ ಮಕ್ಕಳು ನಿಮ್ಮ ಕಣ್ಣ ಮುಂದೆ ಸಾಯುತ್ತಾರೆ" ಎಂದನಂತೆ. ಅದಕ್ಕೆ ಅವನಿಗೆ ನೂರು ಛಡಿ ಏಟಿನ ಶಿಕ್ಷೆ. ಮರುದಿವಸ ಬೀರ್ಬಲ್ಲ ಅದೇ ಜ್ಯೋತಿಷಿಯನ್ನು ಬೇರೆ ವೇಷದಲ್ಲಿ ಕರೆದುಕೊಂಡುಬಂದ. ಆಗ ಆ ಜ್ಯೋತಿಷಿ "ನೀವು ನಿಮ್ಮ ಮಕ್ಕಳಿಗಿಂತ ದೀರ್ಘಕಾಲ ಬಾಳುತ್ತೀರಿ" ಎಂದ. ರಾಜ ಖುಷಿಯಿಂದ ಚಿನ್ನದ ವರಹಗಳನ್ನು ಕೊಟ್ಟುಕಳಿಸಿದ. ಇಲ್ಲಿ ಇರುವ ವ್ಯತ್ಯಾಸ ಸಕಾರಾತ್ಮಕವಾಗಿ ನೋಡುವ ದೃಷ್ಟಿ. ಶುಭವನ್ನು ಹುಡುಕುವ ದೃಷ್ಟಿ ನಮ್ಮದಾಗಬೇಕು. ಇದ್ದದ್ದನ್ನು ಇದ್ದಂತೆ ಸ್ವೀಕರಿಸುವ ಪ್ರಯತ್ನ ಮಾಡಬೇಕು. ದೃಷ್ಟಿಯನ್ನು ಹೊಂದಿಸಿಕೊಳ್ಳುವ ಪ್ರಯತ್ನ ಮಾಡಿದರೆ ಸಂಬಂಧಗಳು ಅರಳುತ್ತವೆ.
ತಿದ್ದಿಕೊಳೊ ನಿನ್ನ ನೀಂ; ಜಗವ ತಿದ್ದುವುದಿರಲಿ | ತಿದ್ದಿಕೆಗಮೊಂದು ಮಿತಿಯುಂಟು ಮರೆಯದಿರು || ಉದ್ದ ನೀಂ ಬೆರಳನಿತು ಬೆಳದೀಯೆ ಸಾಮಿಂದೆ | ಸ್ಪರ್ಧಿಯೆ ತ್ರಿವಿಕ್ರಮಗೆ?-ಮಂಕುತಿಮ್ಮ ||
ನಿತ್ಯ ಬದಲಾವಣೆ ಬಯಸುವ ನಾವು ಆಳದಲ್ಲಿ ಸ್ವೀಕಾರವಾದಿಗಳು. ಪ್ರತಿಭಟನೆ ಜೀವನದಲ್ಲಿ ನಡೆಯುವುದಿಲ್ಲ. ಬದಲಾಯಿಸಲು ಮೇಧಾ ಶಕ್ತಿ ಬೇಕು. ಅರೆಬರೆ ತಿಳುವಳಿಕೆಯಲ್ಲಿ ಬದಲಾವಣೆ ಮಾಡಿದರೆ ಅನರ್ಥವಾಗುತ್ತದೆ. "ಗಿಡವ ತಿದ್ದುವದಕ್ಕೆಂದು ಬುಡವ ಕೀಳುವುದು ಸರಿಯೇ?" ಅತಿವೈದ್ಯದಿಂದ ಅಸವಚನಕ್ಕೆಡೆಯಾದೀತು. ಹಾಗಾಗಿ ಲೋಕದ ನಡವಳಿಕೆಯನ್ನು ತಿದ್ದುವ ಹಂಬಲ ಬದಿಗಿಟ್ಟು, ನಿನ್ನನ್ನು ನೀನು ಮೊದಲು ತಿದ್ದಿಕೊ. ಜನ್ಮಾಂತರದ ವಾಸನೆಗಳು ಒಂದು ಕಡೆ, ಅದನ್ನು ಪ್ರಚೋದಿಸುವ ವಸ್ತುಗಳು ಇನ್ನೊಂದು ಕಡೆ ಇದ್ದು ಮೋಹಗೊಳಿಸುತ್ತಿರಲು ತನ್ನನ್ನು ತಾನು ತಿದ್ದಿಕೊಳ್ಳುವುದಕ್ಕೂ ಒಂದು ಮಿತಿ ಉಂಟು. ಆ ವಾಸನೆಗಳನ್ನು ಮೀರಿ ಎಷ್ಟರ ಮಟ್ಟಿಗೆ ತನ್ನನ್ನು ತಾನು ತಿದ್ದಿಕೊಳ್ಳಲು ಸಾಧ್ಯ ಎಂಬುದನ್ನು ಕುರಿತು ಚಿಂತಿಸಬೇಕು. ಕಸರತ್ತು ಮಾಡಿ ದೇಹವನ್ನು ಒಂದು ಸ್ವಲ್ಪವೇ ಸ್ವಲ್ಪ ಬೆಳೆಸಿಕೊಳ್ಳಲಾದೀತು. ಆದರೆ ತ್ರಿವಿಕ್ರಮನಂತೆ ಬೆಳೆಯಲಾದೀತೆ?
"ದೃಷ್ಟಿಯನ್ನು ಸರಿಯಾಗಿ ಹೊಂದಿಸಿಕೊಂಡರೆ ನಮ್ಮ ಸಂಪರ್ಕಕ್ಕೆ ಬರುವ ಎಲ್ಲರಿಗೆ ನೆಮ್ಮದಿ. ಪರಿವರ್ತನೆಯಿಂದಲೇ ಸುಖ. ನಿನ್ನ ದೃಷ್ಟಿ ನಿನ್ನೊಳಗನ್ನು ಪರಿವರ್ತಿಸಲಿ. ಪ್ರಪಂಚಕ್ಕೆ ತಕ್ಕಂತೆ, ಈಶ್ವರೇಛ್ಛೆಗೆ ತಕ್ಕಂತೆ. ಅಲ್ಲಿಂದ ನಿನ್ನ ಬದುಕಿನ ರಾಮರಾಜ್ಯದ ಆರಂಭ, ಅಲ್ಲಿಂದ ನಿನ್ನ ಮನಸ್ಸಿನ ರಾಮರಾಜ್ಯದ ಅರಂಭ. ಆಗ ಪ್ರಪಂಚವೆಲ್ಲ ಚೆಲುವು" ಎಂದು ಕಥೆ, ರಾಮಾಯಣದ ಶ್ಲೋಕಗಳು, ಝ್ಹೆನ್ ಕಥೆ, ಅಕ್ಬರ ಬೀರಬಲ್ ಪ್ರಸಂಗಗಳನ್ನು ಸ್ವಾರಸ್ಯಕರವಾಗಿ ಹೇಳುತ್ತಾ ಕಗ್ಗದ ಉಪನ್ಯಾಸ ಸರಣಿಯನ್ನು ನಡೆಸಿ ಶ್ರೀಗಳು ಆಶೀರ್ವದಿಸಿದರು.
ಉಪನ್ಯಾಸದ ಕಡೆಯ ಭಾಗವಾಗಿ ಎಂದಿನಂತೆ ನಿರ್ವ್ಯಾಜವಾಗಿ ರಾಮನನ್ನು ಕರೆಯುವ ಕಾರ್ಯಕ್ರಮ ನಡೆಯಿತು. ಏಕಾಗ್ರತೆಯಿಂದ, ಯಾವುದೇ ಅಪೇಕ್ಷೆಯಿಲ್ಲದೆ ರಾಮನನ್ನು ಕರೆಯಿರಿ, ಅವನು ಬಂದೇ ಬರುತಾನೆ ಎಂದು ಶ್ರೀಗಳು ಹೇಳುತ್ತಿದ್ದಂತೆ ಸಭೆಯಲ್ಲಿ ಮೌನ ಆವರಿಸಿತು.. ಅಲ್ಲಿ ಭಕ್ತಿ ಭಾವ ಉದ್ದೀಪನವಾಗಲು ಯಾವ ತೊಡಕೂ ಉಂಟಾಗಲಿಲ್ಲ.
ಲೇಖನ ಸೌಜನ್ಯ : www.bangalorewaves.com
ವರದಿಯ ವಿವರಗಳು |
 |
ಕೃಪೆ : - ವಿದ್ಯಾ ಭಟ್. ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-07-14
|
|
|