ಇನ್ಫೋಸಿಸ್ನ 2 ಸಾವಿರ ಕೋಟಿ ರೂ. ಷೇರು ಖರೀದಿಸಿದ ಎಲ್ಐಸಿ |
ಪ್ರಕಟಿಸಿದ ದಿನಾಂಕ : 2012-07-14
ಹೊಸದಿಲ್ಲಿ: ದೇಶದ ಅತಿ ದೊಡ್ಡ ವಿಮೆ ಸಂಸ್ಥೆ ಎಲ್ಐಸಿ, ಐಟಿ ದಿಗ್ಗಜ ಇನ್ಫೋಸಿಸ್ನ 2 ಸಾವಿರ ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದೆ. ಇದರೊಂದಿಗೆ ಇನ್ಫಿಯಲ್ಲಿ ಎಲ್ಐಸಿ ಷೇರಿನ ಪಾಲು ಶೇ.4.9ರಿಂದ ಶೇ.6.3ಕ್ಕೆ ಏರಿಕೆಯಾಗಿದೆ.
ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಭಾರತೀಯ ಷೇರು ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬಂಡವಾಳ ಹೂಡಿರುವ ಸಂಸ್ಥೆಗಳಲ್ಲೊಂದಾಗಿದೆ. ಇನ್ಫೋಸಿಸ್ನಲ್ಲಿ ಎಲ್ಐಸಿ ಖರೀದಿಸಿರುವ ಷೇರುಗಳ ಮಾರುಕಟ್ಟೆ ಮೌಲ್ಯ 2 ಸಾವಿರ ಕೋಟಿ ರೂ.ಗಳಾಗಿವೆ.
ಇನ್ಫೋಸಿಸ್ನಲ್ಲಿ ಪ್ರವರ್ತಕೇತರ ಷೇರುದಾರರ ಪೈಕಿ ಅತಿ ದೊಡ್ಡ ಷೇರುದಾರ ಎಲ್ಐಸಿಯಾಗಿದೆ. ಎಲ್ಐಸಿಯಲ್ಲಿ ವಿದೇಶಿ ಹೂಡಿಕೆದಾರರು ಷೇರುಗಳನ್ನು ಹಿಂತೆಗೆದುಕೊಳ್ಳುತ್ತಿದ್ದೂ, ಎಲ್ಐಸಿ ಖರೀದಿಯನ್ನು ಮುಂದುವರಿಸಿದೆ. ಇಲ್ಲಿಯವರೆಗೆ ಐಟಿ ವಲಯದಲ್ಲಿ ದಿಗ್ಗಜ ಎನಿಸಿಕೊಂಡಿದ್ದ ಇನ್ಫೋಸಿಸ್ ಈಗ ಭವಿಷ್ಯದ ಬೆಳವಣಿಗೆಯಲ್ಲಿ ಕಳವಳ ಎದುರಿಸುತ್ತಿದೆ.
ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕ ಫಲಿತಾಂಶವನ್ನು ಗುರುವಾರ ಪ್ರಕಟಿಸಿದ ನಂತರ ಷೇರು ಮಾರುಕಟ್ಟೆಯಲ್ಲಿ ಇನ್ಫೋಸಿಸ್ ಷೇರು ದರ ಗಣನೀಯವಾಗಿ ಇಳಿಕೆಯಾಗಿತ್ತು.
ಇನ್ಫೋಸಿಸ್ನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಹೂಡಿಕೆಯಲ್ಲಿ ಕಳೆದ ತ್ರೈಮಾಸಿಕದಲ್ಲಿ ಶೇ.38ರಷ್ಟು ಇಳಿಕೆಯಾಗಿದೆ. ಹೀಗಿದ್ದರೂ, ಪ್ರಮುಖ ಹೂಡಿಕೆದಾರರಾದ ಅಬೆರ್ಡೀನ್, ಓಪನ್ಹೆಮಿರ್, ಫ್ರಾಂಕ್ಲಿನ್ ಟೆಂಪ್ಲೆಟೋನ್, ವ್ಯಾನ್ಗಾರ್ಡ್ ಮತ್ತು ಸಿಂಗಾಪುರ ಸರಕಾರದ ಹೂಡಿಕೆಯಲ್ಲಿ ಸ್ವಲ್ಪಮಟ್ಟಿಗೆ ಹೆಚ್ಚಳವಾಗಿದೆ.
ಕಳೆದ ತ್ರೈಮಾಸಿಕದಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಇನ್ಫಿಯಿಂದ ಸುಮಾರು 1,500 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಕಳೆದ ಎರಡು ತ್ರೈಮಾಸಿಕಗಳಿಂದ ಇನ್ಫೋಸಿಸ್ನ ಬೆಳವಣಿಗೆ ಬಗ್ಗೆ ಕಳವಳ ಉಂಟಾಗಿದೆ. ಆದರೆ ಎಲ್ಐಸಿಗೆ ಕಂಪನಿ ಮೇಲೆ ವಿಶ್ವಾಸ ಕುಂದಿಲ್ಲ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಎಲ್ಐಸಿ ಇನ್ಫೋಸಿಸ್ನಲ್ಲಿ 2002ರಲ್ಲಿ ಮೊದಲ ಸಲ ಹೂಡಿಕೆ ಮಾಡಿತ್ತು. ಆಗ ಅದರ ಷೇರು ಪಾಲು ಕೇವಲ ಶೇ.2ರಷ್ಟಿತ್ತು. ಕಳೆದ ವರ್ಷ ಪಾಲು ಶೇ.5ಕ್ಕೆ ಏರಿತ್ತು.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2012-07-14
|
|
|