ಶನಿವಾರ, 14-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಬಹುಜನ ಹಿತಾಯ ಬಹುಜನ ಸುಖಾಯ : ಹೋರಾಟ ನಿಮ್ಮದು ಬೆಂಬಲ ನಮ್ಮದು

{ಮಾನವ ಹಕ್ಕುಗಳ ರಕ್ಷಣೆಯ ಹರಿಕಾರ ಡಾ| ರವೀಂದ್ರನಾಥ್ ಶ್ಯಾನುಭಾಗ್ ರೊಡನೆ ಶ್ರೀಮತಿ ಗೋಪಿಕ ಮಯ್ಯರ   ಸಂದರ್ಶನ }

'ಇನ್ನುಮುಂದೆ' ಎನ್ನುವ ಶಬ್ದ ಮುಂದಿನ ಜೀವನದ ಗತಿಯನ್ನೇ ಬದಲಿಸಿದಾಗ .........

1974, ನವೆಂಬರ್ 14, ಆಗತಾನೇ ಪದವೀಧರನಾಗಿ ಹೊರಹೊಮ್ಮಿದ ನವತರುಣ, ಕೈಯಲ್ಲಿ ಥೈಲಾಂಡಿನ ನೌಕರಿಯ ನಿಯುಕ್ತಿ ಪತ್ರ ಹಾಗೂ ವೀಸಾ, ಕಣ್ಣಲ್ಲಿ ಮುಂದಿನ ಜೀವನದ ಸುಂದರ ಕನಸಿನ ಚಿತ್ತಾರ ತುಂಬಿಕೊಂಡು ಉಡುಪಿಯ ಡಯಾನಾ ರೆಸ್ಟಾ ರೇಂಟಿನಲ್ಲಿ ಗೆಳೆಯರ ವಿದಾಯ ಕೂಟದಲ್ಲಿ ಪಾಲ್ಗೊಳ್ಳುತ್ತಿದ್ದ. ಅಷ್ಟರಲ್ಲಿ ರೆಸ್ಟಾರೇಂಟಿನ ಹೊರಗೆ ಒಂದು ಜೀಪ್ ಬಂದು ನಿಂತಿತು. ಅದರಿಂದ ಒಬ್ಬ ಪೋಲಿಸ್ ಪೇದೆ ಒಳಗೆ ಬಂದು ತರುಣನಲ್ಲಿ 'ಡಿಸ್ಟ್ರಿಕ್ಟ್ ಕಲೆಕ್ಟರ್' ಮತ್ತು ’ಪೋಲಿಸ್ ಸುಪರಿಟೆಂಡೆಂಟ್”   ಕರೆಯುತ್ತಿದ್ದಾರೆ ಮಂಗಳೂರಿಗೆ ಹೊರಡು ಎಂದು ಜೀಪಿನಲ್ಲಿ ಕರೆದೊಯ್ದರು.

ಅಲ್ಲಿ ಈ ತರುಣನಂತೆ ಇನ್ನೂ ಹಲವರನ್ನು ಕರೆ ತರಲಾಗಿತ್ತು. ಎಲ್ಲರಲ್ಲೂ ಜಯಪ್ರಕಾಶ್ ನಾರಯಣ್ ಯಾರು ಗೊತ್ತೆ? ಅವರ ಚಳುವಳಿಯಲ್ಲಿ ಉಡುಪಿಯಿಂದ ಯಾರ್‍ಯಾರೆಲ್ಲ ಭಾಗವಹಿಸುತ್ತಿದ್ದಾರೆ? ಎಂದೆಲ್ಲಾ ವಿಚಾರಿಸಲಾಯಿತು. ಉಡುಪಿಯ ತರುಣ ತನಗೇನೂ ತಿಳಿಯದೆಂದೂ, ಚಳವಳಿಯ ಅರಿವೇ ಇಲ್ಲವೆಂದೂ, ತಾನು ಅಮಾಯಕನೆಂದು ತಿಳಿಸಿದ. ಸರಿ ಎಂದು ಒಪ್ಪಿಕೊಂಡಂತೆ ನಟಿಸಿ ಪೋಲಿಸಿನವರು ಒಂದು ಪತ್ರಕ್ಕೆ ಸಹಿ ಹಾಕಿ ಹೋಗಲು ಹೇಳಿದರು. ಉಳಿದ ಯುವಕರೆಲ್ಲಾ ಥರ ಥರ ನಡುಗುತ್ತಾ ಬದುಕಿದೆಯಾ ಬಡಜೀವವೆ ಎಂದುಕೊಳ್ಳುತ್ತಾ ಸಹಿ ಹಾಕಿ ಓಡಿಹೋದರು. ಆದರೆ ಈ ತರುಣ ಮಾತ್ರ ಆ ಪತ್ರವನ್ನು ಆಮೂಲಾಗ್ರ ಓದಲು ಪ್ರಾರಂಭಿಸಿದ. ಅದರಲ್ಲಿ ಹೀಗೆ ಬರೆದಿತ್ತು... ಇನ್ನು ಮುಂದೆ ನಾನು ಯಾವುದೇ ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಪ್ರಮಾಣ ಮಾಡುತ್ತೇನೆ.  

ತರುಣ ಗಲಿಬಿಲಿಗೊಂಡು ಹೇಳಿದ, ಈ ಇನ್ನುಮುಂದೆ ಎನ್ನುವ ಶಬ್ದ ಪ್ರಯೋಗ ಸರಿಯಲ್ಲ. ಯಾಕೆಂದರೆ ನಾನು ಈವರೆಗೂ ಯಾವುದೇ ರಾಷ್ಟ್ರ ವಿರೋಧಿ ಚಟುವಟಿಕೆ ಗಳಲ್ಲಿ ಭಾಗವಹಿಸಲೇ ಇಲ್ಲವಾದ್ದರಿಂದ ಇನ್ನುಮುಂದೆ ಎಂದು ಪ್ರಮಾಣ ಮಾಡುವ ಅಗತ್ಯವೇ ಇಲ್ಲ ಎಂದು ವಾದಿಸಿದ. ಕೂಡಲೇ ಎಸ್ಪಿ ಸಾಹೇಬರು ಗೆಸ್ಟ್ ಹೌಸಿಗೆ ರವಾನಿಸಲು ಆಣತಿಯಿತ್ತರು. ಇದನ್ನು ನಿಜವೆಂದು ನಂಬಿದ ತರುಣ ಪೋಲಿಸ್ ಪೇದೆಯೊಂದಿಗೆ ಹೊರನಡೆದ. ಜೀಪಿನಿಂದ ಇಳಿದು ನೋಡಿದಾಗ ಆ ಗೆಸ್ಟ್ ಹೌಸ್ ಮಂಗಳೂರು ಸಬ್ ಜೈಲಾಗಿತ್ತು. ಏನೂ ತಪ್ಪಿಲ್ಲದ ತಪ್ಪಿಗೆ ತರುಣನಿಗೆ ಮೂರು ತಿಂಗಳ ಜೈಲು ವಾಸವಾಯಿತು. ಥೈಲಾಂಡಿನ ಕನಸು ಭಗ್ನವಾಯಿತು. ಆದರೆ ಇನ್ನುಮುಂದೆ ಎನ್ನುವ ಶಬ್ದ ಚರಿತೆ ಬರೆಯಿತು. ಕರ್ನಾಟಕದ ಮಾನವ ಹಕ್ಕಿನ ರಕ್ಷಣೆಯ ಇತಿಹಾಸದಲ್ಲಿ ಕಂಡು ಕೇಳರಿಯದ ಘಟನೆಗಳಿಗೆ ಸಾಕ್ಷಿಯಾಯಿತು.

ಮಾನವ ಹಕ್ಕುಗಳ ರಕ್ಷಣೆಯ ಹರಿಕಾರ ಡಾ| ರವೀಂದ್ರನಾಥ್ ಶ್ಯಾನುಭಾಗ್:
ಶ್ರೀ ರವೀಂದ್ರನಾಥ್ ಶ್ಯಾನುಭಾಗ್ 1979 ರಲ್ಲಿ ಮಾನವ ಹಕ್ಕುಗಳ ಸಂರಕ್ಷಣೆ ಗಾಗಿ ಬಳಕೆದಾರರ ವೇದಿಕೆಯನ್ನು ಉಡುಪಿ, ಮಂಗಳೂರು ಮತ್ತು ಬಸ್ರೂರಿ ನಲ್ಲಿ ಸ್ಥಾಪಿಸಿ ತನ್ಮೂಲಕ ತನ್ನ ಜೀವನವನ್ನೇ ಬಹುಜನರ ಹಿತಕ್ಕಾಗಿ ಸುಖಕ್ಕಾಗಿ ಮುಡಿಪಾಗಿಟ್ಟರು.

ವ್ಯಾಪಾರಸ್ಥರ ಮನೆತನದಿಂದ ಬಂದ ಶ್ರೀಯುತರು ವೃತ್ತಿಯಿಂದ ಕೆ ಎಮ್ ಸಿ ಯಲ್ಲಿ ಫಾರ್ಮಕಾಲಜಿಯ ಮುಖ್ಯಸ್ಥರು ಪ್ರವೃತ್ತಿಯಿಂದ ಮಾನವ ಹಕ್ಕುಗಳ ರಕ್ಷಕರು. ಮನಸ್ಸು ಮಾಡಿದ್ದರೆ ಇಂದು ವ್ಯಾಪಾರ ಕ್ಷೇತ್ರದಲ್ಲೋ ಔಷಧ ಕ್ಷೇತ್ರದಲ್ಲೊ ಸಾಧನೆಗೈಯ ಬಹು ದಿತ್ತು. ಆದರೆ ಅವರು ಆರಿಸಿಕೊಂಡದ್ದು ಇನ್ನೊಬ್ಬರ ಕಣ್ಣೀರೊರೆಸುವ ಕಾಯಕವನ್ನು. ಯೂನಿವರ್ಸಿಟಿ ಸ್ತರದ ಕ್ರಿಕೆಟ್ ಆಟಗಾರನಾಗಿದ್ದು, ಉತ್ತಮ ಸಿತಾರ್ ವಾದಕರಾಗಿದ್ದ ಶ್ಯಾನುಭಾಗರು ತಮ್ಮ ಸ್ವಂತ ಆಸಕ್ತಿಗಳನ್ನೆಲ್ಲಾ ಬದಿಗಿರಿಸಿ ’ಪರೋಪಕಾರಾರ್ಥಮ್ ಇದಂ ಶರೀರಂ’ ಎಂದು ಗಂಧದಂತೆ ತಮ್ಮ ಜೀವನವನ್ನು ತೇಯ್ದರು. ಕಳೆದ 29 ವರ್ಷಗಳಲ್ಲಿ 29,000 ಸಮಸ್ಯೆಗಳಿಗೆ ಪರಿಹಾರ ಒದಗಿಸಿದ ರವೀಂದ್ರನಾಥ್ ಶ್ಯಾನು ಭಾಗರು ಇಂದು ಕರ್ನಾಟಕವಲ್ಲದೆ ಕೊಲ್ಲಿರಾಷ್ಟ್ರಗಳಲ್ಲೂ ಇನ್ನಿತರ ದೇಶಗಳಲ್ಲೂ ನೊಂದ ಕನ್ನಡಿಗರಿಗೆ ಸಾಂತ್ವನದ ಸೆಲೆಯಾಗಿದ್ದಾರೆ ಎಂದರೆ ಅದು ಉತ್ಪ್ರೇಕ್ಷೆಯಲ್ಲ.

ದೇವರ ಪೂಜೆ ಮಾಡಿದರೆ ಅದಕ್ಕೆ ಸನ್ಮಾನ ಬೇಕೆ? ಇದು ನನ್ನ ಆರಾಧನೆಯ ರೀತಿ ಅದಕ್ಕೆ ನನಗೆ ಪ್ರಶಸ್ತಿ ಬೇಕಾಗಿಲ್ಲ ಎನ್ನುತ್ತರೆ ಶ್ಯಾನುಭಾಗರು. ಮಹಾತ್ಮ ಗಾಂಧಿಯ ತತ್ವಗಳನ್ನು ಬಹುಮಟ್ಟಿಗೆ ಅಳವಡಿಸಿಕೊಂಡು ದೀನರಿಗೆ ಬಂಧುವಾಗಿ, ಠಕ್ಕರಿಗೆ, ವಂಚಕರಿಗೆ, ಕಪಟಿಗಳಿಗೆ ನರಸಿಂಹನಂತಿರುವ, ಸರಳ ಸಜ್ಜನ ಶ್ಯಾನುಭಾಗರನ್ನು ಸಂದರ್ಶಿಸುವ ಸುಯೋಗ ನನ್ನ ಪಾಲಿಗೆ, ಸಂದರ್ಶನದ ಆಯ್ದ ಭಾಗ ನಿಮ್ಮ ಅವಗಾಹನೆಗೆ:

ನಿಮ್ಮ ಹೋರಾಟದ ಜೀವನ ಎಲ್ಲಿಂದ ಪ್ರಾರಂಭವಾಯಿತು?

1974 ರಲ್ಲಿ ಜೈಲುವಾಸವಾದಾಗ ಮನೋರಂಜನೆಗಾಗಿ ಸಹಖೈದಿಗಳ ಸಂದರ್ಶನ ವನ್ನು ತೆಗೆದುಕೊಳ್ಳುತ್ತಿದ್ದೆ. ಕೆಲವರು ಕೊಲೆ ಸುಲಿಗೆ ಮಾಡಿ ಜೈಲು ಸೇರಿದ್ದರೆ ಕೆಲವು ಅಮಾಯಕರೂ ಇದ್ದರು. ಅವರ ಕರುಣ ಕತೆ ಕೇಳಿ ಜೈಲಿನಲ್ಲಿ ಇವರ ದಾರುಣ ಅವಸ್ಥೆಯನ್ನು ನೋಡಿ ಜೈಲಿನಿಂದ ಹೊರಗೆ ಬಂದ ಕೂಡಲೆ ಇವೆಲ್ಲದಕ್ಕೂ ಪರಿಹಾರ ಹುಡುಕಬೇಕೆಂದು ಪಣ ತೊಟ್ಟೆ. ಆದರೆ ನನಗಿರುವ ಅಲ್ಪ ಜ್ಞಾನದಿಂದ ಏನೂ ಸಾಧಿಸಲು ಅಶಕ್ಯವೆನಿಸಿ ಮೊದಲಿಗೆ M.Pharm ಮತ್ತು Ph.D  ಡಾಕ್ಟರೇಟ್ ಪಡೆದು, LLB ಓದಿ ಭಾರತದ ಸಂವಿಧಾನವನ್ನು ಕೂಲಂಕಷವಾಗಿ ಅಭ್ಯಸಿಸಿ ಪ್ರತಿಯೊಬ್ಬ ನಾಗರಿಕನ ಹಕ್ಕು ಬಾಧ್ಯತೆಗಳನ್ನು ತಿಳಿದುಕೊಂಡೆ. ಮುಂದೆ ಬಳಕೆದಾರರ ವೇದಿಕೆಯನ್ನು ಉಡುಪಿ ಯಲ್ಲಿ ಮೊದಲಿಗೆ 1979 ರಲ್ಲಿ ಸ್ಥಾಪಿಸಿದೆವು. ಮಂಗಳೂರಿನಲ್ಲಿ ಸ್ವತಂತ್ರ ಅಂಗ ಸಂಸ್ಥೆ ಯನ್ನು ಸ್ಥಾಪಿಸಿ ದಕ್ಷಿಣ ಕನ್ನಡ ಜಿಲ್ಲೆಯ ಮಾನವ ಹಕ್ಕುಗಳ ಸಮಸ್ಯೆಗಳನ್ನೂ, ಬಸ್ರೂರಿ ನಲ್ಲಿರುವ ಇನ್ನೊಂದು ಅಂಗ ಸಂಸ್ಥೆಯ ಮೂಲಕ ಕರ್ನಾಟಕದಾದ್ಯಂತ ಮತ್ತು ದೇಶ ವಿದೇಶಗಳಲ್ಲಿರುವ ಕನ್ನಡಿಗರ ಸಮಸ್ಯೆಗಳನ್ನು ಒಂದು ರೂಪಾಯಿಯನ್ನೂ ತೆಗದುಕೊಳ್ಳದೆ ಪರಿಹರಿಸಿ ಸೇವೆ ಸಲ್ಲಿಸುತ್ತಿದ್ದೇವೆ.

ಅಧ್ಯಾಪಕ ವೃತ್ತಿಗೂ ಮಾನವ ಹಕ್ಕುಗಳ ಸಂರಕ್ಷಣೆಗೂ ಎತ್ತಣ ಸಂಬಂಧ?

ಒಳ್ಳೆಯ ಪ್ರಶ್ನೆ. ವ್ಯಾಪಾರಸ್ಥರ ಮನೆತನದಿಂದ ಬಂದವನಾದ ನಾನು ಉದ್ಯಮದಲ್ಲಿದ್ದು ಕೊಂಡು ನಿಃಸ್ವಾರ್ಥ ಸೇವೆ ಮಾಡಿದರೂ ಜನ ನಂಬಲಿಕ್ಕಿಲ್ಲ. ಆದರೆ ಅಧ್ಯಾಪನ ವೃತ್ತಿಗೆ ಇರುವ ಗೌರವ ನನಗೆ ಜನರನ್ನು ತಲುಪಲು ಹಾಗೂ ಅವರ ಹಕ್ಕು ಬಾಧ್ಯತೆಗಳ ಅರಿವು ಮೂಡಿಸಲು ಹೆಚ್ಚು ಪರಿಣಾಮಕಾರಿಯಾಗಬಹುದು ಅಂತ ನಾನು ಈ ವೃತ್ತಿ ಕೈಗೆತ್ತಿ ಕೊಂಡೆ.

ಉದ್ಯೋಗಕ್ಕೆ ಸೇರುವಾಗಲೂ ನನ್ನ ವೃತ್ತಿಯಿಂದ ನನ್ನ ಪ್ರವೃತ್ತಿಗೆ ಏನೂ ಅಡಚಣೆ ಬರಬಾರದೆಂದು ಶರ್ತ ಆಗಿನ ನಿರ್ದೇಶಕ ರಾಮದಾಸ ಪೈಯವರಿಗೆ ಹಾಕಿದ್ದೆ. ಅಂತೆಯೇ ರಾಮದಾಸ ಪೈಯವರೂ ನನ್ನ ನಿಃಸ್ವಾರ್ಥ ಸೇವೆಯ ತುಡಿತವನ್ನು ಮನಗಂಡು ಸಂಪೂರ್ಣ ಸಹಕಾರವಿತ್ತರು. ಅಂದಿನ ಡೀನ್ ಕೃಷ್ಣ ರಾವ್ ಹಾಗೂ ಪದ್ಮ ರಾವ್ ಅವರ ಸಹಕಾರವೂ ಒದಗಿ ಬಂತು.1992 ರಲ್ಲಿ ಪ್ರಾಂಶುಪಾಲರ ಹುದ್ದೆಯನ್ನೂ ನಿರಾಕರಿಸಿದೆ. ಆದರೆ ನನ್ನ ಪ್ರವೃತ್ತಿಯೂ ನನ್ನ ವೃತ್ತಿಯ ಮಧ್ಯೆ ಬಾರದಂತೆ ಜಾಗರೂಕ ನಾಗಿದ್ದೆ. ಏ.ಒ.ಅ ಯಲ್ಲಿರುವಷ್ಟು ದಿನದ ಹೊತ್ತು ಬಳಕೆದಾರರ ವೇದಿಕೆಯನ್ನು ಹೊರ ಗಿಡುತ್ತಿದ್ದೆ .

ಮಾನವ ಹಕ್ಕು ರಕ್ಷಣೆಯ ವೇದಿಕೆ ಬಳಕೆದಾರರ ವೇದಿಕೆಯಾಗಿದ್ದು ಹೇಗೆ?

ಮಾನವ ಹಕ್ಕು ರಕ್ಷಣೆಯ ವೇದಿಕೆ ಅಂತ ಹೆಸರಿಟ್ಟಿದ್ದರೆ ನನ್ನನ್ನು ನಕ್ಸಲ್-ವಾದಿ ಯೆಂದೋ, ರಾಷ್ಟ್ರವಿರೋಧಿಯೆಂದೋ ಅಥವಾ ವಾಮವಾದಿಯೆಂದೋ ಪರಿಗಣಿಸುವ ಸಾಧ್ಯತೆಗಳಿತ್ತು. ನನ್ನ ಜೀವಕ್ಕೂ ಸಂಚಕಾರ ಒದಗುತಿತ್ತು. ಅಲ್ಲದೆ ಯಾವುದೋ ಪಕ್ಷಕ್ಕೆ ಸೇರಿದವನೆಂದು ಇನ್ನೊಂದು ಪಕ್ಷದವರು ಕಿರುಕುಳ ಕೊಡುವ ಸಾಧ್ಯತೆಗಳೂ ಇತ್ತು. ಆದರೆ ಬಳಕೆದಾರರ ವೇದಿಕೆಯೆಂದು ಪ್ರಾರಂಭಿಸಿದಾಗ ಯಾವ ಅಡ್ಡಿ ಆತಂಕಗಳೂ ಇರಲಿಲ್ಲ. ಹಾಗಾಗಿ ನಿಷ್ಪಕ್ಷಪಾತದಿಂದ, ನಿಃಸ್ಪೃಹತೆಯಿಂದ ಸೇವೆ ಸಲ್ಲಿಸುವುದು ಸುಲಭ ಸಾಧ್ಯವಾಯಿತು.

ಹಾಗಾದರೆ ಸಂಪನ್ಮೂಲ ಎಲ್ಲಿಂದ ಹರಿದು ಬರುತ್ತದೆ?

ಎಲ್ಲಿಯ ಸಂಪನ್ಮೂಲ? ಯಾವ ಸಂಪನ್ಮೂಲ? ನಾವು ಯಾರಿಂದಲೂ ಒಂದು ನಯಾ ಪೈಸೆಯನ್ನೂ ತೆಗೆದುಕೊಳ್ಳುವುದಿಲ್ಲ. ಜೆರಾಕ್ಸ್, ಪೋಸ್ಟಗಳಿಗೂ ನಾವು ತೆಗೆದುಕೊಳ್ಳು ವುದಿಲ್ಲ. ಏನಿದ್ದರೂ ನಮ್ಮ ಕಿಸೆಯಿಂದಲೇ. ಹೀಗಾಗಿ ನನ್ನ ಯಾವತ್ತೂ ಸಂಬಳ ಮನೆಗೆ ಹೋಗಲೇ ಇಲ್ಲ. ಆದರೆ ನಮ್ಮಿಂದ ಉಪಕಾರ ಪಡೆದ ಜನರು ಕೆಲವರು ಬೇಡವೆಂದರೂ ಕೇಳದೆ ಸಹಕಾರ ನೀಡಲು ಮುಂದೆ ಬರುತ್ತಾರೆ ಹಾಗೂ ಅವರಿಗೆ ತೋಚಿದ ಹಾಗೆ ಪೋಸ್ಟ್ ಕಾರ್ಡ್ ಅಥವಾ ಬೇರೆ ಏನಾದರು ಕೊಟ್ಟು ಹೋಗುತ್ತರೆ ಅವರವರ ಆತ್ಮ ತೃಪ್ತಿಗೋಸ್ಕರ. ಆದರೂ ನಾವು ಯಾರಿಂದಲೂ ಧನ ಸಹಯಾ ತೆಗೆದುಕೊಳ್ಳುವುದೇ ಇಲ್ಲ. ಜೆರಾಕ್ಸಿನವರು ನಮಗೆ ಅರ್ಧ ಖರ್ಚಿನಲ್ಲಿ ಮಾಡಿಕೊಡುತ್ತಾರೆ. ನಮಗೆ ಸಹ ಕರಿಸುವ ವಕೀಲರೂ ನಮ್ಮಿಂದ ಪ್ರತಿಫಲವನ್ನು ತೆಗೆದುಕೊಳ್ಳುವುದಿಲ್ಲ. ಹೀಗಾಗಿ ಕಳೆದ ಮೂರು ದಶಕಗಳಿಂದ ಲಕ್ಷಗಟ್ಟಲೆ ಹಣ ಉಳಿಸಿ ನಮ್ಮ ಲಕ್ಷ್ಯ ಸಾಧಿಸಿದ್ದೇವೆ.

ಬಳಕೆದಾರರ ವೇದಿಕೆ ಅಸ್ತಿತ್ವಕ್ಕೆ ಬಂದಾಗ ಜನರ ಪ್ರತಿಕ್ರಿಯೆ ಹೇಗಿತ್ತು? ಸಹಕಾರ ಸಿಕ್ಕಿತ್ತೇ?

LLB ಮುಗಿಸಿದ ಬಳಿಕ 1979ರಲ್ಲಿ ಮೊದಲಿಗೆ ಉಡುಪಿಯಲ್ಲಿ ಬಳಕೆದಾರರ ವೇದಿಕೆ ಯನ್ನು ನಾನು, ನನ್ನೊಂದಿಗೆ ಶ್ರೀ ಬಿ. ಕೃಷ್ಣ ಬಳೆಗಾರ್,ಮತ್ತು ಬಂಟ್ವಾಳದ ಸುಂದರ್ ರಾವ್ ಸೇರಿ ಪ್ರಾರಂಭಿಸಿದೆವು. ನಮ್ಮ ಕಾರ್ಯವೈಖರಿಯನ್ನು ಮೆಚ್ಚಿ ಅನೇಕ ಮಂದಿ ಬಂದು ನಮ್ಮನ್ನು ಸೇರಿಕೊಂಡರು. ಈಗ ಹನ್ನೊಂದು ಮಂದಿ ಟ್ರಸ್ಟಿಗಳು ಮತ್ತು ಅನೇಕ ಸ್ವಯಂಸೇವಕರಿದ್ದಾರೆ.

ಮಾನವ ಹಕ್ಕುಗಳ ಸಂರಕ್ಷಣೆ ಎಂಬ ಒಂದಂಶ ಸೂತ್ರದೊಂದಿಗೆ ನಾವು..
ಯಾವ ಪ್ರಶಸ್ತಿಯನ್ನೂ ಸ್ವೀಕರಿಸುವುದಿಲ್ಲ
ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ
ಯಾವ ಸರ್ಕಾರಿ ಹುದ್ದೆಯನ್ನು ಸ್ವೀಕರಿಸುವುದಿಲ್ಲವೆಂದು ಪ್ರತಿಜ್ಞೆ ಮಾಡಿದೆವು.

ನಮ್ಮಲ್ಲಿ ಇಂದಿಗೂ ತೋರಿಕೆಗೆ ಸಮಾಜ ಸೇವೆ ಮಾಡುವವರಿಗೆ ಪ್ರವೇಶವಿಲ್ಲ, ಪ್ರಶಸ್ತಿಗಾಗಿ ಹಂಬಲಿಸುವವರಿಲ್ಲ. ಕಚ್ಚಾಟವಂತೂ ಇಲ್ಲವೇ ಇಲ್ಲ. ಜನರ ಪ್ರತಿಕ್ರಿಯೆ ಪ್ರಾರಂಭದಲ್ಲಿ ಅಷ್ಟೇನೂ ಇಲ್ಲದಿದ್ದರೂ ಕ್ರಮೇಣ ಹೆಚ್ಚಾಗುತ್ತಾ ಹೋಗಿ‌ಈಗ ದಿನಕ್ಕೆ ನೂರೈವತ್ತು ಪತ್ರಗಳು ಬರುತ್ತವೆ. ಕಳೆದ 29 ವರ್ಷಗಳಲ್ಲಿ 29,000 ಸಮಸ್ಯೆಗಳನ್ನು ಪರಿಹರಿಸಿದ್ದೇವೆಂದರೆ ಹೆಮ್ಮೆಯೆನಿಸುವುದಿಲ್ಲ ಬದಲಾಗಿ ನಮ್ಮ ಶಾಸಕರ ಮೇಲೆ, ಸರ್ಕಾರಿ ಅಧಿಕಾರಿಗಳ ಮೇಲೆ ಬೇಸರ ಬರುತ್ತದೆ.

ನಿಮ್ಮ ಕಾರ್ಯ ವೈಖರಿ ಹೇಗೆ?

ನಮ್ಮ ಬಳಕೆದಾರರ ವೇದಿಕೆಯಲ್ಲಿ ನ್ಯಾಯಂಗದ ಕಟ್ಟೆಯಲ್ಲಿ ಬಳಕೆದಾರರಿಗೆ ನ್ಯಾಯ ಸಿಗದಿದ್ದಾಗ ನ್ಯಾಯಾಂಗದ ಚೌಕಟ್ಟಿನೊಳಗೆ, ನ್ಯಾಯಾಯಾಲಯದ ಹೊರಗೆ ಪತ್ರ ಮುಖೇನ ನ್ಯಾಯ ದೊರಕಿಸಲು ಶ್ರಮಿಸುತ್ತೇವೆ. ಬಹುತೇಕ ಜಯಗಳಿಸಿದ್ದೇವೆ. ಅಸಾಧ್ಯವಾದಾಗ ಪತ್ರಿಕೆಗಳಲ್ಲಿ ಲೇಖನಗಳ ಮೂಲಕ ಸಂಬಂಧಿತ ಅಧಿಕಾರಿಗಳನ್ನು ಎಚ್ಚರಿಸುವುದಲ್ಲದೆ ಜನಜಾಗೃತಿಯನ್ನುಂಟು ಮಾಡಿ ಜನಾಭಿಪ್ರಯಕ್ಕೆ ಅಧಿಕಾರಿಗಳು ತಲೆಬಾಗುವಂತೆ ಮಾಡಿದ್ದೇವೆ.

ಬಹುಜನರ ಹಿತಕ್ಕಾಗಿ ಸುಖಕ್ಕಾಗಿ ಸೇವೆ ಸಲ್ಲಿಸುತ್ತಿದ್ದರೂ ನೊಂದವರು ನಮ್ಮೊಂದಿಗೆ ಇರಬೇಕು ಎನ್ನುವುದು ಕಡ್ಡಾಯ. ಅರ್ಥಾತ್ ಹೋರಾಟ ನಿಮ್ಮದು ಬೆಂಬಲ ನಮ್ಮದು. ವಕೀಲರಲ್ಲಿಗೆ ಹೋಗೆ ಕೇಸ್ ಒಪ್ಪಿಸಿ ಮನೆಗೆ ಹೋಗುವ ತರ ಅಲ್ಲ್. ನಮ್ಮಲ್ಲಿ ಬರುವ ವರು ಮೊದಲಿಗೆ ಅವರ ಪ್ರಯತ್ನವನ್ನು ಮಾಡಿರಬೇಕು. ಅದಾಗ್ಯೂ ನಮ್ಮಲ್ಲಿಗೆ ಬಂದ ಮೇಲೆ ಅವರ ಪತ್ರ ಪುನಃ ಕಳಿಸಬೇಕು. ಹಾಗೆ ಕಳಿಸುವಾಗ ನಮಗೆ ಯಥಾಪ್ರತಿ ಹಾಕ ಬೇಕು.ಅದಕ್ಕೆ ಅವರಿಂದ ಉತ್ತರ ಬಾರದಿದ್ದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ನಾವು ಒಂದು ಪತ್ರ ಬರೆದು ಅವರ ಅನಿಸಿಕೆ ಏನು ಎಂದು ವಿನಯಪೂರ್ವಕವಾಗಿ ಕೇಳುತ್ತೇವೆ. ಅದಾಗ್ಯೂ ಉತ್ತರ ಬಾರದಿದ್ದಲ್ಲಿ ಅಧಿಕಾರಿಗಳ ನಿಷ್ಕ್ರಿಯತೆಯನ್ನು ಪತ್ರಿಕೆಯಲ್ಲಿ ಪ್ರಕಟಿಸುವ ಎಚ್ಚರ ಕೊಡುತ್ತೇವೆ. ಪ್ರತಿಕ್ರಿಯೆ ಸಮಂಜಸವಾಗಿರದಿದ್ದಲ್ಲಿ ಪತ್ರಿಕೆಯಲ್ಲಿ ಪ್ರಕಟಿಸುತ್ತೇವೆ. ಮುಂದೆ ಅಗತ್ಯ ಬಿದ್ದಲ್ಲಿ ಖಟ್ಲೆ ನಡೆಸುತ್ತೇವೆ. ಕಾನೂನಿನ ಸಹಕಾರದಿಂದ ಹೆಚ್ಚಿನ ಸಮಸ್ಯೆಗಳು ಕೋರ್ಟ್ ಹೊರಗೆ ಇತ್ಯರ್ಥವಾದರೂ ಸುಮಾರು 180 ವ್ಯಾಜ್ಯ ಗಳು ಸುಪ್ರೀಂ ಕೋರ್ಟಿನವರೆಗೆ ತಲುಪಿದೆ.

ನಿಮ್ಮ ಕಾರ್ಯವೈಖರಿಗೆ ಸರ್ಕಾರಿ ಬಾಬುಗಳ ಪ್ರತಿಕ್ರಿಯೆ ಹೇಗಿದೆ?

ಬಹುತೇಕ ಸೌಹಾರ್ದಪೂರ್ಣವಾಗಿದೆ. ಅನೇಕ ಅಧಿಕಾರಿಗಳು ಸಮರ್ಥವಾಗಿ ಆಡಳಿತ ನಡೆಸಲು ನಮ್ಮಿಂದ ಸಹಕಾರವಾಯಿತು ಅಂತ ಧನ್ಯವಾದವನ್ನರ್ಪಿಸುತ್ತಾರೆ. ಈಗ ಬರುವ ಪ್ರತೀ ಹತ್ತು ಪತ್ರಗಳಲ್ಲಿ ಮೂರು ನಮಗೆ ಯಥಾಪ್ರತಿ ಹಾಕಿದ ಕೂಡಲೇ ಪರಿಹಾರವಾಗುತ್ತದೆ. ನಾಲ್ಕು ನಮ್ಮಬೆಂಬಲದಿಂದ ಪರಿಹಾರವಾಗುತ್ತದೆ ಬಾಕಿಯ ಮೂರರ ಬಗ್ಗೆ ನೀವು ಪತ್ರಿಕೆಯಲ್ಲಿ ನೋಡುವ ವಿಷಯ ಲೇಖನಗಳು.

ನಿಮ್ಮಲ್ಲಿ ಸ್ವಯಂಸೇವಕರಾಗಲು ವಿಶೇಷ ಅರ್ಹತೆಗಳೇನಾದರೂ ಬೇಕೆ?

ವಿಶೇಷ ಅರ್ಹತೆಗಳೇನೂ ಬೇಕಾಗಿಲ್ಲ. ಆದರೆ ಇಲ್ಲಿಗೆ ಬರುವವರು ಸೇವಾ ಭಾವ ದಿಂದಲೇ ಬರಬೇಕು. ಶಿವರಾಮ ಕಾರಂತರಿಂದ ಹಿಡಿದು ಪುತ್ತೂರಿನ ಎಂಟನೇ ತರಗತಿಯ ವರೆಗೆ ಕಲಿತ ಮೇಸ್ತ್ರಿಯೂ ನಮಗೆ ಸಹಕರಿಸಿದವರಿದ್ದಾರೆ. ಇತ್ತೀಚೆಗೆ ಜನರ ಪತ್ರಗಳ ಮಹಾಪೂರದಿಂದಾಗಿ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುವುದು ಅಸಾಧ್ಯವಾಗಿದೆ. ನಮ್ಮೊಂದಿಗೆ ಸಹಕರಿಸುವ ಆಸಕ್ತರಿಗೆ ಅಗತ್ಯವಿರುವ ಮಾರ್ಗದರ್ಶನ ವನ್ನು ನೀಡಲು ತಯಾರಿದ್ದೇವೆ.

ನಿಮಗೆ ಅತ್ಯಂತ ತೃಪ್ತಿ ತಂದು ಕೊಟ್ಟ ಹಾಗೂ ಅತ್ಯಂತ ಬೇಸರವಾದ ವ್ಯಾಜ್ಯಗಳು ಯಾವುವು.

ಮಡಿಕೇರಿಯಿಂದ ಕುವೈಟಿಗೆ ಹೋಗಿ ಅಲ್ಲಿ ಅನ್ಯಾಯಕ್ಕೊಳಗಾದ ಜಮೀಲಳನ್ನು 24 ಘಂಟೆಗಳಲ್ಲಿ ಹುಡುಕಿ ಭಾರತಕ್ಕೆ ಹಿಂತಿರುಗಿ ಬರುವ ವ್ಯವಸ್ಥೆಯನ್ನು ಮಾಡಿದ್ದು ಅತ್ಯಂತ ತೃಪ್ತಿ ತಂದು ಕೊಟ್ಟಿದೆ. ಅತ್ಯಂತ ಬೇಸರವಾದದ್ದು ಅಕ್ಕು ಮತ್ತು ಲೀಲಾಳ ವ್ಯಾಜ್ಯ, ಮಾಜಿ ಮುಖ್ಯ ಮಂತ್ರಿಗಳ ಕೃಪೆಯಿಂದಾಗಿ ಅದೀಗ ಸುಪ್ರೀಂ ಕೋರ್ಟಿನಲ್ಲಿದೆ. ಇಂತ ಅನೇಕ ಸಮಸ್ಯೆಗಳಿವೆ ಗೋಪಿಕಾ ನಾನು ನಿಂಗೆ ಅದನ್ನೆಲ್ಲ ಹೇಳುತ್ತಾ ಹೋದರೆ ಪ್ರಪಂಚದಲ್ಲಿ ಎಲ್ಲಾ ಮೋಸಗಾರರೇ ತುಂಬಿದ್ದಾರೇನೋ ಎನಿಸಬಹುದು. ಹೀಗಾಗಿ ಅಯ್ದ ಕೆಲವನ್ನು ಪುಸ್ತಕ ರೂಪದಲ್ಲಿ ೮ ಭಾಗಗಳಲ್ಲಿ ಹೊರ ತಂದಿದ್ದೇನೆ. ಇನ್ನು ವೈದ್ಯಕೀಯ ವೃತ್ತಿಯಲ್ಲಿ ನಿರ್ಲಕ್ಷ್ಯದ ಪ್ರಕರಣಗಳು ಹಾಗೂ ಬಾಂಕಿಂಗ್ ಕ್ಷೇತ್ರದ ಭ್ರಷ್ಟಾಚರದ ಮೇಲೆ ಪುಸ್ತಕ ಬರೆಯುವ ಯೋಜನೆ ಹಮ್ಮಿಕೊಂಡಿದ್ದೇನೆ.

ಗಲ್ಫ್ ಕನ್ನಡಿಗರಿಗಾಗಿ...

ಗಲ್ಫ್ ರಾಷ್ಟ್ರಗಳಿಗೆ ಹೋಗುವ ಪ್ರತಿ ನೂರು ಮಂದಿಯಲ್ಲಿ ಪ್ರತಿ ಅರುವತ್ತು ಮಂದಿ ಕುಟುಂಬದವರ ಸಹಕಾರದಿಂದ ಹೋಗುತ್ತರೆ ಬಾಕಿ ನಲುವತ್ತು ಮಂದಿ ಎಜೆಂಟರುಗಳ ಮೂಲಕ ಹೋಗುತ್ತಾರೆ ಇವರಲ್ಲಿ ಮೂರು ಮಂದಿ ಸಮಸ್ಯೆಯ ಸುಳಿಯಲ್ಲಿ ಸಿಲುಕುತ್ತಾರೆ. ಗಲ್ಫಿಗೆ ಹೋಗುವವರ ರಕ್ಷಣೆಗಾಗಿ ಮಂಗಳೂರು ಡಿಸ್ಟ್ರಿಕ್ಟ್ ಕಲೆಕ್ಟರ್ ಆಫೀಸಿನಲ್ಲಿ  foriegn recruitment monitoring forum ಅನ್ನು ಪ್ರಾರಂಭಿಸಲಿದ್ದೇವೆ. ಇದೊಂದು  quasi government body. ಕೆಲವು N.G.O, ಪೋಲಿಸರ ಪ್ರತಿನಿಧಿಗಳು, ಗಲ್ಫಿನ ಮತ್ತು ಸ್ಥಳೀಯ ಆಸಕ್ತ ಜನರನ್ನೊಳಗೊಂಡ ಒಂದು ಸಮಿತಿಯನ್ನು ರಚಿಸಲಿದ್ದೇವೆ. ಇಲ್ಲಿ ಉದ್ಯೋಗ ನಿಮಿತ್ತ ವಿದೇಶಕ್ಕೆ ಹೋಗುವವರು ತಮ್ಮ ಹೆಸರನ್ನು ನೋಂದಾಯಿ ಸಬೇಕು , ಕಂಪೆನಿಯ ವಿಳಾಸ, ಏಜೆಂಟರ ವಿಳಾಸವನ್ನೂ ನೀಡಬೇಕು. ಇವರಿಗೆ ಮೂರು ಇನ್ಲಾಂಡ್ ಲೆಟರ್ ಕೊಡಲಾಗುವುದು. ಗಲ್ಫ್ ತಲುಪಿದ ಬಳೀಕ ಅವರು ಪ್ರತಿ ಹದಿನೈದು ದಿನಗಳೀಗೊಮ್ಮೆ ಪತ್ರಮುಖೇನ ಸಂಪರ್ಕಿಸಬೇಕು. ಎರಡು ತಿಂಗಳಲ್ಲಿ ಅವರಿಂದ ಏನೂ ಸಂಪರ್ಕವಿಲ್ಲದೇ ಹೋದಲ್ಲಿ ಆ ವ್ಯಕ್ತಿ ಕಷ್ಟದಲ್ಲಿರುವರು ಅಂತರ್ಥ. ಕೂಡಲೆ ನಾವು ಕಾರ್ಯ ಪ್ರವೃತ್ತರಾಗಿ ಅವರನ್ನು ಸಂಪರ್ಕಿಸುವ ವ್ಯವಸ್ಥೆಯನ್ನು ಮಾಡುತ್ತೇವೆ.. ಗಲ್ಫ್ ಉದ್ಯೋಗಾಕಾಂಕ್ಷಿಗಳಿಗೆ ಅದರಲ್ಲೂ ಅನಕ್ಷರಸ್ಥರಿಗೆ ಇದೊಂದು ಒಳ್ಳೆಯ ರಕ್ಷಣೆಯ ವ್ಯವಸ್ಥೆ.

ಗಲ್ಫ್ ರಾಷ್ಟ್ರಗಳಲ್ಲಿ ಭಾರತೀಯ ದೂತಾವಾಸದವರಿಂದ ಉಳಿದ ಸರ್ಕಾರಿ ಅಧಿಕಾರಿಗಳಿಂದ ಅವರವರ ಅನುಕೂಲಕ್ಕೆ ತಕ್ಕ ಹಾಗೆ ಸಿಕ್ಕಿದರೂ, ಅಲ್ಲಿಯ ಕನ್ನಡಿಗರು ನಮ್ಮ ಸ್ವಯಂಸೇವಕರಾಗಿ ಜಾತಿಭೇದಗಳನ್ನು ಮರೆತು ಅನುಕಂಪ ಮತ್ತು ಕರುಣೆಗಳಿಂದ ತಕ್ಷಣ ಸ್ಪಂದಿಸಿ ಅಪ್ರತಿಮ ಮಾನವೀಯತೆಯನ್ನು ಮೆರೆದಿದ್ದಾರೆ.

ನಿಮ್ಮ ದಿನಚರಿ, ನಿಮ್ಮ ಸಂಸಾರ!!!

ನನ್ನ ದಿನಚರಿ! ಬೆಳಗ್ಗೆ 4.30 ರಿಂದ ರಾತ್ರಿ ಒಂದರವರೆಗೆ ಅವಿರತ ದುಡಿಮೆ. ಬೆಳಗ್ಗೆ ಎಂಟರಿಂದ ಐದರವರೆಗೆ ಕೆ.ಎಮ್, ಸಿ. ಯಲ್ಲಿ ಫಾರ್ಮಕಾಲೊಜಿಯ ಮುಖ್ಯಸ್ಥನಾಗಿ ಜವಾಬ್ದಾರಿ ನಿರ್ವಹಿಸುತ್ತೇನೆ. ಸಾಯಂಕಾಲ ಐದರಿಂದ ರಾತ್ರಿ ಒಂದರವರೆಗೆ ಬಳಕೆದಾರರ ಸಮಸ್ಯೆಗಳಿಗೆ ಮೀಸಲು. ರಾತ್ರಿ ಬಂದಿರುವ ಪತ್ರಗಳನ್ನೆಲ್ಲ ಓದುತ್ತೇನೆ, ಬೆಳಗ್ಗೆ ನಾಲ್ಕುವರೆಗೆ ಎದ್ದು ಪುನಃ ಮುಂದುವರೆಸುತ್ತೇನೆ. ಇತ್ತೀಚೆಗೆ ಜನರ ಪತ್ರಗಳ ಸಂಖ್ಯೆ ಜಾಸ್ತಿಯಾಗಿರುವುದರಿಂದ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸಲು ಅಸಾಧ್ಯವಾಗಿದೆ. ಹೀಗಾಗಿ ಬಳಕೆದಾರರ ವೆದಿಕೆಯ ಕಾರ್ಯಕ್ಷಮತೆ ಕುಗ್ಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ ಆದರೆ ನಾನು ಅಸಹಾಯಕ.

ನನ್ನ ಸಂಸಾರ! ನನ್ನ ಧರ್ಮಪತ್ನಿ ಶ್ರೀಮತಿ ವಿದ್ಯಾ ಶ್ಯಾನುಭಾಗ್, ಅಕ್ಷರಶಃ ಪತ್ನಿಧರ್ಮವನ್ನು ನಿಭಾಯಿಸಿದಳು. ಮಕ್ಕಳು ಚಿಕ್ಕವರಾಗಿದ್ದಾಗ ಅವರ ಕಡೆ ಗಮನಕೊಟ್ಟು ಈಗ ನನ್ನ ಹೆಗಲಿಗೆ ಹೆಗಲು ಜೋಡಿಸಿದ್ದಾಳೆ. ನನ್ನ ಸಂಬಳ ಪೂರ್ತಿ ಬಳಕೆದಾರರಿಗಾಗಿ ವ್ಯಯಿಸಿದಾಗಲು ಸಹನೆ ಕಳೆದುಕೊಳ್ಳದೆ ನನ್ನೊಂದಿಗೆ ಸಹಕರಿಸಿದಳು . ಇನ್ನು ನನ್ನ ಮಕ್ಕಳು, ದೇವರ ದಯದಿಂದ ಇಬ್ಬರೂ ಪ್ರತಿಭಾವಂತರು. ಮಗಳು ಗಾಯತ್ರಿ, ಅರ್ಕಿಟೆಕ್ಟ್ ಈಗ ಲಂಡನ್ನಿನಲ್ಲಿದ್ದಾಳೆ. ಮಗ ನರೇಂದ್ರನಾಥ್ ಶ್ಯಾನುಭಾಗ್, ಐ.ಟಿಯಲ್ಲಿ ಎಮ್. ಟೆಕ್ ಮಾಡಿ ಈಗ MIT ಯಲ್ಲಿ ಉದ್ಯೋಗದಲ್ಲಿದ್ದಾನೆ.

ಪೊಡವಿಗೊಡೆಯ ಕೃಷ್ಣನ ಉಡುಪಿಯಲ್ಲಿ, ಭಗವದ್ಗೀತೆಯ ಸಾರ ಕರ್ಮದಲ್ಲಿ ಮಾತ್ರ ನಿನಗೆ ಅಧಿಕಾರ ಫಲದ ಚಿಂತೆ ನನಗೆ ಬಿಡು ಎಂಬುದನ್ನು ಅಕ್ಷರಶಃ ಅಳವಡಿಸಿಕೊಂಡ ಶ್ರೀ ರವೀಂದ್ರನಾಥ್ ಶ್ಯಾನುಭಾಗರಿಂದ ಬೀಳ್ಕೊಂಡು ಹೊರಡುವಾಗ ವೈರಾಗ್ಯದ ಭಾವನೆ ಆವರಿಸಿಕೊಂಡು ತಲೆ ಧೀಂ ಅನ್ನುತ್ತಿತ್ತು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಗೋಪಿಕ ಮಯ್ಯ, ಉಡುಪಿ / ದುಬೈ. gopimayya@gmail.com
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-02-13

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸಂಗ್ರಹ]

»ನವದೆಹಲಿ: ಶಿಲ್ಪಾ ‘ಸಿರಿ’ ಕವನ ಸಂಕಲನ ಬಿಡುಗಡೆ
»ಅನಿವಾಸಿ ಕನ್ನಡಿಗರೆ ನೀವು ಕರ್ನಾಟಕ ಬಿಟ್ಟು ಹೋಗುವಾಗ ನಮ್ಮನ್ನು ಕೇಳಿದ್ದಿರಾ ?-ಮುಖ್ಯಮಂತ್ರಿ ಚಂದ್ರು(ಸ೦ಗ್ರಹ)
»ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಡೀವಿ ಖಚಿತ ಕಾಂಗ್ರೆಸ್‌ಗೆ `ತಾರಾ'ಬಲ? (ಸ೦ಗ್ರಹ)
»ಇಂದಿನಿಂದ ಓಬವ್ವನ ನಾಡಲ್ಲಿ ಸಾಹಿತ್ಯ ತೇರು(ಸ೦ಗ್ರಹ)
»ಜನರ ಬಳಿಗೆ ಆಗಮಿಸುತ್ತಿದೆ ಗೂಗಲ್ ಇಂಟರ್ನೆಟ್ ಬಸ್ (ಸ೦ಗ್ರಹ)
»ಬೆಳ್ತಂಗಡಿ:‘ಕುಡಿದು’ ಕಲಿಸುವ ಶಿಕ್ಷಕಿ ಬೇಡವೇ ಬೇಡ...!(ಸ೦ಗ್ರಹ)
»ದುಡ್ಡು ಸಂಪತ್ತಿಗಿ೦ತ ಜನರಿಂದ ಪಡೆಯುವ ಪ್ರೀತಿಯೇ ದೊಡ್ಡದು: ಬನ್ನಂಜೆ (ಸ೦ಗ್ರಹ)
»ಖ್ಯಾತ ಕಾರ್ಯಕರ್ತ ಇಕ್ಬಾಲ್ ಮನ್ನಾ ಅವರಿಗೆ ಸನ್ಮಾನ(ಸ೦ಗ್ರಹ)
»ಕೊಟ್ಟ ಮಾತು ತಪ್ಪದ ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರು : ಅನಿವಾಸಿ ಕನ್ನಡಿಗರ ಸಮಿತಿಗೆ ಬೇಡಿಕೆ -ಆಶ್ವಾಸನಪತ್ರ(ಸ೦ಗ್ರಹ)
»ವಿಜ್ರಂಭಣೆಯಿಂದ ನೆಡೆದ ಕತರ್ ತುಳು ಕೂಟದ 4 ನೇ ವಾರ್ಷಿಕೋತ್ಸವ; ಕಿಕ್ಕಿರಿದ ಸಭೆ,’ದೇವರ್ ನಡಪವೆರ್’ ಯಶಸ್ವಿ ಪ್ರದರ್ಶನ (ಸ೦ಗ್ರಹ)
»ಪತ್ರಿಕೆಗಳ ಮೇಲಿನ ಓದುಗರ ವಿಶ್ವಾಸಾರ್ಹತೆ ಕುಂಠಿತ: ಮಣಿಪಾಲದಲಿ ಮಿಂಟ್ ಸಂಪಾದಕ ರಾಜಾ ನರಶೆಟ್ಟಿ(ಸ೦ಗ್ರಹ)
»ಸಭಿಕರನ್ನು ಬಾವುಕತೆಯಲ್ಲಿ ಪುಳಕಿಸಿದ ’ದೋಹಾ ಕಿ ಶಾಮ್ ರಫಿ ಕಿ ನಾಮ್’(ಸ೦ಗ್ರಹ)
»ಸಿ.ಆರ್.ಶೆಟ್ಟಿ ಅವರಿಗೆ ‘ಇ೦ದಿರಾ ಗಾ೦ಧಿ ಪ್ರಿಯದರ್ಶಿನಿ’ ಪ್ರಶಸ್ತಿ (ಸಂಗ್ರಹ)
»ಅಜ್ಮಾನ್: ನಾಲ್ಕನೆಯ ಪದವಿಪ್ರದಾನ ಸಮಾರಂಭ 2008-ಹಲವು ಗಣ್ಯರ ಉಪಸ್ಥಿತಿ( ಸಂಗ್ರಹ)
»ಮುಂಬೈಯಲ್ಲಿ ಕನ್ನಡ ಯುವತಿಯ ಸಾಧನೆ: ಜ್ಯೋತಿ ಬಿ.ದೇವಾಡಿಗರಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ( ಸಂಗ್ರಹ)
»ಬಹುಜನ ಹಿತಾಯ ಬಹುಜನ ಸುಖಾಯ : ಹೋರಾಟ ನಿಮ್ಮದು ಬೆಂಬಲ ನಮ್ಮದು
»ಗಲ್ಫ್ ನಾಡಿನಲ್ಲಿ ಕನ್ನಡದ ಕಂಪು ( ಸಂಗ್ರಹ)
»ಸಂಗೀತಮಯ, ನೃತ್ಯ ಸಂಯೋಜಿತ ಹಾಗೂ ಖ್ಯಾತ ತಾರೆಗಳಿಂದ ಪ್ರಜ್ವಲಗೊಂಡ ಶಾರ್ಜಾ ಕರ್ನಾಟಕ ಸಂಘದ ವಾರ್ಷಿಕೋತ್ಸವ (ಸಂಗ್ರಹ)
»ಬ್ಯಾರೀಸ್ ಕಲ್ಚರಲ್ ಫೊರಂನ ವತಿಯಿಂದ ವಿದ್ಯಾರ್ಥಿವೇತನ.. ಸಮುದಾಯದ ಅಭಿವೃದ್ಧಿಯಲ್ಲಿ ಸಹಭಾಗಿತ್ವ : ಜಯಪ್ರಕಾಶ್ ಹೆಗ್ಡೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri