ಮಾನವ ತ್ಯಾಜ್ಯದಿಂದ ಜೈವಿಕ ಅನಿಲ ಉತ್ಪತ್ತಿ...! ಛಿ! ಛಿ! ಅಂತ ಮೂಗು ಮುರಿಯಬೇಡಿ... |
ಪ್ರಕಟಿಸಿದ ದಿನಾಂಕ : 2012-06-04
ಮಾನವ ತ್ಯಾಜ್ಯದಿಂದ ಜೈವಿಕ ಅನಿಲ ಉತ್ಪತ್ತಿ...! ಛಿ! ಛಿ! ಅಂತ ಮೂಗು ಮುರಿಯಬೇಡಿ...
ಹೀಗೊಂದು ಯೋಜನೆಗೆ ಉಡುಪಿಯ ವಾಸ್ತುಶಿಲ್ಪಿ ಸುಧೀರ್ ಆಚಾರ್ಯ ಮುಂದಾಗಿದ್ದಾರೆ. ಇದು ಅಡುಗೆ ಅನಿಲ ಸಮಸ್ಯೆಯ ಜತೆಗೆ ಒಳಚರಂಡಿ, ಶೌಚಾಲಯದಿಂದಾಗುವ ಬಹುತೇಕ ತೊಂದರೆಗಳನ್ನೂ ನೀಗಲಿದೆ.ಪರಿಸರಕ್ಕೆ ಪೂರಕ ಯೋಜನೆ ಭವಿಷ್ಯದಲ್ಲಿ ಅನಿವಾರ್ಯವಾಗಲಿದೆ.
ಮನೆಗಳನ್ನು ಅತ್ಯಾಧುನಿಕವಾಗಿ(ಶೇ.20-30ಕಡಿಮೆ ವೆಚ್ಚದಲ್ಲಿ) ರ್ಯಾಪಿಡ್ ವಾಲ್,ವಿ ಪ್ಯಾನೆಲ್ ಮೂಲಕ ನಿರ್ಮಿಸುತ್ತಿರುವ ಸುಧೀರ್ ಆಚಾರ್ಯ ಇದೀಗ ಉಡುಪಿ ಶ್ರೀಕೃಷ್ಣಮಠದ ಹಿಂಬದಿ ಕೃಷ್ಣಧಾಮ ಅಪಾರ್ಟ್ಮೆಂಟ್ನಲ್ಲಿ (8ಮನೆ) ಮಾನವ ತ್ಯಾಜ್ಯದಿಂದ ಜೈವಿಕ ಅನಿಲ ಉತ್ಪತ್ತಿಗೆ ಮುಂದಾಗಿದ್ದಾರೆ.
ಮಾನವ ತ್ಯಾಜ್ಯ ಶೌಚಾಲಯಗಳಿಂದ ನೇರವಾಗಿ ಟ್ಯಾಂಕ್ಗೆ ರವಾನೆಯಾಗಲಿದೆ.ಅಲ್ಲಿ ಉತ್ಪಾದನೆಯಾದ ಅನಿಲ ಕೊಳವೆ ಮೂಲಕ ಪ್ರತಿ ಮನೆಗೆ ಪೂರೈಕೆಯಾಗಲಿದೆ.ತ್ಯಾಜ್ಯ ಟ್ಯಾಂಕ್ನಲ್ಲಿ ಅನಿಲ ಉತ್ಪಾದನೆ ಬಳಿಕ ಉಳಿವ ತ್ಯಾಜ್ಯ ಮತ್ತೊಂದು ಟ್ಯಾಂಕ್ಗೆ ರವಾನೆಯಾಗಲಿದೆ (ವಾಸನೆ ರಹಿತ) ಜತೆಗೆ ದನದ ಸೆಗಣಿಯ ಟ್ಯಾಂಕೂ ಇರಲಿದೆ.
ಮಾನವ ತ್ಯಾಜ್ಯದ ತ್ಯಾಜ್ಯವನ್ನು (ಜೈವಿಕ ಅನಿಲ ಉತ್ಪಾದನೆ ಬಳಿಕ) ಟ್ಯಾಂಕ್ನಿಂದ ತೆಗೆದು ಗೊಬ್ಬರಕ್ಕೆ ಬಳಸಬಹುದು, ಬೇಡಿಕೆಯಿದೆ. ತ್ಯಾಜ್ಯ ಟ್ಯಾಂಕಿನಲ್ಲಿ ಉತ್ಪಾದನೆಯಾದ ಅನಿಲ ಟಾಯ್ಲೆಟ್ ಬೇಸಿನ್ ಮೂಲಕ ಹಿಂತಿರುಗುವ ಅಪಾಯವೂ ಇಲ್ಲ.ಯಾಕೆಂದರೆ ಟಾಯ್ಲೆಟ್ ಬೇಸಿನ್-ತ್ಯಾಜ್ಯ ಟ್ಯಾಂಕ್ ಮಧ್ಯೆ ಲಾಕಿಂಗ್ ವ್ಯವಸ್ಥೆಯಿದೆ.
ಹೊಸ ಮನೆ,ಬಹುಮಹಡಿ ಕಟ್ಟಡ,ಹೋಟೆಲ್,ಆಸ್ಪತ್ರೆ ನಿರ್ಮಾಣ ಸಂದರ್ಭ ಮಾನವ ತ್ಯಾಜ್ಯದಿಂದ ಜೈವಿಕ ಅನಿಲ ಉತ್ಪತ್ತಿಯ ಯೋಜನೆಯನ್ನು ಅಳವಡಿಸಿಕೊಳ್ಳಬಹುದು. ಮಾನವ ತ್ಯಾಜ್ಯದಲ್ಲಿ ಶೇ. 60-65ರಷ್ಟು ಮಿಥೇನ್,ಶೇ.30-35ರಷ್ಟು ಕಾರ್ಬನ್ ಡೈ ಆಕ್ಸೈಡ್,ಶೇ. 1ರಷ್ಟು ಹೈಡ್ರೋಜನ್ ಸಲ್ಛೆಡ್ ಅಂಶವಿದೆ.
ಜಗತ್ತಿನಲ್ಲಿ ಪ್ರತಿ ವರ್ಷ 590-800ಮಿಲಿಯ ಟನ್ನುಗಳಷ್ಟು ಮಿಥೇನ್ ಅನಿಲ ಪರಿಸರಕ್ಕೆ ಬಿಡುಗಡೆಯಾಗುತ್ತಿದೆ.ಅದರಲ್ಲೂ ಶೇ.90ರಷ್ಟು ಮಿಥೇನ್ ಮಾನವ-ಪ್ರಾಣಿಗಳ ತ್ಯಾಜ್ಯದಿಂದ ಬಿಡುಗಡೆಯಾದರೆ,ಉಳಿದ ಶೇ.10ಮಿಥೇನ್ ತೈಲ ಸಂಸ್ಕರಣೆಯಿಂದಾಗುತ್ತಿದೆ.ನಗರ-ಗ್ರಾಮೀಣ ಪ್ರದೇಶದ ಜನತೆ ಅದರಲ್ಲೂ ಹೆಣ್ಮಕ್ಕಳು ಎದುರಿಸುತ್ತಿರುವ ಆರೋಗ್ಯ, ಶೌಚ ಸಹಿತ ಬಹುತೇಕ ಸಮಸ್ಯೆಗಳಿಗೂ ಜೈವಿಕ ಅನಿಲ ಉತ್ಪಾದನೆ ಯೋಜನೆಯಿಂದ ಪರಿಹಾರ ದೊರೆಯಲಿದೆ.
ಸ್ವಾವಲಂಬಿ ನಗರ
ಅವಿಭಕ್ತ ಕುಟುಂಬದ ಮನೆ, ಹೋಟೆಲ್, ಆಸ್ಪತ್ರೆ, ಫ್ಲ್ಯಾಟ್(ಬಹುಮಹಡಿ ಮನೆ) ಇತ್ಯಾದಿಗಳಲ್ಲಿ ಮಾನವ ತ್ಯಾಜ್ಯದಿಂದ ಜೈವಿಕ ಅನಿಲ ಉತ್ಪಾದನೆ, ಸಮರ್ಥ ಬಳಕೆ ಸಾಧ್ಯ. ತ್ಯಾಜ್ಯ ಉಕ್ಕಿ ಬರದಂತೆ,ಜೈವಿಕ ಅನಿಲ ಸೋರಿಕೆಯಾಗದಂತಿರುವ ಕ್ಲೋಸ್ಡ್ ಟ್ಯಾಂಕ್ನಿಂದ ಅನಿಲ ಕೊರತೆಯೂ ನೀಗಲಿದೆ.ಸಾರ್ವಜನಿಕ ಶೌಚಾಲಯಗಳಿಗೆ ಯೋಜನೆ ಅಳವಡಿಕೆಗೂ ಇದು ಸೂಕ್ತ. ಉಡುಪಿಯನ್ನು ಸ್ವಾವಲಂಬಿ ನಗರವನ್ನಾಗಿ ರೂಪಿಸಬೇಕೆನ್ನುವ ಕನಸಿದೆ -ಸುಧೀರ್ ಆಚಾರ್ಯ,ವಾಸ್ತುಶಿಲ್ಪಿ,ಸೃಷ್ಟಿ ಕನ್ಸಲ್ಟಿಂಗ್ ಎಂಜಿನಿಯರಿಂಗ್ ಬ್ಯೂರೋ, ಬ್ರಹ್ಮಗಿರಿ, ಉಡುಪಿ.
ಏನೇನು ಲಾಭ?
* ಯಾವುದೇ ದುರ್ವಾಸನೆಯಿಲ್ಲ*ಜೈವಿಕ ಅನಿಲದಲ್ಲಿ ಮಾಡಿದ ಅಡುಗೆ-ಕಾಯಿಸಿದ ನೀರು ವಾಸನೆ ಬರೋದಿಲ್ಲ * ತೈಲ ಅನಿಲ ಆಮದು ವೆಚ್ಚ ಉಳಿತಾಯ * ಮಾನವ ತ್ಯಾಜ್ಯ ಸುರಕ್ಷಿತ ವಿಲೇವಾರಿ-ಪರಿಸರಕ್ಕೆ ಪೂರಕ*ತ್ಯಾಜ್ಯ ವ್ಯರ್ಥವಾಗುವ ಸಮಸ್ಯೆಯಿಲ್ಲ *ಅನಿಲ ಉತ್ಪಾದನೆ ಬಳಿಕ ಉಳಿವ ತ್ಯಾಜ್ಯ ಗುಣಮಟ್ಟದ ಗೊಬ್ಬರವಾಗಿ ಬಳಕೆ *ಇಂಧನ ಸ್ವಾವಲಂಬನೆ, ಇಂಧನ ನಿರ್ವಹಣೆ ವೆಚ್ಚ ಕಡಿತ * ಇಂಧನ ಉರಿಸಿ ಪರಿಸರಕ್ಕೆ ಕಾರ್ಬನ್ ಡೈಆಕ್ಸೈಡ್ ಬಿಡುಗಡೆಯ ಹಸಿರು ಮನೆ ಪರಿಣಾಮಕ್ಕೂ ಕಡಿವಾಣ * ಆಧುನಿಕ ಪರ್ಯಾಯ ಇಂಧನವಾಗಿ ಬಳಕೆ
ಯಾವುದೇ ಸಮಸ್ಯೆಯಿಲ್ಲ
100ಕ್ಕೂ ಅಧಿಕ ಮಕ್ಕಳಿರುವ ಸಂಸ್ಥೆಯಲ್ಲಿ ಮಾನವ ತ್ಯಾಜ್ಯ-ದನದ ಸೆಗಣಿಯಿಂದ ಜೈವಿಕ ಅನಿಲ ಉತ್ಪಾದನೆ ಯೋಜನೆ 7-8ವರ್ಷಗಳಿಂದ ಜಾರಿಯಲ್ಲಿದ್ದು ಯಾವುದೇ ಸಮಸ್ಯೆಯಿಲ್ಲ. ಅನಿಲ ಉತ್ಪಾದನೆ ಬಳಿಕ ಉಳಿದ ತ್ಯಾಜ್ಯ ಸಹಿತ ದ್ರವವನ್ನು ಗಿಡಗಳಿಗೆ ಉಣಿಸಲಾಗುತ್ತಿದೆ -ದಾಮೋದರ ಆಚಾರ್ಯ, ನಿರ್ದೇಶಕರು, ನಮ್ಮ ಭೂಮಿ, ಕನ್ಯಾನ, ಕುಂದಾಪುರ
ವರದಿಯ ವಿವರಗಳು |
 |
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-06-04
|
|
dominic d, bangalore | 2012-06-05 | the article is excellent. Due to our Purity-Pollution concepts we are not aware of the colonisation of the life-world. In order to become inter-dependent existence the article is precursor.
|
ramish , puttur | 2012-06-04 | ಒಳ್ಳೆಯ ಯೋಚನೆ |
|