ಬಹರೈನ್ ಕನ್ನಡ ಸಂಘದಲ್ಲಿ 'ಶ್ರೀ ಸತ್ಯ ನಾರಾಯಣ ಪೂಜೆ' - ಭಕ್ತಿ ಪರವಶರಾದ ಭಕ್ತ ಜನ ವೃಂದ. |
ಪ್ರಕಟಿಸಿದ ದಿನಾಂಕ : 2012-04-17
ಮನಾಮ , ಬಹ್ರೈನ್ : ಸ್ಥಳೀಯ ಕನ್ನಡ ಸಂಘದ ವತಿಯಿಂದ ತನ್ನ ಸಭಾಂಗಣದಲ್ಲಿ ಕಳೆದ ತಾ .13 - 04 -2012 ರ ಶುಕ್ರವಾರದ "ವಿಷು" ಹಾಗೂ "ಯುಗಾದಿ "ಹಬ್ಬದ ವಿಶೇಷ ದಿನದಂದು ಪೂರ್ವಾಹ್ನ ಗಂಟೆ 10 ರಿಂದ ವೈದಿಕ ಶ್ರೀ ಫಣೀಂದ್ರ ಕುಮಾರ್ ಅವರ ನೇತ್ರತ್ವದಲ್ಲಿ " ಶ್ರೀ ಸತ್ಯ ನಾರಾಯಣ ಪೂಜೆ "ಯು ಅತ್ಯಂತ ವಿಜೃಂಭಣೆಯಿಂದ ನೆರವೇರಿತು.


ಶ್ರೀ ಮಹಾ ಗಣಪತಿ ಪೂಜೆಯ ಬಳಿಕ ಶ್ರೀ ಸತ್ಯನಾರಾಯಣ ಸ್ವಾಮಿಗೆ ಪಂಚಾಮೃತ ಅಭಿಷೇಕ, ನವಗ್ರಹ ಪೂಜೆ, ಅಷ್ಟದಿಕ್ಪಾಲಕ ಪೂಜೆ,ಆವರಣ ಪೂಜೆ, ಅಂಗ ಪೂಜೆ, ಪತ್ರ ಪೂಜೆ, ಪುಷ್ಪ ಪೂಜೆಗಳ ಜೊತೆಗೆ ವಿಷ್ಣು ಸಹಸ್ರನಾಮ ಪಾರಾಯಣವನ್ನು ಎಲ್ಲ ಭಕ್ತಾದಿಗಳೂ ಒಗ್ಗೂಡಿ ಪಠಿಸಿದರು.ಶ್ರೀ ಸತ್ಯ ನಾರಾಯಣ ಪೂಜೆಯ ಪ್ರಧಾನ ಅಂಗವಾಗಿರುವ ಶ್ರೀ ಸತ್ಯ ನಾರಾಯಣ ಕಥಾ ಪಾರಾಯಣವನ್ನು ಶ್ರೀ ಫಣೀಂದ್ರ ಕುಮಾರ್ ಅವರು ಅತ್ಯಂತ ಸುಂದರವಾಗಿ ವಿವರಿಸಿ ನೆರೆದ ಸುಮಾರು 500 ಕ್ಕೂ ಮಿಕ್ಕಿದ ಭಕ್ತರನ್ನು ಭಕ್ತಿ ಪರವಶರನ್ನಾಗಿ ಮಾಡಿದರು. ಶ್ರೀ ದೇವರನ್ನು ತಾಯ್ನಾಡಿನಿಂದ ವಿಶೇಷವಾಗಿ ತರಿಸಿದ ಹೂವುಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು.ಹಿರಿಯ ಕನ್ನಡಿಗ ಶ್ರೀ ಪಾಂಡುರಂಗ ಭಟ್ ಮತ್ತು ಸ್ಥಳೀಯ ಗುರು ಸೇವಾ ಸಮಿತಿಯ -ರಿಫಾ ಬಳಗದ ವತಿಯಿಂದ ಭಜನಾ ಕಾರ್ಯಕ್ರಮವು ನಡೆಯಿತು.




ಈಚೆಗೆ ಅಸ್ತಿತ್ವಕ್ಕೆ ಬಂದ ಶ್ರೀ ರಾಜ್ ಕುಮಾರ್ ಸಾರಥ್ಯದ ನೂತನ ಆಡಳಿತ ಮಂಡಳಿಗೆ ಶ್ರೀ ಫಣೀಂದ್ರ ಕುಮಾರ್ ರವರು ಶುಭಾಶೀರ್ವಾದವನ್ನಿತ್ತರು.


ಮಹಾ ಮಂಗಳಾರತಿಯ ಬಳಿಕ ಪ್ರಸಾದ ವಿತರಣೆಯ ಜೊತೆಗೆ ಅನ್ನ ಸಂತರ್ಪಣೆಯು ನಡೆಯಿತು. ನೂತನ ಅಧ್ಯಕ್ಷ ಶ್ರೀ ರಾಜ್ ಕುಮಾರ್ ಅನ್ನ ಸಂತರ್ಪಣೆಯ ಪ್ರಾಯೋಜಕತ್ವ ವಹಿಸಿದ್ದರು.




ದ್ವೀಪದ ಸಮಸ್ತ ಕನ್ನಡಿಗರ ಸಹಕಾರ, ಸಹಯೋಗ ಹಾಗೂ ಸಹಭಾಗಿತ್ವದಿಂದ ನೆರವೇರಿದ ಈ ಮಹಾಕಾರ್ಯದಲ್ಲಿ ಶ್ರೀ ದೇವರ ಕೃಪೆಗೆ ಒಳಗಾದ ಎಲ್ಲಾ ಸಧ್ಭಕ್ತರಿಗೂ ಸಂಘದ ಅಧ್ಯಕ್ಷರು ಹಾಗೂ ಆಡಳಿತ ಸಮಿತಿ ಸದಸ್ಯರು ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಿದರು.


ವರದಿಯ ವಿವರಗಳು |
 |
ಕೃಪೆ : ಕನ್ನಡ ಸಂಘ-ಬಹರೈನ್ ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-04-17
|
|
|