ಸೋಮವಾರ, 23-09-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಬೆಳಗಾವಿಯಲ್ಲಿ ಸಂಭ್ರಮದ ವಿಶ್ವಕನ್ನಡ ಸಮ್ಮೇಳನಕ್ಕೆ ತೆರೆ : ಐದು ವರ್ಷಕ್ಕೊಮ್ಮೆ ವಿಶ್ವಕನ್ನಡ ಸಮ್ಮೇಳನ - ಮುಖ್ಯಮಂತ್ರಿ ಘೋಷಣೆ

ಬೆಳಗಾವಿ: ವಿಶ್ವ ಕನ್ನಡ ಸಮ್ಮೇಳನ ಕುಂದಾನಗರಿಯಲ್ಲಿಭರ್ಜರಿ ಯಶಸ್ಸು ಕಂಡಿದೆ. ಭಾನುವಾರ ಈ ಸಮಾವೇಶಕ್ಕೆ ಅದ್ದೂರಿಯ ತೆರೆ ಬಿತ್ತು. ಮೇಳ ಮುಗಿದರೂ ಮಾಸದ ನೆನಪುಗಳು ಮಾತ್ರ ಅಚ್ಚಳಿಯದೆ ಉಳಿಯಲಿವೆ.

ಸಮ್ಮೇಳನದ ಯಶಸ್ಸಿನಿಂದ ಬೀಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇನ್ನು ಮುಂದೆ ಪ್ರತಿ ಐದು ವರ್ಷಗಳಿಗೊಮ್ಮೆ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸುವುದಾಗಿ ಘೋಷಿಸಿ ದ್ದಾರೆ. ಸಮ್ಮೇಳನದ ಯಶಸ್ಸಿನ ಬಳಿಕ ಇನ್ನು ಅದರ ಪುನರವಲೋಕನ ನಡೆಯಲಿದೆ.

ಮೂರು ದಿನಗಳ ಕಾಲ ಹಗಲು-ರಾತ್ರಿ ಮುಂದುವರಿದ ವಿಶ್ವ ಕನ್ನಡ ಸಮ್ಮೇಳನ ಗಡಿನಾಡಿನಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದೆ. ಉದ್ಘಾಟನಾ ಕಾರ್ಯಕ್ರಮದಿಂದ ಹಿಡಿದು ಸಮಾರೋಪದ ವರೆಗೆ ಕನ್ನಡಿಗರಿಗೆ ಹಿಡಿಸಿದೆ. ದೃಶ್ಯ, ಕಾವ್ಯ, ನಾಟ್ಯ-ನೃತ್ಯ, ನಾದ ವೈಭವ ಮೆರೆದಿದೆ.

ಚಿಂತನಾ ಗೋಷ್ಠಿಗಳ ಸರಮಾಲೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಭರಪೂರ ದಾಸೋಹ ಜನತೆಗೆ ದಕ್ಕಿದೆ. ಇದರ ಜೊತೆಗೆ ಮೂರೂ ದಿನಗಳ ಕಾಲ ಅನ್ನ ದಾಸೋಹ ಬಿಡುವಿಲ್ಲದೆ ಸಾಗಿದೆ. ಸಮ್ಮೇಳನದ ಯಶಸ್ಸಿಗಾಗಿ ಹಗಲಿರುಳು ದುಡಿದ ಸಂಘಟಕರ ಶ್ರಮ ಸಾರ್ಥಕವಾಗಿದೆ.

ಸಮ್ಮೇಳನದ ಪ್ರಾರಂಭದಲ್ಲಿ ನಡೆದ ಮೆರವಣಿಗೆ ಗಡಿನಾಡಿನಲ್ಲಿ ಅಭೂತಪೂರ್ವ ಯಶಸ್ಸು ಕಂಡಿತು. ಮರಾಠಿಗರ ಸಹಕಾರವೂ ಸಮ್ಮೇಳನಕ್ಕೆ ಸಿಕ್ಕಿತು. ಇಲ್ಲಿನ ಖಡೇ ಬಜಾರ್, ಮಾರುತಿಗಲ್ಲಿಯಂತಹ ಮರಾಠಿ ಪ್ರಭಾವ ಇರುವ ಪ್ರದೇಶಗಳಲ್ಲೂ ಕನ್ನಡದ ಧ್ವಜಗಳು ರಾರಾಜಿಸಿದವು. ಅಂಗಡಿಗಳು ದೀಪಾಲಂಕಾರದಿಂದ ಕಂಗೊಳಿಸಿದವು. ಜನರೂ ಪ್ರವಾಹದಂತೆ ಹರಿದು ಬಂದರು.

ಎಲ್ಲಿ ನೋಡಿದರೂ ರಸ್ತೆಗಳಲ್ಲೆಲ್ಲ ಜನರು ಓಡೋಡಿ ಬರುತ್ತಿದ್ದ ದೃಶ್ಯ. ರಾತ್ರಿಯೆಲ್ಲ ಜನ ಕಾರ್ಯಕ್ರಮಗಳನ್ನು ಸವಿದರು. ವಸ್ತುಪ್ರದರ್ಶನ, ಕಲಾ ಪ್ರದರ್ಶನ ಹಾಗೂ ಪುಸ್ತಕ ಪ್ರದರ್ಶನದ ತಾಣಗಳಲ್ಲಿ ಕಿಕ್ಕಿರಿದು ಸೇರಿದ್ದರು. ಸಣ್ಣಪುಟ್ಟ ಕಿರಿಕಿರಿಗಳನ್ನು ಜನ ಸಹಿಸಿಕೊಂಡರು.

ರಾಜ್ಯ ಮತ್ತು ವಿದೇಶಗಳ ನೂರಾರು ಕಲಾವಿದರ ವಿದ್ವತ್ತನ್ನು ಒರೆಗೆ ಹಚ್ಚಲು ವಿಶ್ವ ಕನ್ನಡ ಸಮ್ಮೇಳನ ವೇದಿಕೆ ಆಯಿತು.ಶನಿವಾರ ರಾತ್ರಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ತಂಡದವರು ನಡೆಸಿಕೊಟ್ಟ ಸಂಗೀತ ಸೌರಭ ಕಾರ್ಯಕ್ರಮದ ಕೊನೆಯಲ್ಲಿ ಮುಖ್ಯಮಂತ್ರಿ ಆದಿಯಾಗಿ ಸಚಿವರು, ಶಾಸಕರೂ ವೇದಿಕೆಯಲ್ಲಿ ಹೆಜ್ಜೆ ಹಾಕಿ ಕುಣಿದರು.

ರಂಗಭೂಮಿಯ ವೈಭವವನ್ನು ಜನತೆ ನೋಡುವಂತಾಗಿದ್ದು ಸಮ್ಮೇಳನದ ವಿಶೇಷ. ಮೂರೂ ದಿನ ‘ಚಿಂದೋಡಿ ಲೀಲಾ ರಂಗಮಂದಿರ’ದಲ್ಲಿ ನಡೆದ ನಾಟಕಗಳು ವೃತ್ತಿ ರಂಗಭೂಮಿಯ ವೈಭವವನ್ನು ಮೆಲುಕು ಹಾಕುವಂತೆ ಮಾಡಿದವು. ಜಾನಪದ ಕಲಾಪ್ರಕಾರಗಳೂ ಕೂಡ ಜನಮನ ಸೂರೆಗೊಂಡವು.

ಭಾನುವಾರವೂ ಅದೇ ರಂಗು ವೈಭವ. ಬೆಳಿಗ್ಗೆ ನಡೆದ ಹಾಸ್ಯಗೋಷ್ಠಿಗೆ ಕ್ರೀಡಾಂಗಣದ ತುಂಬೆಲ್ಲ ಜನ ಸೇರಿದ್ದರು.ನಕ್ಕು ನಲಿದರು. ಗೋಷ್ಠಿಗಳಿಗೂ ಜನರ ಸ್ಪಂದನೆ ಉತ್ತಮವಾಗಿತ್ತು. ಸಮಾರೋಪ ಸಮಾರಂಭದ ಜತೆಜತೆಗೆ ನಡೆದ ಕಾವ್ಯ ಗಾಯನ ಮತ್ತು ನಂತರ ನಡೆದ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬೆಳಗಾವಿಯ ಜನಮಾನಸದಲ್ಲಿ ಸಮ್ಮೇಳನ ಅಚ್ಚಳಿಯದ ನೆನಪು ಮೂಡಿಸಿತು.

ಪಾಪು ಎಚ್ಚರಿಕೆ: ’ಕನ್ನಡಿಗರು ಮತ್ತು ಮರಾಠಿ ಭಾಷಿಕರು ಇಲ್ಲಿ ಅನ್ಯೋನ್ಯವಾಗಿ ಬದುಕುತ್ತಿ ದ್ದಾರೆ. ಹೊರಗಿನವರು ಇದನ್ನು ಕೆಣಕಬಾರದು. ಕೆಣಕಿದರೆ ಕನ್ನಡಿಗರು ಸಹಿಸುವುದಿಲ್ಲ ಎಂಬು ದನ್ನು ಬೆಳಗಾವಿಯ ಈ ಸಮ್ಮೇಳನ ತೋರಿಸಿದೆ’ ಎಂದು ಡಾ. ಪಾಟೀಲ ಪುಟ್ಟಪ್ಪ (ಪಾಪು) ಅವರು ’ಹೊರಗಿನ ಜಗಳಗಂಟರಿಗೆ’ ಎಚ್ಚರಿಕೆ ನೀಡಿದರು.

ಸಮ್ಮೇಳನದ ಸಮಾರೋಪ ಭಾಷಣ ಮಾಡಿದ ಪಾಪು ತಮ್ಮ ಇಪ್ಪತ್ತು ನಿಮಿಷಗಳ ನಿರರ್ಗಳ ಭಾಷಣದಲ್ಲಿ ಕನ್ನಡದ ಹಿರಿಮೆಯನ್ನು ತೆರೆದಿಟ್ಟರು. ಹಾಗೆಯೇ ಕನ್ನಡಿಗರ ಶಕ್ತಿ ಎಷ್ಟು ಅಗಾಧ ಎಂಬುದನ್ನು ಒತ್ತಿ ಹೇಳಿದರು.

’ಈಗಿನ ಮಹಾರಾಷ್ಟ್ರದಲ್ಲಿ ಮೊದಲು ಕನ್ನಡವೇ ಇತ್ತು. ಈಗ ಮರಾಠಿ ಭಾಷೆಯಲ್ಲಿರುವ ಅಕ್ಕ, ಅವ್ವ, ತಾಯಿ, ಅಪ್ಪ ಮೊದಲಾದ ಶಬ್ದಗಳೆಲ್ಲ ಕನ್ನಡದವು. ಮಹಾರಾಷ್ಟ್ರ ರಾಜಧಾನಿ ಮುಂಬೈಯ ಲ್ಲಿರುವ ಉಪನಗರಗಳಲ್ಲಿ ಬಹುತೇಕವು ಕನ್ನಡದ ಹೆಸರುಗಳ ಮೂಲವನ್ನು ಹೊಂದಿವೆ. ಅಷ್ಟೇ ಅಲ್ಲ, ಮಹಾರಾಷ್ಟ್ರದಲ್ಲಿ ದೊರೆತಿರುವ ಶಿಲಾಶಾಸನಗಳಲ್ಲಿ ಶೇಕಡಾ 80ರಷ್ಟು ಕನ್ನಡದಲ್ಲಿವೆ. ಇದೆಲ್ಲದರ ನಡುವೆಯೂ ನಾವು ಮರಾಠಿ ಭಾಷೆಯನ್ನು ಗೌರವಿಸುತ್ತೇವೆ.

ಆದರೆ ಕೆಲವರು ನಮ್ಮ ಸೌಹಾರ್ದವನ್ನು ಕದಡಲು ಯತ್ನಿಸುತ್ತಿದ್ದಾರೆ. ಇದನ್ನು ಅವರು ಕೈಬಿಡ ಬೇಕು. ಕನ್ನಡಿಗರ ಸಹನೆ ಮತ್ತು ಶಕ್ತಿಯನ್ನು ಪರೀಕ್ಷೆ ಮಾಡುವುದು ಬೇಡ’ ಎಂದು ಅವರು ಬಾಳಾ ಠಾಕ್ರೆ ಮತ್ತಿತರ ಮರಾಠಿ ಮುಖಂಡರ ನಿಲುವನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.

‘ತಿಳಿದುಕೊಳ್ಳಿ. ನೆನಪಿಟ್ಟುಕೊಳ್ಳಿ. ಕನ್ನಡದ ವ್ಯಾಪ್ತಿ ಬಹಳ ದೊಡ್ಡದು. ಕನ್ನಡ- ಮರಾಠಿ ಎರಡೂ ಜನರ ಭಾಷೆ ಕನ್ನಡವೇ ಆಗಿತ್ತು. ಮಹಾರಾಷ್ಟ್ರದಲ್ಲಿ ಮರಾಠಿಯೇ ಇರಲಿಲ್ಲ ಎಂಬುದನ್ನು ಮರೆಯ ಬೇಡಿ’ ಎಂದು ಅವರು ಗುಡುಗಿದಾಗ ಜನರ ಚಪ್ಪಾಳೆ ಮುಗಿಲು ಮುಟ್ಟಿತು.

‘ಮರಾಠಿ ಕನ್ನಡದ ಮೇಲೆ ತುಂಬ ಅವಲಂಬಿತವಾಗಿದೆ. ಪಂಢರಪುರದ ವಿಠಲ ಕನ್ನಡದವನು. ಮರಾಠಿಯ ಸಂತ ಜ್ಞಾನೇಶ್ವರಿ ಗ್ರಂಥದ ತಿರುಳು ಅರ್ಥವಾಗಬೇಕಾದರೆ ಮರಾಠಿ ಮಾತೃ ಭಾಷಿಕರಿಗೆ ಕನ್ನಡ ಗೊತ್ತಿರಲೇಬೇಕು ಎಂಬುದನ್ನು ಅಲ್ಲಿನ ವಿದ್ವಾಂಸರೇ ಹೇಳುತ್ತಾರೆ. ಅಲ್ಲದೇ ಜ್ಞಾನೇಶ್ವರಿಯಲ್ಲಿನ ಬಹುತೇಕ ಶಬ್ದಗಳು ಕನ್ನಡದಲ್ಲಿವೆ ಎಂಬುದಕ್ಕೆ ಸಹ ಕನ್ನಡಿಗರಾದ ನಾವೆಲ್ಲ ಹೆಮ್ಮೆ ಪಟ್ಟುಕೊಳ್ಳಬೇಕು’ ಎಂದು ಪಾಪು ಹೇಳಿದರು.

‘ನಾವು ನಮ್ಮ ನಮ್ಮಲ್ಲಿ ಕಚ್ಚಾಡುವುದು ಬೇಡ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೆ ಬಗೆಹರಿಸಿ ಕೊಳ್ಳೋಣ. ಒಟ್ಟಾಗಿ ಇರೋಣ. ಕನ್ನಡ ಸಮ್ಮೇಳನದಲ್ಲಿ ಪ್ರದರ್ಶನವಾದ ಈ ಬಲ ಇಡೀ ಕನ್ನಡ ನಾಡಿನ ದೊಡ್ಡ ಶಕ್ತಿ. ಇದೇ ಒಗ್ಗಟ್ಟನ್ನು ಉಳಿಸಿಕೊಳ್ಳೋಣ. ನಾಡು, ಸಂಸ್ಕೃತಿಯ ಹಿರಿಮೆಯನ್ನು ಇನ್ನಷ್ಟು ಎತ್ತರಕ್ಕೆ ಏರಿಸೋಣ. ಇಡೀ ವಿಶ್ವದಲ್ಲಿ ಭಾರತದಂತಹ ಮಹಾನ್ ರಾಷ್ಟ್ರವಿಲ್ಲ. ಇಡೀ ಭಾರತದಲ್ಲಿ ಕರ್ನಾಟಕದಂತಹ ಮಹಾನ್ ರಾಜ್ಯ ಇನ್ನೊಂದಿಲ್ಲ’ ಎಂದು ಪಾಪು ಕಳಕಳಿಯಿಂದ ನುಡಿದರು.

ಐದು ವರ್ಷಕ್ಕೊಮ್ಮೆ ಸಮ್ಮೇಳನ: ಐದು ವರ್ಷಗಳಿಗೊಮ್ಮೆ ವಿಶ್ವಕನ್ನಡ ಸಮ್ಮೇಳನ ನಡೆಸ ಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮೇಳನದ ಸಮಾರೋಪ ಸಮಾರಂಭ ದಲ್ಲಿ ಪ್ರಕಟಿಸಿದರು. ವಿಶ್ವ ಕನ್ನಡ ಸಮ್ಮೇಳನದ ಆತಿಥೇಯ ನಗರಿ ಬೆಳಗಾವಿ ಎಂದೆಂದಿಗೂ ಕರ್ನಾಟಕದ್ದೇ ಎನ್ನುವ ಸಂದೇಶ ವಿಶ್ವಕ್ಕೇ ತಲುಪಿದೆ. ಇದರ ಶ್ರೇಯ ಭಾಗವ ಹಿಸಿದ ಲಕ್ಷಾಂತರ ಕನ್ನಡಿಗರಿಗೆ ಸಲ್ಲುತ್ತದೆ ಎಂದು ಮನದುಂಬಿ ಹೇಳಿದರು. ಬೆಳಗಾವಿಯಲ್ಲಿ ನಿರ್ಮಾಣವಾಗುತ್ತಿರುವ ಸುವರ್ಣ ವಿಧಾನಸೌಧದ ಕಾಮಗಾರಿ ನಾಲ್ಕು ತಿಂಗಳಲ್ಲಿ ಮುಗಿಯ ಲಿದೆ. ಇದಕ್ಕೆ ಅಗತ್ಯವಿರುವ ಹಣವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದರು.

ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರು ಮುಂದಿಟ್ಟಿದ್ದ ಬೇಡಿಕೆಯನ್ನು ನೆನಪಿಸಿಕೊಂಡ ಯಡಿಯೂರಪ್ಪ ಬೆಳಗಾವಿಗೆ ಅಂತರರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣದ ಕೊಡುಗೆಯನ್ನೂ ಘೋಷಿಸಿ ಕ್ರೀಡಾಂಗಣ ನಿರ್ಮಾಣಕ್ಕಾಗಿ ಸೂಕ್ತ ಜಾಗ ಗುರುತಿಸುವ ಕೆಲಸವನ್ನು ತಕ್ಷಣದಿಂದ ಆರಂಭಿಸಲಾಗುವುದು ಎಂದು ತಿಳಿಸಿದರು.

‘ಎಲ್ಲ ಕನ್ನಡಿಗರ ಬಹುದಿನಗಳ ಬೇಡಿಕೆಯಂತೆ ಬೆಳಗಾಂ ಎಂಬ ಹೆಸರನ್ನು ಬೆಳಗಾವಿ ಎಂದು ಬದಲಿಸಲು ಸರ್ಕಾರ ಈಗಾಗಲೇ ಹೆಜ್ಜೆ ಇರಿಸಿದೆ. ಕೇಂದ್ರ ಸರ್ಕಾರಕ್ಕೆ ಈ ಸಂಬಂಧ ಪ್ರಸ್ತಾವನೆ ಹೋಗಿದೆ. ಪಕ್ಷಾತೀತವಾಗಿ ದೆಹಲಿ ಮಟ್ಟದಲ್ಲಿ ಒತ್ತಡವನ್ನು ಹೇರಿ ಆದಷ್ಟು ಶೀಘ್ರ ಬೆಳಗಾವಿ ಎಂಬ ಹೆಸರು ಅಧಿಕೃತವಾಗಿ ಜಾರಿಗೆ ಬರುವಂತೆ ನೋಡಿಕೊಳ್ಳಲಾಗುವುದು’ ಎಂದು ಮುಖ್ಯ ಮಂತ್ರಿ ಹೇಳಿದರು.

ಬೆಳಗಾವಿಯಲ್ಲಿ ಸಮ್ಮೇಳನಕ್ಕೆ ದೊರೆತ ಉತ್ಸಾಹದ ಪ್ರತಿಕ್ರಿಯೆ ಎಲ್ಲ ಗಡಿ ಜಿಲ್ಲೆಗಳಲ್ಲಿ ಅದಮ್ಯ ಚೇತನವನ್ನು ಮೂಡಿಸಿದೆ. ಈ ಸಮ್ಮೇಳನ ಅಭೂತಪೂರ್ವ ಯಶಸ್ಸು ಕಂಡಿದೆ ಎಂದು ಅವರು ನುಡಿದರು.

ಬೆಳಗಾವಿ ಬಿಟ್ಟು ಹೋಗಲು ಮನಸ್ಸು ಬರುತ್ತಿಲ್ಲ: ಯಡಿಯೂರಪ್ಪ

 ಬೆಳಗಾವಿ ಜನ ಸಹೃದಯಿಗಳು. ಸಹಕಾರ ಮನೋಭಾವದರು. ವಿಶ್ವ ಕನ್ನಡ ಸಮ್ಮೆಳನದ ಲ್ಲಂತೂ ಜನಸಾಗರ ನೋಡಿದ ಮೇಲೆ ಇಲ್ಲಿಂದ ಹೋಗಲೂ ಮನಸೇ ಬರುತ್ತಿಲ್ಲ. ಇನ್ನೂ ಕೆಲ ದಿನಗಳ ಕಾಲ ಇಲ್ಲೇ ಇದ್ದುಬಿಡೊಣ ಅನಿಸುತ್ತಿದೆ.

ಇದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಮನದಾಳ ಮಾತು. ಸಮ್ಮೆಳನದ ಅಭೂತಪೂರ್ವ ಯಶಸ್ಸು. ಸಮ್ಮೇಳನಕ್ಕೆ ಪ್ರವಾಹೋಪಾದಿಯಲ್ಲಿ ಹರಿದು ಬಂದ ಜನಸಾಗರ ಮುಖ್ಯಮಂತ್ರಿಗಳನ್ನು ಸಾಕಷ್ಟು ಪುಳಕಿತಗೊಳ್ಳುವಂತೆ ಮಾಡಿದೆ. ಹರ್ಷ ತುಂಬಿದ ಮನಸ್ಸಿನಲ್ಲಿ ಮಾತೇ ಹೊರಡುತ್ತಿಲ್ಲವಂತೆ. ಹಾಗೆಂದು ಸ್ವತಃ ಯಡಿಯೂರಪ್ಪ ಅವರೇ ಸುದ್ದಿಗಾರರ ಎದುರು ಹೇಳಿಕೊಂಡರು.

ಸಮ್ಮೇಳನದ ಯಶಸ್ಸು , ಇಲ್ಲಿಯ ಜನರ ಸಹಕಾರ ನನ್ನ ಬಾಯಿ ಕಟ್ಟಿಹಾಕಿದೆ. ಜನರ ಸಹ ಕಾರಕ್ಕೆ ಎಷ್ಟು ಹೊಗಳಿದರೂ ಕಡಿಮೆಯೇ. ಮೂರು ದಿನಗಳ ಕಾಲ ಇಲ್ಲಿದ್ದು ಅನುಭವಿಸಿದ ಅವಿಸ್ಮರಣೀಯ ಕ್ಷಣಗಳು ಎಂದಿಗೂ ಮರೆಯುವಂತಿಲ್ಲ. ಯಾವುದಕ್ಕೂ ಪೂರ್ವ ಜನ್ಮದ ಪುಣ್ಯ ಬೇಕು ಎಂದು ಹೇಳಿ ಗದ್ಗದಿತರಾದರು.

ಬೆಳಗಾವಿ ಭಾಗದ ಜನ ಬಹಳ ಒಳ್ಳೆಯವರು. ಆದರೆ ನಮ್ಮ ಭಾಗದ ಜನ ಸ್ವಲ್ಪ ಒರಟು. ಇಲ್ಲಿಯ ಜನ ಒಂದೇ ತಾಯಿಯ ಮಕ್ಕಳಂತೆ ಇದ್ದಾರೆ. ಒಬ್ಬರಿಗೊಬ್ಬರು ಸಹಾಯ ಮಾಡುತ್ತಾರೆ ಎಂದು ಹೇಳುವಾಗ ಯಡಿಯೂರಪ್ಪ ಸ್ವಲ್ಪ ಹೊತ್ತು ಭಾವನಾತ್ಮಕವಾಗಿದ್ದಂತೆ ಕಂಡರು.

ವಿಶ್ವಕ್ಕೆ ತೆರೆದ ಕನ್ನಡಿಗರು

ಕಿತ್ತೂರು ಚೆನ್ನಮ್ಮ ವೇದಿಕೆ, ಬೆಳಗಾವಿ, ಮಾ.೧೩- : ಗಡಿನಾಡು ಬೆಳಗಾವಿಯಲ್ಲಿ ಮೂರು ದಿನಗಳ ಕಾಲ ಕನ್ನಡದ ಹಿರಿಮೆ- ಗರಿಮೆ, ಸಂಸ್ಕೃತಿಯ ಮೇರುಗಳನ್ನು ಜಗತ್ತಿಗೆ ಹೆಮ್ಮೆಯಿಂದ ಸಾರಿ ಹೇಳಿದ ಎರಡನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ಭಾನುವಾರ ಇಳಿ ಸಂಜೆ ಸಂಭ್ರಮದ ತೆರೆ.

ಉರಿವ ಸೂರ್ಯ ಬಾನಂಚಿಗೆ ಇಳಿಯುತ್ತಿದ್ದಂತೆ ಇತ್ತ ಜಿಲ್ಲಾ ಕ್ರೀಡಾಂಗಣದಲ್ಲಿ ಲಕ್ಷ ಲಕ್ಷ ಕನ್ನಡ ಹೃದಯಗಳಲ್ಲಿ ವಿದಾಯದ ಸವಿ ಕಂಪನ. ಸಿಹಿ ಕಂಠದ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರು ಕುವೆಂಪು ಅವರ -ಬಾರಿಸು ಕನ್ನಡ ಡಿಂಡಿಮ, ಓ ಕರ್ನಾಟಕ ಹೃದಯ ಶಿವ- ಕವನವನ್ನು ಹಾಡಿ ನೆರೆದಿದ್ದ ಜನಸ್ತೋಮದ ಎದೆಗಳಲ್ಲಿ ಕನ್ನಡದ ದೀಪ ಬೆಳಗಿದರು. ಇತ್ತ ವೇದಿಕೆಯಲ್ಲಿ ಸ್ವರಗಳು ಆಲಾಪಗೈದರೆ, ಕ್ರೀಡಾಂಗಣದ ನೆತ್ತಿಯ ಮೇಲಿನ ಆಕಾಶದಲ್ಲಿ ಚುಕ್ಕಿಗಳು ಚಿತ್ತಾರ ಬರೆದು ಶುಭ ಕೋರಿದವು.

ಇನ್ಫೋಸಿಸ್ ಸಂಸ್ಥಾಪಕ ಡಾ. ನಾರಾಯಣಮೂರ್ತಿ ಅವರಿಂದ ಚಾಲನೆಗೊಂಡು 3 ದಿನಗಳ ಕಾಲ ಅನುರಣಿಸಿದ ಕನ್ನಡ ಹಬ್ಬದಲ್ಲಿ ಸಾಹಿತ್ಯ, ಸಂಸ್ಕೃತಿ, ಚಿತ್ರಕಲೆ, ಶಿಲ್ಪಕಲೆ, ನೃತ್ಯ ಗಾಯನ, ಹಾಸ್ಯ, ನಾಟಕ, ಸಾಹಸ ಕ್ರೀಡೆಗಳ ಜತೆ ಪುಸ್ತಕ ಪ್ರದರ್ಶನ, ಹತ್ತು- ಹಲವು ಚರ್ಚೆ, ಗೋಷ್ಠಿಗಳ ಆಭರಣ ತೊಟ್ಟು ಸಿಂಗಾರಗೊಂಡಿದ್ದಳು ನಾಡದೇವಿ ಭುವನೇಶ್ವರಿ. ಸಮಾರೋಪಕ್ಕೆ ಸಾಕ್ಷಿ ಯಾಗಿದ್ದ ಹಿರಿಯ ಸಾಹಿತಿ ನಾಡೋಜ ದೇ. ಜವರೇಗೌಡ ಮತ್ತು ಹಿರಿಯ ಪತ್ರಕರ್ತ ಡಾ. ಪಾಟೀಲ್ ಪುಟ್ಟಪ್ಪ ಯಶಸ್ವಿಯಾಗಿ ಸಮ್ಮೇಳನ ನಡೆಸಿದ ಸರ್ಕಾರದ ಸಾಧನೆ ಮತ್ತು ಸಾಹಸ ವನ್ನು ತುಂಬು ಮನಸ್ಸಿನಿಂದ ಶ್ಲಾಘಿಸಿ, ಮುಂದೆ ಕನ್ನಡ ಉಳಿಸಿಕೊಳ್ಳುವ, ಬೆಳೆಸುವ ಪರಿ ಕುರಿತಂತೆ ಸಲಹೆ- ಸೂಚನೆಗಳನ್ನು ನೀಡಿದರು.

ಯಾವುದೇ ಗೊತ್ತುವಳಿ ಇಲ್ಲ: ಸಮ್ಮೇಳನದ ಮೊದಲ ದಿನವೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮುಂದಿನ ಜುಲೈನಲ್ಲಿ ಇಲ್ಲಿನ ಸುವರ್ಣ ವಿಧಾನಸೌಧವನ್ನು ಉದ್ಘಾಟಿಸಿ ಅದರಲ್ಲೇ ಉಭಯ ಸದನಗಳ ಅಧಿವೇಶನ ನಡೆಸುವ ಮತ್ತು ಈ ಸಮ್ಮೇಳನದ ಸವಿ ನೆನಪಿ ಗಾಗಿ 25 ಕೋಟಿ ವೆಚ್ಚದಲ್ಲಿ ಉದ್ಯಾನವನ- ಗಾಜಿನ ಮನೆ ನಿರ್ಮಿಸುವುದಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ ಸಮಾರೋಪದಲ್ಲಿ ಯಾವುದೇ ಗೊತ್ತುವಳಿ ಸ್ವೀಕರಿಸಲಿಲ್ಲ.

ಆದರೆ, ಬೆಳಗಾವಿಯ ಜನತೆ ಬೇಡಿಕೆಯ ಮೇರೆಗೆ ಇಲ್ಲೊಂದು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಿಸುವುದಾಗಿ ಘೋಷಿಸಿದರು.

ಇಂಗ್ಲಿಷ್ ಶಾಲೆಗಳಿಗೆ ತೆರಿಗೆ: ಆಂಗ್ಲ ಮಾಧ್ಯಮ ಶಾಲೆಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪ ಡಿಸಿದ ನಾಡೋಜ ದೇ. ಜವರೇಗೌಡ ಅವರು, ಇಂಥ ಶಾಲೆಗಳು ಇಂದು ಪಾಲಕರನ್ನು ಅತಿಯಾಗಿ ಸುಲಿಗೆ ಮಾಡುತ್ತಿವೆ. ಆಂಗ್ಲ ಮಾಧ್ಯಮ ಶಾಲೆಗಳ ನಿಯಂತ್ರಣ ಸರ್ಕಾರದಿಂದ ಅಸಾಧ್ಯವಾಗುತ್ತಿದೆ. ತಕ್ಷಣಕ್ಕೆ ಅವುಗಳ ಮೇಲೆ ತೆರಿಗೆ ಹಾಕಿ ಎಂದು ಆಗ್ರಹಿಸಿದರು.

ಡಾ.ಯು.ಆರ್. ಅನಂತಮೂರ್ತಿ ಅವರು ಹೇಳಿದಂತೆ ಇಂಗ್ಲಿಷ್ ಕನ್ನಡಕ್ಕೆ ಗೊಬ್ಬರ ಆಗಬೇಕಿದೆ. ಅಧಿಕಾರಿಗಳು ತಮ್ಮ ಬಳಿ ಮಂಡಿಸುವ ಇಂಗ್ಲಿಷ್ ಕಡತಗಳನ್ನು ತಿರಸ್ಕರಿಸಿ, ಇಲ್ಲವೇ ಹರಿದು ಹಾಕುವ ಮೂಲಕ ವಿಧಾನಸೌಧದಲ್ಲೂ ಕನ್ನಡ ಆಡಳಿತ ಭಾಷೆಯಾಗುವಂತೆ ನೋಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಕನ್ನಡ ಬರೀ ಪ್ರಾಚೀನ ಭಾಷೆಯಲ್ಲ, ಸಮೃದ್ಧ ಭಾಷೆ. ಶರಣ, ದಾಸ ಸಾಹಿತ್ಯದಷ್ಟು ಶ್ರೇಷ್ಠ ಸಾಹಿತ್ಯ ಜಗತ್ತಿನ ಬೇರಾವ ರಾಷ್ಟ್ರದಲ್ಲೂ ಇಲ್ಲ.

ಬೇರೆ- ಬೇರೆ ರಾಜ್ಯಗಳ ಜನತೆಗೆ ಕರ್ನಾಟಕ ಆಶ್ರಯ ನೀಡುತ್ತಿದೆ. ಅವರೆಲ್ಲ ಇಲ್ಲಿನ ಭಾಷೆಗೆ ಋಣಿಯಾಗಿರಬೇಕು. ಮೇಲಾಗಿ ಇಲ್ಲಿನ ಜನಕ್ಕೆ ಕನ್ನಡವೇ ಬದುಕಾಗಬೇಕು, ಅವರ ಬದುಕೇ ಕನ್ನಡವಾಗಬೇಕು ಎಂದು ದೇಜೆಗೌ ಆಶಯ ವ್ಯಕ್ತಪಡಿಸಿದರು.

ರೇಲ್ವೆ ಖಾತೆಯ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಅವರು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಕಲ್ಪಿಸಿದ ಕೇಂದ್ರದ ಯುಪಿ‌ಎ ಸರ್ಕಾದ ಕೊಡುಗೆಯನ್ನು ಎಲ್ಲ ಕನ್ನಡಿಗರು ಗಮನಿಸಬೇಕಿದೆ.

ಎರಡನೇ ವಿಶ್ವ ಕನ್ನಡ ಸಮ್ಮೇಳನ ಗಡಿ ಭಾಗ ಬೆಳಗಾವಿಯಲ್ಲಿ ನಡೆಸಿ ಇಲ್ಲಿನ ಕನ್ನಡಿಗರಲ್ಲಿ ಶಕ್ತಿ ತುಂಬಿದ್ದೀರಿ. ರಾಜ್ಯದ ಕೋಲಾರ ಜಿಲ್ಲೆ ಕೂಡ ಆಂಧ್ರದ ಗಡಿಯಲ್ಲಿದೆ. ಮುಂದಿನ ವಿಶ್ವ ಕನ್ನಡ ಸಮ್ಮೇಳನ ಕೋಲಾರದಲ್ಲಿ ಆಗಲಿ ಎಂದು ಕೋರಿದರು.

ಜಾನಪದ ಕೋಗಿಲೆ ಸುಕ್ರಿ ಬೊಮ್ಮನಗೌಡ ತುಂಬಿದ ಸಭೆಗೆ ತಮ್ಮ ಕಂಠಸಿರಿಯಿಂದ ತಂಪೆ ರೆದರೆ, ಹಿರಿಯ ಜೀವಿ ಡಾ. ಜಿ. ವೆಂಕಟಸುಬ್ಬಯ್ಯ ಯಶಸ್ವಿ ಸಮ್ಮೇಳನ ಮತ್ತು ಅಪಾರ ಸಂಖ್ಯೆ ಜನಸಂಖ್ಯೆಯನ್ನು ಕಂಡು ತುಂಬು ಮನದಿಂದ ಹಾರೈಸಿದರು. ನನಗೀಗ 98 ವರ್ಷ. ಮುಂದಿನ ಸಮ್ಮೇಳನ ಕಾಣುತ್ತೇನೆ ಎನ್ನುವ ನಂಬಿಕೆ ನನಗಿಲ್ಲ. ಆದರೆ, ಈ ಸಮ್ಮೇಳನ ನನ್ನಲ್ಲಿನ ಕನ್ನಡತನ ವನ್ನು ಸಂತೃಪ್ತಗೊಳಿಸಿದೆ ಎನ್ನುತ್ತ ಧನ್ಯತೆ ವ್ಯಕ್ಯಪಡಿಸಿದರು.

ಹಿರಿಯ ಪತ್ರಕರ್ತ ಎಸ್.ವಿ. ಜಯಶೀಲರಾವ್, ನನ್ನ ವೃತ್ತಿ ಜೀವನದಲ್ಲಿ ಎಂದೂ ಇಂಥ ಅದ್ಧೂರಿ ಮತ್ತು ಸ್ವಾಭಿಮಾನದ ಸಮಾರಂಭ ಆಗಿದ್ದನ್ನು ಕಂಡಿರಲಿಲ್ಲ.

ಸರ್ಕಾರ ಮತ್ತು ರಾಜ್ಯದ ಜನತೆ ಸೇರಿ ಇದನ್ನು ಯಶಸ್ವಿಗೊಳಿಸಿರುವುದು ನಾಡಿನ ಹಿರಿಮೆಯನ್ನು ಜಗತ್ತಿಗೆ ಸಾರಿ ಹೇಳಿರುವುದು ತಮಗೆ ಹೆಮ್ಮೆ ಮೂಡಿಸಿದೆ ಎಂದರು.

ಹಿರಿಯ ಸಾಹಿತಿ ಡಾ.ಹಂ.ಪ. ನಾಗರಾಜಯ್ಯ ಕನ್ನಡ ಬರಿ ಅಕ್ಷರವಲ್ಲ, ಅದು ಮಂತ್ರ- ಶಕ್ತಿ ಎನ್ನುವುದನ್ನು ಈ ಸಮ್ಮೇಳನ ಸಾಬೀತು ಪಡಿಸಿದೆ. ಬೆಂಗಳೂರ್- ಬೆಂಗಳೂರು ಆದಂತೆ ಬೆಳಗಾಂವ- ಬೆಳಗಾವಿಯಾಗಲಿ ಎಂದು ಕೋರಿದರು.

ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಜನಪದ ಕಲಾವಿದ ಪುಟ್ಟಮಲ್ಲೇಗೌಡ , ಚನ್ನವೀರ ಕಣವಿ, ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಮತ್ತಿತರರು ವೇದಿಕೆಯಲ್ಲಿದ್ದರು.

ಗಮನಸೆಳೆದ ಸುಕ್ರಿ ಬೊಮ್ಮನಗೌಡ

ಅಕ್ಷರ ಲೋಕ ದಿಗ್ಗಜರು, ರಾಜಕೀಯ ಮುಖಂಡರು ಅಚ್ಚರಿ ಪಡುವಂತೆ ಜಾನಪದ ಕೋಗಿಲೆ ಸುಕ್ರಿ ಬೊಮ್ಮನಗೌಡ ಅವರ ಸುಲಲಿತ ಕನ್ನಡ ಭಾಷಣ ನೆರೆದ ಜನರನ್ನು ಮಂತ್ರಮುಗ್ಧರನ್ನಾಗಿ ಸಿತು. ಜಾನಪದ ಕೋಗಿಲೆಯ ಮಾತುಗಳು ಸ್ಪಷ್ಟವಾಗಿತ್ತು. ಅಂತೆಯೇ ತನ್ನ ಮುಗ್ಧತೆ ಮತ್ತು ಅತೀವ ಪರಿಸರ ಕಾಳಜಿಯಿಂದ ಗಮನ ಸೆಳೆದ ಸಾಲು ಮರದ ತಿಮ್ಮಕ್ಕ, ತನಗೆ ಮನೆ ಕಟ್ಟಿ ಕೊಡದಿದ್ದರೂ ಚಿಂತೆಯಿಲ್ಲ. ಊರಲ್ಲೊಂದು ಹೆರಿಗೆ ಆಸ್ಪತ್ರೆ ಕಟ್ಟಿಕೊಡಬೇಕು ಎಂದು ಬೇಡಿಕೆ ಸಲ್ಲಿಸಿದರು. ಈ ಬೇಡಿಕೆ ಈಡೇರಿಸಲು ಮುಖ್ಯಮಂತ್ರಿ ಅಸ್ತು ಅಂದಿದ್ದಾರೆ.

ಬಡಿದೆಬ್ಬಿಸಿದ ‘ಕನ್ನಡ ಡಿಂಡಿಮ’

ಕಿತ್ತೂರು ಚೆನ್ನಮ್ಮ ವೇದಿಕೆ (ಬೆಳಗಾವಿ): ಇಳಿ ಸಂಜೆಯ ಹೊತ್ತು. ಕಾವ್ಯ ಗಾಯನ ಕಾರ್ಯಕ್ರಮ, ನೃತ್ಯದ ಅಬ್ಬರವಿಲ್ಲ, ಝಗಮಗಿಸುವ ದೀಪಗಳಿಲ್ಲ. ಆದರೂ ಶಾಂತವಾಗಿ ಪ್ರವಹಿಸುವ ನದಿನೀರು ಕಾಲು ಸ್ಪರ್ಶಿಸಿದಾಗ ಆಗುವ ರೋಮಾಂಚನದ ಅನುಭವ ನೀಡಿದ್ದು, ಶಿವಮೊಗ್ಗ ಸುಬ್ಬಣ್ಣ ಅವರ ತಂಡದ ಕಾವ್ಯಗಾಯನ ಕಾರ್ಯಕ್ರಮ.

ಭಾನುವಾರ ಸಂಜೆ ವಿಶ್ವಕನ್ನಡ ಸಮ್ಮೇಳನದ ತೆರೆ ಬೀಳುವ ಸಮಯ. ಕೇವಲ ಹಾಡು ನೃತ್ಯಗಳ ಮನರಂಜನೆಯಲ್ಲಿಯೇ ಕಳೆದು ಹೋಗದಿರಲಿ ಕನ್ನಡತನ ಎಂಬ ಆಶಯದೊಂದಿಗೆ ವೈ.ಕೆ. ಮುದ್ದುಕೃಷ್ಣ, ಕಸ್ತೂರಿ ಶಂಕರ್, ರತ್ನಮಾಲಾ ಪ್ರಕಾಶ್, ಮಾಲತಿ ಶರ್ಮಾ, ರಮೇಶ್ಚಂದ್ರ, ಶಂಕರ ಶಾನಭೋಗ, ಶ್ರೀರಾಮ ಜೋಶಿ, ಪಿ.ಎ.ಮಂಗಳಾ ಹಾಗೂ ಮಾಲಾಶ್ರೀ ಕಣವಿ ಮತ್ತು ಅವರ ವಾದ್ಯವೃಂದದವರು ವೇದಿಕೆ ಹತ್ತಿದರು. ನೋಡಿದೊಡನೆ ಗೌರವ ಮೂಡಿಸುವಂಥ ರೇಷ್ಮೆ ಸೀರೆ ಗಳಲ್ಲಿ ಗಾಯಕಿಯರು ಕಂಗೊಳಿಸಿದರು. ಗಾಯಕರು ಕುರ್ತಾ ಹಾಗೂ ಜುಬ್ಬಾಗಳಲ್ಲಿ ದೇಸಿತನ ಮೆರೆದರು.

‘ಬಾರಿಸು ಕನ್ನಡ ಡಿಂಡಿಮವ’ ಹಾಡನ್ನು ಎಲ್ಲರೂ ಒಕ್ಕೊರಲಿನಿಂದ ಹಾಡಿದಾಗ ‘ಸತ್ತಂತಿಹರನು ಬಡಿದೆಚ್ಚರಿಸುವ’ ಕೆಲಸವನ್ನು ಸುಬ್ಬಣ್ಣ ಅವರು ಸಮರ್ಪಕವಾಗಿ ನಿರ್ವಹಿಸಿದರು. ‘ನಂತರದ ಹೊತ್ತಿತೋ ಹೊತ್ತಿತೋ ಕನ್ನಡದ ದೀಪ’ ಹಾಡು ವಿಶ್ವ ಸಮ್ಮೇಳನದ ಜ್ಯೋತಿಯ ಸಣ್ಣ ಕಿಡಿ ಯೊಂದು ಜಾಗೃತಾವಸ್ಥೆಯಲ್ಲಿರಬೇಕು ಎಂಬ ಸಂದೇಶವನ್ನು ಸಾರಿತು.

‘ಉರಿವವರು ಬೇಕಿನ್ನು ಇದರೆಣ್ಣೆಯಾಗಿ, ಸುಡುವವರು ಬೇಕಿನ್ನು ನಿಡುಬತ್ತಿಯಾಗಿ’ ಸಾಲು ಅಭಿಮಾನವನ್ನು ಬಡಿದೆಬ್ಬಿಸಿತು. ರತ್ನಮಾಲಾ ಪ್ರಕಾಶ್ ಅವರ ‘ದೀಪವೂ ನಿನ್ನದೇ’ ಹಾಡಿನ ದೈನ್ಯ ಮನಮುಟ್ಟಿತು.

ಕನ್ನಡತನದ ಪ್ರಜ್ಞೆ ಹುರಿಗಟ್ಟಿದಂತೆ ಕನ್ನಡಿಗರ ಹಟಮಾರಿತನವನ್ನು ಬಿಂಬಿಸುವ ‘ಬೊಮ್ಮ ನಿಂಗೆ ಜೋಡಸ್ತೀನಿ..’ ಅದೇ ಹಟದ ಧ್ವನಿಯಲ್ಲಿ ವೈ.ಕೆ.ಮುದ್ದುಕೃಷ್ಣ ಪ್ರಸ್ತುತ ಪಡಿಸಿದರು. ಶಂಕರ ಶಾನಭೋಗ ಹಾಡಿದ ‘ತರವಲ್ಲ... ತಗಿ ನಿನ್ನ ತಂಬೂರಿ,..’ ಈ ಭಾಗದಲ್ಲಿ ಶರೀಫಜ್ಜ ಎಂದೇ ಹೆಸರಾದ ಶಿಶುನಾಳ ಶರೀಫರ ತತ್ವಪದ ನೆರೆದವರ ಮನಗೆದ್ದಿತು.

ಕನ್ನಡದ ಕಾವ್ಯ, ಕನ್ನಡತನದ ಸೌಹಾರ್ದ, ಸ್ವಾಭಿಮಾನ, ಸಹೋದರತ್ವವನ್ನು ಸಾರುತ್ತ ಕನ್ನಡದ ಸಂಸ್ಕಾರವನ್ನು ಬೆಳೆಸುವಲ್ಲಿ ಕಾರಣವಾದವು. ನಂತರ ಭರತನಾಟ್ಯ, ಒಡಿಸ್ಸಿ, ಯಕ್ಷಗಾನ, ಕಥಕ್, ಮೋಹಿನಿ ಆಟ್ಟಂ, ಮಣಿಪುರಿ ಮುಂತಾದ ರಾಷ್ಟ್ರೀಯ ನೃತ್ಯಗಳ ಕಾರ್ಯಕ್ರಮವು ರಾಷ್ಟ್ರೀಯ ಮನೋಭಾವವನ್ನು ಎತ್ತಿ ಹಿಡಿದವು.

ನೂಪುರ ಸಂಭ್ರಮದ ನಂತರ ಮತ್ತೆ ನಾದಮಯವಾಗಿದ್ದು, ಪ್ರವೀಣ ಗೋಡ್ಖಿಂಡಿ ಹಾಗೂ ಶಿವಮಣಿ ತಂಡದವರ ವಾದ್ಯ ಲಹರಿಯಿಂದ. ವಿಶ್ವ ಸಮ್ಮೇಳನದ ಅಂತಿಮ ಕಾರ್ಯಕ್ರಮವಾಗಿ ಬೆಳಗಿನ ಜಾವದ ಸೂರ್ಯನ ಕಿರಣಗಳ ಮೊದಲು ‘ಕಿರಣ ಕರ್ನಾಟಕ’ ಲೇಸರ್ ಪ್ರದರ್ಶನ ವನ್ನೂ ಏರ್ಪಡಿಸಲಾಯಿತು.

ಮೂರು ದಿನಗಳ ಅಹೋರಾತ್ರಿ ಕನ್ನಡ ಜಾಗರಣೆಯ ನಂತರ ಕನ್ನಡಿಗರು ಕುಂದಾದ ಸವಿ ಬುತ್ತಿಯನ್ನು, ಕುಂದಾಗದ ಸಾವಿರ ಸಾವಿರ ಸವಿನೆನಪುಗಳ ಬುತ್ತಿಯನ್ನು ಹೊತ್ತು ಮರಳಿದರು.

ನಗಲೂ ದೊಡ್ಡಸ್ಥಿಕೆ ಬೇಡ- ಅ.ರಾ.ಮಿತ್ರ

ಬೆಳಗಾವಿ: ’ನಗು ಬದುಕಿನ ಸಹಜ ಗುಣವಾಗಬೇಕು. ನಗುವನ್ನು ನಮ್ಮ ದೊಡ್ಡಸ್ಥಿಕೆಗೆ ಬಳಸಿ ಕೊಳ್ಳುವುದು ಬೇಡ’ ಎಂದು ಖ್ಯಾತ ಹಾಸ್ಯ ಸಾಹಿತಿ ಅ.ರಾ.ಮಿತ್ರ ಶನಿವಾರ ಇಲ್ಲಿ ಕಿವಿಮಾತು ಹೇಳಿದರು.

ವಿಶ್ವ ಕನ್ನಡ ಸಮ್ಮೇಳನ ಸಮಾರೋಪದ ದಿನದಂದು ಏರ್ಪಡಿಸಿದ್ದ ‘ನಗುನಗುತಾ ಬಂದೇವ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ‘ನಗುವಿಗೆ ದೊಡ್ಡದು ಸಣ್ಣದು ಎಂಬುದಿಲ್ಲ. ನಮ್ಮ ವ್ಯಕ್ತಿತ್ವ, ಶ್ರೀಮಂತಿಕೆ, ಘನತೆ ಏನೇ ಇದ್ದರೂ, ನಗುವಿನಲ್ಲಿ ಮಾತ್ರ ವ್ಯತ್ಯಾಸ ವಿರುವುದಿಲ್ಲ. ಆದರೆ ಹಾಸ್ಯ, ನಗುವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಷ್ಟೆ’ ಎಂದರು.

‘ಬದುಕನ್ನು ನಗುನಗುತ್ತ ಸ್ವಾಗತಿಸಬೇಕು. ನಗುವಿಲ್ಲದ ಬದುಕು ವ್ಯರ್ಥ’ ಎಂದ ಅವರು, ‘ಆರೋಗ್ಯವಂತರಾಗಿ ಬಾಳಬೇಕಾದರೆ ನಗು ಅವಶ್ಯಕ, ಬದುಕು ಸುಂದರವಾಗುತ್ತದೆ, ಸದಾ ಉತ್ಸಾಹದಿಂದ ತುಂಬಿರುತ್ತದೆ’ ಎಂದರು.

’ದೇವೇಗೌಡ, ಸಿದ್ದರಾಮಯ್ಯ ಅವರು ಸದಾ ಮುಖವನ್ನು ಗಂಟಿಕ್ಕಿಕೊಂಡಿರುತ್ತಾರೆ. ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಹಾಗೇ ಮಾಡುತ್ತಾರೆ. ಜತೆಗೆ ದುಗುಡವಾದಾಗ ಹೆಚ್ಚು ಹೆಚ್ಚು ದೇವಸ್ಥಾನಗಳಿಗೆ ಹೋಗಿ ಬೇಡಿಕೊಳ್ಳುತ್ತಾರೆ’ ಎಂದು ಹಾಸ್ಯ ಚಟಾಕಿ ಹಾರಿಸಿದ ಮಿತ್ರ ಅವರು, ’ನಕ್ಕರೆ ನಮ್ಮ ಶೋಭಾ ಕರಂದ್ಲಾಜೆ ಅವರಂತೆ ನಗಬೇಕು’ ಎಂದುಬಿಟ್ಟರು.

‘ಮರಾಠಿ’ಗರು ಬೇಡ: ’ಬೆಳಗಾವಿ ಭಾಗದ ಮರಾಠಿ ಭಾಷಿಕರನ್ನು ‘ಮರಾಠಿಗರು’ ಎಂದು ಕರೆಯುವುದು ಬೇಡ. ಕನ್ನಡ ಮಾತನಾಡುವ ಮರಾಠಿಗರು ಎಂದು ಕರೆಯುವ ಮೂಲಕ ಅವರನ್ನು ಗೌರವಿಸಬೇಕು. ಕನ್ನಡಿಗರು ಎಂದೂ ಭಾಷಾ ದ್ವೇಷಿಗಳಲ್ಲ. ಆದರೆ ಕನ್ನಡ ನಾಡಿನ ಎಲ್ಲ ಭಾಷಿಕರು ಕನ್ನಡ ಮಾತನಾಡಬೇಕು ಎಂಬುದು ತಮ್ಮ ಆಶಯವಾಗಿದೆ’ ಎಂದು ತಿಳಿಸಿದರು.

ಅದಕ್ಕೂ ಮುನ್ನ ಮಾತನಾಡಿದ ಹಾಸ್ಯ ಸಾಹಿತಿ ಮೈಸೂರಿನ ಕೃಷ್ಣೇಗೌಡರು, ‘ಬದುಕಿನಲ್ಲಿ ಹಾಸ್ಯವಿರಬೇಕು. ಆದರೆ ಅತಿ ರಂಜನೆ ಉದ್ದೇಶದಿಂದ ಸತ್ಯವನ್ನು ಮರೆಮಾಚಿಸುವ ಕಾರ್ಯ ನಡೆಯಬಾರದು. ಬದುಕಿನಲ್ಲಿ ಅನ್ಯೋನ್ಯತೆ ಇರಬೇಕು’ ಎಂದರು.

ಆ ಬಳಿಕ ತಮ್ಮದೇ ಸಾಹಿತ್ಯದಲ್ಲಿ ‘ಲೈಪು ಇಷ್ಟೇನೆ’ ಹಾಗೂ ‘ದುರ್ಗಾಷ್ಟಕ’ ಬಳಸಿ ನಟಿ ಐಶ್ವರ್ಯ ರೈ ಅವರನ್ನು ಹೋಲಿಸುತ್ತ ವಿಶೇಷ ಹಾಡನ್ನು ಪ್ರಸ್ತುತ ಪಡಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು.

ರಿಚರ್ಡ್ ಲೂಯಿಸ್ ಹಲವಾರು ಹಾಸ್ಯ ಪ್ರಸಂಗಗಳನ್ನು ಉದಾಹರಿಸುತ್ತ ’ಇಷ್ಟಪಟ್ಟದ್ದು ಸಿಗದೇ ಇದ್ದಾಗ ಇದ್ದುದರಲ್ಲೇ ತೃಪ್ತಿಪಟ್ಟುಕೊಳ್ಳಿ’ ಎಂದು ಸಲಹೆ ನೀಡಿದರು.

ಮೈಸೂರಿನ ಆನಂದ ಅವರು, ಸಿನಿಮಾ ಹಾಡುಗಳ ವಿಶೇಷತೆಯನ್ನು ಆಯಾ ಕಾಲಘಟ್ಟಕ್ಕೆ ತಕ್ಕಂತೆ ಅಭಿನಯದ ಮೂಲಕ ಪ್ರಸ್ತುತಪಡಿಸಿದ್ದು ವಿಶೇಷವಾಗಿತ್ತು.

ಇಂದುಶ್ರೀ ಅವರು ತಮ್ಮ ಮಾತನಾಡುವ ಗೊಂಬೆಯ ಜತೆಗೆ ಹಾಸ್ಯ ಸನ್ನಿವೇಶ ಸೃಷ್ಟಿಸಿದರು. ಬೊಂಬೆ ’ಡಿಂಕು’ ಜತೆಗೆ ಅವರ ಸಂಭಾಷಣೆಗಳು ಮುದ ನೀಡಿದವು.

ರವಿ ಭಜಂತ್ರಿ ಹಾಗೂ ಡಾ. ಸುರೇಶ ಕುಸಬಿ ಅವರು, ಉತ್ತರ ಕರ್ನಾಟಕ ಭಾಷಾ ವೈವಿಧ್ಯತೆ ಯನ್ನು ಬಳಸಿಕೊಂಡು ಅನೇಕ ಹಾಸ್ಯ ಪ್ರಸಂಗಗಳನ್ನು ಜನರ ಮುಂದಿಟ್ಟು ಚಪ್ಪಾಳೆ ಗಿಟ್ಟಿಸಿ ಕೊಂಡರು.

ದಲಿತ ಸಾಹಿತ್ಯದಲ್ಲಿ ಹೊಸ ಅಲೆ

ಬೆಳಗಾವಿ: ನಿತ್ಯನೂತನವಾದ ದಲಿತ ಚಳವಳಿ ಈಗ ಭಕ್ತಿ ಮಾರ್ಗದತ್ತ ಮುಖ ಮಾಡಿದೆ. ದಲಿತ ಸಾಹಿತ್ಯದಲ್ಲಿ ಹೊಸ ಅಲೆ ಕಾಣಿಸಿಕೊಂಡಿದೆ ಎಂದು ಬರಹಗಾರ ಡಾ.ಅರವಿಂದ ಮಾಲಗತ್ತಿ ಅಭಿಪ್ರಾಯಪಟ್ಟರು. ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾನುವಾರ ‘ದಲಿತ ಸಂಸ್ಕೃತಿಯ ಅನನ್ಯತೆ’ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

‘ಹನ್ನೆರಡನೇ ಶತಮಾನದಲ್ಲಿ ವಚನ ಚಳವಳಿಯನ್ನು ಭಕ್ತಿಯೇ ಕಟ್ಟಿತು. ಭಕ್ತಿಯಿಂದಲೇ ಚಳವಳಿ ಅವಸಾನವಾಯಿತು ಎಂದು ವ್ಯಾಖ್ಯಾನಿಸಲಾಗಿದೆ. ಭಕ್ತಿಯ ಹೊರತಾಗಿ ಚಳವಳಿ ಕಟ್ಟಬೇಕು ಎಂದು ಹೇಳಲಾಗುತ್ತಿತ್ತು. ಆದರೆ ಈಗ ದಲಿತ ಚಳವಳಿಯನ್ನು ಕಟ್ಟುವ ಕ್ರಿಯೆ ಭಕ್ತಿ ಮಾರ್ಗದ ತ್ತಲೇ ಮುಖ ಮಾಡಿದೆ’ ಎಂದರು.

‘ವಚನ ಚಳವಳಿಯು ದಲಿತ ಚಳವಳಿಯೇ ಆಗಿದೆ. ಅದನ್ನು ವೀರಶೈವ ಅಂತ ಸೀಮಿತ ಪರಿಧಿಗೆ ಕಟ್ಟಿಹಾಕಬಾರದು.ಆದ್ಯ ವಚನಕಾರರಲ್ಲಿ ಬಹುಪಾಲು ಮಂದಿ ದಲಿತರೇ ಆಗಿದ್ದಾರೆ. ಹೀಗಾಗಿ ಅದನ್ನು ದಲಿತ ಶರಣರ ಚಳವಳಿ ಎಂದು ಕರೆಯುವುದು ಸೂಕ್ತ’ ಎಂದು ಅವರು ಹೇಳಿದರು.

‘ದಲಿತ ಸಾಹಿತ್ಯವು ಕನ್ನಡ ಸಾಹಿತ್ಯಕ್ಕೆ ಬೆನ್ನೆಲುಬು ತಂದುಕೊಟ್ಟಿದೆ. ಆಫ್ರಿಕನ್ ಸಾಹಿತ್ಯಕ್ಕೆ ಸಂವಾದಿ ರೂಪದಲ್ಲಿ ಬೆಳೆಯುತ್ತಿದೆ. ಅದರಲ್ಲಿ ಹೊಸ ಪ್ರತಿಮಾ ಜಗತ್ತು ಇದೆ. ಮಾಂಸಾಹಾರ ಪರಿಭಾಷೆಯ ಪ್ರತಿಮಾ ಜಗತ್ತೇ ವಿಶಿಷ್ಟವಾದುದು’ ಎಂದು ಬಣ್ಣಿಸಿದರು.

‘ಭಾರತೀಯ ದಲಿತರಿಗೆ ಒಂದು ಭಾಷೆ ಅನ್ನೋದು ಇಲ್ಲ. ಒಂದಾಗುವ ಪ್ರಕ್ರಿಯೆ ಭಾಷೆ ಮೂಲಕ ಸಾಧ್ಯವಾಗುತ್ತದೆ.ದಲಿತರಿಗೆ, ದಲಿತ ಸಾಹಿತ್ಯಕ್ಕೆ ಒಂದೇ ಭಾಷೆಯ ಅಗತ್ಯ ಇದೆಯೇ ಎಂದು ಕೇಳಿಕೊಂಡಾಗ ಇದೆ ಅಂತ ಅನಿಸುತ್ತದೆ. ಅಂತೆಯೇ ದಲಿತರು ಇಂಟರ್‌ನೆಟ್ ಜತೆ ಸಂಪರ್ಕ ಸಾಧಿಸಬೇಕು’ ಎಂದು ಅವರು ಕರೆ ನೀಡಿದರು.

‘ಮೇಲ್ನೋಟಕ್ಕೆ ನಗುತ್ತಿರುವ, ಆಳದಲ್ಲಿ ಸಂಕಟ ಅನುಭವಿಸುತ್ತಿರುವ ದಲಿತರ ಯಾತನೆಯನ್ನು ಸಮಾಜ ಅರ್ಥ ಮಾಡಿಕೊಳ್ಳಬೇಕು. ದಲಿತರ ಸಮಸ್ಯೆ ಬರೀ ಅವರ ಸಮಸ್ಯೆಯಲ್ಲ. ಸಾಮಾಜಿಕ ಸಮಸ್ಯೆ. ಅವರ ನೋವು ನಿವಾರಣೆಗೆ ಇಡೀ ಸಮಾಜ ಮುಂದಾಗಬೇಕು’ ಎಂದು ಅಧ್ಯಕ್ಷತೆ ವಹಿಸಿದ್ದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಸಿದ್ಧಲಿಂಗಯ್ಯ ಕೋರಿದರು.

‘ದಲಿತ ಚಳವಳಿಯು ಹಿಂದಿನ ಪ್ರಖರತೆ ಪಡೆದುಕೊಳ್ಳಲಿ. ದಲಿತರೂ ಒಳಗೊಂಡಂತೆ ಇಡೀ ಶೋಷಿತ ಸಮುದಾಯದಲ್ಲಿ ಆತ್ಮವಿಶ್ವಾಸ, ಕೆಚ್ಚು, ಸ್ವಾಭಿಮಾನ ಮೂಡಲಿ’ ಎಂದು ಅವರು ಹಾರೈಸಿದರು.

‘ದಲಿತ ಸಾಹಿತ್ಯಕ್ಕೆ ಇರುವ ದೊಡ್ಡ ಶಕ್ತಿ ವೈಚಾರಿಕ ಸ್ಪಷ್ಟತೆ. ಆದರೆ ಕೆಲವರು ಇದನ್ನು ಮಗ್ಗುಲು ಮುಳ್ಳು ಅಂತ ಭಾವಿಸಿದ್ದಾರೆ’ ಎಂದು ಪ್ರಾಧ್ಯಾಪಕ ಡಾ. ಗಂಗಾಧರ್ ತಮ್ಮ ಆಶಯ ಭಾಷಣದಲ್ಲಿ ಅಭಿಪ್ರಾಯಪಟ್ಟರು.‘ದಲಿತ ಸಾಹಿತ್ಯ ಸಮಾಜಕ್ಕೆ ಹೊಸ ದಿಕ್ಸೂಚಿಯಾಗಿದೆ. ಒತ್ತಡದ ಅಸ್ತ್ರವಾಗಿ ಅದು ರೂಪುಗೊಳ್ಳುತ್ತಿದೆ. ಚಳವಳಿಗೆ ಸಾಹಿತ್ಯ ಪ್ರೇರಕಶಕ್ತಿಯಾಗಿದೆ’ ಎಂದು ದಲಿತ ಮುಖಂಡ ಡಿ.ಜಿ. ಸಾಗರ್ ಹೇಳಿದರು.

‘ಎಲ್ಲರೂ ರಾಜಿ ವಾತಾವರಣದಲ್ಲಿದ್ದೇವೆ. ಸಿಕ್ಕಿದ್ದನ್ನು ಅನುಭವಿಸುವ ಕಾತರದಲ್ಲಿದ್ದೇವೆ. ಸಂಘಟನೆ ಯು ಸಣ್ಣ ಸಣ್ಣ ಘಟಕಗಳಾಗಿ ಹೋರಾಡುವುದರಿಂದ ಹೆಚ್ಚಿನ ಪ್ರಯೋಜನ ಆಗುವುದಿಲ್ಲ. ಚಾಲ ಕಶಕ್ತಿಯನ್ನು ಎದುರಿಸುವ ಸಾಮರ್ಥ್ಯ ಪಡೆಯಲಾಗದು’ ಎಂದು ಪ್ರಾಧ್ಯಾಪಕ ಡಾ.ಕೆ.ಆರ್. ದುರ್ಗಾದಾಸ್ ಅಭಿಪ್ರಾಯಪಟ್ಟರು.

‘ದಲಿತ ಮಹಿಳೆಯ ಸಮಸ್ಯೆಗಳು ದಲಿತೇತರ ಮಹಿಳೆಯರ ಸಮಸ್ಯೆಗಳಿಂತ ಭಿನ್ನ. ದಲಿತ ಮಹಿಳೆ ಅನ್ನೋ ಕಾರಣಕ್ಕೆ ಅವಳು ಅವಮಾನ, ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾಳೆ. ಅವರ ವೃತ್ತಿಗಳೇ ಅವರನ್ನು ಶೋಷಣೆಗೆ ಈಡುಮಾಡಿವೆ’ ಎಂದು ಕವಯತ್ರಿ ಡಾ. ಅನಸೂಯಾ ಕಾಂಬಳೆ ವಿವರಿಸಿದರು.

ಅನ್ನಕ್ಕೆ ಘನತೆ: ‘ಸಾಹಿತ್ಯ ಸಮ್ಮೇಳನಗಳಲ್ಲಿ ನಮ್ಮದೊಂದು ‘ಮೆನು’ ಸೇರಿಸಬೇಕು ಎಂಬ ಕನಸು ನನ್ನದು. ಯಾವಾಗಲೂ ಹೋಳಿಗೆಯೇ ಏಕೆ? ನಾವು ತಿನ್ನುವ ಅನ್ನಕ್ಕೆ ಘನತೆ ಬರಲಿ. ಇದು ಬಹುದೊಡ್ಡ ಸಮಾನತೆ’ ಎಂದು ಮೋಹನ ನಾಗಮ್ಮನವರ ಪ್ರತಿಪಾದಿಸಿದರು.

ಡಾ. ಅರ್ಜುನ ಗೊಳಸಂಗಿ, ಮಾವಳ್ಳಿ ಶಂಕರ್, ಲಕ್ಷ್ಮೀನಾರಾಯಣ ನಾಗವಾರ, ಡಾ.ಎ.ಆರ್. ಗೋವಿಂದಸ್ವಾಮಿ, ಇಂದಿರಾ ಕೃಷ್ಣಪ್ಪ, ಡಾ.ನೀಲಗಿರಿ ತಳವಾರ, ಪ್ರೊ. ಶಿವರುದ್ರ ಕಲ್ಲೋಳಿಕರ್, ಡಾ.ಶಿವಾನಂದ ಕೆಳಗಿನಮನೆ, ಡಾ. ಬಾಲಗುರುಮೂರ್ತಿ, ಡಾ.ಸುಧಾ ಕೌಜಗೇರಿ ಅವರೂ ಮಾತನಾಡಿದರು.

ಹಿರಿಯರ ಮಾತು, ಮಕ್ಕಳ ಮಥನ...

ಗಾಂಧಿ ಭವನ, ಬೆಳಗಾವಿ: ‘ಪ್ರಶ್ನಿಸುವ ಮನೋಭಾವ ಬೆಳೆಸಬೇಕು’ ಎಂಬ ಜಗದೀಶ ಶೆಟ್ಟರ್ ಅವರ ಆಶಯ ನುಡಿಯೊಂದಿಗೆ ಬೆಳಗಾವಿ ವಿಶ್ವಕನ್ನಡ ಸಮ್ಮೇಳನದಲ್ಲಿ ಮಕ್ಕಳ ಮಾತು ಗೋಷ್ಠಿ ಆರಂಭವಾಯಿತು. ಇಡೀ ಗೋಷ್ಠಿಯು ಕೇವಲ ಪ್ರಶ್ನಿಸುವ ಕುತೂಹಲ ಹಾಗೂ ಛಾತಿಯನ್ನು ಅಷ್ಟೇ ಅಲ್ಲ, ಅದಕ್ಕೆ ಉತ್ತರ ಹುಡುಕುವ ಶೋಧನಾ ಗುಣವನ್ನೂ ಬೆಳೆಸಿದ್ದು ವಿಶೇಷವಾಗಿತ್ತು.

‘ಸಾಗರದಷ್ಟು ವಿಶಾಲವಾದ ಸಾಹಿತ್ಯವನ್ನು ಲೋಟದಲ್ಲಿ ಹಿಡಿದಿಡುವ ಯತ್ನ’ ಎಂಬ ಹೊಸ ನಗರದ ಯಶಸ್ ತನ್ನ ಮಾತಿನಲ್ಲಿ ಇಡೀ ಗೋಷ್ಠಿಯ ಸೌಂದರ್ಯವನ್ನು ಹಿಡಿದಿಟ್ಟ. ಗೋಷ್ಠಿಯಲ್ಲಿ ಭಾಗವಹಿಸಿದ್ದ ವಿಜಾಪುರದ ಮನೀಶಾ ಪಾಟೀಲ ‘ಮತದಾನದ ಹಕ್ಕನ್ನು 14ನೇ ವರ್ಷಕ್ಕೆ ನೀಡಿ. ಇಂದಿನ ಮಕ್ಕಳು ಬೇಗನೇ ಪ್ರಜ್ಞಾವಂತರಾಗುತ್ತಿರುವುದರಿಂದ ತಮ್ಮ ನಾಯಕರನ್ನು ಆಯ್ಕೆ ಮಾಡುವ ಹಕ್ಕನ್ನು ನೀಡಬೇಕು’ ಎಂದು ಪ್ರತಿಪಾದಿಸಿದಳು. ‘ರಾಜ್ಯದಲ್ಲಿರುವ ಒಂದೂವರೆ ಕೋಟಿ ಮಕ್ಕಳ ಮತದಾನದಿಂದ ಪಕ್ಷಾಂತರದಂಥ ಸಮಸ್ಯೆಗಳು ಬರುವುದಿಲ್ಲ’ ಎಂಬ ಸಲಹೆಯನ್ನೂ ನೀಡಿದಳು.

ಬೆಳಗಾವಿಯ ಶಿವಪುತ್ರ ಉದಯ, ಗೀತಾ ಗಡಪ ಮುಂತಾದವರು ‘ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ’ ಬೆರೆಸಿದಂತೆ ಎಲ್ಲ ಸಾಹಿತ್ಯದ ಒಳಿತನ್ನು ಹೀರಿ ಜೀವನ ಮುಖಿ ಮೌಲ್ಯ ಗಳನ್ನೇ ಬಿಡಿಸಿಟ್ಟರು. ‘ಜೀವನಶೈಲಿಯ ಬದಲಾವಣೆಯಿಂದಾಗಿ ಜನಪದ ಸಾಹಿತ್ಯ ನಶಿಸುತ್ತಿದೆ. ಬೀಸೂದಿಲ್ಲ, ಕುಟ್ಟೂದಿಲ್ಲ, ಬೆಳಗಿನ ಜಾವ ಏಳುವುದೇ ಇಲ್ಲ, ಇನ್ನು ಬೆಳಗಾನ ಎದ್ದು ಯಾರ್ಯಾರ ನೆನೆಯಲಿ ಎಂದು ಹಾಡುವ ಪ್ರಸಂಗವೇ ಬರುವುದಿಲ್ಲ. ಹಾಗಿದ್ದಾಗ ಈ ತಲೆಮಾರು ಇಂಥ ಅವಕಾಶದಿಂದಲೇ ವಂಚಿತವಾಗುತ್ತಿದೆ’ ಎಂದು ಜಯಶ್ರೀ ಹಮ್ಮಣ್ಣನವರ ಕಳವಳ ವ್ಯಕ್ತಪಡಿಸಿ ದಳು.

ಸುಪ್ರಿಯಾ ಅಗಸಗಿ ವಾಸ್ತುಶಿಲ್ಪ, ಚಿತ್ರಕಲೆ ಮುಂತಾದ ಲಲಿತ ಕಲೆಗಳ ಸ್ವರೂಪಕ್ಕೆ ಮೂರ್ತ ರೂಪ ನೀಡಿದಳು.ಕಲಾಸಾಧನೆಯ ಬಗ್ಗೆ ಹರ್ಷಾ ಮಂಗೇಶ ನಾಗಲಿಂಗ ಬೆಳಕು ಚೆಲ್ಲಿದಳು. ವಿಜ್ಞಾನ ಗೋಷ್ಠಿಯಲ್ಲಿ ಭಾಗವಹಿಸಿದ್ದ ಶ್ವೇತಾ ಬಬಲಿ, ಸಚಿನ್ ಭಾಗವತ್, ಗಿರೀಶ ಟಿ.ಭಟ್, ವಿಠಲ್ ಶ್ರೀಧರ್ ಮುಂತಾದ ಮಕ್ಕಳು ಜೀವನಶೈಲಿಯಲ್ಲಿ ಸರಳ ವಿಜ್ಞಾನದ ಅಳವಡಿಕೆಯ ಬಗ್ಗೆ ಮಾಹಿತಿ ನೀಡಿದರು.

ಬಾಲೆಹೊಸೂರಿನ ದಿಂಗಾಲೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಉಪಸ್ಥಿತರಿದ್ದರು. ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಮಹೇಶ ಟೆಂಗಿನಕಾಯಿ ಅಧ್ಯಕ್ಷತೆ ವಹಿಸಿದ್ದರು. ಮಹೇಶ್ವರಿ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಪ್ರೇಕ್ಷಕರ ಒಳಗಣ್ಣನ್ನು ತೆರೆಯುವಂತೆ ಪ್ರಾರ್ಥಿಸಿದರು. ಬಾಲವಿಕಾಸ ಅಕಾಡೆಮಿಯ ಯೋಜನಾಧಿಕಾರಿ ಮಾಲತಿ ಎಸ್.ಪೋಳ ಪ್ರಾಸ್ತಾವಿಕ ಮಾತನಾಡಿದರು.

‘ಮದ್ರಾಸಿ’ಗರು ‘ಬೆಂಗಳೂರಿಗ’ರಾದ ಕಥೆ...

‘ಕನ್ನಡ ನಾಡು, ಸಂಸ್ಕೃತಿ, ಸಾಹಿತ್ಯಗಳನ್ನು ದೇಶದ ವಿವಿಧ ಭಾಷೆಗಳಿಗೆ ಪರಿಚಯಿಸುವ ಕೆಲಸ ವ್ಯಾಪಕವಾಗಿ ನಡೆಯಬೇಕಿದೆ’ ಎಂದು ಕೋಲ್ಕತ್ತಾದ ಡಾ.ಜಿ ಕುಮಾರಪ್ಪ ಅಭಿಪ್ರಾಯ ಪಟ್ಟಿ ದ್ದಾರೆ.

‘ದಶಕದ ಹಿಂದೆ ಕೋಲ್ಕತ್ತದ ಮಂದಿಗೆ ‘ಮದ್ರಾಸಿ’ಗಳಾಗಿದ್ದ ನಾವು, ಈಗ ಮಾಹಿತಿ ತಂತ್ರಜ್ಞಾನ, ಹೈಟೆಕ್ ಆಸ್ಪತ್ರೆಗಳ ಸಾಧನೆಗಳಿಂದಾಗಿ ‘ಬೆಂಗಳೂರಿಗ’ರಾಗಿದ್ದೇವೆ’ ಎಂದರು. ‘ಅದೊಂದು ದಿನ ಬಂಗಾಳಿ ಭಾಷೆಯ ಪ್ರಸಿದ್ಧ ಸಾಹಿತಿಯೊಬ್ಬರು ನಾನು ಕನ್ನಡಿಗನೆಂದು ಗೊತ್ತಾದಾಗ ನನ್ನನ್ನು ಅಪ್ಪಿಕೊಂಡು ‘ಪರ್ವ’ ಕಾದಂಬರಿ ಬರೆದ ಭೈರಪ್ಪನವರ ನಾಡಿನವನೆಂದು ನನ್ನನ್ನು ಅಭಿನಂದಿಸಿದ್ದರು. ‘ಪರ್ವ’ ಆಗಷ್ಟೇ ಬಂಗಾಳಿ ಭಾಷೆಗೆ ಅನುವಾದಗೊಂಡಿದ್ದರಿಂದ ಅವರು ಅದನ್ನು ಓದಿದ್ದರು.

ಮಹಾರಾಷ್ಟ್ರದ ಡಾ.ಮಂಜುನಾಥ್ ಭಾವೋದ್ವೇಗದಿಂದ ಮಾತನಾಡಿ ‘ಕನ್ನಡ ಅಭಿವೃದ್ಧಿ ಬಗ್ಗೆ ಸರ್ಕಾರಗಳಿಗೆ ಸಲಹೆಗಳನ್ನು ಕೊಡುವುದನ್ನು ನಿಲ್ಲಿಸಿ, ತಮ್ಮ ತಮ್ಮ ಮಕ್ಕಳನ್ನು ಕನ್ನಡ ಸಂಸ್ಕಾರದ ನಡುವೆ ಬೆಳೆಸಲು ಪ್ರಯತ್ನಿಸಬೇಕು’ ಎಂದರು.

ಚೆನ್ನೈಯ ಅಟ್ಟಾವರ ರಾಮದಾಸ್ ಅವರು ಕನ್ನಡ ಸಂಸ್ಕೃತಿ ಇಲಾಖೆಯ ಬಗ್ಗೆ ಕಿಡಿ ಕಾರುತ್ತಾ ತಮ್ಮ ಮಾತು ಮುಗಿಸಿ, ವೇದಿಕೆಯಿಂದ ದಡದಡನೆ ಇಳಿದು ಸಭಾಂಗಣ ತೊರೆದದ್ದು ಗಮನ ಸೆಳೆಯಿತು.

ಚೆನ್ನೈಯ ತಮಿಳು ಸೆಲ್ವಿ, ಕುವೆಂಪು ನುಡಿಗಟ್ಟುಗಳನ್ನು ಪ್ರಸ್ತಾಪಿಸುತ್ತಲೇ ತಾವು ಕನ್ನಡತಿಯಾಗಿ ಬೆಳೆದು ನಿಂತ ಪರಿಯನ್ನು ವಿವರಿಸಿದರು. ಕೆ.ಪಿ.ಮಂಜುನಾಥ್, ಕ್ಯಾಲಿಫೋರ್ನಿಯಾದ ಕೇಶವ ಬಾಬು, ಮಸ್ಕತ್‌ನ ಅನಿಲ್ ಬಾಸ್ಕಿ, ನ್ಯೂಯಾರ್ಕ್‌ನ ಪುರುಷೋತ್ತಮ, ಕತಾರ್‌ನ ಅರವಿಂದ ಪಾಟೀಲ್, ಕುವೈತ್‌ನ ಇಲಿಯಾಸ್, ಸಿಂಗಪುರದ ಶ್ರೀನಿವಾಸ್, ಬಹರೇನ್‌ನ ರಾಜಕುಮಾರ್, ಅಮೆರಿಕಾದ ಶ್ರೀವತ್ಸ ಜೋಷಿ, ಇಥಿಯೋಪಿಯಾದ ವಿಜಯ ಕುಮಾರ್, ಲಂಡನ್‌ನ ಸುರೇಣು ಜೈರಾಮ್ ಅನುಭವ ಹಂಚಿಕೊಂಡರು.

ಎಂದೆಂದಿಗೂ ನೀ ಕನ್ನಡವಾಗಿರು...

ಕುಮಾರ ಗಂಧರ್ವ ಸಭಾಂಗಣ (ಬೆಳಗಾವಿ): ಕುವೆಂಪು ಬರೆದ ‘ಎಲ್ಲಾದರೂ ಇರು, ಎಂತಾ ದರೂ ಇರು ನೀ ಕನ್ನಡವಾಗಿರು....’ ಕವನದ ಭಾವ ವಿಶ್ವಕನ್ನಡ ಸಮ್ಮೇಳನದಲ್ಲಿ ಅರ್ಥಪೂರ್ಣ ವಾಗಿ ಅನುರಣಿಸಿತು.

ಹೊರನಾಡು ಮತ್ತು ಹೊರದೇಶದ ಕನ್ನಡಿಗರಿಗೆ ಸಂಬಂಧಿಸಿದಂತೆ ಭಾನುವಾರ ನಡೆದ ವಿಚಾರಗೋಷ್ಠಿಯಲ್ಲಿ ಕನ್ನಡನಾಡಿನ ಹೊರಗೆ ಕನ್ನಡಿಗರ ನೋವು ನಲಿವುಗಳು ಅನಾವರಣ ಗೊಂಡವು. ತಾವಿರುವ ಊರುಗಳಲ್ಲಿ ಮಾಡುತ್ತಿರುವ ಕನ್ನಡದ ಕೆಲಸಗಳು, ಹಿರಿಮೆಗರಿಮೆಗಳ ಬಗ್ಗೆ ಅವರೆಲ್ಲಾ ಮನಬಿಚ್ಚಿ ಮಾತನಾಡಿದಾಗ ಸಭಾಂಗಣದಲ್ಲಿ ಕಿಕ್ಕಿರಿದಿದ್ದವರು ಚಪ್ಪಾಳೆ ತಟ್ಟಿ ಅಭಿನಂದಿಸಿದರು.

ದೆಹಲಿಯ ಪುರುಷೋತ್ತಮ ಬಿಳಿಮಲೆ ಉತ್ತರ ಭಾರತದಲ್ಲಿನ ತಮ್ಮ ಅನುಭವಗಳನ್ನು ಹಂಚಿ ಕೊಳ್ಳುತ್ತಾ ‘ಹೊರನಾಡುಗಳಲ್ಲಿ ಕರ್ನಾಟಕದ ಪೂರ್ಣ ಪ್ರತಿನಿಧೀಕರಣವಂತೂ ಆಗಿಲ್ಲ. ಇದಕ್ಕೆ ವಲಸೆಯ ಹಿಂದಿರುವ ಸಾಮಾಜಿಕ ಸೂಕ್ಷ್ಮಗಳೇ ಕಾರಣ’ ಎಂದರು.

ಶತಮಾನದ ಹಿಂದೆಯೇ ಮಂಗಳೂರಿನಲ್ಲಿ ಬಾಸೆಲ್ ಮಿಷನ್ ಸೇರಿದಂತೆ ಇತರ ಕ್ರೈಸ್ತ ಮಿಷನರಿ ಗಳು ನಡೆಸಿದ ಶಿಕ್ಷಣ ಕ್ರಾಂತಿಯಿಂದಾಗಿ ಅಕ್ಷರಸ್ಥರಾದ ಕರಾವಳಿಯ ಮಂದಿ ಮುಂಬೈ ಸೇರಿ ದಂತೆ ಹಲವು ಕಡೆ ವಲಸೆ ಹೊರಟರೆ, ಉತ್ತರ ಕರ್ನಾಟಕದ ವೀರಶೈವ ಮಠಗಳ ಶಿಕ್ಷಣ ಪ್ರಸಾರ ದಿಂದಾಗಿ ಜಾಗೃತರಾದವರು ಬದುಕು ಅರಸಿ ದೇಶದ ಹಲವು ಕಡೆ ವಲಸೆ ಹೋದರು. ಆದರೆ ಕಳೆದ ಕಾಲು ಶತಮಾನದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಭಾರಿ ಸಂಖ್ಯೆಯಲ್ಲಿ ಉದ್ಯೋಗ ಅರಸುತ್ತಾ ಹೊರದೇಶ, ಹೊರನಾಡುಗಳಿಗೆ ತೆರಳಿ ನೆಲೆಸಿದರು. ಆದರೆ ಇವರಲ್ಲಿ ಬಹುತೇಕ ಮಂದಿ ಸಾಮಾಜಿಕವಾಗಿ ಮೇಲುಸ್ತರದವರೇ ಆಗಿರುವುದು ಗಮನಾರ್ಹ ಎಂದು ವಲಸೆಯ ನೆಲೆಗಳನ್ನು ಅವರು ಗುರುತಿಸಿದರು.

‘ಆದರೆ ವಸಾಹತುಪೂರ್ವ ಕಾಲದಲ್ಲಿ ಕರ್ನಾಟಕದಿಂದ ಇಂತಹ ವಲಸೆ ನಡೆದದ್ದು ಬಹಳ ಕಡಿಮೆ’ ಎಂದ ಅವರು ‘ಉತ್ತರದ ಜೈನ, ಬೌದ್ಧ ಧರ್ಮಗಳನ್ನು ತನ್ನ ಒಡಲಲ್ಲಿ ತಂಪಾಗಿರಿಸಿ ಕೊಂಡ ಕನ್ನಡನಾಡು, ಉತ್ತರದಿಂದ ಬಂದ ಸೂಫಿ ಸಂತರ ನೆಲೆವೀಡಾಯಿತು. ಈ ನೆಲದಲ್ಲಿ 800ಕ್ಕೂ ಹೆಚ್ಚು ಸೂಫಿ ಗ್ರಾಮದೇವತೆಗಳ ನೆಲೆಗಳಿವೆ; ಆಫ್ರಿಕ ಮೂಲದ ಸಿದ್ದಿಗಳಿಗೂ ಈ ನಾಡು ನೆಲೆ ಒದಗಿಸಿದೆ. ಹೀಗೆ ಎಲ್ಲಾ ಒಳ್ಳೆಯದರ ಸಾರದಿಂದ ಬೆಳೆದ ಕನ್ನಡ ಸಂಸ್ಕೃತಿ ಅನನ್ಯ’ ಎಂದರು.

ಕೇರಳ, ಬಂಗಾಳ, ತಮಿಳುನಾಡಿನ ಜನಪ್ರತಿನಿಧಿ ರಾಜಧಾನಿಯಲ್ಲಿ ನಡೆಸುವ ‘ಲಾಬಿ’ಗಳನ್ನು ವಿವರಿಸುತ್ತಾ ‘ಕರ್ನಾಟಕ ಸರ್ಕಾರ ಅದಕ್ಷತೆ ತೋರುತ್ತಿದೆ’ ಎಂದು ಟೀಕಿಸಿದರು.

ಉತ್ತರ ಭಾರತದಲ್ಲಿ ದುರ್ಬಲಗೊಂಡ ಕರ್ನಾಟಕದ ಧ್ವನಿಯನ್ನು ಗಟ್ಟಿಗೊಳಿಸುವುದಕ್ಕೆ ದೆಹಲಿ ಯಲ್ಲಿ ‘ಕರ್ನಾಟಕ ಅಧ್ಯಯನ ಕೇಂದ್ರ’ವನ್ನು ತೆರೆಯಬೇಕೆಂದು ಆಗ್ರಹಿಸಿ, ಉತ್ತರ ಭಾರತದ ಕೆಲವು ವಿವಿಗಳಲ್ಲಿ ಕನ್ನಡ ಪೀಠವನ್ನು ಸ್ಥಾಪಿಸಬೇಕಾದ ಅನಿವಾರ್ಯತೆಯನ್ನೂ ಒತ್ತಿ ಹೇಳಿದರು.

ಸಭಿಕರ ಮನಗೆದ್ದ ನೀರಜ್: ಇಂಗ್ಲೆಂಡ್ ದೇಶದ ಲ್ಯಾಂಬರ್ತ್‌ನ ಮೇಯರ್ ನೀರಜ್ ಪಾಟೀಲ್ ಈ ಗೋಷ್ಠಿಯನ್ನು ಉದ್ಘಾಟಿಸಿ ಅಪ್ಪಟ ಉತ್ತರ ಕರ್ನಾಟಕ ಶೈಲಿಯಲ್ಲಿ ಮಾತನಾಡುತ್ತಾ ಸಭಿಕರ ಮನಗೆದ್ದರು. ಪ್ರತಿ ಮಾತಿಗೂ ಬಸವೇಶ್ವರ, ಕುವೆಂಪು ಅವರ ನುಡಿಗಳನ್ನು ಉಲ್ಲೇಖಿಸುತ್ತಾ ‘ನಾನು ಮೊದಲಿಗೆ ಉತ್ತರ ಕರ್ನಾಟಕದವ, ನಂತರ ಎಲ್ಲವೂ’ ಎಂದಿದ್ದು ವಿಶೇಷವಾಗಿತ್ತು.

ಜಗತ್ತಿನಲ್ಲಿ ಪ್ರಜಾಸತ್ತೆಯ ಹರಿಕಾರ ಬಸವೇಶ್ವರರ ನೆಲದಲ್ಲೇ ಪ್ರಜಾಪ್ರಭುತ್ವ ವ್ಯವಸ್ಥೆಯು ಭ್ರಷ್ಟಾಚಾರದ ವ್ರಣದಿಂದ ಬಳಲುತ್ತಿರುವ ಬಗ್ಗೆ ವಿಷಾದಿಸಿದ ನೀರಜ್, ‘ಇದಕ್ಕೆ ಸಂಬಂಧಿಸಿದಂತೆ ಮತದಾರರನ್ನೇ ಬೈಯಬೇಕಿದೆ. ಇವತ್ತು ವಿಧಾನಸಭೆ ಪ್ರವೇಶಿಸಬೇಕಿದ್ದರೆ ಹತ್ತು ಕೋಟಿ ರೂಪಾಯಿಗಳನ್ನಾದರೂ ಖರ್ಚು ಮಾಡಬೇಕಾದ ಪರಿಸ್ಥಿತಿ ಇದೆ. ಇದಕ್ಕೆ ಮತದಾರರೂ ಕಾರಣ. ಭ್ರಷ್ಟಾಚಾರದ ಮೂಲ ಇರುವುದೇ ಮತದಾರರಲ್ಲಿ’ ಎಂದರು.

ಕಡಲಾಚೆಯ ಕನ್ನಡಿಗರ ಜತೆಗಿನ ತಮ್ಮ ‘ಅಂತರ್ಜಾಲ’ ಒಡನಾಟವನ್ನು ಬಿಚ್ಚಿಟ್ಟ ಪತ್ರಕರ್ತ ಶ್ಯಾಮಸುಂದರ್ ‘ಹೊರದೇಶದ ಕನ್ನಡಿಗರ ಹೃದಯವೈಶಾಲ್ಯತೆ ಬಲು ದೊಡ್ಡದು. ಅವರು ತಮ್ಮ ವೈಯಕ್ತಿಕ ಸಂಕಟಗಳನ್ನು ಹಂಚಿಕೊಂಡಿದ್ದೇ ಕಡಿಮೆ. ಆದರೆ ಸಾಮೂಹಿಕ ನೆಲೆಯಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಬಗ್ಗೆ ಮಾತನಾಡುತ್ತಲೇ ಬಂದಿದ್ದಾರೆ’ ಎಂದರು.

ಅಮೆರಿಕಾದ ‘ಅಕ್ಕ’ ಸಂಘಟನೆಯ ಅಧ್ಯಕ್ಷ ಅಮರನಾಥ ಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿ ‘ಕನ್ನಡದ ಏಳ್ಗೆಯ ನಿಟ್ಟಿನಲ್ಲಿ ಎಲ್ಲದಕ್ಕೂ ಸರ್ಕಾರದ ಎದುರು ಕೈ ಒಡ್ಡುತ್ತಾ ನಿಲ್ಲುವ ಬದಲು ನಮ್ಮ ಕೈಯಲ್ಲಿ ಸಾಧ್ಯವಾಗುವುದನ್ನು ನಾವು ಮಾಡುತ್ತಾ ಹೋಗುವ’ ಎಂದರು.

ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕ ಮನು ಬಳಿಗಾರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತ ನಾಡಿದರು. ಕನ್ನಡ ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ, ಬೆಂಗಳೂರಿನಲ್ಲಿ ಈಚೆಗೆ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಜಿ. ವೆಂಕಟಸುಬ್ಬಯ್ಯ, ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ನಿಕ್, ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ ಸೇರಿದಂತೆ ಹಲವು ಗಣ್ಯರು ಸಭಿಕರ ನಡುವೆ ಕುಳಿತಿದ್ದರು.

ವಂದೇಮಾತರಂ: ಪ್ರವಹಿಸಿತು ಏಕತೆ

ಕಿತ್ತೂರು ಚೆನ್ನಮ್ಮ ವೇದಿಕೆ (ಬೆಳಗಾವಿ): ಸಂಜೆ ದೀಪ ಮುಡಿಸುವ ಹೊತ್ತು. ಕನ್ನಡ ಕಾವ್ಯ ಗಾಯನ ಕನ್ನಡದ ದೀಪ ಹೊತ್ತಿಸಿತ್ತು. ಸಂಗೀತಾ ಕಟ್ಟಿಮನಿ ‘ವಂದೇ ಮಾತರಂ’ ಎಂಬ ಸಾಲನ್ನು ಎತ್ತರದ ಧ್ವನಿಯಲ್ಲಿ ಹೇಳಿದಾಗ ಭಾರತೀಯತ್ವವೂ ರಕ್ತಗತವಾಗುವಂತೆ ಪ್ರವಹಿಸ ತೊಡಗಿತು.

ಎದ್ದು ನಿಂತು ಗೌರವ ಸಲ್ಲಿಸಿದ ಜನರಿಗೆ ಈ ನಾಡು, ಈ ದೇಶದ ಒಳಶಕ್ತಿಯಾಗಿರುವ ಐಕ್ಯ ಮತದ ದೀಪವನ್ನು ಎಲ್ಲರ ಎದೆಗೂಡಿನಲ್ಲಿ ಹಚ್ಚಿದರು. ಕುಳಿತವರು ನಿಂತರು. ನಿಂತವರು ಕಿವಿಯಾದರು. ಮಲಗಿದವರೂ ಎದ್ದು ನಿಂತರು.

ಸಂಗೀತದ ಅಗಾಧವಾದ ಶಕ್ತಿ ಅವರೊಳಗಿನ ಆತ್ಮವನ್ನೂ, ಆತ್ಮಶಕ್ತಿಯನ್ನೂ ಬಡಿದೆಬ್ಬಿಸಿತ್ತು. ಅಲ್ಲಿಗೆ ನಾಡು ಮತ್ತು ದೇಶವನ್ನು ವಿಶ್ವದೊಂದಿಗೆ ಬೆಸೆಯುವ ವಿಶ್ವಕನ್ನಡ ಸಮ್ಮೇಳನ ಸಾರ್ಥಕ್ಯ ಪಡೆಯಿತು.

20 ಲಕ್ಷಕ್ಕೂ ಅಧಿಕ ಜನ ಭಾಗಿ!

ಬೆಳಗಾವಿ: ನಗರದಲ್ಲಿ ಮೂರು ದಿನಗಳ ಕಾಲ ಜರುಗಿದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪಾಲ್ಗೊಂಡ ಒಟ್ಟು ಜನರ ಸಂಖ್ಯೆ ಎಷ್ಟು?

ಇದಕ್ಕೆ ನಿಖರ ಉತ್ತರ ಹೇಳುವುದು ಅಸಾಧ್ಯದ ಮಾತು. ಒಂದೇ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಜನ ನೆರೆದರೆ ಅದನ್ನು ಲೆಕ್ಕ ಹಾಕುವುದು ಕಷ್ಟ. ಅಂತಹುದರಲ್ಲಿ ಈ ಸಮ್ಮೇಳನದಲ್ಲಿ ಮೂರು ದಿನಗಳ ಕಾಲ ಹತ್ತುಹನ್ನೆರಡು ಕಡೆ ನಡೆದ ಸಭೆ-ಸಮಾರಂಭಗಳಿಗೆ ಜನರು ಸಾಗರೋಪಾದಿಯಲ್ಲಿ ಹರಿದುಬಂದಿದ್ದರು. ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ಪ್ರಕಾರ ಸಮ್ಮೇಳನದಲ್ಲಿ ಪಾಲ್ಗೊಂಡವರ ಸಂಖ್ಯೆ 20 ಲಕ್ಷ ಮೀರಿದೆ.

ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

‘ನಮ್ಮ ನಿರೀಕ್ಷೆಗೂ ಮೀರಿ ಜನರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ. ಲಕ್ಷಾಂತರ ಸಂಖ್ಯೆಯಲ್ಲಿ ಸೇರಿದ ಜನಕ್ಕೆ ಈ ಸಮ್ಮೇಳನದ ಯಶಸ್ಸು ಸಲ್ಲುತ್ತದೆ’ ಎಂದು ಮುಖ್ಯಮಂತ್ರಿಗಳು ಕೂಡ ಸಮಾರೋಪದಲ್ಲಿ ಸಂತಸ ವ್ಯಕ್ತಪಡಿಸಿದರು.

ಮೊದಲ ದಿನದ ಮೆರವಣಿಗೆಯಲ್ಲಿ 5 ಲಕ್ಷಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು ಎಂಬುದು ಪೊಲೀಸರ ಲೆಕ್ಕಾಚಾರ.

ಮುಂದುವರಿದ ಮಹಿಳೆ ಅಂದ್ರೆ...

ಬೆಳಗಾವಿ: ಸಂಸ್ಕೃತಿ, ಕುಟುಂಬ, ಸೀರೆ - ಈ ಪರಿಕಲ್ಪನೆಗಳನ್ನು ಕುರಿತಂತೆ ಮಹಿಳಾ ಗೋಷ್ಠಿ ಯಲ್ಲಿ ಭಿನ್ನ ದನಿಗಳು ಕೇಳಿ ಬಂದವು.‘ಕೂದಲು ಕಟ್ ಮಾಡಿಕೊಂಡು, ಕುಂಕುಮ ಇಟ್ಟು ಕೊಳ್ಳದೇ, ಗ್ಲಾಸ್ ಹಿಡಿದುಕೊಂಡಲ್ಲಿ ಮುಂದುವರಿದ ಮಹಿಳೆ ಆಗುವುದಿಲ್ಲ. ಪಾಶ್ಚಾತ್ಯರ ಅಂಧಾನುಕರಣೆ ಮಾಡುವುದೇ ಸ್ವಾತಂತ್ರ್ಯ ಅಲ್ಲ. ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಮೂರು ವಿಶ್ವ ದಾಖಲೆ ಮಾಡಿರುವ ನಾನು ವಿದೇಶಗಳಲ್ಲಿ ಸೀರೆ ಉಟ್ಟ ಭಾರತೀಯ ಮಹಿಳೆ ಎಂದು ಮೆಚ್ಚುಗೆಗೆ ಪಾತ್ರಳಾಗಿದ್ದೇನೆ’ ಎಂದು ಹೇಳಿ ಸಭಿಕರ ಚಪ್ಪಾಳೆ ಗಿಟ್ಟಿಸಿದರು ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ.

ಆಗ ‘ಸೀರೆ ಉಟ್ಟುಕೊಳ್ಳುವುದೇ ಭಾರತೀಯ ಸಂಸ್ಕೃತಿ ಎಂದು ಬಿಂಬಿಸಬೇಡಿ. ಡ್ರೆಸ್ ಕೋಡ್ ಮಹಿಳೆ ಮೇಲೆ ಹೇರಬೇಡಿ’ ಎಂದು ಕೆಲವು ಸಭಿಕರು ಎದ್ದು ನಿಂತು ಪ್ರತಿಭಟಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಮಲಾ ಹಂಪನಾ ಅವರು ‘ಪ್ಯಾಂಟ್, ಷರ್ಟ್ ಹಾಕಿಕೊಳ್ಳುವುದು ಸರಿ. ಆದರೆ ಯಾವ ರೀತಿಯದು ಎಂಬುದು ಪ್ರಶ್ನೆ. ಪ್ರಚೋದನೆಗೊಳಿಸುವ ಉಡುಪನ್ನು ಪುರುಷ ನಾಗಲಿ, ಮಹಿಳೆಯಾಗಲಿ ಹಾಕಕೂಡದು’ ಎಂದರು.

‘ಸೀರೆ ಉಟ್ಟು ಮೇಕಪ್ ಮಾಡಿದ ಸ್ತ್ರೀಯನ್ನು ಭಾರತೀಯ ನಾರಿ ಎಂದು ಕಟ್ಟಿಕೊಟ್ಟವರು ನಮ್ಮನ್ನಾಳಿದ ಬ್ರಿಟಿಷರು’ ಎಂಬುದು ಡಾ ವಸು ಅವರ ವಾದ.

‘ಮಾತೃತ್ವ, ಕುಟುಂಬ, ಸೋದರತ್ವ ಪರಿಕಲ್ಪನೆಗಳನ್ನು ಹೇರುವ ಸಾಂಸ್ಕೃತಿಕ ರಾಜಕಾರಣ ಭಾವನಾತ್ಮಕವಾಗಿ ಪ್ರಧಾನ ವಾಹಿನಿಯಿಂದ ಮಹಿಳೆಯನ್ನು ದೂರ ಇರಿಸಲು ಯತ್ನಿಸುತ್ತದೆ’ ಎಂಬ ಪ್ರತಿಪಾದನೆಯನ್ನು ಮಾಡಿದವರು ಡಾ. ವಿಜಯಾ.

‘ಪ್ರತಿಯೊಂದು ಮನೆಯಲ್ಲಿ ಮುಖ್ಯಮಂತ್ರಿಗಳಿದ್ದಾರೆ’ ಎಂದು ಮಾಜಿ ಸಚಿವೆ ರಾಣಿ ಸತೀಶ್ ಕುಟುಂಬದ ಮಹತ್ವವನ್ನು ಎತ್ತಿ ಹಿಡಿದರು.

‘ಲಿವಿಂಗ್ ಟುಗೆದರ್... ನೋ.. ಮಾನವ ಕುಲ ಉಳಿಸುವ ಹೊಣೆ ಹೆಣ್ಣಿನದು’ ಎಂದವರು ಹಿರಿಯ ಲೇಖಕಿ ಡಾ. ಸರೋಜಿನಿ ಶಿಂತ್ರಿ.

‘ನಾರಾಯಣ ಮೂರ್ತಿಯವರು ಮನೆಗೆ ಬಂದರೆ ಸುಧಾ ಮೂರ್ತಿಯವರ ಜೊತೆ ಕಾಫಿ ಕುಡೀತಾರೆ. ಆದರೆ ನಮ್ಮ ತಳಸ್ತರದ ಹೆಣ್ಣುಮಕ್ಕಳು ದುಡಿಮೆ ಮುಗಿಸಿ ಮನೆಗೆ ಹೋದರೆ ‘ಪಾಕೀಟ್ ಪರಮಾತ್ಮ’ ಹಾಕಿದ ಪತಿಯಿಂದ ಹೊಡೆತ ತಿಂದು ಮತ್ತೆ ಅಡುಗೆ ಬೇಯಿಸಬೇಕು’ ಎಂದರು ಕೆ.ನೀಲಾ. ‘ಪಾವಗಡದಲ್ಲಿ ವಿಧವೆಯ ಮಾರಾಟ ಪ್ರಕರಣ ಕುರಿತು ನಾಡಿನ ವಿದ್ವಾಂಸರು ವಿಶ್ಲೇಷಿಸಬೇಕು’ ಎಂದೂ ಅವರು ಆಗ್ರಹ ಪಡಿಸಿದರು.

‘ಸಂಸ್ಕೃತಿ ಹೆಣ್ಣಿಗೆ ಮಾತ್ರ ಚೌಕಟ್ಟಾಗಿ ಉಳಿದಿದೆ’ ಎಂದರು ಮಾಧವಿ ಭಂಡಾರಿ.

ಭಾಷೆಯ ಸಂಸ್ಕೃತಿಯನ್ನು ಪ್ರಶ್ನಿಸಿದ ಧರಣಿದೇವಿ ಮಾಲಗತ್ತಿ ಅವರು ‘ಕಿತ್ತೂರು ಚೆನ್ನಮ್ಮ ಆಳಿದ ಗಂಡು ಮೆಟ್ಟಿದ ನೆಲ’ ಎಂಬುದನ್ನು ‘ಹೆಣ್ಣು ಮೆಟ್ಟಿದ ನೆಲ’ ಎಂದ್ಯಾಕೆ ಹೇಳಬಾರದು’ ಎಂದರು. ‘ಇದಕ್ಕೆ ಕಾರಣ, ಗಂಡು ಎಂದಾಕ್ಷಣ ಪೌರುಷದ ಭಾವ ಆವರಿಸುತ್ತದೆ. ಪೌರುಷ ಪದ ಉತ್ಪತ್ತಿ ಆಗಿರುವುದೂ ಪುರುಷ ಪದದಿಂದ. ಹೆಣ್ಣು ಎಂದಾಕ್ಷಣ, ‘ಕನ್ನೆ ನೆಲ’ ಎಂದಾಗ ಅರ್ಪಣಾ ಮನೋಭಾವ ಸ್ಫುರಿಸುತ್ತದೆ. ಸಮಾನತೆಯನ್ನು ಗೌರವಿಸುವ ಗುಣ ಬಂದಾಗ ಈ ಪದಗಳು ಅರ್ಥ ಕಳೆದುಕೊಳ್ಳುತ್ತವೆ’ ಎಂದು ವಿಶ್ಲೇಷಿಸಿದರು.

ಮಾಲತಿ ಪಟ್ಟಣಶೆಟ್ಟಿ, ಸಿದ್ದಗಂಗಮ್ಮ, ಹೇಮಾ ವೆಂಕಟ್, ಲತಾ ಗುತ್ತಿ, ಪಾರ್ವತಿ ಪಿಟಗಿ ಅವರೂ ತಮ್ಮ ಪ್ರತಿಕ್ರಿಯೆಗಳನ್ನು ನೀಡಿದರು.

ದುಡಿಯುವ ಹೆಣ್ಣಿನ ನಿದ್ದೆ ಎಷ್ಟು ಗಂಟೆ?

ಬೆಳಗಾವಿ: ಸಮಕಾಲೀನ ಜಗತ್ತು ಮತ್ತು ಮಹಿಳೆ ಗೋಷ್ಠಿಯ ಏಕೈಕ ಪುರುಷ ಪ್ರಬಂಧಕಾರರಾಗಿ ‘ಔದ್ಯೋಗಿಕ ಜಗತ್ತು ಮತ್ತು ಮಹಿಳೆ’ ಕುರಿತು ವಿಷಯ ಮಂಡಿಸಿದ ಕಥೆಗಾರ ವಸುಧೇಂದ್ರ ಅವರು ಐಟಿ ಜಗತ್ತು ಹಾಗೂ ಗಾರ್ಮೆಂಟ್ ಕ್ಷೇತ್ರದ ಮಹಿಳೆಯರ ಸ್ಥಿತಿಗತಿಗಳನ್ನು ಎಳೆಎಳೆ ಯಾಗಿ ಬಿಡಿಸಿಟ್ಟರು.

‘ಐಟಿ ಕ್ಷೇತ್ರದಲ್ಲಿ ಅಸಮಾನತೆ ಇಲ್ಲ. ಬಡ್ತಿಗಳಿಗೆ ಅವಕಾಶ ಇದೆ. ಒಳ್ಳೆಯ ಸ್ಥಿತಿಯನ್ನೂ ಅನುಭವಿಸುತ್ತಿದ್ದಾಳೆ. ಆದರೆ ಮನೆಯೊಳಗೆ ಆಕೆಗೆ ಸಮಸ್ಯೆ ಇದೆ. ಒಂದು ಸಮೀಕ್ಷೆಯ ಪ್ರಕಾರ, ಪುರುಷ ವಾರಕ್ಕೆ ಮನೆಯಲ್ಲಿ 5 ತಾಸು ಕೆಲಸ ಮಾಡಿದರೆ ಮಹಿಳೆ 35 ತಾಸು ಕೆಲಸ ಮಾಡುತ್ತಾಳೆ. ಇದರಿಂದ ಆಕೆಗೆ ಸುಖವಾಗಿ 7 -8 ತಾಸು ನಿದ್ದೆಗೆ ಸಮಯ ಸಿಗುತ್ತಿಲ್ಲ. ನಗರಗಳ ಅನೇಕ ಮಂದಿ ದುಡಿಯುವ ಮಹಿಳೆಯರು ಕೇವಲ 2-3 ಗಂಟೆಗಳು ನಿದ್ದೆ ಮಾಡುತ್ತಿದ್ದಾರೆ. ಇದು ಕ್ರಮೇಣ ಆ ಮಹಿಳೆಯನ್ನು ಖಿನ್ನತೆಯತ್ತ ಒಯ್ಯುತ್ತದೆ. ದುಡಿಯುವ ಮಹಿಳೆಯ ಬಹು ಮುಖ್ಯ ಸಮಸ್ಯೆ ಇದು’ ಎಂದರು.

‘5ರಿಂದ 6 ಲಕ್ಷ ಮಹಿಳೆಯರು ಬೆಂಗಳೂರು ಸುತ್ತಮುತ್ತ ಗಾರ್ಮೆಂಟ್ ಉದ್ಯಮದಲ್ಲಿ ಕೆಲಸ ಮಾಡುತ್ತಾರೆ. ಒಂದು ನಿರ್ದಿಷ್ಟ ಅವಧಿಯಲ್ಲಿ ಇಷ್ಟು ಹೊಲಿಯಬೇಕು ಎಂಬಂತಹ ಗುರಿಯನ್ನು ಈ ಮಹಿಳೆಯರಿಗೆ ನಿಗದಿ ಪಡಿಸಲಾಗಿರುತ್ತದೆ. ಈ ಗುರಿಯನ್ನು ಸಂಬಳಕ್ಕೆ ತಳಕು ಹಾಕಲಾಗುತ್ತದೆ. ಹೀಗಾಗಿ ನೀರು ಕುಡಿದರೆ ಟಾಯ್ಲೆಟ್‌ಗೆ ಹೋಗಬೇಕು; ಐದು ನಿಮಿಷ ವ್ಯಯವಾಗುತ್ತೆ ಎಂಬಂತಹ ಮನಸ್ಥಿತಿ ಇಲ್ಲಿ ಕೆಲಸ ಮಾಡುವ ಮಹಿಳೆಯದಾಗಿರುತ್ತದೆ. ಈ ಅಮಾನವೀಯ ಸ್ಥಿತಿಗೆ ಯಾರು ಕಾರಣ? ಸೂಪರ್‌ವೈಸರ್ ಅಥವಾ ಮಾಲೀಕ ಕಾರಣನಲ್ಲ. ದೇಶ - ದೇಶಗಳ ನಡುವಿನ ಸಮಸ್ಯೆ ಇವು. ಲಾಭಕ್ಕಾಗಿ ಹೆಚ್ಚು ಹೆಚ್ಚು ದುಡಿಸುವ ಉಪಾಯವೇ ಇಲ್ಲಿ ಮ್ಯಾನೇಜ್‌ಮೆಂಟ್ ತತ್ವಗಳಾಗುತ್ತವೆ’ ಎಂದರು.

‘ಗಾರ್ಮೆಂಟ್ ಉದ್ಯಮದಲ್ಲಿ ಶೇ 90ರಷ್ಟು ಮಂದಿ ಮಹಿಳೆಯರಿದ್ದು ಶೇ 10ರಷ್ಟು ಮಂದಿ ಮಾತ್ರ ಪುರುಷರು. ಇವರಲ್ಲಿ ಹೆಚ್ಚಿನವರು ಸೂಪರ್‌ವೈಸರ್‌ಗಳು. ಮಹಿಳಾ ಕಾರ್ಮಿಕರಿಗೆ ಅಶ್ಲೀಲ ಭಾಷೆ ಬಳಸುವ ತಂತ್ರದಿಂದ ಹೆಚ್ಚು ಕೆಲಸ ತೆಗೆಸಲು ಈ ಸೂಪರ್‌ವೈಸರ್‌ಗಳಿಗೆ ಕಂಪೆನಿ ಒಡೆಯರ ಕುಮ್ಮಕ್ಕು ಇರುತ್ತದೆ’ ಎಂದು ಹೇಳಿದರು.

‘ವಿದ್ವತ್ ವಯ್ಯಾರ ಸಲ್ಲ’

ಬೆಳಗಾವಿ: ‘ಬ್ರಾಹ್ಮಣರ ಎಂಜಲ ಎಲೆಗಳ ಮೇಲೆ ಉರುಳುವುದನ್ನು ಸಮರ್ಥಿಸಿಕೊಳ್ಳಲು ವಿದ್ವತ್ತನ್ನು ಬಳಸಿಕೊಂಡು ಸಂಬಂಧಗಳ ಚಲನಶೀಲತೆಯನ್ನೇ ನಿರಾಕರಿಸುವವರು ಇರುವ ವರ್ತಮಾನದಲ್ಲಿ ಕುಳಿತು ಕನಸಿನ ಕರ್ನಾಟಕದ ಕುರಿತು ಮಾತನಾಡುವುದೇ ಒಂದು ತಮಾಷೆ’ ಎಂದು ಕಲಾವಿದ ಕೆ.ಟಿ.ಶಿವಪ್ರಸಾದ್ ವ್ಯಂಗ್ಯವಾಡಿದರು.

ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಏರ್ಪಡಿಸಲಾಗಿದ್ದ ‘ಕನಸಿನ ಕರ್ನಾಟಕ’ ಗೋಷ್ಠಿಯಲ್ಲಿ ಭಾಗವಹಿಸಿದ್ದ ಅವರು ‘ನಾವು ಸಂಬಂಧಗಳ ನಡುವೆ, ರಾಜ್ಯ, ದೇಶಗಳ ನಡುವೆ ಗೆರೆ ಹಾಕಿಕೊಂಡು ಯೋಚಿಸುವುದನ್ನು ಮೊದಲು ಬಿಡಬೇಕು. ನಾವು ಹಾಕಿಕೊಳ್ಳುವ ಯಾವ ಗೆರೆಗಳಿಗೂ ಈ ಚಲನಶೀಲ ಜಗತ್ತಿನಲ್ಲಿ ಯಾವ ಬೆಲೆಯೂ ಇಲ್ಲ’ ಎಂದರು.

ನಿರಾಕರಣೆಯ ಪರಂಪರೆ: ‘ಬಸವಾದಿ ಶರಣರು 12ನೇ ಶತಮಾನದಲ್ಲಿಯೇ ಜಾತಿಪದ್ಧತಿ ಯನ್ನು ನಿರಾಕರಿಸಿ ನವ ಸಮಾಜದ ನಿರ್ಮಾಣಕ್ಕೆ ಕಾರಣರಾಗಿದ್ದರು. ಆದರೆ ಇಪ್ಪತ್ತೊಂದನೇ ಶತಮಾನದ ಹೊಸ್ತಿಲಲ್ಲಿ ಇರುವ ಕರ್ನಾಟಕದ 29,000 ಹಳ್ಳಿಗಳಲ್ಲಿ ಕನಿಷ್ಠ 20 ಹಳ್ಳಿಗಳೂ ಕೂಡಾ ಅಸ್ಪೃಶ್ಯತೆಯಿಂದ ಮುಕ್ತವಾಗಿಲ್ಲದ ದುರಂತ ನಮ್ಮ ಕಣ್ಣ ಮುಂದಿದೆ’ ಎಂದು ಗೋಷ್ಠಿ ಯಲ್ಲಿ ಕವಿ ಎಲ್.ಹನುಮಂತಯ್ಯ ಹೇಳಿದರು.

‘ಕನ್ನಡ ಭುವನೇಶ್ವರಿಯಂಥ ಜಂಗಮ ಸ್ವರೂಪಿ ಕಲ್ಪನೆಯನ್ನು ಸ್ಥಾವರವಾಗಿಸುವ ಪ್ರಯತ್ನಕ್ಕೆ ಸರ್ಕಾರವೇ ತೊಡಗಿಕೊಂಡಿದೆ.ಮುಖ್ಯಮಂತ್ರಿ ಯಡಿಯೂರಪ್ಪ ಕನ್ನಡ ಭುವನೇಶ್ವರಿಯ ಪ್ರತಿಮೆಯನ್ನು ಸ್ಥಾಪಿಸುವ ಘೋಷಣೆ ಮಾಡಿದಾಗ ಕನ್ನಡ ಸೂಕ್ಷ್ಮ ಮನಸ್ಸುಗಳು ಇದನ್ನು ವಿರೋಧಿಸಲಿಲ್ಲ ಎಂಬುದು ನನಗೆ ಹೆಚ್ಚು ನೋವು ತಂದ ಸಂಗತಿ. ಕನ್ನಡದ ಜಂಗಮ ಗುಣ ಉಳಿಯದೇ ಹೋದರೆ ಕನ್ನಡ ಉಳಿಯಲು ಸಾಧ್ಯವಿಲ್ಲ. ಕನ್ನಡ ಪ್ರಜ್ಞೆ ನಿರ್ದಿಷ್ಟ ಧರ್ಮವೊಂದಕ್ಕೆ ಸೀಮಿತಗೊಳ್ಳುವ ಅಪಾಯವಿದೆ. ಈಗಾಗಲೇ ಕರ್ನಾಟಕದ ಧರ್ಮ ಸಹಿಷ್ಣುತೆಯ ಪರಂಪರೆ ಯನ್ನೇ ಲೇವಡಿ ಮಾಡುವಂತೆ ಕೋಮುವಾದ ಹರಡಿಕೊಳ್ಳುತ್ತಿದೆ’ ಎಂದು ಅವರು ವಿಷಾದಿ ಸಿದರು.

‘ಕನ್ನಡದ ಜಂಗಮ ಸ್ವರೂಪ ಕಾಪಾಡುವುದು ಎಂದರೆ ಅದು ಪ್ರಾಚೀನ ಸಾಹಿತ್ಯದಿಂದ ಆರಂಭಗೊಂಡು ವಿಜ್ಞಾನದಂಥ ಅರ್ವಾಚೀನ ಜ್ಞಾನದ ಚರ್ಚೆಯ ತನಕ ಬಳಕೆಯಾಗುವಂತೆ ರೂಪಿಸುವುದು. ಕನ್ನಡ ಭುವನೇಶ್ವರಿಯ ಪ್ರತಿಮೆಗೆ ಕೋಟಿಗಳನ್ನು ಮಂಜೂರು ಮಾಡುವ ಸರ್ಕಾರ ಕನ್ನಡ ತಂತ್ರಾಂಶದ ಅಭಿವೃದ್ಧಿಗೆ ಕೊಟ್ಟ ಹಣವನ್ನೂ ಖರ್ಚು ಮಾಡದಂಥ ಪರಿಸ್ಥಿತಿ ಸೃಷ್ಟಿಸುತ್ತದೆ’ ಎಂದರು.

ಗದ್ದಲ ಎಬ್ಬಿಸಿದವರು..!

ಎಲ್. ಹನುಮಂತಯ್ಯ ಅವರು ಕೋಮುವಾದ ಮತ್ತು ಕನ್ನಡದ ಸ್ಥಾವರೀಕರಣದ ಕುರಿತಂತೆ ಮಾತನಾಡುತ್ತಿದ್ದಾಗ ಸಭೆಯಲ್ಲಿದ್ದ ಇಬ್ಬರು ಅದನ್ನು ಆಕ್ಷೇಪಿಸಿದರು. ತಾನು ಮೂರು ಪದವಿ ಪಡೆದಿದ್ದೇನೆಂದು ಎದ್ದು ನಿಂತ ಒಬ್ಬರು ಇಂಗ್ಲಿಷ್‌ನಲ್ಲಿ ‘ರಾಜಕೀಯ ಬೇಡ, ಕನ್ನಡದ ಬಗ್ಗೆ ಮಾತನಾಡಿ’ ಎಂದು ಕಿರುಚಿದರು. ಆಗ ಮಧ್ಯಪ್ರವೇಶಿಸಿದ ಅಧ್ಯಕ್ಷ ಷ. ಶೆಟ್ಟರ್ ‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸಿ’ ಎಂದು ಕೋಪದಿಂದ ಹೇಳಿದರು. ಅಷ್ಟೊತ್ತಿಗೆ ಸಭಿಕರು ಮತ್ತು ಪೊಲೀಸರ ಮಧ್ಯಪ್ರವೇಶದೊಂದಿಗೆ ಗದ್ದಲವೆಬ್ಬಿಸಿದ ಇಬ್ಬರೂ ಸುಮ್ಮನಾದರು.

‘ಜಾತಿ ಉಲ್ಲಂಘನೆ ಇಂದು ನಿನ್ನೆಯದಲ್ಲ’

ಬೆಳಗಾವಿ: ‘ಕರ್ನಾಟಕದಲ್ಲಿ ಜಾತಿ ಪದ್ಧತಿ ಜಡತ್ವವನ್ನು ಪಡೆದುಕೊಂಡು ಮನುಷ್ಯರ ನಡುವಣ ಭೇದದ ಪರಿಕಲ್ಪನೆ ನೆಲೆಗೊಂಡದ್ದು ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಎಂಬುದನ್ನು ಐತಿಹಾಸಿಕ ಆಕರಗಳು ತಿಳಿಸುತ್ತಿವೆ’ ಎಂದು ಇತಿಹಾಸಕಾರ ಷ. ಶೆಟ್ಟರ್ ಅಭಿಪ್ರಾಯಪಟ್ಟರು.

ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಏರ್ಪಡಿಸಲಾಗಿದ್ದ ‘ಕನಸಿನ ಕರ್ನಾಟಕ’ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು ‘ಜಾತಿ ಮತ್ತು ಕುಲದ ಉಲ್ಲಂಘನೆ ಸದಾ ನಡೆದುಕೊಂಡು ಬಂದ ಸಂಗತಿಯೇ. ಜೈನಳಾಗಿದ್ದ ಮಾಚಿಕಬ್ಬೆ ಶೈವನಾದ ಮಾರಸಿಂಹನ ಪತ್ನಿಯಾಗಿದ್ದಳು. ಇವರ ಮಗಳು ಶಾಂತಲೆಯನ್ನು ವರಿಸಿದ್ದು ವೈಷ್ಣವನಾಗಿದ್ದ ವಿಷ್ಣುವರ್ಧನ. ಮಾಚಿಕಬ್ಬೆ ಮತ್ತು ಶಾಂತಲೆಯರು ಜೈನರಾಗಿಯೇ ಇದ್ದರು. ಮಾರಸಿಂಹ ಶೈವನಾಗಿಯೂ ವಿಷ್ಣುವರ್ಧನ ವೈಷ್ಣವನಾಗಿದ್ದದ್ದು ಅವರ ಸಂಬಂಧಕ್ಕೇನೂ ಧಕ್ಕೆ ತಂದಿರಲಿಲ್ಲ’ ಎಂದರು.

‘ಐತಿಹಾಸಿಕವಾಗಿ ನೋಡಿದರೆ ಕರ್ನಾಟಕದಲ್ಲಿ ಇದ್ದದ್ದು ಶೂದ್ರವೆಂಬ ಒಂದೇ ವರ್ಣ. ಅರಸ ರಾಗಿದ್ದ ಕದಂಬರಿಂದ ವಿಜಯನಗರದ ಅರಸರ ತನಕ ಯಾರೂ ಕ್ಷತ್ರಿಯರಲ್ಲ. ಹಲವರು ಬುಡಕಟ್ಟು ಸಮುದಾಯಗಳಿಂದ ಬಂದವರು. ಕದಂಬರು ತಾವು ಬ್ರಾಹ್ಮಣರೆಂದು ಹೇಳಿಕೊಳ್ಳು ವರಾದರೂ ಮ್ಲೇಚ್ಛ ಸಮುದಾಯಗಳ ಜೊತೆಗೆ ಅವರಿಗೆ ಮದುವೆಯ ಸಂಬಂಧವಿತ್ತು. ಇವರೆ ಲ್ಲರೂ ಅರಸರಾದ ನಂತರ ಅಕ್ಷರಸ್ಥರನ್ನು ಕರೆಯಿಸಿಕೊಂಡು ಅಗ್ರಹಾರಗಳನ್ನು ಕಟ್ಟಿಕೊಟ್ಟು ವಂಶಾವಳಿಗಳನ್ನು ಬರೆಯಿಸಿ ಕ್ಷತ್ರಿಯರಾದರು.’ ಎಂದು ಷ. ಶೆಟ್ಟರ್ ವಿವರಿಸಿದರು.

ಗೋಷ್ಠಿ ಉದ್ಘಾಟಿಸಬೇಕಿದ್ದ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರು ಅವರ ಅನುಪಸ್ಥಿತಿಯಲ್ಲಿ ಆಶಯ ಭಾಷಣ ಮಾಡಿದ ಕಾಳೇಗೌಡ ನಾಗವಾರ ಉದ್ಘಾಟನೆಯ ಔಪಚಾರಿಕತೆಯನ್ನೂ ನೆರವೇರಿಸಿದರು.

‘ಅರಮನೆಯಲ್ಲಿ ಹುಟ್ಟಿದ್ದ ಸಿದ್ಧಾರ್ಥ ಮನುಕುಲದ ವಿಮೋಚನೆಯ ಉದ್ದೇಶಕ್ಕಾಗಿ ಅರಮನೆ ತೊರೆದು ಬುದ್ಧನಾದ. ಅನೇಕ ಗುರುಮನೆಗಳಿಂದ ಬಂದ ಸಂತರು ತತ್ವಜ್ಞರ ಮಾತು ಸುಳ್ಳಾ ಗಿಸುವಂತೆ ಸಮಾನತೆ ಪ್ರತಿಪಾದಿಸಿದರು.’ ಎಂದು ಕಾಳೇಗೌಡ ಹೇಳಿದರು. ಸಂವಾದಕರಾಗಿ ಜಿನದತ್ತ ದೇಸಾಯಿ, ಪ್ರೊ.ವಸಂತ ಕುಷ್ಟಗಿ, ಪ್ರೊ. ವೀರೇಂದ್ರ ಸಿಂಪಿ ಆಗಮಿಸಿದ್ದರು.

ಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಿದ್ದ ಕನ್ನಡ ರಕ್ಷಣಾ ವೇದಿಕೆಯ ಟಿ.ಎ. ನಾರಾಯಣಗೌಡ, ಚಿತ್ರನಟಿ ಡಾ. ಜಯಮಾಲಾ, ರಂಗಕರ್ಮಿ ಏಣಗಿ ಬಾಳಪ್ಪ, ಜಾನಪದ ತಜ್ಞ ಎಚ್.ಜೆ. ಲಕ್ಕಪ್ಪಗೌಡ ಹಾಗೂ ಸಿದ್ಧನಗೌಡ ಪಾಟೀಲ ಗೈರು ಹಾಜರಾಗಿದ್ದರು.

ಎಲ್ಲೆಲ್ಲೂ ಜನವೋ ಜನ!

ಬೆಳಗಾವಿ: ನೆತ್ತಿ ಸುಡುವ ಬಿಸಿಲು, ಸಂಚಾರ ಒತ್ತಡದ ತೊಂದರೆ ನಡುವೆಯೂ ಬತ್ತದ ಉತ್ಸಾಹದಿಂದ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಜನರು ಒಂದು ಕಾರ್ಯಕ್ರಮ ಸ್ಥಳದಿಂದ ಮತ್ತೊಂದು ಕಾರ್ಯಕ್ರಮದ ಸ್ಥಳಕ್ಕೆ ವಿಶ್ವ ಕನ್ನಡ ಸಮ್ಮೇಳನದಲ್ಲಿ ತಿರುಗುತ್ತಲೇ ಇದ್ದರು.

ಬೆಳಗಾಗುತ್ತಿದ್ದಂತೆಯೇ ಮೇಳ, ಗೋಷ್ಠಿಗಳಿಗೆಂದು ಹೊರ ಬೀಳುತ್ತಿದ್ದ ಜನ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ತಮಗೆ ನೀಡಿದ್ದ ವಾಸ್ತವ್ಯದತ್ತ ತೆರಳುವ ವೇಳೆಗೆ ಮಧ್ಯರಾತ್ರಿಯಾಗಿರುತ್ತಿತ್ತು.

ವಿದ್ಯಾರ್ಥಿಗಳಿಗೆ ಪರೀಕ್ಷೆಯ ಸಿದ್ಧತೆ ಹಾಗೂ ಸುಡು ಬಿಸಿಲು ಇರುವುದರಿಂದ ಸಮ್ಮೇಳನಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಜನ ಬರಲಿಕ್ಕಿಲ್ಲ ಎಂಬ ಕೆಲವರ ಅನಿಸಿಕೆಗಳನ್ನು ಹುಸಿಗೊಳಿಸಿ ರಾಜ್ಯದ ವಿವಿಧೆಡೆಯಿಂದ ತಂಡೋಪತಂಡವಾಗಿ ಸಮ್ಮೇಳನಕ್ಕೆ ಆಗಮಿಸಿದರು. ಎಲ್ಲಿ ನೋಡಿದರಲ್ಲಿ ಜನವೋ ಜನ.

100ಕ್ಕೂ ಹೆಚ್ಚು ವೈವಿಧ್ಯಮಯ ತಳಿಗಳ ಹೂವುಗಳಿದ್ದ ‘ಪುಷ್ಪಮೇಳ’ ಮನಕ್ಕೆ ತಂಪು ನೀಡಿದರೆ, ವಸ್ತು ಪ್ರದರ್ಶನ ಖರೀದಿಗೆ ಉತ್ತೇಜಿಸಿತು. ಪುಸ್ತಕ ಮೇಳದಲ್ಲಿ ಮೆದುಳಿಗೆ ಒಂದಷ್ಟು ಆಹಾರ ನೀಡಿದರೆ, ಕಲಾ, ಶಿಲ್ಪ, ಮರಕೆತ್ತನೆ ಮೇಳದ ಕಲಾಕೃತಿಗಳು ಮನತಣಿಸಿದವು.

ಪುಸ್ತಕ ಮಾರಾಟ ಮಳಿಗೆ ಹಾಗೂ ವಸ್ತು ಪ್ರದರ್ಶನ ಮೂರೂ ದಿನಗಳ ಕಾಲ ಜನರಿಂದ ತುಂಬಿ ತುಳುಕಿದವು.

ಬೆಳಿಗ್ಗೆಯಿಂದ ರಾತ್ರಿಯವರೆಗೂ ಅಲ್ಲಿಗೆ ಜನರು ಭೇಟಿ ನೀಡುತ್ತಲೇ ಇದ್ದರು. ಚೆನ್ನಮ್ಮ ವೃತ್ತ, ಬಿ.ಆರ್. ಅಂಬೇಡ್ಕರ್ ರಸ್ತೆ, ಕಾಲೇಜು ರಸ್ತೆ ಸೇರಿದಂತೆ ನಗರದ ಹಲವು ಕಡೆ ದಟ್ಟಣೆ ಜಾಸ್ತಿ ಯಾಗಿತ್ತು. ಇದರಿಂದ ವಾಹನಗಳೂ ನಿಧಾನವಾಗಿ ಸಂಚರಿಸಬೇಕಾಯಿತು.

ಭರ್ಜರಿ ವ್ಯಾಪಾರ: ವಸತಿಗೃಹಗಳನ್ನು ಮೂರು ದಿನಗಳ ಕಾಲ ಜಿಲ್ಲಾಡಳಿತವೇ ತೆಗೆದು ಕೊಂಡಿದ್ದರಿಂದ ಎಲ್ಲ ಕೊಠಡಿಗಳು ಭರ್ತಿಯಾಗಿದ್ದವು. ಅದರಂತೆ ಹೋಟೆಲ್‌ಗಳಲ್ಲಿಯೂ ಜನರು ಊಟ, ತಿಂಡಿಗೆ ಮುಗಿ ಬಿದ್ದಿದ್ದರು. ಕೆಲವು ಕಡೆ ಮಧ್ಯಾಹ್ನದ ವೇಳೆಗೆ ಊಟ ಖಾಲಿಯಾಗಿ ಬಿಟ್ಟಿತ್ತು.

ಬಿಸಿಲು ಜೋರಾಗಿದ್ದರಿಂದ ತಂಪು ಪಾನೀಯ ಅಂಗಡಿಗಳಿಗೂ ಬೇಡಿಕೆ ಹೆಚ್ಚಾಗಿತ್ತು. ಊಟದ ವ್ಯವಸ್ಥೆ ಮಾಡಲಾಗಿದ್ದ ನಾಗನೂರು ಮಠದ ಸುತ್ತಲೂ ಹೊಸದೊಂದು ಮಾರುಕಟ್ಟೆಯೇ ತಲೆ ಎತ್ತಿತ್ತು. ಮಕ್ಕಳ ಆಟಿಕೆ, ಬಟ್ಟೆ ಸೇರಿದಂತೆ ಹಲವಾರು ವಸ್ತುಗಳನ್ನು ರಸ್ತೆ ಬದಿಯಲ್ಲಿ ಮಾರಾಟ ಮಾಡಲಾಗುತ್ತಿತ್ತು.

ಗಮನ ಸೆಳೆದ ಕ್ರೀಡೆ: ಸಮ್ಮೇಳನದ ಸಂದರ್ಭದಲ್ಲಿ ಏರ್ಪಡಿಸಿದ್ದ ಕುಸ್ತಿ ಕ್ರೀಡೆಯೂ ಗಮನ ಸೆಳೆಯಿತು. ದೇಶ, ವಿದೇಶದ ಕುಸ್ತಿ ಪಟುಗಳು ಮೈದಾನದಲ್ಲಿ ತಮ್ಮ ಪಟ್ಟುಗಳನ್ನು ಪ್ರದರ್ಶಿಸುವ ಮೂಲಕ ಜನರ ಜೈಕಾರ ಗಿಟ್ಟಿಸಿದರು. ಸೈಕ್ಲಿಂಗ್, ಮ್ಯಾರಾಥನ್ ಸ್ಪರ್ಧೆಗಳಲ್ಲಿಯೂ ಕ್ರೀಡಾಪಟು ಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.

‘ವಿವಿಧ ಕಡೆ ಪ್ರದರ್ಶನ, ಕ್ರೀಡೆ, ಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿತ್ತು. ಹೀಗಾಗಿ ಕೆಲವು ಉತ್ತಮ ಕಾರ್ಯಕ್ರಮಗಳನ್ನೂ ನೋಡಲು ಸಾಧ್ಯವಾಗಲಿಲ್ಲ. ಇದನ್ನು ಮುಂದಿನ ಸಮ್ಮೇಳನಗಳಲ್ಲಿ ಗಮನದಲ್ಲಿ ಇಟ್ಟುಕೊಳ್ಳಬೇಕು’ ಎನ್ನುತ್ತಾರೆ ರಾಯಚೂರಿನ ರಾಮಕೃಷ್ಣ ಕೆ.

‘ಬಹಳ ವರ್ಷಗಳ ನಂತರ ವಿಶ್ವ ಕನ್ನಡ ಸಮ್ಮೇಳನ ನಡೆಯುತ್ತಿದೆ. ಇಂತಹ ಸಮ್ಮೇಳಳನದಲ್ಲಿ ಭಾಗಿಯಾಗಿದ್ದೇನೆಲ್ಲ ಎಂಬುದು ನನ್ನ ಸ್ಮೃತಿ ಪಟಲದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ದೊಡ್ಡ ಸಮ್ಮೇಳನದಲ್ಲಿ ಊಟ, ವಸತಿ ವ್ಯವಸ್ಥೆಯಲ್ಲಿ ಏರುಪೇರಾಗುವುದು ಸಹಜ. ಅದಕ್ಕೆ ಮಹತ್ವ ನೀಡಬೇಕಾದ ಅಗತ್ಯವಿಲ್ಲ’ ಎನ್ನುತ್ತಾರೆ ಚಿತ್ರದುರ್ಗದ ಸಿದ್ಧಲಿಂಗ ಪಾಟೀಲ.

ಮೇಲೆ ಬಿಸಿಲು, ಕಣ್ಮುಂದೆ ಹಾಸ್ಯದಹೊನಲು!

ರಾಣಿ ಚೆನ್ನಮ್ಮ ವೇದಿಕೆ (ಬೆಳಗಾವಿ): ವಿಶ್ವ ಕನ್ನಡ ಸಮ್ಮೇಳನದ ಮುಖ್ಯ ಸಮಾರಂಭ ನಡೆದ ಜಿಲ್ಲಾ ಕ್ರೀಡಾಂಗಣಕ್ಕೆ ಕಳೆದ ಮೂರು ದಿನಗಳಿಂದ ಬಿಡುವೇ ದೊರೆಯಲಿಲ್ಲ. ಹಗಲಿನಲ್ಲಿ ಸಭಾ ಕಾರ್ಯಕ್ರಮ, ವಿಚಾರಗೋಷ್ಠಿ, ಜತೆಗೆ ಗಣ್ಯರ ಭೇಟಿ, ನಡುವೆ ವಿವಿಧ ವಿನೋದಾವಳಿ, ರಾತ್ರಿ ಯಾಗುತ್ತಿದ್ದಂತೆ ಸಾಂಸ್ಕೃತಿಕ ವೈಭವ. ವೇದಿಕೆಯಲ್ಲಿ ನಿರಂತರ ಕನ್ನಡ ಚಟುವಟಿಕೆ..

ಭಾನುವಾರ ಬೆಳಿಗ್ಗೆ 10ರ ಸುಮಾರಿಗೆ ’ನಗುನಗುತಾ ಬಂದೇವ’ ಕಾರ್ಯಕ್ರಮ. ನಾಡಿನ ಹೆಸರಾಂತ ಹಾಸ್ಯ ಸಾಹಿತಿಗಳು ನಸು ನಗುತ್ತಲೇ ಬಂದರು. ಬಿಸಿಲು, ಅವ್ಯವಸ್ಥೆಗಳೆಲ್ಲ ಏನೇ ಇದ್ದರೂ, ಅವರು ಕಾಲಿಟ್ಟ ಗಳಿಗೆ ಅಲ್ಲಿನ ಪರಿಸ್ಥಿತಿಯನ್ನೇ ಮರೆಮಾಚಿಸಿತು. ಚೆನ್ನಮ್ಮನ ವೇದಿಕೆಯಲ್ಲಿ ಆ ಹಾಸ್ಯ ಸಾಹಿತಿಗಳನ್ನು ಕಂಡ ಸಭಿಕರು ಪುಳಕಿತರಾದರು.

ಕಾಲ ಕೆಳಗೆ ಸಾಕಷ್ಟು ಕಸ, ಕೆಸರು ಇತ್ತು. ಆಸನಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು, ನೆತ್ತಿಯ ಮೇಲೆ ಸುಡುವ ಬಿಸಿಲಿತ್ತು. ಅದನ್ನೆಲ್ಲ ಲೆಕ್ಕಿಸದ ಸಹಸ್ರಾರು ಕಣ್ಣು, ಕಿವಿಗಳು ಹಾಸ್ಯ ರಸಾಸ್ವಾದ ಮಾಡಿದವು. ಸುಮಾರು ಮೂರು ಗಂಟೆ ಕಾಲ ಅಲ್ಲಿ ಹಾಸ್ಯದ ಹೊನಲು ಹರಿದು ಬಂತು.

ಮಧ್ಯಾಹ್ನವಾಗುತ್ತಿದ್ದಂತೆ ಕ್ರೀಡಾಂಗಣದಲ್ಲಿ ನೆರೆದಿದ್ದ ಸಹಸ್ರಾರು ಜನರ ತಲೆ ಬಿಸಿಲಿನಿಂದ ಸುಡುತ್ತಿತ್ತು. ಬಹುತೇಕರಿಗೆ ಅದರ ಪರಿವೇ ಇರಲಿಲ್ಲ. ಅವರೆಲ್ಲ ಸಂತಸದ ಸ್ವರ್ಗದಲ್ಲಿ ತೇಲಾಡು ತ್ತಿದ್ದರು. ಆಗಾಗ ಹರ್ಷೋದ್ಘಾರ ಮಾಡುತ್ತಿದ್ದರು. ಚಪ್ಪಾಳೆ ತಟ್ಟುತ್ತಿದ್ದರು. ಜತೆಗೆ ಕುಣಿದು ಕುಪ್ಪಳಿಸಿದ್ದೂ ಉಂಟು!

ಬೆಲ್ ಸಮಸ್ಯೆ!: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅ.ರಾ.ಮಿತ್ರ ಸಮಯ ಮುಗಿಯುತ್ತಿದ್ದಂತೆ ಆಗಾಗ ಬೆಲ್ ಬಾರಿಸುತ್ತಿದ್ದರು.

ವಿಶ್ವಕನ್ನಡ ಸಮ್ಮೇಳನ ಯಶಸ್ಸಿಗೆ ಶಹಬ್ಬಾಸ್’

ಬೆಳಗಾವಿ: ‘ವಿಶ್ವ ಕನ್ನಡ ಸಮ್ಮೇಳನ ಅಭೂತಪೂರ್ವ ಯಶಸ್ಸು ಕಂಡಿದೆ. ಇದಕ್ಕೆ ಕಾರಣರಾದ ಎಲ್ಲರಿಗೂ ಶಹಬ್ಬಾಸ್’ ಎಂದು ಭಾನುವಾರ ಇಲ್ಲಿ ಮುಕ್ತ ಕಂಠದಿಂದ ಪ್ರಶಂಸೆ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡ ಆರ್.ವಿ.ದೇಶಪಾಂಡೆ, ‘ಬೆಳಗಾವಿಗೆ ಈ ಮೂಲಕ ಇನ್ನಷ್ಟು ಮೂಲ ಸೌಕರ್ಯಗಳು ದೊರೆಯಲಿ’ ಎಂದು ಆಶಿಸಿದರು.

ಸಮ್ಮೇಳನದ ಮಾಧ್ಯಮ ಕೇಂದ್ರಕ್ಕೆ ಆಗಮಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ದೇಶಪಾಂಡೆ, ‘ಬೆಂಗಳೂರು ಮತ್ತು ಮುಂಬೈ ನಡುವಿನ ಈ ನಗರದ ವಿಮಾನ ನಿಲ್ದಾಣವನ್ನು ಲಿಂಕ್ (ಸಂಪರ್ಕ) ನಿಲ್ದಾಣವಾಗಿ ಮಾರ್ಪಡಿಸಬೇಕು’ ಎಂದು ಆಗ್ರಹಿಸಿದರು.

‘ಬೆಳಗಾವಿ ಸಾಂಬ್ರಾದ ವಿಮಾನ ನಿಲ್ದಾಣದಲ್ಲಿ ಮುಂಬೈ ಮತ್ತು ಬೆಂಗಳೂರು ನಡುವೆ ಸಂಚರಿಸುವ ವಿಮಾನಗಳು ಇಳಿಯುವಂತಾದರೆ, ಕೈಗಾರಿಕೆಗಳ ಪ್ರಗತಿಗೆ ವೇಗ ಬರುತ್ತದೆ. ಈ ನಿಟ್ಟಿನಲ್ಲಿ ನಾನು ಈಚೆಗೆ ಕಿಂಗ್‌ಫಿಶರ್ ಸಂಸ್ಥೆಯ ಮುಖ್ಯಸ್ಥ ವಿಜಯ ಮಲ್ಯ ಅವರೊಂದಿಗೆ ದೆಹಲಿಯಲ್ಲಿ ಚರ್ಚೆ ನಡೆಸಿದ್ದು, ಮಲ್ಯ ಈ ಬಗ್ಗೆ ಒಲವು ತೋರಿದ್ದಾರೆ’ ಎಂದು ಹೇಳಿದರು.

‘ಹೊರನಾಡ ಕನ್ನಡಿಗರು ಇಲ್ಲಿನ ಕನ್ನಡಿಗರ ನಡುವೆ ಸಂಪರ್ಕ ಹೆಚ್ಚಲು ಪೂರಕವಾಗಿ ಅಂತರರಾಷ್ಟ್ರೀಯ ಮಟ್ಟದ ಅಂತರ್ಜಾಲ ನಿಯತಕಾಲಿಕವೊಂದು ರೂಪುಗೊಳ್ಳುವಂತಾಗಲಿ’ ಎಂದು ಅವರು ನುಡಿದರು.

ಸಂತಸ: ‘ಸಮ್ಮೇಳನ ಅಭೂತಪೂರ್ವ’ ಎಂದು ಅಮೆರಿಕ ಕನ್ನಡ ಕೂಟಗಳ ಅಧ್ಯಕ್ಷ ಅಮರನಾಥಗೌಡ ಮತ್ತು ‘ಅಕ್ಕ’ ಸಮ್ಮೇಳನ ಸಮಿತಿ ಅಧ್ಯಕ್ಷ ದಯಾಂಶಕರ ಅಡಪ ಮಾಧ್ಯಮ ಪ್ರತಿನಿಧಿಗಳ ಮುಂದೆ ಕೊಂಡಾಡಿದರು. ‘ಕಡಿಮೆ ಅವಧಿಯಲ್ಲಿ ಅದ್ಧೂರಿಯಾಗಿ ಮತ್ತು ಯಶಸ್ವಿಯಾಗಿ ನಡೆದ ಸಮ್ಮೇಳನ ಇದು. ಅನಿವಾಸಿ ಕನ್ನಡಿಗರಿಗೆ ಕಲ್ಪಿಸಿದ ವ್ಯವಸ್ಥೆಗಳೆಲ್ಲ ಅಚ್ಚುಕಟ್ಟಾಗಿದ್ದವು’ ಎಂದು ಹೇಳಿದರು.

ಮುಗಿದ ಮೇಳ- ಮಾಸದ ನೆನಪು

ಬೆಳಗಾವಿ: ವಿಶ್ವ ಕನ್ನಡ ಸಮ್ಮೇಳನ ಕುಂದಾನಗರಿಯಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಭಾನುವಾರ ಈ ಸಮಾವೇಶಕ್ಕೆ ಅದ್ದೂರಿಯ ತೆರೆ ಬಿತ್ತು. ಮೇಳ ಮುಗಿದರೂ ಮಾಸದ ನೆನಪುಗಳು ಮಾತ್ರ ಅಚ್ಚಳಿಯದೆ ಉಳಿಯಲಿವೆ.

ಸಮ್ಮೇಳನದ ಯಶಸ್ಸಿನಿಂದ ಬೀಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇನ್ನು ಮುಂದೆ ಪ್ರತಿ ಐದು ವರ್ಷಗಳಿಗೊಮ್ಮೆ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸುವುದಾಗಿ ಘೋಷಿಸಿದ್ದಾರೆ. ಸಮ್ಮೇಳನದ ಯಶಸ್ಸಿನ ಬಳಿಕ ಇನ್ನು ಅದರ ಪುನರವಲೋಕನ ನಡೆಯಲಿದೆ.

ಮೂರು ದಿನಗಳ ಕಾಲ ಹಗಲು-ರಾತ್ರಿ ಮುಂದುವರಿದ ವಿಶ್ವ ಕನ್ನಡ ಸಮ್ಮೇಳನ ಗಡಿನಾಡಿನಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದೆ. ಉದ್ಘಾಟನಾ ಕಾರ್ಯಕ್ರಮದಿಂದ ಹಿಡಿದು ಸಮಾರೋಪದ ವರೆಗೆ ಕನ್ನಡಿಗರಿಗೆ ಹಿಡಿಸಿದೆ. ದೃಶ್ಯ, ಕಾವ್ಯ, ನಾಟ್ಯ-ನೃತ್ಯ, ನಾದ ವೈಭವ ಮೆರೆದಿದೆ. ಚಿಂತನಾ ಗೋಷ್ಠಿಗಳ ಸರಮಾಲೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಭರಪೂರ ದಾಸೋಹ ಜನತೆಗೆ ದಕ್ಕಿದೆ. ಇದರ ಜೊತೆಗೆ ಮೂರೂ ದಿನಗಳ ಕಾಲ ಅನ್ನ ದಾಸೋಹ ಬಿಡುವಿಲ್ಲದೆ ಸಾಗಿದೆ. ಸಮ್ಮೇಳನದ ಯಶಸ್ಸಿಗಾಗಿ ಹಗಲಿರುಳು ದುಡಿದ ಸಂಘಟಕರ ಶ್ರಮ ಸಾರ್ಥಕವಾಗಿದೆ.

ಸಮ್ಮೇಳನದ ಪ್ರಾರಂಭದಲ್ಲಿ ನಡೆದ ಮೆರವಣಿಗೆ ಗಡಿನಾಡಿನಲ್ಲಿ ಅಭೂತಪೂರ್ವ ಯಶಸ್ಸು ಕಂಡಿತು. ಮರಾಠಿಗರ ಸಹಕಾರವೂ ಸಮ್ಮೇಳನಕ್ಕೆ ಸಿಕ್ಕಿತು. ಇಲ್ಲಿನ ಖಡೇ ಬಜಾರ್, ಮಾರುತಿಗಲ್ಲಿಯಂತಹ ಮರಾಠಿ ಪ್ರಭಾವ ಇರುವ ಪ್ರದೇಶಗಳಲ್ಲೂ ಕನ್ನಡದ ಧ್ವಜಗಳು ರಾರಾಜಿಸಿದವು. ಅಂಗಡಿಗಳು ದೀಪಾಲಂಕಾರದಿಂದ ಕಂಗೊಳಿಸಿದವು. ಜನರೂ ಪ್ರವಾಹದಂತೆ ಹರಿದು ಬಂದರು. ಎಲ್ಲಿ ನೋಡಿದರೂ ರಸ್ತೆಗಳಲ್ಲೆಲ್ಲ ಜನರು ಓಡೋಡಿ ಬರುತ್ತಿದ್ದ ದೃಶ್ಯ. ರಾತ್ರಿಯೆಲ್ಲ ಜನ ಕಾರ್ಯಕ್ರಮಗಳನ್ನು ಸವಿದರು. ವಸ್ತುಪ್ರದರ್ಶನ, ಕಲಾ ಪ್ರದರ್ಶನ ಹಾಗೂ ಪುಸ್ತಕ ಪ್ರದರ್ಶನದ ತಾಣಗಳಲ್ಲಿ ಕಿಕ್ಕಿರಿದು ಸೇರಿದ್ದರು. ಸಣ್ಣಪುಟ್ಟ ಕಿರಿಕಿರಿಗಳನ್ನು ಜನ ಸಹಿಸಿಕೊಂಡರು. ಪೊಲೀಸ್ ಹಾಗೂ ಇತರ ಸಿಬ್ಬಂದಿ ವರ್ಗದವರಿಗೂ ‘ಊಟದ ವ್ಯವಸ್ಥೆ ಸರಿಯಾಗಿ ನಡೆದಿದೆ’ ಎಂದು ಅವರೇ ಒಪ್ಪಿಕೊಂಡರು.

ದೂರದ ಊರುಗಳಿಂದ ಬಂದ ಗಣ್ಯರು ಮತ್ತು ಅತಿಥಿಗಳು ಮಾತ್ರ ಸ್ವಲ್ಪ ತೊಂದರೆ ಅನುಭವಿಸಿದರು. ಸಮ್ಮೇಳನ ನಗರಿಯ ಸುತ್ತಮುತ್ತ ವಾಹನ ಸಂಚಾರ ಸ್ತಬ್ಧಗೊಂಡ ಪರಿಣಾಮ ಸಮಾವೇಶಕ್ಕೆ ಬಂದ ಜನರು ಹೊರ ಹೋಗಲು ಪರದಾಡುವಂತಾಯಿತು.

ರಾಜ್ಯ ಮತ್ತು ವಿದೇಶಗಳ ನೂರಾರು ಕಲಾವಿದರ ವಿದ್ವತ್ತನ್ನು ಒರೆಗೆ ಹಚ್ಚಲು ವಿಶ್ವ ಕನ್ನಡ ಸಮ್ಮೇಳನ ವೇದಿಕೆ ಆಯಿತು. ಶನಿವಾರ ರಾತ್ರಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ತಂಡದವರು ನಡೆಸಿಕೊಟ್ಟ ಸಂಗೀತ ಸೌರಭ ಕಾರ್ಯಕ್ರಮದ ಕೊನೆಯಲ್ಲಿ ಮುಖ್ಯಮಂತ್ರಿ ಆದಿಯಾಗಿ ಸಚಿವರು, ಶಾಸಕರೂ ವೇದಿಕೆಯಲ್ಲಿ ಹೆಜ್ಜೆ ಹಾಕಿ ಕುಣಿದರು. ದಿನದ ‘ಹೈಲೈಟ್’ ಆಗಿ ಈ ರಸಗಳಿಗೆ ದಾಖಲಾಯಿತು.

ರಂಗಭೂಮಿಯ ವೈಭವವನ್ನು ಜನತೆ ನೋಡುವಂತಾಗಿದ್ದು ಸಮ್ಮೇಳನದ ವಿಶೇಷ. ಮೂರೂ ದಿನ ‘ಚಿಂದೋಡಿ ಲೀಲಾ ರಂಗಮಂದಿರ’ದಲ್ಲಿ ನಡೆದ ನಾಟಕಗಳು ವೃತ್ತಿ ರಂಗಭೂಮಿಯ ವೈಭವವನ್ನು ಮೆಲುಕು ಹಾಕುವಂತೆ ಮಾಡಿದವು. ಜಾನಪದ ಕಲಾಪ್ರಕಾರಗಳೂ ಕೂಡ ಜನಮನ ಸೂರೆಗೊಂಡವು.

ಭಾನುವಾರವೂ ಅದೇ ರಂಗು ವೈಭವ. ಬೆಳಿಗ್ಗೆ ನಡೆದ ಹಾಸ್ಯಗೋಷ್ಠಿಗೆ ಕ್ರೀಡಾಂಗಣದ ತುಂಬೆಲ್ಲ ಜನ ಸೇರಿದ್ದರು. ನಕ್ಕು ನಲಿದರು. ಗೋಷ್ಠಿಗಳಿಗೂ ಜನರ ಸ್ಪಂದನೆ ಉತ್ತಮವಾಗಿತ್ತು. ಸಮಾ ರೋಪ ಸಮಾರಂಭದ ಜತೆಜತೆಗೆ ನಡೆದ ಕಾವ್ಯ ಗಾಯನ ಮತ್ತು ನಂತರ ನಡೆದ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬೆಳಗಾವಿಯ ಜನಮಾನಸದಲ್ಲಿ ಸಮ್ಮೇಳನ ಅಚ್ಚಳಿಯದ ನೆನಪು ಮೂಡಿಸಿತು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2011-03-14

Tell a Friend
ಇತರ ಸಂಭಂದಪಟ್ಟ ವರದಿಗಳು
»ವಿಶ್ವ ಕನ್ನಡ ಸಮ್ಮೇಳನ 2011: ವಿಶ್ವಭಾರತಿಗೆ ಕನ್ನಡದಾರತಿ ಮಯೂರಿಗಳ ನರ್ತನ | ಏಕತೆ ಸಾರಿದ ಬಹುಭಾಷಾ ಕವಿಗೋಷ್ಠಿ
»ಬೆಳಗಾವಿ : ವಿಶ್ವ ಕನ್ನಡ ಸಮ್ಮೇಳನ-2011 : ‘ಹಣದ ಹಿಂದೆ ಓಡಬೇಡಿ, ಕೆಲಸವನ್ನು ಪ್ರೀತಿಸಿ’ | ನಾನು ಯಾವಾಗಲೂ ಕನ್ನಡಿಗನೇ (updated)
»ಗಡಿಯಲ್ಲಿ ವಿಶ್ವ ಕನ್ನಡ ಸಮ್ಮೇಳನದ ಡಿಂಡಿಮ : ಬೆಳಗಾವಿಯಲ್ಲಿ 2ನೇ ವಿಶ್ವ ಕನ್ನಡ ಹಬ್ಬಕ್ಕೆ ಸಕಲ ಸಿದ್ಧತೆ : ಇ೦ದು ಉದ್ಘಾಟನೆ
»

ಪ್ರತಿಸ್ಪಂದನ
ಗಲ್ಫ್ ಕನ್ನಡಿಗ ಅಭಿಮಾನಿ, ಕರ್ನಾಟಕ
2011-03-14
ಸುಮಧುರ ಕನ್ನಡ ಭಾಷೆಯನ್ನು ಬಲ್ಲವ, ಐತಿಹಾಸಿಕ ವಿಶ್ವ ಕನ್ನಡ ಸಮ್ಮೇಳನದ ವಿವರವಾದ ಸುದ್ದಿಯನ್ನು ಓದುವಾಗ ಪಂಚಾಮೃತ ಸವಿದಂತೆ ಆಗುತ್ತದೆ. ಗಲ್ಫ್ ಕನ್ನಡಿಗದ ಕನ್ನಡ ಭಾಷಾ ಸೇವೆಗೆ ಕೋಟಿ ಕೋಟಿ ಅಭಿನಂದನೆಗಳು.

ಕನ್ನಡಿಗರಿಗೆ ನಿರಂಂತರವಾಗಿ ಕನ್ನಡ ಭಾಷೆಯಲ್ಲೇ ವಿಶ್ವಕ್ಕೆ ಸುದ್ದಿಯನ್ನು ಮುಟ್ಟಿಸುವ ಗಲ್ಫ್ ಕನ್ನಡಿಗ ಇನ್ನಷ್ಟು ಸರ್ವಾಂಗ ಸುಂದರವಾಗಿ, ಬಲಿಷ್ಟವಾಗಿ ಸೇವೆ ಮಾಡುವಂತಾಗಲಿ. ಪ್ರತಿಯೊಬ್ಬ ಕನ್ನಡಿಗನ ಕನ್ನಡ ಅಭಿಮಾನ ಜಾಗೃತವಾಗಲಿ. ಸಮ್ಮೇಳನ ನಡೆಸಿದ ಪ್ರಯತ್ನಕ್ಕೆ ಸಾರ್ಥಕತೆ ದೊರೆಯಲಿ..."ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ"

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸಾಹಿತ್ಯ-ಸಂಸ್ಕೃತಿ]

»ಕನ್ನಡಕ್ಕೆ ಎಂದೂ ಸಾವಿಲ್ಲ: ಡಾ.ಹನುಮಂತಯ್ಯ ಅಭಿಮತ
» ಸಮಸ್ಯೆಯ ಗಂಟುಗಳು...
»ಗಂಗಾವತಿ: ಬಸ್ ನಿಲ್ದಾಣ ಗಳಲ್ಲಿ ಗೌರವಾರ್ಥವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಅನಾವರಣ
»ಪಳಕಳ ಸೀತಾರಾಮ ಭಟ್ಟರಿಗೆ ಬಾಲ ಸಾಹಿತ್ಯ ಪುರಸ್ಕಾರ
»ಕನ್ನಡ ಸಾಹಿತ್ಯಕ್ಕೆ ಶರಣರ ಕೊಡುಗೆ ಅಪಾರ: ಸಿದ್ದಣ್ಣ ಲಂಗೋಟಿ
»ಜಗದ, ಯುಗದ ಮಹಾಕವಿ ಕುವೆಂಪು: ದೇಜಗೌ
»ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ವತಿಯಿಂದ ಕೂಗಿದರೂ”ದ್ವನಿ ಕೇಳಲಿಲ್ಲವೇ’ ನೃತ್ಯ ರೂಪಕ ಪ್ರದರ್ಶನ
»ನಿಘಂಟು ಬ್ರಹ್ಮ ಪ್ರೊ. ಜೀವಿಗೆ ಶತಕದ ಸಂಭ್ರಮ | ಸಂತನಂತೆ ಬದುಕು ಎಂಬ ತಂದೆ ಮಾತಿನಂತೆ ಸರಳ ಮಾರ್ಗದಲ್ಲೇ ಬದುಕಿದ್ದೇನೆ: ಪ್ರೊ. ಜಿ. ವೆಂಕಟಸುಬ್ಬಯ್ಯ
»ಕಾವ್ಯದಲ್ಲಿ ಬದುಕಿನ ಸಂವೇದನೆಯಿರಲಿ: ಸಿಪಿಕೆ
»ಬಾಬು ಕುಡ್ತಡ್ಕರಿಗೆ ಶೇಣಿ ಪ್ರಶಸ್ತಿ ಪ್ರದಾನ: ಯಕ್ಷಗಾನ ಶೈಕ್ಷಣಿಕ ಅಧ್ಯಯನ ಪಠ್ಯವಾಗಲಿ: ಡಾ| ಆಳ್ವ
»ಓರೆನೋಟ...
»ಮಾಲಿನಿ ಭಟ್ ಅವರ ಕವನ : ಅಪ್ಪಾ ನಿನ್ನ ಬರುವಿಕೆಯಲ್ಲಿ ಮತ್ತು ಅಮ್ಮ
»ಅಮೀನಗಡದ ’ರಾಗ ಕಲಾ ವೈಭವ ಸಾಂಸ್ಕೃತಿಕ ಪ್ರತಿಷ್ಠಾನ’ ದಿಂದ ಕವನಗಳಿಗೆ ಆಹ್ವಾನ
»ಸಂಸ್ಕೃತಿ, ಸಾಹಿತ್ಯ ಬೆಳಗಿಸಿದ ಮಹಾನುಭಾವರ ಸ್ಮರಣೆ ಆದ್ಯ ಕರ್ತವ್ಯ: ಹಾಲಂಬಿ
»ನೀ ಜೊತೆಯಿರಲು-ಅನಿತಾ ನರೇಶ್ ಮಂಚಿಯವರ ಕವನ
»ವಿದೇಶದಲ್ಲಿ ಸಂಸ್ಕೃತಿ ಬಿತ್ತನೆ
»ಮಣಿಪಾಲದ ವಿದ್ಯಾರ್ಥಿಗೆ ರಾ.ಚಿತ್ರಕಲಾ ಪ್ರಶಸ್ತಿ
»ಡಾ.ಪುಣಿಂಚಿತ್ತಾಯರಿಗೆ ಮರಣೋತ್ತರ ‘ತುಳು ಸಾಹಿತ್ಯ ರತ್ನ ಪ್ರಶಸ್ತಿ’
»ಒಂದಿಷ್ಟು ಹನಿಗಳು... - ಗುರುನಾಥ ಬೋರಗಿ, ಬೆಂಗಳೂರು
»ನನ ಕಂದಾ ನೀ ನನ್ನ ಉಸಿರು... -ಸವಿತಾ ಇನಾಮದಾರ
»ಅಮ್ಮನ ಕೆನ್ನೆಯಲ್ಲಿ ರಮಝಾನ್ ದಿನಗಳು : ಬಿ.ಎಂ.ಬಶೀರ್,ಮಂಗಳೂರು
»ಕೇಳ ಬಾರದಿತ್ತೆ ಈ ಪ್ರಶ್ನೆ…-ಸುನೀತ ಮಂಜುನಾಥ್, ಮೈಸೂರು
»ದಿನೇಶ್ ಕುಕ್ಕುಜಡ್ಕ "ಪಂಚ್"
»ಮುಕ್ಕಾಲು ಪಟ್ಟಣದೊಳಗೆ ಕಾಲು ಗದ್ದೆಗೆ ಬೇಕು : -ಈಶ್ವರ ಕಿರಣ ಭಟ್,ಕಾಸರಗೋಡು
»ಬ್ರಹ್ಮಾಂಡವೆಲ್ಲಾ ಅಲೆದ ಮನಕ್ಕೆ ಒಂದು ಹನಿ ಅಮೃತ: ಪ್ರವೀಣ್ ಕುಲಕರ್ಣಿ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri