ಕೀನ್ಯಾದಲ್ಲಿ 56ನೇ ಕನ್ನಡ ರಾಜ್ಯೋತ್ಸವ ಮತ್ತು 4ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಅಚರಣೆ |
ಪ್ರಕಟಿಸಿದ ದಿನಾಂಕ : 2011-11-26
ನೈರೋಬಿ :ಪೂರ್ವ ಆಫ್ರಿಕ ದೇಶವಾದ ಕೀನ್ಯಾದಲ್ಲಿ ನೆಲೆಸಿರುವ ಕನ್ನಡಿಗರ ಸಂಸ್ಥೆ ಕನ್ನಡ ಸಾಂಸ್ಕೃತಿಕ ಸಂಘ ಮತ್ತು ಹೃದಯವಾಹಿನಿ ಬಳಗ ಮಂಗಳೂರು ಸಂಯುಕ್ತ’ವಾಗಿ ನವೆಂಬರ್5ರಂದು ನೈರೋಬಿಯ ಲೋಹನ ಮಹಾ ಜನ ಮಂಡಲ ಸಂಭಾಂಗಣದಲ್ಲಿ56ನೇ ಕನ್ನಡ ರಾಜ್ಯೋತ್ಸವ ಮತ್ತು4ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭವನ್ನು ಅತ್ಯಂತ ಅದ್ಧೂರಿಯಾಗಿ ಆಚರಿಸಲಾಯಿತು.
ಸಮಾರಂಭವನ್ನು ಕರ್ನಾಟಕ ವಿಧಾನಪರಿಷತ್ ಸದಸ್ಯರಾದ ಶ್ರೀ.ಡಿ.ಎಸ್ ವೀರಯ್ಯ ದೀಪ ಬೆಳಗಿಸಿ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಕರ್ನಾಟಕ ಸರಕಾರ ಅನಿವಾಸಿ ಕನ್ನಡಿಗರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಅದರ ಸದುಪಯೋಗವನ್ನು ಪಡೆದು ಕೊಳ್ಳಲು ತಾವು ಮುಂದಾಗಬೇಕು ಎಂದರು.
ಮುಖ್ಯ ಅತಿಥಿಗಳಾದ ಕನ್ನಡ ಸಾಹಿತ್ಯ ಪರಿಷತ್ನ ಗೌರವ ಕಾರ್ಯದರ್ಶಿ ಶ್ರೀ ಸಂಗಮೇಶ್ ಬಾದವಾಡಗಿ ಅವರು ಕಿನ್ಯಾ ದೇಶದಲ್ಲಿನ ಕನ್ನಡಿಗರಲ್ಲಿ ಇರುವ ಸಾಮರಸ್ಯ ಇತರರಿಗೆ ಮಾದರಿಯಾಗುವಂತಿದೆ.ಅನಿವಾಸಿ ಕನ್ನಡಿಗರ ಸಂಘಟನೆಗಳಿಗೆ ರೂಪಾಯಿ ೫೦ ಸಾವಿರ ಬೆಲೆಯ ಪುಸ್ತಕಗಳನ್ನು ನೀಡುವ ಯೋಜನೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇದೆ ಅದನ್ನು ತಮ್ಮ ಸಂಘಕ್ಕೆ ತಲುಪಿಸಲು ನಾನು ಪ್ರಯತ್ನಿಸುವುದಾಗಿ ತಿಳಿಸಿದರು.
ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಅಧ್ಯಕ್ಷ ಇಂ.ಕೆ.ಪಿ.ಮಂಜುನಾಥ್ ಸಾಗರ್ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ “ಈ ಇಡೀ ಸಭಾಂಗಣ ಕನ್ನಡಮಯವಾಗಿದೆ ದೂರದ ದೇಶವೊಂದರಲ್ಲಿ ಇಂಥ ಸಮಾರಂಭವನ್ನು ಏರ್ಪಡಿಸಲು ಸಾಕಷ್ಟು ಪೂರ್ವ ಸಿದ್ಧತೆಯ ಅವಶ್ಯಕತೆ ಇದೆ. ಅದನ್ನು ಯಶಸ್ವಿಯಾಗಿ ನಿರ್ವಹಿಸಿದ್ದೀರಿ.ಹೃದಯವಾಹಿನಿ ಬಳಗ ಕಡಿಮೆ ಸಂಖ್ಯೆಯಲ್ಲಿ ಕನ್ನಡಿಗರಿರುವ ದೇಶಗಳಲ್ಲಿ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭವನ್ನು ಹಮ್ಮಿಕೊಂಡು ಅಲ್ಲಿನ ಹೊಸ ಪೀಳಿಗೆಗೆ ಕರ್ನಾಟಕದ ಕಲೆ ಮತ್ತು ಸಾಹಿತ್ಯ ಅರಿವನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಅದಕ್ಕೆ ತಮ್ಮೆಲ್ಲರ ಸಹಕಾರ ದೊರೆಯುತ್ತಿರುವುದು ಅಭಿನಂದನಾ ರ್ಹವಾದುದು” ಎಂದರು.
ಮತ್ತೋರ್ವ ಮುಖ್ಯ ಅತಿಥಿಗಳಾದ ಉ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅದ್ಯಕ್ಷರಾದ ಶ್ರೀ ರೋಹಿದಾಸ್ ನಾಯಕ್ ಅವರು “ನಾನು ಹಲವು ದೇಶಗಳ ಕನ್ನಡ ಸಂಘಗಳ ಕಾರ್ಯ ಕ್ರಮಗಳಲ್ಲಿ ಭಾಗವಹಿಸಿದ್ದೇನೆ ಆದರೆ ಕೀನ್ಯಾ ದೇಶದ ಕನ್ನಡಿಗರಾದ ತಾವು ತುಂಬಾ ವಿಭಿನ್ನ ಮತ್ತು ವಿಶಿಷ್ಟ ರೀತಿಯಲ್ಲಿ ಈ ಸಮಾರಂಭವನ್ನು ಆಯೋಜಿಸಿದ್ದೀರಿ ತಾಯಿ ಕನ್ನಡಾಂಬೆ ಭುವನೇಶ್ವರಿಯು ವಿಶ್ವ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸುವ ಶಕ್ತಿಯನ್ನು ಕರುಣಿಸಲಿ” ಎಂದು ಶುಭ ಕೋರಿದರು.
ಕನ್ನಡ ಸಾಂಸ್ಕೃತಿಕ ಸಂಘ, ನೈರೋಬಿ ಇದರ ಅಧ್ಯಕ್ಷರಾದ ಶ್ರೀರಾಮ ಮೊಗವೀರ ಕುಂದಾಪುರ ಇವರು ಅತಿಥಿಗಳನ್ನು ಸ್ವಾಗತಿಸಿ ಕರ್ನಾಟಕದಿಂದ ಆಗಮಿಸಿದ್ದ ಗಣ್ಯರಾದ ಶ್ರೀ ಶಿವಾನಂದ ಹೊಂಡದಕೇರಿ,ಶ್ರೀ ಕೆ.ವಿ.ಶಂಕರಪ್ಪ,ಶ್ರೀ ರಾಜೇಂದ್ರ ಕುಮಾರ್ ಡಾ.ನಾಗೂರ್ ಬಿಜಾಪುರ ಮತ್ತು ಶ್ರೀ ಇಲಿಯಾಸ್ ಸ್ಯಾಕ್ಯಸ್ ಅವರನ್ನು ಸನ್ಮಾನಿಸಿದರು.
ಕಿನ್ಯಾ ಕನ್ನಡ ಸಾಂಸ್ಕೃತಿಕ ಸಂಘದ ಪುರುಷರು,ವನಿತೆಯರು ಮತ್ತು ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಕರ್ನಾಟಕದಿಂದಾಗಮಿಸಿದ್ದ ಶ್ರೀ ಮಾಸ್ತಿ ನಾಟ್ಯ ಕಲಾ ಅಕಾಡೆಮಿ ಕಲಾವಿದರಿಂದ ವಿದ್ವಾನ್ ಕೋಲಾರ್ ರಮೇಶ್ ನಿರ್ಧೇಶನದಲ್ಲಿ ದಶಾವತಾರ ನೃತ್ಯ ರೂಪಕ ಮತ್ತು ಮಂಗಳೂರಿನ ಸನಾತನ ನಾಟ್ಯಾಲಯದ ವಿದುಷಿ ಶಾರದ ಮಣಿಶೇಖರ್ ಅವರ ನೃತ್ಯ ಕೀನ್ಯಾ ಕನ್ನಡಿಗರನು ರೋಮಾಂಚನಕೊಳ್ಳುವಂತೆ ಮಾಡಿದವು.
ಕಾರ್ಯಕ್ರಮದ ಯಶಸ್ಸಿಗೆ ಕಾರ್ಯದರ್ಶಿ ಶ್ರೀ ಸಂಜಯ್ ಭಟ್,ಸ್ಥಾಪಕಾಧ್ಯಕ್ಷ ಶ್ರೀ ಆಶೋಕ್ ರೆಡ್ಡಿ, ಶ್ರೀ ಸಿ.ಎನ್. ರಾವ್, ಹೋಟೇಲ್ ಉದ್ಯಮಿ ಶ್ರೀ ಆಶೋಕ್ ಭಂಡಾರಿ, ಶ್ರೀ ಅರವಿಂದ್, ಶ್ರೀ ಬಾಲಾಜಿ, ಶ್ರೀಮತಿ ರಮಾ ಬಾಲಾಜಿ, ಶ್ರೀ ಒಲಿವರ್ ಮತ್ತು ಶ್ರೀ ರಾಜೇಶ್ ಮುಂತಾದವರು ಯೋಗದಾನ ನೀಡಿದರು.
ಕರ್ನಾಟಕದಿಂದ ಆಗಮಿಸಿದ್ದ ಕಲಾವಿದರು ಮತ್ತು ಗಣ್ಯರು ಕನ್ನಡ ಸಾಂಸ್ಕೃತಿಕ ಸಂಘ ಕೀನ್ಯಾ ಇದರ ಅದ್ಯಕ್ಷ ಶ್ರೀ ರಾಮ್ ಮೊಗವಿರ ಮತ್ತು ಅವರ ಬಳಗದವರ ಪ್ರೀತಿ ಮತ್ತು ಅದರವನ್ನು ಮನಸಾರೆ ಕೊಂಡಾಡಿದರು.
ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀಮತಿ ಸರಿತಾ ಶ್ರೀನಿವಾಸ್, ಧನ್ಯವಾದ ಸಮರ್ಪಿಸಿದರು.
ವರದಿಯ ವಿವರಗಳು |
 |
ಕೃಪೆ : ರೋನ್ಸ್ ಬಂಟ್ಟಾಳ್ ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2011-11-26
|
|
|